ಚಿತ್ರ: ಮಾರ್ಕ್ ಜಾನ್ಸ್
ನಾವೆಲ್ಲ ದಿನನಿತ್ಯವೂ ಅನೇಕ ಕೆಲಸ-ಕರ್ಮ-ಕರ್ತವ್ಯಗಳನ್ನು ಗೈಯ್ಯುತ್ತಿರುತ್ತೇವೆ, ಮಾಡುತ್ತಿರುತ್ತೇವೆ. ಕೆಲವೊಂದು ಸಕಾಮವಾಗಿಯೂ, ಮತ್ತಷ್ಟು ಯಾವ ಫಲಾಪೇಕ್ಷೆಗಳನ್ನೂ ಉದ್ದೇಶಿಸದೆ, ಕೇವಲ ನಿತ್ಯಕರ್ಮಗಳೆಂದು, ಕರ್ತವ್ಯಗಳೆಂದು ಸಹಜವಾಗಿಯೇ ಮಾಡುತ್ತಿರುತ್ತೇವೆ. ಎಷ್ಟೋ ಸಲ ಇವುಗಳ ಪರಿಣಾಮಗಳು ಮಾತ್ರ ನಾವೆಣಿಸಿದುದಕ್ಕಿಂತಲೂ ವಿಪರೀತವೇ ವಿರುದ್ಧವೇ ಆಗುವದು, ಆಗಿರುವುದು ಕಂಡುಬರುತ್ತವೆ. ಆದರೆ, ಈ ಪರಿಯ ಪರಿಣಾಮಗಳ ಬಗ್ಗೆ ನಾವು ಕೊಂಚವೂ ಯೋಚಿಸದೆ, ಅನಿವಾರ್ಯವೆಂಬಂತೆ ಸಹಜತೆಯಿಂದ ಕರ್ಮಗೈಯ್ಯುತ್ತಾ ಹೋಗುತ್ತೇವೆ. ಇವುಗಳಿಗೆ ಉದಾಹರಣೆಗಳಾಗಿ ಕೆಲವು ಘಟಿಸಿದ, ನೋಡಿದ, ಕೇಳಿದ, ಓದಿದ ಪ್ರಸಂಗಗಳನ್ನು ಈ ಕೆಳಗೆ ಪ್ರಸ್ತುತಪಡಿಸಲಾಗಿದೆ. ಇವುಗಳು ಯಾವುದೆ ಕಾಲದಲ್ಲೂ ಯಾವುದೆ ದೇಶದಲ್ಲೂ ನಡೆದಿರಬಹುದು/ನಡೆಯಬಹುದು...! ಓದಿ ವಿಚಾರಿಸಿ ನೋಡಿರಿ...!
೧) ಅದೊಂದು ವೃದ್ಧ ದಂಪತಿಗಳ ಕುಟುಂಬ. ಇಬ್ಬರಿಗೂ ವಯಸ್ಸು ಎಂಬತ್ತರ ಮೇಲೆಯೇ. ಪತಿ ಬಹಳ ವರ್ಷಗಳಿಂದ ವೃದ್ಧಾಪ್ಯದ ಅಶಕ್ತತೆಯಿಂದ, ಬಾಧೆಗಳಿಂದ ಬಳಲಿ, ಅನಾರೋಗ್ಯದಿಂದ ಸದಾ ಹಾಸಿಗೆಯ ಮೇಲೆಯೇ ಮಲಗಿರುತ್ತಿದ್ದ. ಪತ್ನಿ ತನ್ನ ಸೀಮಿತ ಶಕ್ತಿಯಿಂದಲೇ ಸಾಧ್ಯವಾದಷ್ಟೂ ಪತಿಯ ಉಪಚಾರಗಳನ್ನು ಅತ್ಯಂತ ಕಾಳಜಿಯಿಂದ, ಶ್ರದ್ಧೆಯಿಂದ ಹೃತ್ಪೂರ್ವಕವಾಗಿ ಮಾಡುತ್ತಿದ್ದರು. ಕೆಲವು ಸಲ ಪತಿಯು ಬಳಲಿ ಒದ್ದಾಡುವದನ್ನು ನೋಡಲಾಗದೇ ಅವುಗಳ ಮುಕ್ತಿಯ ಕುರಿತಾಗಿ ವಿಪರೀತ ಯೋಚನೆಗಳೂ ಸುಳಿಯುತ್ತಿದ್ದವು: 'ಭಗವಂತಾ..., ಹೇಗಾದರೂ ಪತಿಗೆ ಬೇಗನೆ ಮುಕ್ತಿ ಸಿಗಲಪ್ಪಾ...!' ಎಂದು ಪ್ರಾರ್ಥಿಸುವಂತಾಗುತ್ತಿತ್ತು. ಬಹಳಷ್ಟು ಯೋಚನೆ ಮಾಡಿದ ಮೇಲೆ, ಪತಿಯ ಮುಕ್ತಿಗೆ ಕಠಿಣಹೃದಯಿಯಾಗಿ, ಅತ್ಯಂತ ತೀವ್ರ ವ್ಯಥೆಯಿಂದ ಬಾಧಿತಳಾಗಿಯೂ ಯೋಜನೆ ಯೊಂದನ್ನು ರೂಪಿಸಿ ಕಾರ್ಯಗತಗೊಳಿಸಿದಳು. ಪತಿಗೆ ದಿನನನಿತ್ಯವೂ ಕೊಡುವ ಔಷಧಿಗಳಲ್ಲಿ ನಿಧಾನ ಪಾಷಾಣವನ್ನು ಕೂಡಿಸಿ ಕೊಡತೊಡಗಿದಳು. ಔಷಧಿಯ ಬಟ್ಟಲನ್ನು ಪತಿಯ ಕೈಗೆ ಕೊಡುತ್ತಲೇ ಪಾಪಪ್ರಜ್ಞೆಯಿಂದ ಅವನ ಕೋಣೆಯಿಂದ ಹೊರಗೆ ಬಂದುಬಿಡುತ್ತಿದ್ದಳು...!
ರುಗ್ಣ ಪತಿಯು ಕೂಡ ತನ್ನ ಪತ್ನಿಯ ಕುರಿತಾಗಿ ಅತ್ಯಂತ ಸದಭಿಪ್ರಾಯವುಳ್ಳವನಾಗಿ, ತನ್ನ ಸಲುವಾಗಿ ಪತ್ನಿ ಬಹಳಷ್ಟು ಕಷ್ಟಪಡುವುದನ್ನು ನೋಡಲಾಗದೇ ಆದಷ್ಟು ಬೇಗನೆ ಅವಳಿಗೆ ತನ್ನಿಂದಾಗುವ ಕಷ್ಟಗಳಿಗೆ ಮುಕ್ತಿ ದೊರಕಿಸಲು ತಾನೂ ಒಂದು ಉಪಾಯವನ್ನು ಅನುಸರಿಸುತ್ತ ಬಂದ. ಪತ್ನಿಯು ಅವನ ಕೈಗೆ ಔಷಧಿಯ ಬಟ್ಟಲನ್ನು ಕೊಟ್ಟು ಹೊರಗೆ ಹೋಗುವದನ್ನೇ ಕಾಯುತ್ತ, ಅವಳು ಹೊರಗೆ ಹೋದೊಡನೆಯೇ ತನ್ನ ಮಂಚಕ್ಕೆ ತಾಕಿಕೊಂಡಿರುವಂತಹ ಕಿಟಕಿಯಿಂದ ಆ ಬಟ್ಟಲಲ್ಲಿಯ ಔಷಧಿಯನ್ನು ಹೊರಗೆ ಚೆಲ್ಲುತ್ತಿದ್ದ; ಔಷಧಿ ತೆಗೆದುಕೊಳ್ಳದೇ ಇರುವುದರಿಂದ ತಾನು ಬೇಗನೆ ಮೃತ್ಯುವಶನಾಗಿ, ತನ್ನಸಲುವಾಗಿ ಪತ್ನಿಯು ಪಡುವ ಕಷ್ಟಗಳಿಂದ ಮುಕ್ತಿಗೊಳ್ಳುವಳೂ ಎಂಬ ಪರಿಭಾವನೆಯಿಂದ. ಇಲ್ಲಿ ಇಬ್ಬರ ಉದ್ದೇಶವೂ ಪರಸ್ಪರರನ್ನು ಕಷ್ಟಗಳಿಂದ ಮುಕ್ತಗೊಳಿಸುವದಾಗಿದ್ದರೂ ಪರಿಣಾಮ ಮಾತ್ರ ವಿಪರೀತವಾಗಿ, ವಿರುದ್ಧವಾಗಿಯೇ ಒದಗಿಬರುತ್ತಿತ್ತು. ಪತಿ, ಪತ್ನಿಕೊಟ್ಟ ಔಷಧಿಯನ್ನು ಹೊರಚೆಲ್ಲಿದ ನಂತರ ಕೆಲವು ಸಲ ತೋರಿಕೆಗೆಂಬಂತೆ, ಮತ್ತು ಕೆಲವು ಸಲ ನಿಜವಾಗಿಯೂ ರೋಗಬಾಧೆಯಿಂದ ಮತ್ತಷ್ಟು ಬಳಲಿ ನರಳುತ್ತಿದ್ದ. ಆ ನರಳುವಿಕೆಯ ಧ್ವನಿಯನ್ನು ಕೇಳಿದ ಪತ್ನಿ ತಾನು ಔಷಧಿಯಲ್ಲಿ ಸೇರಿಸಿದ ನಿಧಾನ ಪಾಷಾಣದಿಂದಲೇ ಪತಿಗೆ ಮತ್ತಷ್ಟು ಕಷ್ಟವಾಗುತ್ತಿದೆಯೆಂದು ಪರಿಭಾವಿಸಿ ಪಶ್ಚಾತ್ತಾಪದಿಂದ ಬೆಂದು ಹೋಗುತ್ತಿದ್ದಳು...! ಆದರೇನು ಮಾಡುವುದು, ತನ್ನ ಪ್ರಿಯಪತಿಯು ರೋಗಬಾಧೆಗಳ ಕಷ್ಟಗಳಿಂದ ಬೇಗ ಮುಕ್ತನಾಗಲೆಂದೇ ಭಗವಂತನಲ್ಲಿ ಪ್ರಾರ್ಥಸುತ್ತಿದ್ದಳು; ತಾನು ಈ ಕುರಿತಾಗಿ ಯಾವುದೇ ಬಗೆಯ ಪ್ರಾಯಶ್ಚಿತ್ತವನ್ನು ಹೊಂದಲು ಮಾನಸಿಕವಾಗಿ ಸಿದ್ಧಳಾಗಿ.
ಆದರೆ, ಭಗವಂತನ ಯೋಜನೆಗಳೇ ಬೇರೆಯಾಗಿದ್ದವು: ತಾ ಮಾಡಿದ ಪ್ರಾರಬ್ಧ ಬಲವತ್ತವಾಗಿದ್ದರೇನು ಎಂಬಂತೆ; ಪತಿಯ ಪ್ರಾರಬ್ಧ ಮುಗಿಯುವ ತನಕ ಅವನು ಹೋಗುವದಾದರೂ ಹೇಗೆ, ಪ್ರಾರಬ್ಧಗಳನ್ನು ಅನುಭವಿಸಿಯೇ ಹೋಗಬೇಕಲ್ಲವೆ...!?
ಇಲ್ಲೊಂದು ಪತಿ-ಪತ್ನಿಯರ ಪರಸ್ಪರ ಕಾಳಜಿಯುತ, ಅನುಕಂಪಭರಿತ ಪ್ರೇಮಕಥೆಯೊಂದು ಸೃಷ್ಟಿಯಾಗಿತ್ತು; ಅವರ ಯೋಜನೆಗಳಿಗೆ ವಿಪರೀತ ಪರಿಣಾಮ ಬೀರುತ್ತ/ತೋರುತ್ತ, ಭಗವಂತನ ಯೋಜನೆಗಳೇ ಸತ್ಯವೆಂದರಹುತ್ತ 'ಪ್ರಾರಬ್ಧಾನುಸಾರವಾಗಿ ತಾವುಗಳು ಗೈಯ್ಯುವ ಕರ್ಮಗಳಿಗೆ ತಕ್ಕಂತೆ ಫಲಗಳನ್ನು ಅನುಭವಿಸಿಯೇ ಹೋಗಬೇಕು...!' ಎಂಬಂತೆ.
ಆದರೆ, ಪತಿಯ ಮಂಚಕ್ಕೆ ತಾಕಿಕೊಂಡಿರುವ ಕಿಟಕಿಯ ಹೊರಗೆ ಕೆಳಗಡೆಯಲ್ಲಿರುವ ಕುಂಡದಲ್ಲಿಯ ಸಸಿಯೊಂದು ಬಾಡುತ್ತ ಅವಸಾನ ಹೊಂದಿತು, ಅದರ ಕರ್ಮವೆನಿದ್ದಿತೋ ಬಲ್ಲವರಾರು...!?
- ಕುರಾಜನ್ (ಕುಮಾರ ಜಂತಲಿ ಬೆಂಗಳೂರು)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ