ಹೊಸದಿಲ್ಲಿ: ಭಾರತವು 75ನೇ ವರ್ಷದ ಗಣರಾಜ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಶುಭ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಗುರುವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಪ್ರಜಾಪ್ರಭುತ್ವದ ತಾಯಿ ಎಂದಿದ್ದಾರೆ.
ಮಹಾತ್ಮಾ ಗಾಂಧಿಯವರನ್ನು ಸ್ಮರಿಸಿದ ರಾಷ್ಟ್ರಪತಿಗಳು, ನಾರಿ ಶಕ್ತಿ ಅಧಿನಿಯಮ್ ಕಾಯ್ದೆ ಬಗ್ಗೆ ಪ್ರಶಂಸಿಸಿದ್ದಾರೆ. ಅಯೋಧ್ಯೆ ರಾಮಮಂದಿರದ ಬಗ್ಗೆಯೂ ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
ಭಾರತವು ಪ್ರಜಾಪ್ರಭುತ್ವದ ತಾಯಿ:
ನಮ್ಮ ಗಣರಾಜ್ಯದ 75 ನೇ ವರ್ಷವು ಅನೇಕ ರೀತಿಯಲ್ಲಿ ದೇಶದ ಪಯಣದಲ್ಲಿ ಐತಿಹಾಸಿಕ ಮೈಲಿಗಲ್ಲು ಅಂತ ರಾಷ್ಟ್ರಪತಿಗಳು ಹೇಳಿದ್ದಾರೆ. ನಮ್ಮ ದೇಶವು ಸ್ವಾತಂತ್ರ್ಯದ ಶತಮಾನದತ್ತ ಸಾಗುತ್ತಿದೆ. ಇದರೊಂದಿಗೆ ಅಮೃತ ಕಾಲದ ಆರಂಭಿಕ ಹಂತವನ್ನು ಹಾದುಹೋಗುತ್ತಿದೆ. ಇದು ಯುಗ ಬದಲಾವಣೆಯ ಅವಧಿ. ಗಣರಾಜ್ಯೋತ್ಸವವು ನಮ್ಮ ಮೂಲ ಮೌಲ್ಯಗಳು ಮತ್ತು ತತ್ವಗಳನ್ನು ನೆನಪಿಡುವ ಪ್ರಮುಖ ಸಂದರ್ಭವಾಗಿದೆ. ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದೆ ಅಂತ ದ್ರೌಪದಿ ಮುರ್ಮು ಶ್ಲಾಘಿಸಿದರು.
ಸಂವಿಧಾನ ರಚನೆಗೆ ಕಾರಣರಾದವರನ್ನು ಸ್ಮರಿಸೋಣ:
ಸುದೀರ್ಘ ಮತ್ತು ಕಠಿಣ ಹೋರಾಟದಿಂದಾಗಿ ನಮ್ಮ ದೇಶವು ವಿದೇಶಿ ಆಡಳಿತದಿಂದ ಮುಕ್ತವಾಯಿತು. ಬಳಿಕ ಸಂವಿಧಾನ ಸಭೆಯು ಸುಮಾರು ಮೂರು ವರ್ಷಗಳ ಕಾಲ ಉತ್ತಮ ಆಡಳಿತದ ಎಲ್ಲಾ ಅಂಶಗಳ ಬಗ್ಗೆ ವಿವರವಾದ ಚರ್ಚೆಗಳನ್ನು ನಡೆಸಿತು. ಬಳಿಕ ನಮ್ಮ ರಾಷ್ಟ್ರದ ಶ್ರೇಷ್ಠ ಅಡಿಪಾಯ ಪಠ್ಯವಾದ ಭಾರತ ಸಂವಿಧಾನವನ್ನು ರಚಿಸಿತು. ಈ ದಿನದಂದು, ನಮ್ಮ ಭವ್ಯವಾದ ಮತ್ತು ಸ್ಪೂರ್ತಿದಾಯಕ ಸಂವಿಧಾನದ ರಚನೆಯಲ್ಲಿ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ ದೂರದೃಷ್ಟಿಯ ಸಾರ್ವಜನಿಕ ನಾಯಕರು ಮತ್ತು ಅಧಿಕಾರಿಗಳನ್ನು ನಾವೆಲ್ಲರೂ ದೇಶವಾಸಿಗಳು ಕೃತಜ್ಞತೆಯಿಂದ ಸ್ಮರಿಸಬೇಕು ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


