ಮಂಗಲ್ಪಾಡಿ: "ಜನಸಾಮಾನ್ಯರಿಗೆ ಪ್ರವೇಶಿಸಲು ಅಸಾಧ್ಯವಾದ ಸಂಸ್ಕೃತ ಭಾಷೆಯ ವ್ಯಾಸ ಮಹಾಕವಿಯ ಮಹಾಭಾರತವೆಂಬ ಗಹನ ಗಹ್ವರವಾದ ಗೊಂಡಾರಣ್ಯ ಸಮಾನವಾದ ಮಹಾಕಾವ್ಯವನ್ನು ನಗುವ ನಂದನವನವನ್ನಾಗಿಸಿ ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಟ್ಟ ಕುಮಾರವ್ಯಾಸ ನಿಜವಾಗಿಯೂ ಮಹಾಕವಿ ರತ್ನ. ಆತ ಅಪ್ಪಟ ಭಕ್ತಕವಿ. ಕೃಷ್ಣ ಪರಮಾತ್ಮನ ಮೇಲಿನ ಭಕ್ತಿಯ ಪರಾಕಾಷ್ಠೆಯನ್ನು ಒಳಗೊಂಡಿರುವ ಆತನ ಮಹಾಕಾವ್ಯವೇ ಕರ್ಣಾಟ ಭಾರತ ಕಥಾಮಂಜರಿ ಅಥವಾ ಗದುಗಿನ ಭಾರತ. ಕನ್ನಡ ಸಾಹಿತ್ಯದಲ್ಲಿ ಭಾಮಿನಿ ಷಟ್ಪದಿಯಲ್ಲಿ ಮೂಡಿಬಂದ ಈ ಮೇರುಕೃತಿಯೇ ನಡುಗನ್ನಡ ಸಾಹಿತ್ಯದ ಹೀವಾಳ. ಕಾವ್ಯಲೋಕದ ಚಿರಂಜೀವಿಯಾದ ಗದುಗಿನ ನಾರಣಪ್ಪನ ದಿವ್ಯಕಥಾಮೃತವನ್ನು ಹಾಡಿ ಆಸ್ವಾದಿಸುವುದೇ ನಾವು ಆ ಮಹಾಕವಿಗೆ ಸಲ್ಲಿಸುವ ಮಹಾನಮನ" ಎಂದು ಹಿರಿಯ ಸಾಹಿತಿ ಶಿಕ್ಷಣತಜ್ಞ ವಿ.ಬಿ ಕುಳಮರ್ವ ಅವರು ಅಭಿಪ್ರಾಯಪಟ್ಟರು.
ಮಂಗಲ್ಪಾಡಿಯ ಏಕಾಹ ಭಜನಾ ಮಂದಿರದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಮತ್ತು ಕಲಾಕುಂಚ ಕೇರಳ ಗಡಿನಾಡ ಘಟಕದ ಸಂಯುಕ್ತ ಆಶ್ರಯದಲ್ಲಿ ವ್ಯವಸ್ಥೆಗೊಳಿಸಿದ "ಮಹಾಕವಿ ನಮನ" ಸಮಾರಂಭದಲ್ಲಿ ಮಾತನಾಡುತ್ತಾ ಅವರು ಕವಿಪುಂಗವನಿಗೆ ನುಡಿಕುಸುಮಗಳನ್ನರ್ಪಿಸಿ ನಮಿಸಿದರು.
"ಕುಮಾರವ್ಯಾಸನೆಂದರೆ ಜನಸಾಮಾನ್ಯರಿಗೂ ಮಹಾಕಾವ್ಯವನ್ನು ಸುಲಭವಾಗಿ ಮನದಟ್ಟು ಮಾಡಿಕೊಡುವ ಮಹಾಕವಿ" ಎಂದು ಕರ್ನಾಟಕ ಕಾಲೇಜು ಇಲಾಖೆಯ ನಿವೃತ್ತ ನಿರ್ದೇಶಕ ಗಿರಿಧರ ಮಾಣಿಹಿತ್ತಿಲು ಅವರು ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸುತ್ತಾ ನುಡಿದರು.
ಕಲಾಕುಂಚ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ ಅವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತಾ ಗಮಕ ಕಲೆಯ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು. ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕುಮಾರವ್ಯಾಸ ಮಹಾಕವಿಯ ಕೃತಿಯಿಂದಾಯ್ದ ಕೀಚಕೋಪಾಖ್ಯಾನದ ಭಾಗವನ್ನು ಗಮಕಿ ಶ್ರೀಮತಿ ದಿವ್ಯಾ ಕಾರಂತ ಮಂಗಲ್ಪಾಡಿ ಅವರು ಬಹಳ ಸುಶ್ರಾವ್ಯವಾಗಿ ವಾಚನ ಮಾಡಿದರು. ಹಿರಿಯ ಗಮಕಿ ಕಲಾಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರು ಮನೋಜ್ಞವಾಗಿ ವ್ಯಾಖ್ಯಾನ ಗೈದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಕಲಾವಿದರಿಗೆ ಶಾಲು ಹೊದೆಸಿ ಶುಭ ಹಾರಯಿಸಿದರು.
ಚಿರಂಜೀವಿಗಳಾದ ವೇದಾಂತ್ ಮತ್ತು ದೇವಾಂಶು ಪ್ರಾರ್ಥನೆ ಗೈದರು. ಶ್ರೀಮತಿ ಜಯಲಕ್ಷ್ಮಿ ಆರ್.ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂದಿರದ ಅಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


