ಎಕ್ಸ್‌ಪರ್ಟ್‌ ಟೈಂಸ್ಕ್ವೇರ್ ಸಂಗೀತ ಹಬ್ಬ; ಲಯವಿನೋದದಲ್ಲಿ ಮಿಂದೆದ್ದ ಲಯಲಾವಣ್ಯ

Upayuktha
0

 


ಚಿತ್ರಮಾಹಿತಿ:

ವಳಚ್ಚಿಲ್ ಎಕ್ಸ್‌ಪರ್ಟ್‌ ಪದವಿಪೂರ್ವ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಆಯೋಜಿಸಿದ ಟೈಂಸ್ಕ್ವೇರ್ ಮ್ಯೂಸಿಕ್ ಫೆಸ್ಟಿವಲ್ ಕಾರ್ಯಕ್ರಮವನ್ನು ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ಉದ್ಘಾಟಿಸಿದರು.

ವಳಚ್ಚಿಲ್ ಎಕ್ಸ್‌ಪರ್ಟ್‌ ಪದವಿಪೂರ್ವ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಆಯೋಜಿಸಿದ ಟೈಂಸ್ಕ್ವೇರ್ ಮ್ಯೂಸಿಕ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ವಿಶ್ವಖ್ಯಾತಿ ಪಡೆದಿರುವ ಸಂಗೀತ ದಿಗ್ಗಜ ಆನೂರು ಅನಂತಕೃಷ್ಣ ಶರ್ಮಾ ಮತ್ತವರ ತಂಡ. 



ಮಂಗಳೂರು: ಎಕ್ಸ್‌ಪರ್ಟ್‌ ಸಮೂಹ ಶಿಕ್ಷಣ ಸಂಸ್ಥೆಗಳ 38ನೇ ಎಕ್ಸ್‌ಪರ್ಟ್‌ ದಿನಾಚರಣೆ ಹಿನ್ನೆಲೆಯಲ್ಲಿ ವಳಚ್ಚಿಲ್ ಎಕ್ಸ್‌ಪರ್ಟ್‌ ಪದವಿಪೂರ್ವ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಆಯೋಜಿಸಿದ ಟೈಂಸ್ಕ್ವೇರ್ ಮ್ಯೂಸಿಕ್ ಫೆಸ್ಟಿವಲ್ ಕಾರ್ಯಕ್ರಮ ಸಂಗೀತ ಪ್ರಿಯರ ಮನಸೂರೆಗೊಂಡಿತು. ತಾಳವಾದ್ಯದಲ್ಲಿ ವಿಶ್ವಖ್ಯಾತಿ ಪಡೆದಿರುವ ಸಂಗೀತ ದಿಗ್ಗಜ ಆನೂರು ಅನಂತಕೃಷ್ಣ ಶರ್ಮಾ ಅವರ ನೇತೃತ್ವದ ತಂಡದ ʻಲಯಲಾವಣ್ಯʼ ಸಂಗೀತ ಹಬ್ಬದ ವಾತಾವರಣ ಸೃಷ್ಠಿಸಿತು.


ಕರ್ನಾಟಕ ಕಲಾಶ್ರೀ, ಗಾನ ಕಲಾಶ್ರೀ, ಲಯಕಲಾ ಪ್ರತಿಭಾಮಣಿ, ನಾದಲಯ ಗುರುಶ್ರೇಷ್ಠ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ನಡೆದ ʻಲಯಲಾವಣ್ಯʼ ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು. " ಶಿವು ಸರ್‌ " ಎಂದೇ ಖ್ಯಾತರಾದ ಆನೂರು ಅನಂತಕೃಷ್ಣ ಶರ್ಮಾ ಅವರು ಮೃದಂಗದಲ್ಲಿ ತಮ್ಮ ವಿದ್ವತ್ತನ್ನು ಪ್ರಕಟಿಸಿದರು. ಕರಟವಾದ್ಯ ಸಹಿತ 200ಕ್ಕೂ ಅಧಿಕ ಸಂಗೀತೋಪಕರಣಗಳಲ್ಲಿ ಕೈ ಚಳಕ ಹೊಂದಿರುವ ಅವರು ತಮ್ಮ ಸಂಗೀತ ಮಾಂತ್ರಿಕ ವಿದ್ಯೆಯನ್ನು ವೈವಿಧ್ಯ ತಾಳವಾದ್ಯಗಳ ಮೂಲಕ ಅಕ್ಷರಶಃ ನುಡಿಸಿದರು! ಕೊಳಲಿನಲ್ಲಿ ವಿದ್ವಾನ್ ಅಮಿತ್ ನಾಡಿಗ್ ಮತ್ತು ವಯೊಲಿನ್‌ನಲ್ಲಿ ವಿದ್ವಾನ್ ಕೆ.ಜೆ.ದಿಲೀಪ್ ತಮ್ಮ ಸಂಗೀತ ಪ್ರತಿಭೆಯನ್ನು ಮೆರೆದು ಕೇಳುಗರಲ್ಲಿ ಸಂಗೀತದ ಹುಚ್ಚೆಬ್ಬಿಸಿದರು.


ನವರಾಗಗಳ ವರ್ಣದೊಂದಿಗೆ ನಾಂದಿ ಹಾಡಿದ ಲಯಲಾವಣ್ಯ ಸಂಗೀತ ಹಬ್ಬವು ದಕ್ಷಿಣ-ಉತ್ತರ ಭಾರತೀಯ, ಜಾನಪದ, ಪಾಶ್ಚಾತ್ಯ-ಲ್ಯಾಟಿನ್‌ ತಾಳವಾದ್ಯಗಳ ಮೇಳ ಶ್ರುತಿಶ್ರಾವ್ಯವಾಗಿ ಮೂಡಿಬಂತು. ಅನಂತರ ಹಂಸಧ್ವನಿ ರಾಗದ ವಾತಾಪಿ ಗಣಪತಿಂ ಭಜೇಹಂ... ಕೃತಿ ಸಂಗೀತದ ಗುಂಗಿನಲ್ಲಿ ಮಿಂದೆಬ್ಬಿಸಿತು. ಕೊಳಲ ನಾದ ವೈವಿಧ್ಯದೊಂದಿಗೆ ವಯೋಲಿನ್‌ ಲಯವಿನ್ಯಾಸ ತೇಲಿಬಂದು, ಸಂಗೀತ ಲೋಕದ ದಿವ್ಯಾನುಭವಕ್ಕೆ ಕೇಳುಗರು ಸಾಕ್ಷಿಯಾದರು. ಇದರ ಜೊತೆ ತಬಲಾ ಮೇಳೈಸಿದಾಗ ಚಪ್ಪಾಳೆಯ ಸಾಥ್‌ ಕೇಳಿಬಂತು.


ಡ್ರಮ್ಸ್‌ನೊಂದಿಗೆ ಇತರ ತಾಳವಾದ್ಯಗಳ ಮೂಲಕ ಕದನ ಕುತೂಹಲ ರಾಗ ತೇಲಿಬಂದಾಗ ಸಂಗೀತಪ್ರಿಯರ ಹೃದಯ ಹಾಡಿತು. ಕೊಳಲು-ವಯೋಲಿನ್‌ ತಾಳ-ಮೇಳ ಕದನ ಕುತೂಹಲವನ್ನೇ ಮೂಡಿಸಿತು. ಹೇಮಾವತಿ ರಾಗ ನಾದ ಲೋಕವನ್ನೇ ಸೃಷ್ಠಿಸಿತು.

 


ಒಂದಾನೊಂದು ಕಾಲದಲ್ಲಿ...,  ಜೊತೆಯಲಿ ಜೊತೆ ಜೊತೆಯಲಿ..., ಕಾಂತಾರ... ಮೊದಲಾದ ಸಿನಿಮಾ ಹಾಡುಗಳು ತಾಳವಾದ್ಯಗಳ ಮೂಲಕ ನವಿರಾಗಿ ರಂಜಿಸಿತು. ತನಿ ಆವರ್ತನದಲ್ಲಿ ಮಿಂಚಿದ ಸಂಗೀತದ ರಂಗು ಸಂಜೆಯ ತಂಗಾಳಿಯಲ್ಲಿ ಬೆಚ್ಚಗಿನ ಅನುಭವ ನೀಡಿತು. 

ಶಿಶುನಾಳ ಷರೀಫರ ತರವಲ್ಲ ತಗಿ ನಿನ್ನ ತಂಬೂರಿ.. ಮತ್ತು ಪುರಂದರ ದಾಸರ ಭಾಗ್ಯದ ಲಕ್ಷ್ಮೀ ಬಾರಮ್ಮ... ಹಾಡುಗಳ ಲಯಲಾವಣ್ಯದೊಂದಿಗೆ ಸಂಗೀತದ ಹಬ್ಬಕ್ಕೆ ಮಂಗಳಕರ ತೆರೆ ಸರಿಯಿತು.


ವಿದ್ವಾನ್ ಬಿ.ಆರ್.ಸೋಮಶೇಖರ್ ಜೋಯಿಸ್ (ಕೊನ್ನಕ್ಕೋಲ್), ವಿದ್ವಾನ್ ಪ್ರಜ್ವಲ್ ಭಾರದ್ವಾಜ್ (ಖಂಜರಿ), ವಿದ್ವಾನ್ ಎಸ್.ಪಿ.ನಾಗೇಂದ್ರ ಪ್ರಸಾದ್ (ಮೃದಂಗ ಮತ್ತು ಖೋಲ್), ವಿದ್ವಾನ್ ಚಿದಾನಂದ (ಮೋರ್ಚಿಂಗ್), ವಿದ್ವಾನ್ ಸುನಾದ್ ಆನೂರು (ಪರ್ಕಶನ್), ವಿದ್ವಾನ್ ಅಕ್ಷರ ರಘು (ಡ್ರಮ್ಸ್‌), ವಿದ್ವಾನ್ ಮಧುಸೋಹನ್ (ಧೋಲಕ್ ಮತ್ತು ತಮಟೆ), ವಿದ್ವಾನ್ ಪ್ರಬೋಧ್ ಶ್ಯಾಮ್ ಆನೂರು(ಪಖಾವಾಜ್ ಮತ್ತು ಧೋಲಕ್), ವಿದ್ವಾನ್ ಜಗದೀಶ್ ಕುರ್ತಕೋಟಿ (ತಬ್ಲಾ) ಸಹಕರಿಸಿದರು.



ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ʻಟೈಂಸ್ಕ್ವೇರ್ ಮ್ಯೂಸಿಕ್ ಫೆಸ್ಟಿವಲ್ʻ ಕಾರ್ಯಕ್ರಮವನ್ನು ಹಾಡುವ ಮೂಲಕ ಉದ್ಘಾಟಿಸಿವರು. ಎಕ್ಸ್‌ಪರ್ಟ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್, ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್, ಟ್ರಸ್ಟಿ ಉಸ್ತಾದ್‌ ರಫೀಕ್‌ ಖಾನ್‌, ಆರ್ಕಿಟೆಕ್ಟ್‌ ದೀಪಿಕಾ ಎ. ನಾಯಕ್‌, ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್‌ ಕರಿಪ್ಪಾಲ್‌, ಕಾರ್ಯಕ್ರಮ ನಿರ್ದೇಶಕಿ ಧೃತಿ ವಿ.ಹೆಗ್ಡೆ ಉಪಸ್ಥಿತರಿದ್ದರು. 



ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ರಕ್ಷಿತ್‌ ಎಂ.ಆರ್. ವಂದಿಸಿದರು. ವಿದ್ಯಾರ್ಥಿಗಳಾದ ಕಾವ್ಯಾ ಸಿ.ಎಲ್‌ ಮತ್ತು ಎಂ.ಮೃಣಾಲಿನಿ ಕಾರ್ಯಕ್ರಮ ನಿರೂಪಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top