ಶ್ರೀರಾಮ ಕಥಾ ಲೇಖನ ಅಭಿಯಾನ-46: ವಿವಿಧ ಕಲಾ ಮಾಧ್ಯಮಗಳಲ್ಲಿ ರಾಮಾಯಣ

Upayuktha
0


- ಎನ್.ವ್ಹಿ. ರಮೇಶ್

ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು, ಆಕಾಶವಾಣಿ

 

ರಂಗಭೂಮಿ ಕ್ಷೇತ್ರ:- ವೃತ್ತಿ ರಂಗಭೂಮಿಯ ಚರಿತ್ರೆ ಗಮನಿಸಿದರೆ, ಅಸಂಖ್ಯಾತ ರಂಗ ನಾಟಕಗಳನ್ನು ನೆನಪಿಸಿಕೊಂಡರೆ, ಗುಬ್ಬಿ ಕಂಪನಿಯ ರಾಮಾಯಣ, ಲವ-ಕುಶ ನಾಟಕಗಳು ಥಟ್ಟನೆ ನೆನಪಾಗುತ್ತವೆ. ಚಲಿಸುವ ರಂಗಭೂಮಿಯ ವೇದಿಕೆಯ ಮೇಲೆ ಗುಬ್ಬಿ ವೀರಣ್ಣನವರು ಆ ಕಾಲಕ್ಕೆ ಅಳವಡಿಸಿದ್ದ ರಂಗ ಸಜ್ಜಿಕೆ, ವೇಷಾಲಂಕಾರ, ರಂಗ ಪರಿಕರಗಳು, ಚಮತ್ಕಾರದ ದೃಶ್ಯಗಳು ಅಪರೂಪ. ನಂತರ ವಿವಿಧ ಕಂಪನಿಗಳಲ್ಲಿ ಅಭಿನಯಿಸಿದ ಸಂಪೂರ್ಣ ರಾಮಾಯಣ, ವೀರಾಂಜನೇಯ, ಲವ-ಕುಶ ಮುಂತಾದ ನಾಟಕಗಳಲ್ಲಿ ಸುಬ್ಬಯ್ಯನಾಯ್ಡು, ಬಿ.ವಿ. ಗುರುಮೂರ್ತಪ್ಪ, ಸಿ.ಬಿ. ಮಲ್ಲಪ್ಪ ಮುಂತಾದವರು ಭಕ್ತಿರಸದ ಪಾತ್ರಗಳಲ್ಲಿ ಅಭಿನಯಿಸಿ ಹಾಡುತ್ತಿದ್ದ ಹಾಡುಗಳು, ಕಂದ ಪದ್ಯಗಳು ಇಂದಿಗೂ ಅವುಗಳನ್ನು ಅಂದು ನೋಡಿದವರ ಕಿವಿಗಳಲ್ಲಿ ಗುಂಯ್‍ಗುಡುತ್ತಿವೆ. ಭೂಕೈಲಾಸದಲ್ಲಿ ಸುಬ್ಬಯ್ಯನಾಯ್ಡು ಅವರು ಮೈಸೂರಿನ ತಮ್ಮ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯಲ್ಲಿ ರಾವಣನಾಗಿ, ಲಕ್ಷ್ಮೀಬಾಯಿ ಮಂಡೋದರಿಯಾಗಿ ಆಭಿನಯಿಸಿದ್ದರು. ಆಂಜನೇಯನಾಗಿ ಬಿ.ಪಿ. ರಾಜಮ್ಮ ಅವರ ಅಭಿನಯ ಹಾಗೂ ಗಾಯನ, ಸುಭದ್ರಮ್ಮ ಮನ್ಸೂರ್, ಜುಬೇದಾಬಾಯಿ ಸವಣೂರು, ಅವರು ಹಾಡುತ್ತಿದ್ದ ರಂಗ ಗೀತೆಗಳು ಅದ್ಭುತವಾಗಿವೆ.


70ರ ದಶಕದಲ್ಲಿ ತಮಿಳುನಾಡಿನ ರಂಗಭೂಮಿ ಹಾಗೂ ಚಲನಚಿತ್ರ ನಟ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ತಮ್ಮ ತಂಡದೊಂದಿಗೆ ಅಭಿನಯಿಸಿದ್ದ ಅನೇಕ ಪೌರಾಣಿಕ ನಾಟಕಗಳಲ್ಲಿ ರಾವಣ ಎಂಬ ನಾಟಕದ ವೈಭವೋಪೇತ ಪ್ರದರ್ಶನ ಹಾಗೂ ಅವರ ಅಭಿನಯ ಕಣ್ಮುಂದೆ ಇನ್ನೂ ಕಟ್ಟುತ್ತಿದೆ.


ಚಲನಚಿತ್ರ ಕ್ಷೇತ್ರ: ಕನ್ನಡ ಚಲನ ಚಿತ್ರರಂಗದಲ್ಲಿ ರಾಮಾಯಣವನ್ನಾಧರಿಸಿದ ಅನೇಕ ಚಿತ್ರಗಳು ಬಂದಿವೆ. 1958ರಲ್ಲಿ ಕನ್ನಡದಲ್ಲಿ ಬಂದ ಭೂಕೈಲಾಸ ಚಿತ್ರದಲ್ಲಿ ಡಾ. ರಾಜ್‍ಕುಮಾರ್ ರಾವಣನಾಗಿದ್ದು, ಕೆ.ಎಸ್. ಅಶ್ವಥ್ ನಾರದನ ಪಾತ್ರದಲ್ಲಿದ್ದರು. ಅವರಿಗಾಗಿ ಶೀರ್ಕಾಳಿ ಗೋವಿಂದರಾಜನ್ ಹಾಡಿದ ‘ರಾಮನ ಅವತಾರ ರಘುಕುಲ ಸೋಮನ ಅವತಾರ’ ಎಂಬ ದೀರ್ಘ ಹಾಡು ಅತ್ಯಂತ ಜನಪ್ರಿಯವಾಗಿದೆ. 1960ರಲ್ಲಿ ತೆರೆಗೆ ಬಂದ ದಶಾವತಾರ ಚಿತ್ರವನ್ನು ನಿರ್ದೇಶಿಸಿದವರು ಪಿ.ಜಿ. ಮೋಹನ್, ನಿರ್ಮಾಪಕರು ಬಿ.ಎಸ್. ರಂಗ. ಇದರಲ್ಲಿ ಶ್ರೀರಾಮನನ್ನೂ ಸೇರಿದಂತೆ ವಿಷ್ಣುವಿನ ಹತ್ತು ಪಾತ್ರಗಳಲ್ಲಿ ಅಭಿನಯಿಸಿದವರು ರಾಜಾಶಂಕರ್, ಸೀತೆಯಾಗಿ ಆದವಾನಿ ಲಕ್ಷ್ಮಿ ಹಾಗೂ ರಾವಣನಾಗಿ ಡಾ. ರಾಜ್‍ಕುಮಾರ್. ಇದರಲ್ಲಿ ಪಿ.ಬಿ. ಶ್ರೀನಿವಾಸ್ ಹಾಡಿದ ವೈದೇಹಿ ಏನಾದಳೋ ಹಾಡು ಇಂದಿಗೂ ಜನಪ್ರಿಯವಾಗಿದೆ. 1963ರಲ್ಲಿ ತೆರೆಗೆ ಬಂದ ಚಿತ್ರ ಶ್ರೀರಾಮಾಂಜನೇಯ ಯುದ್ಧ. ಇದನ್ನು ನಿರ್ದೇಶಿಸಿದವರು ಎಂ.ಎಸ್.ನಾಯಕ್ ಹಾಗೂ ಎಂ.ನಾಗೇಶ್‍ರಾವ್. ಇದರಲ್ಲಿ ಶ್ರೀರಾಮನಾಗಿ ಅಭಿನಯಿಸಿದವರು ಡಾ. ರಾಜ್‍ಕುಮಾರ್. ಸೀತೆಯಾಗಿ ಆದವಾನಿ ಲಕ್ಷ್ಮಿ ಹಾಗೂ ಹನುಮಂತನಾಗಿ ಉದಯ್‍ಕುಮಾರ್. ಕೆ.ಎಸ್. ಅಶ್ವತ್ ಹಾಗೂ ಎಂ.ಪಂಡರೀಬಾಯಿ ಸಹ ಈ ಚಿತ್ರದಲ್ಲಿ ನಟಿಸಿದ್ದರು.



ತೆಲುಗು ಚಿತ್ರರಂಗ: 1932ರ ರಾಮ ಪಾದುಕಾ ಪಟ್ಟಾಭಿಷೇಕಂ ಚಿತ್ರದ ನಿರ್ದೇಕರು ಸರ್ವೋತ್ತಮ ಬಾದಾಮಿ. ಯಡವಳ್ಳಿ ಸೂರ್ಯನಾರಾಯಣ ರಾಮ, ಇದೇ ಹೆಸರಿನ ಮುಂದಿನ 2 ಚಿತ್ರಗಳಲ್ಲಿ ಸಿ.ಎಸ್.ಆರ್. ಆಂಜನೇಯಲು ರಾಮನಾಗಿದ್ದರು. 1940ರಲ್ಲಿ ನಾರಾಯಣರಾವ್ ನಿರ್ದೇಶಿಸಿದ್ದ ಅಹಿರಾವಣದಲ್ಲಿ ವೇಮೂರಿ ಗಗ್ಗಯ್ಯ ಅಹಿರಾವಣನ ಪಾತ್ರವನ್ನು ವಹಿಸಿದ್ದರು. 1941ರಲ್ಲಿ ಟಿ.ಆರ್.ರಘುನಾಥ್ ನಿರ್ದೇಶನದ ವೇದವತಿ ಅಲ್ಲಡು ಸೀತಾಜನನಂದಲ್ಲಿ ಎಂ.ಆರ್. ಕೃಷ್ಣಮೂರ್ತಿ ರಾಮನಾಗಿ ಹಾಗೂ ಕೆ. ತವಮಣಿ ದೇವಿ ವೇದವತಿ ಹಾಗೂ ಸೀತೆಯಾಗಿದ್ದರು. 1944ರಲ್ಲಿ ಸೀತಾರಾಮ ಜನನಂದಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ರಾಮನ ಪಾತ್ರದಲ್ಲಿದ್ದರೆ ತ್ರಿಪುರ ಸುಂದರಿ ಸೀತೆಯಾಗಿದ್ದರು. ಘಂಟಸಾಲ, ಬಾಲರಾಮಯ್ಯ ಈ ಚಿತ್ರದ ನಿರ್ದೇಶಕರು.


1958ರಲ್ಲಿ ಕೆ.ಶಂಕರ್ ನಿರ್ದೇಶನದ ಭೂಕೈಲಾಸ ಚಿತ್ರದಲ್ಲಿ ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರರಾವ್, ಜಮುನಾ ಅಭಿನಯಿಸಿದ್ದರು. 1961ರಲ್ಲಿ ಇಂದ್ರಜಿತ್ ಅಥವಾ ಸತಿ ಸಲೋಚನ ಚಿತ್ರ ನಿರ್ದೇಶಕ ಎಸ್.ರಜನೀಕಾಂತ್. ಎನ್.ಟಿ.ರಾಮರಾವ್, ಅಂಜಲಿದೇವಿ ಅಭಿನಯಿಸಿದ್ದರು. ಇದನ್ನು 1979ರಲ್ಲಿ ಬಂಗಾಳಿ ಭಾಷೆಗೆ ಮೇಘನಾದ್ ವದ್ ಎಂಬ ಹೆಸರಿನಲ್ಲಿ ಡಬ್ ಮಾಡಲಾಗಿತ್ತು 1961ರಲ್ಲಿ ಎನ್.ಟಿ.ರಾಮರಾವ್ ನಿರ್ದೇಶಿಸಿ, ಶ್ರೀರಾಮನಾಗಿ ಅಭಿನಯಿಸಿದ್ದ ಶ್ರೀರಾಮ ಪಟ್ಟಾಭಿಷೇಕಂದಲ್ಲಿ ಬಿ.ಸರೋಜಾದೇವಿ ಅಭಿನಯಿಸಿದ್ದರು. 1963ರಲ್ಲಿ ಲವ-ಕುಶವನ್ನು ಸಿ.ಎಸ್.ರಾವ್ ಹಾಗೂ ಅವರ ತಂದೆ ಸಿ.ಪುಲ್ಲಯ್ಯ  ನಿರ್ದೇಶಿಸಿದ್ದರು. ಇದೇ ಚಿತ್ರವನ್ನು ಹಿಂದೆ 1934ರಲ್ಲಿ ಸಿ.ಪುಪ್ಪಯ್ಯ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ 27 ಹಾಡುಗಳಿದ್ದವು. ಸಂಗೀತ ಘಂಟಸಾಲ ಹಾಗೂ ಕೆ.ವಿ.ಮಹಾದೇವನ್. ಈ ಚಿತ್ರದ ತಮಿಳು ಅವತರಣಿಕೆ ಏಪ್ರಿಲ್-19ರಂದು ಬಿಡುಗಡೆಯಾಯಿತು.


ನಂತರ ಇದರ ಕನ್ನಡ ಹಾಗೂ ಹಿಂದಿ ಅವತರಣಿಕೆಗಳು 1974ರಲ್ಲಿ ತೆರೆಗೆ ಬಂದವು. ಎನ್.ಟಿ.ರಾಮರಾವ್ ಹಾಗೂ ಅಂಜಲಿದೇವಿ ರಾಮ-ಸೀತೆಯಾಗಿ ಅಭಿನಯಿಸಿದ್ದರು. ಕನ್ನಡ ಅವತರಣಿಕೆಯಲ್ಲಿ ರಾಮನ ಪಾತ್ರಕ್ಕೆ ಸಂಭಾಷಣೆ ಹೇಳಿದವರು ನನ್ನ ತಂದೆ ಎನ್.ಎಸ್.ವಾಮನ್ ಪಟ್ಟ ಶಿಷ್ಯ ಕೆ.ಎಸ್.ಅಶ್ವಥ್. ಜಯಶ್ರೀರವರು ಸೀತೆಯ ಪಾತ್ರಕ್ಕೆ ಧ್ವನಿ ನೀಡಿದ್ದರು. 1968ರಲ್ಲಿ ವೀರಾಂಜನೇಯ ಚಿತ್ರಕ್ಕೆ ಕೆ.ಕಾಮೇಶ್ವರರಾವ್ ನಿರ್ದೇಶನ, ಅರ್ಜಾ ಜನಾರ್ಧನರಾವ್ ಆಂಜನೇಯನಾಗಿ, ಕಾಂತರಾವ್ ರಾಮ ಹಾಗೂ ಕೃಷ್ಣರಾಗಿ, ಅಂಜಲಿದೇವಿ ಸೀತಾ ಹಾಗೂ ರುಕ್ಮಿಣಿಯಾಗಿ ಅಭಿನಯಸಿದ್ದರು.


1972ರಲ್ಲಿ ಬಾಪೂ ನಿರ್ದೇಶನದ ಸಂಪೂರ್ಣ ರಾಮಾಯಣಂದಲ್ಲಿ ರಾಮನಾಗಿ ಶೋಭನ್ ಬಾಬು ಹಾಗೂ ಸೀತೆಯಾಗಿ ಚಂದ್ರಕಲಾ ಅಭಿನಯಿಸಿದ್ದರು. ಮುತ್ಯಾಲಯಂ ಮುಗ್ಗು ಚಿತ್ರವು ಉತ್ತರ ರಾಮಾಯಣದ ಕಥೆ ಆಧರಿಸಿದ್ದು, ರಮಣ ಹಾಗೂ ಬಾಪು 1975ರಲ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದರು. ಸಂಗೀತ, ಶ್ರೀಧರ್ ರಾಮ-ಸೀತೆಯಾಗಿದ್ದರು. 1976ರಲ್ಲಿ ಸೀತಾ ಕಲ್ಯಾಣಂ ಬಾಪು ನಿರ್ದೇಶನದಲ್ಲಿ ರವಿಕುಮಾರ್ ಹಾಗೂ ಜಯಪ್ರದ ರಾಮ-ಸೀತೆಯಾಗಿದ್ದರು. 1977ರಲ್ಲಿ ಬಂದ ಸೀತಾ ರಾಮ ವನವಾಸಂ ಚಿತ್ರದ ನಿರ್ದೆಶಕರು ಕಮಲಾಕರ ಕಾಮೇಶ್ವರರಾವ್. ಇದರಲ್ಲಿ ರಾಮನಾಗಿ ರವಿ, ಸೀತೆಯಾಗಿ ಜಯಪ್ರದ ಇದ್ದರು. 1997ರಲ್ಲಿ ಬಾಲರಾಮಾಯಣಂ ಬಂದಿತ್ತು. ನಿರ್ದೇಶಕರು ಗುಣಶೇಖರ್. ಇದರಲ್ಲಿ ಜ್ಯೂನಿಯರ್ ಎನ್.ಟಿ.ರಾಮರಾವ್ ರಾಮನಾಗಿ, ಸ್ಮಿತಾ ಮಾಧವ್ ಸೀತೆಯಾಗಿದ್ದರು. 2011ರಲ್ಲಿ ಶ್ರೀರಾಮರಾಜ್ಯಂ ಹೆಸರಿನಲ್ಲಿ ಬಂದಾಗ ನಂದಮೂರಿ ಬಾಲಕೃಷ್ಣ ಹಾಗೂ ನಯನತಾರ ರಾಮ-ಸೀತೆಯಾಗಿದ್ದರು.


ತಮಿಳು ಚಿತ್ರರಂಗ: 1934ರ ಸೀತಾ ಕಲ್ಯಾಣಂ ಚಿತ್ರವು ಪಾಪನಾಶಂ ಶಿವನ್, ಎಸ್.ರಾಜಂ ಹಾಗೂ ಎಸ್.ಬಾಲಚಂದಿರ್ ಮುಂತಾದ ಸಂಗೀತಗಾರರಿಗೆ ಇದು ಮೊದಲ ಚಿತ್ರವಾಗಿತ್ತು. 1937ರ ಆರ್.ಪದ್ಮನಾಭನ್ ನಿರ್ದೇಶನದ ಸೇತು ಬಂಧನಂ ಚಿತ್ರದಲ್ಲಿ ಪಿ.ಬಿ.ರಂಗಾಚಾರಿ ಎಂ.ಎಸ್. ಮೋಹನಾಂಬಾಳ್ ಅಭಿನಯಿಸಿದ್ದರು. 1958ರಲ್ಲಿ ಸಂಪೂರ್ಣ ರಾಮಾಯಣಂ ಕೆ.ಸೋಮು ನಿರ್ದೇಶನದ ಎನ್.ಟಿ.ರಾಮರಾವ್ ರಾಮನಾಗಿದ್ದರೆ ಶಿವಾಜಿ ಗಣೇಶನ್ ಭರತನಾಗಿದ್ದರು. 1976ರ ದಶಾವತಾರಂದಲ್ಲಿ ರಾಮಾವತಾರದ ಕಥೆ ಬಂದಿದ್ದು ಕೆ.ಎಸ್.ಗೋಪಾಲಕೃಷ್ಣನ್ ನಿರ್ದೇಶಕರು. 1987ರಲ್ಲಿ ಟಿ.ಆರ್.ರಾಮಣ್ಣ ನಿರ್ದೇಶನದ ಇಲಂಗೇಶ್ವರನ್ ಚಿತ್ರದಲ್ಲಿ ಕೆ.ಆರ್.ವಿಜಯ ಹಾಗೂ ರಾಜೇಶ್, ರೇವತಿ ಮಂಡೋದರಿ-ರಾವಣ-ಸೀತೆಯಾಗಿ ಅಭಿನಯಿಸಿದ್ದರು.


ಮಲಯಾಳಂ ಚಿತ್ರರಂಗ: 1960ರ ಸೀತಾ ಚಿತ್ರದ ನಿರ್ದೇಶಕ ಕುಂಚಾಕೋ. ಇದರಲ್ಲಿ ಪ್ರೇಮ್ ನಜೀರ್ ಹಾಗೂ ಕುಶಾಲ ಕುಮಾರಿ ರಾಮ-ಸೀತೆಯರಾಗಿದ್ದರು. 1962ರಲ್ಲಿ ಶ್ರೀರಾಮ ಪಟ್ಟಾಭಿಷೇಕಂನಲ್ಲಿ ಪ್ರೇಮ್ ನಜೀರ್ ರಾಮನಾಗಿ ವಾಸಂತಿ ಸೀತೆಯಾಗಿ ಅಭಿನಯಿಸಿದ್ದರು. 1977ರಲ್ಲಿ ಜಿ.ಅರವಿಂದನ್ ನಿರ್ದೇಶಿಸಿದ್ದ ಚಿತ್ರ ಕಾಂಚನ ಸೀತಾ.


ಹಿಂದಿ ಚಿತ್ರರಂಗ: 1917ರಲ್ಲಿ ಲಂಕಾ ದಹನ್ ಮೂಕಿ ಚಿತ್ರವನ್ನು ದಾದಾ ಸಾಹೇಬ್ ಫಾಲ್ಕೇ ನಿರ್ದೇಶಿಸಿದ್ದರು. ಇದರ ವೈಶಿಷ್ಠ್ಯತೆ ಎಂದರೆ, ಆಗ ಮಹಿಳೆಯರು ಪಾತ್ರ ವಹಿಸಲು ಬರುತ್ತಿರಲಿಲ್ಲವಾದ್ದರಿಂದ, ಅಣ್ಣಾ ಸಾಲುಂಕೆ ಈ ಚಿತ್ರದಲ್ಲಿ ರಾಮ ಹಾಗೂ ಸೀತೆ ಎರಡೂ ಪಾತ್ರಗಳನ್ನು ನಿರ್ವಹಿಸಿದ್ದರು. 1942ರಲ್ಲಿ ಬಂದ ಹಿಂದಿ ಚಿತ್ರ ಭರತ್ ಮಿಲಾಪ್. 1943ರಲ್ಲಿ ವಿಜಯ್ ಭಟ್ ನಿರ್ದೇಶನದ ರಾಮರಾಜ್ಯ ಚಿತ್ರದಲ್ಲಿ ಪ್ರೇಮ್ ಆದಿಬ್ ರಾಮ, ಶೋಭನಾ ಸಮರ್ಥ್ ಸೀತೆ. ಇದು ಅಮೇರಿಕಾದಲ್ಲಿ ಪ್ರದರ್ಶಿತ ಮೊದಲ ಭಾರತೀಯ ಸಿನಿಮಾ. ಇದರಲ್ಲಿ ಉಮಾಕಾಂತ್ ಲಕ್ಷ್ಮಣನ ಪಾತ್ರ ವಹಿಸಿದ್ದರು. ಕರ್ನಾಟಕದ ಅಮೀರ್ ಬಾಯಿ ಕರ್ನಾಟಕಿ ಅಗಸಗಿತ್ತಿಯ ಪಾತ್ರದಲ್ಲಿದ್ದರು. ದೋಬಿಯ ಮಾತುಗಳನ್ನು ಕೇಳಿ, ಸೀತಾರಾಮನಾಗಿ ಆದರ್ಶ ಪತಿಯಾಗಿದ್ದ ಶ್ರೀರಾಮ ಮಹಾರಾಜನಾಗಿ, ರಾಜಾರಾಮನಾಗಿ ಸೀತೆಯನ್ನು ಅರಣ್ಯಕ್ಕೆ ಕಳಿಸಿದ ಪ್ರಸಂಗ ಈ ಚಿತ್ರದಲ್ಲಿತ್ತು.


1945ರಲ್ಲಿ ರಾಮಾಯಣಿ ಚಿತ್ರ ಬಂದಿತ್ತು. ಪಹನ್ ಸನ್ಯಾಲ್ ಹಾಗೂ ನರ್ಗೀಸ್ ಇದ್ದ ಈ ಚಿತ್ರಕ್ಕೆ ಸಂಗೀತ ನೀಡಿದವರು ಎಸ್.ಎನ್. ತ್ರಿಪಾಠಿ. 1948ರಲ್ಲಿ ಹೋಮಿ ವಾಡಿಯಾ ನಿರ್ದೇಶನದ ಶ್ರೀರಾಮ ಭಕ್ತ ಹನುಮಾನ್. ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದ ಎಸ್.ಎನ್.ತ್ರಿಪಾಠಿ ಅವರೇ ಹನುಮಂತನ ಪಾತ್ರ ವಹಿಸಿದ್ದರು.


ತ್ರಿಲೋಕಪೂರ್ ರಾಮನಾಗಿ ಸೋನಾ ಚಟರ್ಜಿ ಸೀತೆಯಾಗಿದ್ದರು. 1951ರಲ್ಲಿ ತೆರೆಗೆ ಬಂದ ಹನುಮಾನ್ ಪಾತಾಳ ವಿಜಯ್ ಚಿತ್ರದಲ್ಲಿ ಮೀನಾಕುಮಾರಿ, ಮಹಿಪಾಲ್ ಹಾಗೂ ಎಸ್.ಎನ್.ತ್ರಿಪಾಠಿ ಅಭಿನಯಿಸಿದ್ದರು. 1965ರಲ್ಲಿ ಬಾಬು ಬಾಯಿ ಮಿಸ್ತ್ರಿ ನಿರ್ದೇಶನದ ಚಿತ್ರದಲ್ಲಿ ಸೊಹರಾಬ್ ಮೋದಿ ಹಾಗೂ ಸುಲೋಚನ ಅಭಿನಯಿಸಿದ್ದರು. ಶ್ರೀರಾಮ್ ಭರತ್ ಮಿಲನ್ ಚಿತ್ರವನ್ನು ಮಣಿಭಾಯಿ ವ್ಯಾಸ್ ನಿರ್ದೇಶಿಸಿದ್ದು, ಪೃಥ್ವಿರಾಜ್‍ಕಪೂರ್, ಅನಿತಾ ಗುಹಾ ಆಭಿನಯಿಸಿದ್ದರು. 1965ರಲ್ಲಿ ಈ ಚಿತ್ರದ ಇನ್ನೊಂದು ಅವತರಣಿಕೆ ಬಂದಿತು.


1967ರ ರಾಮರಾಜ್ಯ ಚಿತ್ರವನ್ನು ವಾಲ್ಮೀಕಿ ರಾಮಾಯಣ ಹಾಗೂ ತುಳಸಿದಾಸರ ‘ರಾಮಚರಿತ ಮಾನಸ’ ಹಾಗೂ ಭವಭೂತಿಯ ಉತ್ತರ ರಾಮಚರಿತ ಇವುಗಳನ್ನು ಆಧರಿಸಿ ಚಿತ್ರಿಸಲಾಗಿತ್ತು. ಬೀನಾರಾಯ್ ಸೀತೆ, ಕುಮಾರ್ ಸೇನ್ ರಾಮನ ಪಾತ್ರದಲ್ಲಿದ್ದರು. 1976ರಲ್ಲಿ ಭಜರಂಗ ಬಲಿ ಹಿಂದಿ ಚಿತ್ರದಲ್ಲಿ ದಾರಾಸಿಂಗ್ ಹನುಮಾನನಾಗಿ, ಬಿಸ್ವಜಿತ್ ರಾಮನಾಗಿ, ಮೌಶುಮಿ ಚಟರ್ಜಿ ಸೀತೆಯಾಗಿ ಅಭಿನಯಿಸಿದ್ದರು. 1997ರಲ್ಲಿ ಹಿಂದಿಯಲ್ಲಿ ವಿ.ಮಧುಸೂಧನರಾವ್ ನಿರ್ದೇಶಿಸಿದ್ದ ಲವ-ಕುಶ್ ಚಿತ್ರ ಬಂದಿತ್ತು. 2010ರಲ್ಲಿ ಮಣಿರತ್ನಂ ನಿರ್ದೇಶನದ ರಾವಣ್ ಎಂಬ ಚಿತ್ರದಲ್ಲಿ ಅಭಿಷೇಕ್ ಬಚ್ವನ್, ಐಶ್ವರ್ಯರೈ, ವಿಕ್ರಂ ಅಭಿನಯಿಸಿದ್ದರು.


2022ರ ರಾಮ್‍ಸೇತು, ರಾಮ ಕಟ್ಟಿದ ಸೇತುವೆಯನ್ನು ಕಾಲುವೆ ಕಟ್ಟಿಸಲು ನಾಶ ಮಾಡಬೇಕಾದ ಕಥೆಯನ್ನು ಹೊಂದಿತ್ತು. ನಾಯಕ ರಾಮಾಯಣವು ಕೇವಲ ಒಂದು ಕಾಲ್ಪನಿಕ ಮಹಾಕಾವ್ಯ ಎಂದು ನಂಬಿದ್ದ. ಚಿತ್ರದ ಅಂತ್ಯದಲ್ಲಿ ಇದು ರಾಮಾಯಣದ ಕಥೆಗೆ ಪ್ರಾಚ್ಯ ಪುರಾವೆಗಳಿವೆ ಎಂದು ಕಂಡುಹಿಡಿದ. 2023ರಲ್ಲಿ ಬಂದ ಹಿಂದಿ ಚಿತ್ರವಾದ ಆದಿಪುರುಷ್ ಚಿತ್ರವು ಓಂರಾವುತ್ ನಿರ್ದೇಶನದಲ್ಲಿತ್ತು. ಇದರಲ್ಲಿ ಪ್ರಭಾಸ್ ರಾಘವನಾಗಿ ಕೃತೀಸಾನನ್ ಜಾನಕಿಯಾಗಿ ಹಾಗೂ ಸೈಫ್ ಅಲೀ ಖಾನ್ ರಾವಣನಾಗಿ ಅಭಿನಯಿಸಿದ್ದರು. ನಿತಿಶ್ ತಿವಾರಿಯವರು ರಾಮಾಯಣವನ್ನು ಚಲನಚಿತ್ರವಾಗಿ ತೆಗೆಯಲಿದ್ದು ಇದರಲ್ಲಿ ರಣಭೀರ್ ಕಪೂರ್ ರಾಮನಾಗಿ ಹಾಗೂ ಕನ್ನಡದ ಯಶ್ ರಾವಣನಾಗಿ ಅಭಿನಯಿಸುವ ಸಾಧ್ಯತೆ ಇದೆ.


ಒರಿಯಾ ಚಿತ್ರರಂಗ: 1936ರಲ್ಲಿ ಒರಿಯಾ ಭಾಷೆಯಲ್ಲಿ ಮೋಹನ್ ಸುಂದರ್ ದೇಬ್ ನಿರ್ದೇಶನದ ಒರಿಯಾ ಭಾಷೆಯ ಚಲನಚಿತ್ರ ಬಂದಿತ್ತು. ಇದರಲ್ಲಿ ಮಖ್ಖನ್ ಲಾಲ್ ಬ್ಯಾನರ್ಜಿ ಹಾಗೂ ಪ್ರಭಾವತಿ ರಾಮ-ಸೀತೆಯ ಪಾತ್ರದಲ್ಲಿದ್ದರು.


ಟಿ.ವಿ. ಮಾಧ್ಯಮ: ದೂರದರ್ಶನದಲ್ಲಿ ಅತ್ಯಂತ ಜನಪ್ರಿಯವಾಗಿದ್ದ, ಜನರನ್ನು ಭಾನುವಾರದ ಪ್ರಸಾರ ಸಮಯದಲ್ಲಿ ಮನೆಗೇ ಕಟ್ಟಿಹಾಕಿದ್ದ ಹಿಂದಿ ಧಾರಾವಾಹಿ ಎಂದರೆ ರಮಾನಂದ್ ಸಾಗರ್ ನಿರ್ದೇಶನ ಹಾಗೂ ನಿರ್ಮಾಣದ ರಾಮಾಯಣ್ ಧಾರಾವಾಹಿ. ರಮಾನಂದ್ ಸಾಗರ್ ಅವರು ಭಕ್ತಿ, ಶ್ರದ್ಧೆಗಳಿಂದ ಪ್ರತೀ ಅಧ್ಯಾಯಕ್ಕೂ ಮೊದಲು, ಪ್ರಾಸ್ತಾವಿಕ ನಿರೂಪಣೆ ಕೊಡುತ್ತಿದ್ದರು. ಈ ಧಾರಾವಾಹಿಯಲ್ಲಿ ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಕ್ಲಿಯಾ, ಲಕ್ಷ್ಮಣನಾಗಿ ಸುನಿಲ್ ಲಹರಿ, ರಾವಣನಾಗಿ ಅರವಿಂದ್ ತ್ರಿವೇದಿ ಹಾಗೂ ಹನುಮಂತನಾಗಿ ದಾರಾಸಿಂಗ್ ಅಭಿನಯಿಸಿ ಬಹಳ ಜನಪ್ರಿಯರಾಗಿದ್ದರು. ಅತ್ಯಂತ ಭಾವಾತ್ಮಕ ಹಾಗೂ ಭಕ್ತಿ-ಶ್ರದ್ಧೆಗಳಿಂದ ಈ ಧಾರಾವಾಹಿಗೆ ಸಂಗೀತ ನಿರ್ದೇಶನ ಮಾಡಿದ್ದವರು ರವೀಂದ್ರ ಜೈನ್. ಈ ಧಾರಾವಾಹಿ 25-1-1987 ರಿಂದ 31-7-1988ರವರೆಗೆ ಸತತ ಪ್ರಸಾರವಾಗಿ, ಕೆಲವು ದಶಕಗಳ ನಂತರ ಕರೋನಾ ಅವಧಿಯಲ್ಲಿ ಪುನಃ ಪ್ರಸಾರವಾಯಿತು. ಹಾಗೆಯೇ ಉತ್ತರ ರಾಮಾಯಣವು ಇದೇ ನಿರ್ದೇಶಕರು ಹಾಗೂ ಕಲಾವಿದರ ಸಂಗಮದಲ್ಲಿ 1988 ರಿಂದ 1989ರವರೆಗೆ ಪ್ರಸಾರವಾಯಿತು.


2019ರಲ್ಲಿ ಮರಾಠಿ ಭಾಷೆಯಲ್ಲಿ ಮಹಾಬಲಿ ಹನುಮಾನ್ ಧಾರಾವಾಹಿ ಸಿದ್ಧವಾಗಿ ಪ್ರಸಾರವಾಯಿತು. ಇದರಲ್ಲಿ ನಿರ್ಭಯ್ ವಾಧ್ವಾ, ಗಗನ್ ಮಲಿಕ್ ಹಾಗೂ ದೆಬ್ಲಿನ್ ಚಟರ್ಜಿ ಅಭಿನಯಿಸಿದ್ದರು.


ರಾಮಾಯಣ ಆಧರಿಸಿದ ಇತರ ಟಿ.ವಿ. ಧಾರಾವಾಹಿಗಳ ಪಟ್ಟಿ ಇಲ್ಲಿದೆ - 1997ರಲ್ಲಿ ಜೈ ಹನುಮಾನ್, ಜೈಜೈಜೈ ಭಜರಂಗ ಬಲಿ, ಲವಕುಶ್, ರಾವಣ್, ರಾಮ್ ಸಿಯಾ ಕೆ ಲವಕುಶ್, ರಾಮ್‍ಲೀಲಾ, ಸಿಯಾ ಕೆ ರಾಮ್, ಸಂಕಟ ಮೋಚನ್ ಭಜರಂಗ ಬಲಿ. ಹಾಗೆಯೇ ರಾಮಾಯಣದ ಇತರ ಅವತರಣಿಕೆಗಳು 1987, 2001, 2008, 2012 ಈ ವರ್ಷಗಳಲ್ಲಿ ಬಂದವು. 




- ಎನ್.ವ್ಹಿ. ರಮೇಶ್

ಮನೆ ''ತಂಗಶ್ರೀ” ನಂ 2210,

ಪಚ್ಚೆರಸ್ತೆ, 4ನೇ ಅಡ್ಡರಸ್ತೆ,

ಕುವೆಂಪುನಗರ ಕೆ’ ಬ್ಲಾಕ್

ಮೈಸೂರು 570023

ಮೊ:-9845565238.

Email Id : nvramesh770@gmail.com


ಲೇಖಕರ ಸಂಕ್ಷಿಪ್ತ ಪರಿಚಯ:

73 ವರ್ಷದ ನಂಜನಗೂಡು ವಾಮನ್ ರಮೇಶ್ ಮೈಸೂರಿನಲ್ಲಿ ಹುಟ್ಟಿದ್ದು ತಂದೆ ಎನ್.ಎಸ್.ವಾಮನ್,  ದಿಲ್ಲಿ ಆಕಾಶವಾಣಿಯ ಕನ್ನಡ ವಾರ್ತೆಗಳ ವಾಚಕರಾಗಿ, ಸೇವೆ ಮಾಡಿದರು. ಇವರ ತಾಯಿ ಗಿರಿಜಾ ಮೈಸೂರು ಅರಮನೆಯ ಐ.ಜಿ.ಪಿ. ಯಾಗಿದ್ದ ಶ್ರೀಕಂಠೇಶ್ವರ ಅಯ್ಯರ್ ಅವರ ಮೊಮ್ಮಗಳು. ಇವರು ಅರ್ಥಶಾಸ್ತ್ರದಲ್ಲಿ ಎಂ.ಎ ಮಾಡಿ, ಭಾರತೀಯ ಕುಟುಂಬ ಯೋಜನಾ ಸಂಘದ ಧಾರವಾಡ ಶಾಖೆಯಲ್ಲಿ ಕುಟುಂಬ ಯೋಜನಾ ಶಿಕ್ಷಣಾಧಿಕಾರಿಯಾಗಿ, ಕರ್ನಾಟಕ ರಾಜ್ಯ ಯುವಜನ ಸೇವಾ ಇಲಾಖೆಯಲ್ಲಿ ತರಬೇತುದಾರನಾಗಿ, ಆಕಾಶವಾಣಿ ಸೇವೆ ಸೇರಿ ಕಲಬುರ್ಗಿ, ಮೈಸೂರು, ಭದ್ರಾವತಿ, ರಾಯಚೂರು, ವಿಜಯಪುರ, ಮಡಿಕೇರಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ ಮೈಸೂರಿನಲ್ಲಿ ನೆಲಸಿದ್ದಾರೆ. ಕವಿ, ಬಾನುಲಿ ಹಾಗೂ ರಂಗಭೂಮಿಗಳ ನಾಟಕಕಾರ, ನಟ, ನಿರ್ದೇಶಕ, ಭಾಷಣಕಾರ, ಮಾಧ್ಯಮ ಕಾರ್ಯಾಗಾರ ಸಂಯೋಜಕ, ಮಾಧ್ಯಮ- ನಾಟಕ -ರೂಪಕ -ಆರೋಗ್ಯ -ಪರಿಸರ ಹಾಗೂ ಶಿಕ್ಷಣ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top