ಎಸ್.ಡಿ.ಎಂ ಕಾಲೇಜಿನ ಹೊಸ ಹೆಜ್ಜೆ: ನೂತನ ತಾಂತ್ರಿಕ ಬೋಧನಾ ವ್ಯವಸ್ಥೆ ಅಳವಡಿಕೆ

Upayuktha
0



ಉಜಿರೆ: ತಾಂತ್ರಿಕ ಆವಿಷ್ಕಾರಗಳಿಗೆ ಅನುಗುಣವಾಗಿ ಬೋಧನಾ ವ್ಯವಸ್ಥೆಯನ್ನು ಮಾರ್ಪಡಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಉಜಿರೆಯ ಎಸ್.ಡಿ.ಎಂ ಕಾಲೇಜು ಇದೀಗ ಮತ್ತೊಂದು ಪರಿಷ್ಕøತ ಆಯಾಮದ ಬೋಧನಾ ತಂತ್ರಜ್ಞಾನವನ್ನು ಪರಿಚಯಿಸಲು ಮುಂದಡಿಯಿಟ್ಟಿದೆ. ತರಗತಿ ಬೋಧನೆಯ ವೇಳೆ ನಿರ್ದಿಷ್ಟ ವಿಷಯದ ಕುರಿತು ಭಾಷೆ, ಅಕ್ಷರ, ದೃಶ್ಯ ಮತ್ತು ಶ್ರವ್ಯ ಸ್ವರೂಪದಲ್ಲಿ ವಿದ್ಯಾರ್ಥಿಗಳಿಗೆ ಸಮಗ್ರವಾಗಿ ಮನವರಿಕೆ ಮಾಡಿಕೊಡುವ ಇಂಟರ್ ಆ್ಯಕ್ಟಿವ್ ಪೆನಲ್ ಡಿಸ್‍ಪ್ಲೇ ಬೋರ್ಡ್ ಅಳವಡಿಸಿದೆ.




ಇಂಟರ್ ಆ್ಯಕ್ಟಿವ್ ಪೆನಲ್ ಡಿಸ್‍ಪ್ಲೇ ಬೋರ್ಡ್‍ನ ಅಳವಡಿಕೆಯ ಆರಂಭಿಕ ಹೆಜ್ಜೆಯಾಗಿ ಗುರುವಾರದಂದು ಎಸ್.ಡಿ.ಎಂ. ಪದವಿ ಕಾಲೇಜು ಮತ್ತು ಎಸ್.ಡಿ.ಎಂ.ನ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರಿಗೆ ಈ ನೂತನ ತಂತ್ರಜ್ಞಾನದ ಕುರಿತು ವಿಶೇಷ ತರಬೇತಿ ಕಾರ್ಯಾಗಾರ ನಡೆಯಿತು. ಸೆನ್ಸಸ್ ಎಲೆಕ್ಟ್ರಾನಿಕ್ಸ್‍ನ ಪ್ರಾಡಕ್ಟ್ ಟ್ರೇನರ್ ಸುಮಿತಾ ಅವರು ನೂತನ ತಾಂತ್ರಿಕ ಬೋರ್ಡ್‍ನ ಬಳಕೆಯ ವಿಧಾನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.




ಬೋಧನಾ ವಿಷಯದ ಕುರಿತು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವ ಅನೇಕ ವಿಧದ ಮಾದರಿಗಳನ್ನು ಈ ಇಂಟರ್ ಆ್ಯಕ್ಟಿವ್ ಪೆನಲ್ ಡಿಸ್‍ಪ್ಲೇ ಬೋರ್ಡ್‍ನಲ್ಲಿ ಕಲ್ಪಿಸಿಕೊಡಲಾಗಿದೆ. ಪಠ್ಯವಿಷಯದ ನಿರ್ದಿಷ್ಟ ಶೀರ್ಷಿಕೆ ನಿರೀಕ್ಷಿಸುವ ಸಮಗ್ರ ವಿವರಗಳನ್ನು ಕ್ಷಣಾರ್ಧದಲ್ಲಿ ಕಾಣಿಸುತ್ತಾ ಮನವರಿಕೆ ಮಾಡಿಕೊಡುವ ವಿಧಾನದೊಂದಿಗೆ ಬೋಧನೆಯನ್ನು ಇನ್ನಷ್ಟು ವಿದ್ಯಾರ್ಥಿಸ್ನೇಹಿಯಾಗಿಸುವ ಪ್ರಯೋಗ ನಡೆಸಲು ಇದು ಪೂರಕವಾಗಲಿದೆ ಎಂದು ಅವರು ಹೇಳಿದರು.




ಈ ಬೋರ್ಡ್‍ನ ನೆರವಿನೊಂದಿಗೆ ತರಗತಿಯನ್ನು ನಿರ್ವಹಿಸುವಾಗ ಲ್ಯಾಪ್‍ಟಾಪ್ ತೆಗೆದುಕೊಂಡು ಹೋಗಬೇಕಿಲ್ಲ. ಸ್ಮಾಟ್ ಡಸ್ಟರ್‍ಅನ್ನೂ ಬಳಸಬೇಕಿಲ್ಲ. ಕೈ ಅಥವಾ ವೈಪಿಂಗ್ ಕ್ಲಾಥ್ ಮೂಲಕ ಸ್ಮಾರ್ಟ್ ಬೋರ್ಡ್ ಮೇಲೆ ಬರೆದದ್ದನ್ನು ಅಳಿಸಿಹಾಕಬಹುದು. ಗೂಗಲ್ ಮೂಲಕ ಬೇಕಾದ ಮಾಹಿತಿಯನ್ನು ಕಾಣಿಸಿ ಡೌನ್‍ಲೋಡ್ ಮಾಡಿ ಆ ಕ್ಷಣಕ್ಕೆ ಅಗತ್ಯವಿರುವ ಮಾಹಿತಿಯನ್ನಷ್ಟೇ ಕಾಣಿಸಿ ವಿದ್ಯಾರ್ಥಿಗಳ ಗ್ರಹಿಕೆಗೆ ಅನುವುಮಾಡಿಕೊಡಬಹುದು. ಸ್ಮಾರ್ಟ್ ಸ್ಕ್ರೀನ್ ಮೇಲೆ ಆ ಕ್ಷಣಕ್ಕೆ ಬರೆದು ಅದಕ್ಕನುಗುಣವಾಗಿ ಬೇಕಾದ ವಿಡೀಯೋವನ್ನು ಕಾಣಿಸುತ್ತಾ ಮತ್ತಷ್ಟು ವಿವರಗಳನ್ನು ಬರೆದು ವಿದ್ಯಾರ್ಥಿಗಳ ಕಲಿಕೆಯನ್ನು ಆಸಕ್ತಿದಾಯಕವಾಗಿಸಬಹುದು ಎಂದು ತಿಳಿಸಿದರು.




ಎಲ್ಲಾ ಜ್ಞಾನಶಿಸ್ತುಗಳ ಶೈಕ್ಷಣಿಕ ಅಗತ್ಯಗಳಿಗೆ ತಕ್ಕಂತೆ ಇಂಟರ್ ಆ್ಯಕ್ಟಿವ್ ಪೆನಲ್ ಡಿಸ್‍ಪ್ಲೇ ಬೋರ್ಡ್ ಅನ್ನು ರೂಪಿಸಲಾಗಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕ ವಲಯಗಳ ಎಲ್ಲಾ ವಿಷಯಗಳನ್ನೂ ಪರಿಣಾಮಕಾರಿಯಾಗಿ ಬೋಧಿಸಬಲ್ಲ ಅಪ್‍ಡೇಟೆಡ್ ತಂತ್ರಜ್ಞಾನ ವ್ಯವಸ್ಥೆಯಾಗಿ ಇಂಟರ್ ಆ್ಯಕ್ಟಿವ್ ಪೆನಲ್ ಡಿಸ್‍ಪ್ಲೇ ಬೋರ್ಡ್ ಮುಖ್ಯಪಾತ್ರವಹಿಸಲಿದೆ. ಈ ಹಿಂದಿನ ಸ್ಮಾರ್ಟ್ ಬೋರ್ಡ್‍ಪರಿಕಲ್ಪನೆಯ ವಿಸ್ತರಣೆಯ ಸಾಧ್ಯತೆಯಾಗಿ ಇಂಟರ್ ಆ್ಯಕ್ಟಿವ್ ಪೆನಲ್ ಡಿಸ್‍ಪ್ಲೇ ಬೋರ್ಡ್ ಕಾರ್ಯನಿರ್ವಹಿಸಲಿದೆ ಎಂದರು.




ಎಸ್.ಡಿ.ಎಂ ಪದವಿ ಕಾಲೇಜಿನ ಅಧ್ಯಾಪಕರಿಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಪ್ರಾಂಶುಪಾಲರಾದ ಡಾ.ಕುಮಾರ ಹೆಗಡೆ ಬಿ.ಎ ಅವರು ಮಾತನಾಡಿ ಇಂಟರ್ ಆ್ಯಕ್ಟಿವ್ ಪೆನಲ್ ಡಿಸ್‍ಪ್ಲೇ ಬೋರ್ಡ್ ಅಳವಡಿಕೆಯ ಮಹತ್ವಾಕಾಂಕ್ಷಿ ಹೆಜ್ಜೆಯ ವಿವರಗಳನ್ನು ನೀಡಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರಕುಮಾರ್ ಅವರ ವಿಶೇಷ ಕಾಳಜಿಯೊಂದಿಗೆ ಈ ಬೋರ್ಡ್ ಅಳವಡಿಕೆಯಾಗುತ್ತಿದೆ. ಉಜಿರೆಯ ಎಸ್.ಡಿ.ಎಂ.ನ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳಲ್ಲಿ ಬೋರ್ಡ್‍ಗಳನ್ನು ಆರಂಭಿಕವಾಗಿ ಅಳವಡಿಸಲಾಗಿದೆ. ನಂತರದ ದಿನಗಳಲ್ಲಿ ಹೆಚ್ಚು ಬೋರ್ಡ್‍ಗಳನ್ನು ಅಳವಡಿಸಿ ಸಂಪೂರ್ಣವಾಗಿ ಡಿಜಿಟಲೈಜಡ್ ಬೋಧನಾನುಭವವನ್ನು ವಿದ್ಯಾರ್ಥಿಗಳಿಗೆ ನೀಡುವ ಗುರಿ ಇದೆ ಎಂದು ತಿಳಿಸಿದರು. ಮೂರು ದಿನಗಳ ಕಾಲ ಈ ಕುರಿತ ತರಬೇತಿ ಕಾರ್ಯಾಗಾರವು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ನಡೆಯಲಿದೆ.




ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡೀನ್ ಡಾ.ವಿಶ್ವನಾಥ್ ಪಿ ಅವರು ಇಂಟರ್ ಆ್ಯಕ್ಟಿವ್ ಪೆನಲ್ ಡಿಸ್‍ಪ್ಲೇ ಬೋರ್ಡ್ ಅನ್ನು ಆರಂಭಿಕವಾಗಿ ಪ್ರಾಯೋಗಿಕ ನೆಲೆಯಲ್ಲಿ ಅಳವಡಿಸಲಾಗುವುದು ಎಂದರು. ಬೋಧಕರ ಬೋಧನೆಯ ಪರಿಣಾಮವನ್ನು  ಈ ನೂತನ ತಾಂತ್ರಿಕ ಬೋರ್ಡ್ ಹೆಚ್ಚಿಸಲಿದೆ. ವಿದ್ಯಾರ್ಥಿಗಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಒಳಗೊಳ್ಳುವುದಕ್ಕೆ ನೆರವಾಗಲಿದೆ. ಈ ನೂತನ ತಾಂತ್ರಿಕ ಬೋಧನಾ ವ್ಯವಸ್ಥೆ ಹಂತಹಂತವಾಗಿ ವಿಸ್ತಾರಗೊಳ್ಳಲಿದೆ. ನಂತರ ಎಲ್ಲಾ ಕ್ಲಾಸ್‍ಗಳಿಗೂ ಈ ಬೋರ್ಡ್‍ಅನ್ನು ಅಳವಡಿಸಲಾಗುವುದು ಎಂದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   





Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top