ಹರೇರಾಮ ಶ್ರೀಗುರುಭ್ಯೋನಮಃ
ಇದೀಗ ಉತ್ತರಾಯಣದ ಪುಣ್ಯಕಾಲ!
ಕಾಲು ಗಂಟೆಯ ಪ್ರಶ್ನೆಪತ್ರಿಕೆಯ ಓದಿನ/ಅಧ್ಯಯನದ ಬಳಿಕ ಉತ್ತರ ಪತ್ರಿಕೆಯನ್ನು ಪಡೆಯುತ್ತೇವೆ.
ಉತ್ತರ ಪತ್ರಿಕೆಯನ್ನು ತುಂಬುವ ಹಂತ-
●ಉತ್ತರ ಪತ್ರಿಕೆಯಲ್ಲಿ ಅತ್ಯಂತ ಮುಖ್ಯವಾಗಿ ನಾವು ತುಂಬಬೇಕಾದದ್ದು ನಮ್ಮ ನೋಂದಣಿಸಂಖ್ಯೆಯನ್ನಾಗಿದೆ.
•ನಮ್ಮ ಪ್ರವೇಶಪತ್ರದಲ್ಲಿರುವ ಸಂಖ್ಯೆ,ನಮ್ಮ ಡೆಸ್ಕಿನಲ್ಲಿರುವ ಸಂಖ್ಯೆ ಮತ್ತು ನಾವು ಉತ್ತರ ಪತ್ರಿಕೆಯಲ್ಲಿ ಬರೆಯುವ ನೋಂದಣಿಸಂಖ್ಯೆಯು ಒಂದೇ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
•ವಿಷಯ,ವಿಷಯ ಸಂಖ್ಯೆ(Subject, Subject code no.)
ಬರೆಯಬೇಕಾಗುತ್ತದೆ.(ಅವಶ್ಯವಿದ್ದಲ್ಲಿ)
ಇವಿಷ್ಟನ್ನು ಬರೆದಾದ ಬಳಿಕ ಉತ್ತರಗಳನ್ನು ಬರೆಯಲು ಪ್ರಾರಂಭಿಸಬೇಕು.
ಉತ್ತರಿಸುವಾಗ-
•ಈಗಾಗಲೇ ಗಮನಿಸಿರುವ,ಖಚಿತವಾಗಿ
ಸರಿಯುತ್ತರವೆಂದು ಗೊತ್ತಿರುವ ಪ್ರಶ್ನೆಯಿಂದ ಉತ್ತರಿಸಲು ಪ್ರಾರಂಭಿಸಬೇಕು
•ಮಾರ್ಜಿನ್ ನ ಹೊರಗಡೆ ಪ್ರಶ್ನೆಸಂಖ್ಯೆಯನ್ನು ತಪ್ಪಿಲ್ಲದೆ ಬರೆದು ಉತ್ತರವನ್ನು ಸೂಚನೆಗೆ ಅನುಸಾರವಾಗಿ ಬರೆಯಬೇಕು.(ಉದಾ:ಒಂದು ವಾಕ್ಯ,ಎರಡು ವಾಕ್ಯಗಳಲ್ಲಿ ಉತ್ತರಿಸಿ ಎಂದಿದ್ದರೆ ಅದನ್ನು ಸರಿಯಾಗಿ ಪಾಲಿಸಬೇಕು).
•ನಾವು ಉತ್ತರಿಸಲಿರುವ ಪ್ರಶ್ನೆ ಸಂಖ್ಯೆಗಳು ಅನುಕ್ರಮವಾಗಿದ್ದರೆ ಹಾಗೆಯೇ ಉತ್ತರಿಸಬಹುದು, ಉತ್ತರಿಸುವುದು ಉಚಿತ.
•ಒಂದೊಮ್ಮೆ ಹಾಗಿಲ್ಲದಿದ್ದರೆ ಸ್ವಲ್ಪವೂ ಚಿಂತಿಸದೆ,
ಸಂಶಯಪಡದೆ ಉತ್ತರ ಗೊತ್ತಿರುವ ಪ್ರಶ್ನೆಯಿಂದ ಉತ್ತರ ಬರೆಯಲು ಪ್ರಾಂಭಿಸಬೇಕು.
•ಪ್ರಶ್ನೆಗಳ ಸಂಖ್ಯೆಯು ಹಿಂದೆ ಮುಂದಾದರೂ,ಚಿಕ್ಕ ಉತ್ತರ, ದೊಡ್ಡ (ವಿವರಣಾತ್ಮಕ)
ಉತ್ತರಗಳೆನ್ನುವ ಗೋಜಿಗೆ ಹೋಗದೆ ಯಾವ ಪ್ರಶ್ನೆಯ ಉತ್ತರವು ಖಚಿತವಾಗಿ ಗೊತ್ತಿದೆಯೋ ಅದನ್ನು ಉತ್ತರಿಸುತ್ತಾ ಹೋಗಬೇಕು.ಇದು ಸಮಯಪಾಲನೆಗೆ ತುಂಬಾ ಸಹಕಾರಿ.
•ಸಾಮಾನ್ಯವಾಗಿ ಒಂದು ಪ್ರಶ್ನೆಗೆ ಉತ್ತರವನ್ನು ಬರೆಯುವಾಗ ಇನ್ನೊಂದರ ಉತ್ತರವು ಮನದಲ್ಲಿ ಹೊಳೆಯುತ್ತದೆ-ಸುಳಿಯುತ್ತದೆ.ಆಗ ಆ ಉತ್ತರದ ಮುಖ್ಯ ಅಂಶ(ಶಬ್ದ ಯಾ ವಾಕ್ಯ)ವನ್ನು ಉತ್ತರ ಪತ್ರಿಕೆಯ ಇನ್ನೊಂದು ಪುಟದಲ್ಲಿ ಬರೆಯಬೇಕು.(ಬರೆದಿಡದಿದ್ದಲ್ಲಿ ಹೊಳೆದದ್ದು ಉತ್ತರಿಸುವ ಸಂದರ್ಭದಲ್ಲಿ ಮರೆಯಾಗಬಹುದು).
•ಅದಕ್ಕಾಗಿ-ಉತ್ತರ ಪತ್ರಿಕೆಯ ಯಾವುದಾದರೂ ಒಂದು ಪುಟವನ್ನು ಆಯ್ಕೆ ಮಾಡಿ ಅದರ ಮೇಲಿನ ಭಾಗದಲ್ಲಿ ಇತರಪುಟ/Rough Work ಎಂದು ಕಾಣಿಸುವಂತೆ ಬರೆಯಬೇಕು. ಆ ಪುಟದಲ್ಲಿ ನಮಗೆ ಹೊಳೆದ ಉತ್ತರವನ್ನು ಪ್ರಶ್ನೆಸಂಖ್ಯೆ ಸಹಿತ ಬರೆದು ಈಗ ಬರೆಯುತ್ತಿರುವ ಉತ್ತರವನ್ನು ಮುಂದುವರೆಸಬೇಕು.
•ಹೀಗೆ ಒಂದು ಪ್ರಶ್ನೆಯ ಉತ್ತರವನ್ನು ಬರೆಯುವಾಗ ಬೇರೊಂದು ಪ್ರಶ್ನೆಯ ಉತ್ತರವು ನೆನಪಾದಾಗಲೆಲ್ಲಾ ಈ "ಇತರಪುಟ"ದಲ್ಲಿ ಬರೆಯುತ್ತಾ ಹೋಗಿ ಆ ಪ್ರಶ್ನೆಗಳನ್ನು ಉತ್ತರಿಸುವ ಸಂದರ್ಭದಲ್ಲಿ ಈ ಪುಟದಿಂದ ಉತ್ತರವನ್ನಾಯ್ದು ಬರೆಯಬೇಕು.{ಈ ಸಂದರ್ಭದಲ್ಲಿ ನಮಗೆ ಪ್ರಶ್ನೆಪತ್ರಿಕೆಯ ಅಧ್ಯಯನದ ಮಹತ್ವದ ಅರಿವಾಗುತ್ತದೆ}.
•ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಉತ್ತರದ ಅಂಶವು ನೆನಪಾಗದಿದ್ದಲ್ಲಿ ಚಿಂತಿಸದೆ ಮುಂದಿನ ಪ್ರಶ್ನೆಯನ್ನು ಉತ್ತರಿಸಲು ಹೋಗಬೇಕು. ಈ ಸಂದರ್ಭದಲ್ಲಿ ಒಂದಷ್ಟು ಜಾಗವನ್ನು ಖಾಲಿ ಬಿಟ್ಟು ಮುಂದೆ ಹೋಗುವುದು ಒಳ್ಳೆಯದು.
•ಪ್ರತಿಯೊಂದು ಪ್ರಶ್ನೆಯ ಉತ್ತರವನ್ನು ಬರೆದಾದ ಬಳಿಕ ಒಂದೆರಡು ಗೆರೆಗಳ ಉತ್ತರವಾದರೆ ಒಂದು ಗೆರೆಯಷ್ಟು ಜಾಗವನ್ನು,
ಅದಕ್ಕಿಂತ ಹೆಚ್ಚಿನದಾದರೆ ಎರಡು ಮೂರು ಗೆರೆಗಳಷ್ಟು ಜಾಗವನ್ನು ಖಾಲಿ ಬಿಡುವುದೊಳಿತು.
ಯಾಕೆಂದರೆ ನಾವು ಈ ಹಿಂದೆ ಬರೆಯುತ್ತಿರುವಾಗ ಮರೆತುಹೋಗಿರುವ/ತಪ್ಪಾಗಿರುವ/ತಿದ್ದಿ ಬರೆಯಬೇಕಾಗಿರುವ/ಪೂರಕ ಉತ್ತರಗಳನ್ನು ಬರೆಯಬೇಕಾಗಿ ಬಂದರೆ ಇದು ತುಂಬ ಸಹಾಯಕ.
ಖಾಲಿ ಬಿಟ್ಟಿಲ್ಲವೆಂದಾದರೆ ಉತ್ತರವನ್ನು ಮುಂದುವರೆಸಿ ಬರೆಯಲು ಮತ್ತೊಂದು ಪುಟವನ್ನು ಆಶ್ರಯಿಸಿ ಅಲ್ಲಿ ಮೊದಲು ಇಂತಹ ಪುಟದಲ್ಲಿರುವ ಇಂತಹ ಸಂಖ್ಯೆಯ ಪ್ರಶ್ನೆಯ ಮುಂದುವರಿದ ಉತ್ತರ ಎಂದು ಬರೆಯಬೇಕು.ಹಾಗೆಯೇ ಅಲ್ಲಿ ಈ ಪ್ರಶ್ನೆಯ ಉತ್ತರವು ಇಂತಹ ಸಂಖ್ಯೆಯ ಪುಟದಲ್ಲಿ ಮುಂದುವರೆಯುತ್ತದೆ ಎಂದು ಬರೆಯಬೇಕು.ಈ ಕಷ್ಟವನ್ನು ತಪ್ಪಿಸಲು; ಸಮಯವನ್ನುಳಿಸಲು ಇದು ತುಂಬಾ ಸಹಕಾರಿ.
•ಪ್ರತಿಯೊಂದರ ಉತ್ತರವನ್ನು ಬರೆದಾದ ಬಳಿಕ ಗೆರೆಯನ್ನೆಳೆಯುವ ಕೆಲಸಕ್ಕೆ ಉತ್ತರಿಸುವ ಸಂದರ್ಭದಲ್ಲಿ ಹೋಗಬಾರದು.ಇದು ಸಮಯ ನಷ್ಟಕ್ಕೆ ದಾರಿ.
ಎಲ್ಲವೂ ಆದ ಬಳಿಕ ಸಮಯವುಳಿದಲ್ಲಿ ಈ ಕೆಲಸವನ್ನು ಮಾಡಬಹುದು.
•ವಿವರಣಾತ್ಮಕ ಉತ್ತರಗಳನ್ನು ಬರೆಯುವಾಗ ಮುಖ್ಯಾಂಶಗಳಿಗೆ ಅಡಿಗೆರೆಯನ್ನು(ಸರಿಯಾಗಿದ್ದರೆ ಮಾತ್ರ. ಸಂಶಯವಿದ್ದರೆ ಬೇಡ.)ಎಳೆಯುವುದು ಉಚಿತ.ಇದು ಮೌಲ್ಯಮಾಪಕರ ಗಮನವನ್ನು ಸೆಳೆಯಲು ಸಹಕಾರಿ.ಅವರ ಓದುವ ಶ್ರಮ-
ಸಮಯಗಳನ್ನು ಉಳಿಸುತ್ತದೆ.ಹಾಗೆಯೇ ಮುಖ್ಯಾಂಶದ ಶಬ್ದಗಳನ್ನು ಉತ್ತರದ ಮೊದಲ ಗೆರೆಗಳಲ್ಲಿ ಬರೆದಿಡಬಹುದು.ಇದು ಅವರಿಗೂ ಸಹಕಾರಿ; ನೆನಪಿಸಲು ನಮಗೂ ಸಹಕಾರಿ.ಒಂದೊಮ್ಮೆ ಸಮಯಾಭಾವ ಉಂಟಾದಾಗ ಅಷ್ಟಾದರೂ ಬರೆದಂತಾಗುತ್ತದೆ. ಇದು ಪೂರ್ಣವಲ್ಲದಿದ್ದರೂ ಆ ಉತ್ತರಕ್ಕೆ ಗರಿಷ್ಠಸಾಧ್ಯ ಅಂಕವನ್ನು ನೀಡಲು ಸಹಕಾರಿಯಾಗುತ್ತದೆ.ಯಾಕೆಂದರೆ ಮೌಲ್ಯಮಾಪಕನಿಗೆ ನಮಗೆ ಉತ್ತರ ಗೊತ್ತು,ಉತ್ತರಿಸಲು ಸಮಯಾಭಾವವುಂಟಾಯಿತೆಂಬ ಸ್ಪಷ್ಟವಾದ ಸಂದೇಶವು ಈ ಮೂಲಕ ರವಾನೆಯಾಗುತ್ತದೆ. ಮೌಲ್ಯಮಾಪಕರ ಆ ಭಾವನೆಯು ಅಂಕ ನೀಡಲು( ವೈಯಕ್ತಿಕ ಕೃಪಾಂಕ)ಸಹಕಾರಿ.
ಉತ್ತರಾಯಣ ನಾಳೆಗೆ...
ಹರೇರಾಮ
-ವಿಶ್ವ ಉಂಡೆಮನೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


