-ಡಾ|| ಎಸ್.ಬಿ.ಎ. ಸಂಧ್ಯಾ
ಶ್ರೀ ರಾಮಾಯಣ ಎಂದ ಕೂಡಲೆ, ಶ್ರೀ ವಾಲ್ಮೀಕಿಗಳು ಬರೆದ ಮಹಾ ಕಾವ್ಯ, ಆದರ್ಶಗಳು, ವನವಾಸ ಈ ಸಂಗತಿಗಳು ಮನಸ್ಸಿನಲ್ಲಿ ಹಾದು ಹೋಗುತ್ತದೆ ಆದರೆ ಶ್ರೀ ರಾಮಾಯಣ ಕೇವಲ ಆದರ್ಶಗಳಿಗಷ್ಟೇ ಸೀಮಿತವಾಗಿಲ್ಲ, ಆಶ್ಚರ್ಯಕರವಾದ ಸಂಗತಿ ಎಂದರೆ ಇದರಲ್ಲಿ ಆಹಾರ, ಆಹಾರದ ಕ್ರಮ, ಅತಿಥಿ ಸತ್ಕಾರ ಸದ್ ವೃತ್ತ (ಸನ್ನಡತೆ) ಹೀಗೆ ಬೇರೆ ಹಲವಾರು ಮಾಹಿತಿಗಳೂ ಇದೆ.
ಆಯುರ್ವೇದ ಶಾಸ್ತ್ರದ ಪ್ರಕಾರ ದೇಹ, ಬುದ್ಧಿ, ಮನಸ್ಸುಗಳಲ್ಲಿ ಸ್ವಸ್ಥನಿರುವಂತಹ ಪುರುಷನಿಗೆ ಮೂರು ಏಷಣಗಳಿರುತ್ತದೆ (ಆಸೆಗಳು) ಅದುವೇ ಪ್ರಾಣೇಷಣ, ಧನೈಷಣ ಮತ್ತು ಪರಲೋಕೇಷಣ. ಈ ಏಷಣಗಳನ್ನು ಸಾಧಿಸಲು ಸ್ವಸ್ಥ (ಆರೋಗ್ಯವಂತ)ನಾದ ಪುರುಷನಿಂದ ಮಾತ್ರ ಸಾಧ್ಯ. ಆರೋಗ್ಯದ ಸಾಧನೆಗಾಗಿ ಆಯುರ್ವೇದಲ್ಲಿ ಮೂರು ಸೂತ್ರಗಳನ್ನು ತಿಳಿಸಲಾಗಿದೆ. ಅದುವೇ ಆಹಾರ ವಿಹಾರ ವಿಚಾರ, ಮನುಷ್ಯನ ಆರೋಗ್ಯಕ್ಕಾಗಲಿ ಅನಾರೋಗ್ಯಕ್ಕಾಗಲಿ ಈ ಮೂರು ಸೂತ್ರಗಳೇ ಕಾರಣ. ಈ ತ್ರಿಸೂತ್ರಗಳು ಶ್ರೀ ರಾಮಾಯಣದಲ್ಲಿ ಹೇಗೆ ಮೂಡಿ ಬಂದಿದೆ ಎಂದು ನೋಡೋಣ:
ಆಹಾರ:
ರಾಮಯಣದ ಪೂರ್ತಿ ಕಚ್ಚ ಹಾಗು ಸಿದ್ಧ ಪಡಿಸಿದ (ಕೃತಾನ್ನ) ದ್ರವ ಮತ್ತು ದ್ರವ್ಯ ಆಹಾರಗಳ ಬಗ್ಗೆ ಬಹಳವಗಿಯೇ ಉಲ್ಲೇಖವಿದೆ. ದ್ರವ್ಯವೆಂದರೆ ಧವಸ, ಧಾನ್ಯ, ಹಣ್ಣುಗಳು ಎಂದರ್ಥ. ಅಕ್ಕಿ, ನವಣೆ, ಗೋಧಿ ಮುಂತಾದ ಧಾನ್ಯಗಳಿಂದ ದಶರಥನ ಆಡಳಿತದಲ್ಲಿದ್ದ ಆಯೋಧ್ಯೆಯು ಸಂಪತ್ ಭರಿತವಾಗಿದ್ದು ಎಲ್ಲರ ಮನೆಯ ಕಣಜವು ಧಾನ್ಯಗಳಿಂದ ತುಂಬಿದ್ದವು. ಕಂದ ಮೂಲಗಳ ಬಗ್ಗೆ ಶ್ರೀರಾಮನು ವನವಾಸಕ್ಕೆ ಹೋರಟಾಗ ಅಲ್ಲಿ ಅವನು ಸಂಧಿಸಿದ ಕಬಂದ, ಭರಧ್ವಾಜ ಮಹರ್ಷಿ, ಶಬರಿ ಮುಂತಾದ ಋಷಿಗಳು ಶ್ರೀರಾಮ ಲಕ್ಷ್ಮಣ ಸೀತೆಯರನ್ನು ಕಂದ ಮೂಲಗಳಿಂದ ಸತ್ಕರಿಸಿದರು ಇಲ್ಲಿ ಕಂದ ಎಂದರೆ ಸೂರಣ ಎಂದು ಅರ್ಥೈಸುವುದು, ಸೂರಣ ಎಂದರೆ ಸುವರ್ಣ ಗೆಡ್ಡೆ, ಆಯುರ್ವೇದ ಶಾಸ್ತ್ರದ ಪ್ರಕಾರ ಈ ಗೆಡ್ಡೆಯು ಜೀರ್ಣಶಕ್ತಿಯನ್ನು, ರುಚಿಯನ್ನು ಹೆಚ್ಚಿಸುತ್ತದೆ, ಮತ್ತು ಇದು ಮೂಲ ವ್ಯಾಧಿಗೆ ರಾಮ ಬಾಣ.
ಕಂದವೆಂದರೆ ಮಾನಕಂದ, ಕದಲಿ ಕಂದ ಮತ್ತು ವರಾಹಿ ಕಂದ ಎಂಬ ವಿವಿಧವಾದ ಗೆಡ್ಡೆ ಗೆಣಸುಗಳು ಉಪಲ್ಬದ್ಧವಿತ್ತು ಎಂಬ ಉಲ್ಲೇಖವಿದೆ. ಇವುಗಳೆಲ್ಲವೂ ಶ್ರೀರಾಮ ತನ್ನ ವನವಾಸ ಮಾರ್ಗವನ್ನು ಶ್ರಮಿಸಲು ಅವು ಶಕ್ತಿಯನ್ನು ಕೊಡುತ್ತಿದ್ದವು. ನೇರಳೆ, ನೆಲ್ಲಿಕಾಯಿ, ಹುಣಸೆ, ದಾಳಿಂಬೆ, ನಾಗಕೇಶರ, ಮಾವು, ಹಲಸು, ಅಮ್ಲವೇತಸ ಹೀಗೆ ಹಲವಾರು ಹಣ್ಣುಗಳು ಮತಂಗ ಪರ್ವತ, ಪಂಚವಟಿ, ಋಷ್ಯಶೃಂಗ ಆಶ್ರಮಗಳು ಸಂಪತ್ ಭರಿತವಾಗಿದ್ದವು. ಈ ಹಣ್ಣುಗಳು ಹೊಟ್ಟೆಯನ್ನು ತುಂಬಿಸುವುದಲ್ಲದೆ, ಸಂತರ್ಪಕ ಮತ್ತು ಹೃದ್ಯ ಗುಣಗಳೂ ಇದೆ. ಅಂದರೆ ತಿಂದವರಿಗೆ ಒಂದು ತೃಪ್ತಿಯನ್ನು ಕೊಟ್ಟು ಅವರ ಆಯಾಸವನ್ನು ನೀಗುತ್ತದೆ. ಅಷ್ಟಲ್ಲದೇ ಇವುಗಳು ಹೃದಯಕ್ಕೂ ಒಳ್ಳೆಯದು. ಈ ಎಲ್ಲಾ ಪದಾರ್ಥಗಳು ಶ್ರೀರಾಮರ ದೇಹಾಯಾಸವನ್ನು ಹೋಗಲಾಡಿಸಿ ಅವರಿಗೆ ಪೋಷಣೆಯನ್ನು ಕೊಡುತ್ತಿದ್ದವು. ಇಷ್ಟೇ ಅಲ್ಲದ ಗುಹನು ಶ್ರೀರಾಮರನ್ನು ಸಂಧಿಸಿದಾಗ ಅವರುಗಳಿಗೆ ಒಣ ದ್ರಾಕ್ಷಿ, ಖರ್ಜೂರ ಅಂಜೂರಗಳನ್ನು ಕೊಟ್ಟನು. ಕಬಂಧನು ಶ್ರೀರಾಮ ಲಕ್ಷ್ಮಣರಿಗೆ ನೇರಳೆ, ಮಾವು, ಹಲಸು, ಆಲ, ತಿಂದುಕ, ಗೇರು ಈ ಹಣ್ಣುಗಳನ್ನು ತಿಂದು, ನಿಮ್ಮ ಪ್ರಯಾಣವನ್ನು ಮುಂದುವರಿಸಿರಿ ಎಂದು ಹೇಳುತ್ತಾನೆ.
ದ್ರವ ಪದಾರ್ಥಗಳಾದ ನೀರು, ಹಾಲು, ಮೊಸರು, ಮಜ್ಜಿಗೆ, ಹಣ್ಣಿನ ರಸ, ಕಬ್ಬಿನ ಹಾಲು, ಬೆಣ್ಣೆ, ತುಪ್ಪಗಳ ಬಗ್ಗೆ ಹಲವು ಸಂದರ್ಭಗಳಲ್ಲಿ ತಿಳಿಸಲಾಗಿದೆ. ವಿಶ್ವಾಮಿತ್ರರು ವಸಿಷ್ಟರ ಆಶ್ರಮಕ್ಕೆ ಬಂದಾಗ ಅವರನ್ನು ಸತ್ಕರಿಸಲು ಶಬಲೆಯು ಕಬ್ಬಿನ ಹಾಲು, ಜೇನುತುಪ್ಪ, ವಿವಿಧ ರೀತಿಯ ಪಾನಕಗಳನ್ನು ಎಲ್ಲರಿಗಾಗಿ ಸಿದ್ಧ ಪಡಿಸಿದಳು.
ಕಚ್ಚಾ ಪದಾರ್ಥಗಳನ್ನು ಬಳಸಿ ತಯಾರಿಸಿದ ಆಹಾರ ಪದಾರ್ಥಗಳಿಗೆ ಕೃತಾನ್ನ ವರ್ಗ ಎಂದು ಆಯುರ್ವೇದ ಶಾಸ್ತ್ರದಲ್ಲಿ ತಿಳಿಸಿದೆ. ಇವುಗಳ ಸವಿಸ್ಥಾರವಾದ ವಿವರಣೆ ರಾಮಾಯಣದಲ್ಲಿದೆ. ಕೃತಾನ್ನದ ವರ್ಗದಲ್ಲಿ ಮೊದಲ ಉಲ್ಲೇಖವು ಪಾಯಸದ ಬಗ್ಗೆ ಬರುತ್ತದೆ. ದಶರಥನು ಪುತ್ರಕಾಮೇಷ್ಟಿ ಯಜ್ಞವನ್ನು ಮಾಡಿದಾಗ, ಪ್ರಜಾಪತಿಯು ಬೆಳ್ಳಿಯ ಮುಚ್ಚಳವಿರುವ ಚಿನ್ನದ ಪಾತ್ರೆಯಲ್ಲಿ ದಿವ್ಯ ಪಾಯಸವನ್ನು ತಂದು ದಶರಥನಿಗೆ ಕೊಟ್ಟು, "ಈ ದಿವ್ಯ ಪಾಯಸವು ದೇವ ನಿರ್ಮಿತವಾದದ್ದು, ಪ್ರಜೋತ್ಪತ್ತಿಗೆ ಕಾರಣವಾದ ಪ್ರಶಸ್ತವಾದ ಮತ್ತು ಆರೋಗ್ಯಕರವಾದ ಪಾಯಸವಿದಾಗಿರುತ್ತದೆ ಇದನ್ನು ಸ್ವೀಕರಿಸು, ಅನುರೂಪವಾದ ನಿನ್ನ ಪತ್ನಿಯರು ಈ ದಿವ್ಯ ಪಾಯಸವನ್ನು ಭಕ್ಷಣ ಮಾಡಲು ಅವರಿಂದ ನೀನು ಪುತ್ರರನ್ನು ಪಡೆಯುವೆ" ಎಂದು ತಿಳಿಸುತ್ತಾನೆ.
ಎರಡನೆಯ ಪ್ರಸಂಗ ಅಶೋಕ ವನದಲ್ಲಿದ್ದ ಸೀತೆಯನ್ನು ಕಾಣಲು ಬಂದಂತಹ ಇಂದ್ರನು "ಮಾತೆ ನಿನಗೆ ಸಹಾಯ ಮಾಡುವ ಆಶೆಯಿಂದ ನಾನು ಮಂತ್ರಪೂತವಾದ ಈ ಅನ್ನ (ಪಾಯಸ)ವನ್ನು ತೆಗೆದುಕೊಂಡು ನಿದ್ರಾದೇವಿಯೊಡನೆ ಬಂದಿರುವೆನು, ನಾನು ಕೊಡಲಿರುವ ಈ ಅನ್ನವನ್ನು ನೀನು ಭಕ್ಷಿಸಿದ್ದೇ ಆದರೆ ನಿನಗೆ ಹತ್ತು ಸಾವಿರ ವರ್ಷಗಳವರೆಗೆ ಹಸಿವಾಗಲೀ ಬಾಯಾರಿಕೆಯಾಗಲೀ ಉಂಟಾಗುವುದಿಲ್ಲ ಸೀತಾ ದೇವಿಯು ಇಂದ್ರನು ಕೊಟ್ಟ ಪಾಯಸವನ್ನು ಕಡಿದು ದುಃಖವನ್ನೂ, ಹಸಿವು, ಬಾಯಾರಿಕೆಗಳನ್ನು ನಿವಾರಿಸಿಕೊಂಡಳು.
ಆಯುರ್ವೇದ ಶಾಸ್ತ್ರದ ಪ್ರಮುಖ ಗ್ರಂಥವಾದ ಯೋಗರತ್ನಾಕರ ಮತ್ತು ಭಾವಪ್ರಕಾಶಗಳಲ್ಲಿ ಪಾಯಸದ ಬಗ್ಗೆ ಹೀಗೆ ವಿವರಣೆ ಇದೆ. ಪಾಯಸಕ್ಕೆ ಪರಮಾನ್ನ, ಕ್ಷೀರಿಕಾ ಎಂಬ ಹೆಸರುಗಳು ಇದೆ. ಅರ್ಧಕ್ಕೆ ಅಟ್ಟಸಿದಂತಹ ಹಾಲಿನೊಂದಿಗೆ ತುಪ್ಪ ಮತ್ತು ಸಕ್ಕರೆಯನ್ನು ಹಾಕಿ ತಯಾರಿಸಿದ ಪದಾರ್ಥವೇ ಪಾಯಸ. ಈ ಪರಮಾನ್ನ ಜೀರ್ಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ರಸ, ರಕ್ತ ಮಾಂಸಾದಿ ಸಪ್ತ ಧಾತುಗಳನ್ನು ಪೋಷಣೆ ಮಾಡುತ್ತದೆ. ಬಲವನ್ನು, ಶಕ್ತಿಯನ್ನು ಹೆಚ್ಚಿಸುತ್ತದೆ, ದೇಹ ಮನಸ್ಸಿಗೆ ಸಂತೃಪ್ತಿಯನ್ನು ಕೊಡುತ್ತದೆ. ಇದು ಶುಕ್ರ ಧಾತು (ಸ್ತ್ರೀ ಪುಂ ಬೀಜ) ಉತ್ಪತ್ತಿಕಾರಕವಾಗಿದೆ.
ಭರಧ್ವಾಜ ಮಹರ್ಷಿಗಳು ಭರತ ಮತ್ತು ಅವನ ಸೈನಿಕರಿಗೆ ಉಣಬಡಿಸಿಲು ತಯಾರಿಸಿದ ಔತಣದಲ್ಲಿ ಹಣ್ಣಿನ ರಸ, ಹಾಲು, ಮೊಸರು, ಹೊಸದು ಅಲ್ಲದ ಹಳೆಯದೂ ಅಲ್ಲದ ಸುಗಂಧಯುಕ್ತವಾದ ಮಜ್ಜಿಗೆಯನ್ನು ತಯಾರಿಸಿಸಿದ್ದರು.
ಶಬಲೆಯು ಸಿದ್ಧ ಪಡಿಸಿದ ಔತಣವು ಷಡ್ ರಸೋಪೇತವಾಗಿದ್ದು ಪ್ರತಿಯೊಬ್ಬರ ರುಚಿಗೆ ತಕ್ಕಂತೆ ಇತ್ತು. ಇದರಲ್ಲಿ ರಸಯುಕ್ತವಾದ ಅನ್ನ, ತಿನ್ನಲ್ಪಡುವ, ನೆಕ್ಕಲ್ಪಡುವ(ಲೇಹ್ಯ), ಕುಡಿಯಲ್ಪಡುವ(ಪಾನೀಯ) ಆಹಾರ ಪದಾರ್ಥಗಳನ್ನು ಸೃಷ್ಟಿಸಿದಳು. ಸಕ್ಕೆರೆ, ತುಪ್ಪ, ಹಾಲುಗಳಿಂದ ತಯಾರಿಸಿದ ಹಲವಾರು ಭಕ್ಷ್ಯಗಳಿದ್ದವು. ನಾನಾವಿಧ ಪಾಯಸ, ತೊವ್ವೆಗಳಿಂದ ಸಾವಿರಾರು ಬೆಳ್ಳಿಯ ತಟ್ಟೆಗಳು ಪೂರ್ಣವಾಗಿದ್ದವು. ಋಷ್ಯಶೃಂಗ ಮಹರ್ಷಿಗಳಿಗೆ ವೇಶ್ಯೆಯರು ಅವರೊಡನೆ ತಂದಿದ್ದಂತಹ ಭಕ್ಷ್ಯ ಭೋಜನಗಳನ್ನು ಅವರಿಗೆ ಕೊಟ್ಟು ಸ್ವೀಕರಿಸುವಂತೆ ವಿನಂತಿಸಿದರೆ, ಭರಧ್ವಾಜರು ಭರತನಿಗೆ ಸಿದ್ದ ಪಡಿಸಿದ ಔತಣದಲ್ಲಿ ಈ ಭಕ್ಷ್ಯಗಳಲ್ಲದೆ ರಸಾಲ ಎಂಬ ವಿಶೇಷವಾದ ಆಹಾರ ಪದಾರ್ಥವಿರುವ ಉಲ್ಲೇಖವಿದೆ.
ವಿಹಾರ:
ಋತು ಚರ್ಯೆ ಎಂಬುದು ಆಯುರ್ವೇದ ಶಾಸ್ತ್ರದ ವೈಶಿಷ್ಠತೆ. ಇದರಲ್ಲಿ ಋತುಗಳ ಬಗ್ಗೆ ವಿಸ್ಥಾರವಾಗಿ ವರ್ಣಿಸಲಾಗಿದೆ. ಪ್ರತಿ ಋತುವಿನಲ್ಲಿ ನಮ್ಮ ಆಹಾರ ಹೇಗಿರಬೇಕು, ನಮ್ಮ ವಾಸಸ್ಥಾನ, ನಮ್ಮ ವೇಷಭೂಷಣಗಳ ಬಗ್ಗೆ ವಿಸ್ಥಾರವಾಗಿ ತಿಳಿಸಲಾಗಿದೆ. ಶ್ರೀ ರಾಮಾಯಣದಲ್ಲಿ ವರ್ಷ, ಶರದ್, ಹೇಮಂತ ಋತುಗಳ ಬಗ್ಗೆ ಸುಂದರವಾದ ಚಿತ್ರಣವಿದೆ.
ವಿಚಾರ:
ವಿಚಾರವೆಂದರೆ ನಮ್ಮ ಆಲೋಚನೆ, ನಮ್ಮ ಸದ್ ವೃತ್ತ (ಒಳ್ಳೆಯ ಕೆಲಸ) ಅಂದರೆ ನಾವು ಉತ್ತಮವಾದ ಜೀವನವನ್ನು ನಡೆಸಲು ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂದು ತಿಳಿಸುವ ವಿಚಾರಧಾರೆ. ಆಹಾರದ ವಿಷಯವಾದ ಸನ್ನಡತೆಯ ಬಗ್ಗೆ ಶ್ರೀ ರಾಮಾಯಣದಲ್ಲಿ ಉಲ್ಲೇಖವಿದೆ. ದಶರಥ ರಾಜನ ಆಳುತ್ತಿದ್ದ ಅಯೋಧ್ಯಾ ನಗರಿಯಲ್ಲಿ ಧನ, ಧಾನ್ಯ ಸಂವೃದ್ಥವಾಗಿತ್ತು, ಇಲ್ಲಿ ಎಲ್ಲರೂ ಅತಿಥಿ ಸೇವೆ ಮಾಡಲು ಹಾತೊರೆಯುತ್ತಿದ್ದರು. ಇಲ್ಲಿ ಅನ್ನಧಾನ ಮಾಡದವರು ಯಾರೂ ಇರಲಿಲ್ಲ. ಅನ್ನಧಾನ ಮಾಹಾಧಾನ ಎಂದು ಎಲ್ಲರೂ ತಿಳಿದಿದ್ದರು. ಎಲ್ಲರೂ ಅತಿಥಿಗಳ ಆಗಮನಾಕಾಂಕ್ಷಿಗಳಾಗಿರುತ್ತಿದ್ದರು. ಆಯುರ್ವೇದ ಶಾಸ್ತ್ರದ ಪ್ರಕಾರ ಮನೆಯ ಮಾಲಿಕನು ಮೊದಲು ತನ್ನನ್ನು ಅವಲಂಭಿತರಾದ ಪ್ರಾಣಿ, ಪಕ್ಷಿ, ಸ್ವಜನರುಗಳು ಆಹಾರ ಸೇವಿಸಿ ತೃಪ್ತರಾದ ಮೇಲೆ, ಆತನು ಆಹಾರವನ್ನು ಸೇವಿಸಬೇಕೆಂದು. ಭರಧ್ವಾಜರು ಭರತನಿಗೆ ಔತಣವನ್ನು ಕೊಟ್ಟಾಗ ಮೊದಲು ಸೈನ್ಯದಲ್ಲಿದ್ದ ಆನೆ, ಕುದರೆ, ಹೇಸರಗತ್ತೆ, ಒಂಟೆ, ಎತ್ತುಗಳಿಗೆ ಬೇಕಾದ ಆಹಾರಗಳನ್ನು ತಿನ್ನಿಸಿ ಯಥಾವಿಧಿಯಾಗಿ ಉಪಚರಿಸಲ್ಪಟ್ಟವು. ಇವುಗಳಿಗೆ ಕಬ್ಬು, ಮಧುಮಿಶ್ರಿತವಾದ ಅರಳನ್ನು ತಿನ್ನಿಸಲಾಯಿತು.
ಚಿತ್ರಕೂಟದಲ್ಲಿ ವಾಸವಿದ್ದಾಗ ಶ್ರೀರಾಮನು ಸೀತಾ ಮಾತೆಗೆ ಹೀಗೆ ಹೇಳುತ್ತಾನೆ, ಭೋಜನದ ನಂತರ ಉಳಿದಿರುವ ಆಹಾರ ಪದಾರ್ಥಗಳನ್ನು ಹಾಗು ಒಣಗಿರುವ ಇತರೆ ಆಹಾರ ಪದಾರ್ಥಗಳನ್ನು ಕಾಗೆಗಳಿಗೆ ಹಾಕು ಎಂದು. ಈ ಪ್ರಸಂಗ ಆಹಾರ ಪದಾರ್ಥಗಳು ವ್ಯರ್ಥವಾಗುತ್ತಿರಲಿಲ್ಲ ಎಂದು ಸೂಚಿಸುತ್ತದೆ.
ಶ್ರೀ ರಾಮನನ್ನು ಕಾಣಲು ಬಂದಂತಹ ಭರತನಿಗೆ, ಶ್ರೀ ರಾಮನು ಬಹಳ ರುಚಿಕರವಾದ ಭಕ್ಷ್ಯ ಭೋಜ್ಯಗಳನ್ನು ನೀನೋಬ್ಬನೇ ಕುಳಿತು ತಿನ್ನುವುದಿಲ್ಲವಲ್ಲವೇ? ನಿನ್ನನ್ನು ಸ್ತುತಿ ಮಾಡುವವರಿಗೆ ಮಿತ್ರರಿಗೆ ಯಥೋಚಿತವಾಗಿ ಇವುಗಳನ್ನು ಕೊಡುವೆಯಲ್ಲವೇ? ಎಂದು ಕೇಳುತ್ತಾನೆ. ಆಹಾರವನ್ನು ಹಂಚಿ ತಿನ್ನಬೇಕೆಂಬ ಸಂದೇಶವನ್ನು ಇದು ಸಾರುತ್ತದೆ.
ಆಯುರ್ವೇದ ಮತ್ತು ಶ್ರೀ ರಾಮಾಯಣಗಳಿಗೆ ಬಹಳವೇ ಸಾಮ್ಯವಿದೆ ಎಂಬ ಸಂಗತಿ ಈ ಎಲ್ಲಾ ಪ್ರಸಂಗಗಳಿಂದ ತಿಳಿದು ಬರುತ್ತದೆ.
ಧಮಾರ್ಥ ಕಾಮ ಮೋಕ್ಷಾಣಾಮ್ ಆಯುರ್ವೇದ ಮೂಲಮುತ್ತಮಮ್//
ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಸಾಧನೆಗೆ ಆಯುರ್ವೇದ ಪಾಲನೆಯೇ ಮೂಲ, ಹಾಗೆಯೇ ಶ್ರೀ ರಾಮಾಯಣದ ಶ್ರವಣ ಪಠನ, ಮನನ ಮತ್ತು ಅನುಷ್ಟಾನವೂ ಮೂಲವೆಂದು ತಿಳಿಯಬೇಕು.
-ಡಾ|| ಎಸ್.ಬಿ.ಎ ಸಂಧ್ಯಾ
94495 05577
ಲೇಖಕರ ಸಂಕ್ಷಿಪ್ತ ಪರಿಚಯ:
ಡಾ// ಎಸ್.ಬಿ.ಎ. ಸಂಧ್ಯಾ ರವರು ಬೆಂಗಳೂರಿನ ಗಾಂಧಿಬಜಾರ್‌ನಲ್ಲಿ ನಾಗಶ್ರೀ ಆಯುರ್ವೇದ ಕೇಂದ್ರ ಎಂಬ ಚಿಕಿತ್ಸಾಲಯವನ್ನು 22 ವರ್ಷಗಳಿಂದ ನಡೆಸುತ್ತಿರುವರು. ಇವರು ಆಯುರ್ವೇದ ವೈದ್ಯರು, ಯೋಗ ತಜ್ಞರು ಮತ್ತು ಆಪ್ತ ಸಮಾಲೋಚಕರೂ ಆಗಿರುವರು. ವೃತ್ತಿಯಲ್ಲಿ ವೈದ್ಯೆಯಾದರೂ ಪ್ರವೃತ್ತಿಯಲ್ಲಿ ಲೇಖಕಿ. ಶ್ರೀ ಮುಖ್ಯಪ್ರಾಣ, ಸಪ್ತಗಿರಿ, ಶ್ರೀ ಸುಧಾ, ಜ್ಞಾನ ಶಂಕರ ಮುಂತಾದ ಮಾಸಪತ್ರಿಕೆಗಳಲ್ಲಿ ಇವರ ನೂರಾರು ಲೇಖನಗಳು ಪ್ರಕಟಗೊಂಡು, ಓದುಗರ ಮೆಚ್ಚುಗೆಗಳಿಸಿದೆ. ಆಯುರ್ವೇದ ಮತ್ತು ಆಹಾರ ಇದು ಇವರ ನೆಚ್ಚಿನ ವಿಷಯವಾಗಿದ್ದು, ಈ ವಿಷಯ ಕುರಿತಾಗಿ ಹಲವಾರು ಉಪನ್ಯಾಸಗಳನ್ನೂ ನೀಡಿರುತ್ತಾರೆ. ಇದರ ಬಗ್ಗೆ ಇವರ ಮೂರು ಕೃತಿಗಳು ಲೋಕಾರ್ಪಣೆಗೊಂಡಿದೆ. ಇವರಿಗೆ ಹಲವಾರು ಸನ್ಮಾನಗಳೂ ಸಂದಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



