ರಾಮೋ ವಿಗ್ರಹವಾನ್ ದರ್ಮಃ ..... ಇದು ನಾವು ಧರ್ಮಾಚರಣೆಗಾಗಿ ಇರಿಸಿಕೊಂಡ ಪ್ರೀತಿಯ, ಸಜೀವ ವಿಗ್ರಹ ಮರ್ಯಾದಾ ಪುರುಷೋತ್ತಮ ಶೀರಾಮನದ್ದು, ತ್ರೇತೆಯ ಉದ್ದಗಲಕ್ಕೂ ಸಂಚರಿಸಿದ ವನು ನಮ್ಮ ಆಂತರ್ಯಾತ್ಮ ಶ್ರೀರಾಮ ಆತನ ಈ ಯಾನದಲ್ಲಿ ಮೂರು ಭಿನ್ನ ಭಿನ್ನ ಅಭಿರುಚಿಯ ಕುಟುಂಬಗಳನ್ನು ರಾಮರಾಜ್ಯ ಎಂಬ ಏಕ ಸೂತ್ರದಲ್ಲಿ ಬಂಧಿಸಿ ವಿಭಕ್ತವಾಗಿದ್ದ ಕುಟುಂಬಗಳನ್ನು ಬಿಗ್ಗೂಡಿಸಿದ. ಈ ಯೆಲ್ಲಾ ಸಂದರ್ಭದಲ್ಲೂ ಶ್ರೀರಾಮ ತನ್ನ ಪರಿಸರ - ಹಾಗೂ ಮಾನಸಿಕ ಸ್ಥಿತಿಯನ್ನು ಮೀರಿ ಅತಿಮಾನುಷನಾಗುತ್ತಾನೆ. ಅವನೇ ಹೇಳಿಕೊಂಡ ಹಾಗೆಯೇ ... ದಶರಥಾತ್ಮಜಂ ರಾಮಂ ಮಾನುಷ ಮನ್ಯೇ... ಎಂದು ಸಾರಿದರೂ ದೇವತ್ವಕ್ಕೇರಿದ ಕೌಸಲ್ಯಾ ಸುಪ್ರಜಾ ರಾಮ.
ಮೊದಲನೆಯದಾಗಿ ಅಯೋಧ್ಯೆಯ ರಘುವಂಶ ರಾಘವನ ಕುಟುಂಬ. ಕೈಕೇಯಿಯ ಅಪೇಕ್ಷೆಯಿಂದಾಗಿ ದಶರಥನ ಮನ - ಮನೆ ಏಕಕಾಲಕ್ಕೆ ಮುರಿಯಿತು. ಕುಟುಂಬ ಭದ್ರವಾಗಿರಬೇಕು - ಛಿದ್ರವಾಗಬಾರದೆಂದು ರಾಮ ವನಕ್ಕಾಗಮಿಸಿದ. ವಿಚಾರ ತಿಳಿದ ಲಕ್ಷ್ಣಣ ಕೆಂಡಾಮಂಡಲ ದಾಗಿ "ಏನು ಅಯೋಧ್ಯೆ ಕೈಕೆಗೆ ಮಾರಿ ಹೋಯಿತೇ? ಎ೦ದು ಪ್ರಶ್ನಿಸುತ್ತಾ ಮುನ್ನುಗ್ಗಿದ... ರಾಮನ ಮೃದುಹಸ್ತದ ಸ್ಪರ್ಶ, ಹಿತವಾಣಿ ಮಾಡಿಬಂದಾಗ ಲಕ್ಷ್ಮಣ ತಣ್ಣಗಾದ ವಿಚಾರ ತಿಳಿದ ಭರತ ಭರದಿಂದ ಬಂದು ಒಡೆದ ಮನಸ್ಸಿನ ಮನೆಯಾದ ಅಯೋಧ್ಯೆಯನ್ನು ಬಿಟ್ಟು ಅಣ್ಣನಲ್ಲಿಗೆ ಬಂದ ಬೇಡಿದ... ಕಾಡಿದ. ಶ್ರೀ ರಾಮ ಮನಃಪರಿವರ್ತಿಸಲಿಲ್ಲ. ಶ್ರೀರಾಮನ ದ್ಯೋತಕವಾಗಿ ಪಾದುಕೆಗಳನ್ನು ತಾನೇ ಸ್ವತಃ ಹೊತ್ತು ತಂದು ನಂದಿಗ್ರಾಮದಲ್ಲಿರಿಸಿ, ರಾಜ್ಯಭಾರ ಮಾಡಿದ. ಒಡೆದ ಮನಸ್ಸುಗಳ ಬಂಧ ಬಿಗುಗೊಂಡಿತು. ಕುಟುಂಬ ಅವಿಭಕ್ತವಾಗಿಯೇ ಉಳಿಯಿತು. ಒಂದೇ ಅರಮನೆಯು ಸಹೋದರಿಯರು ಮಿಥಿಲೆಯಿಂದ ಬಂದು ಅಯೋಧ್ಯೆಯ ಸೊಸೆಯಂದಿರಾದರು. ಇನ್ನು ಕುಟುಂಬ ಒಡೆಯಲು ಕಾರಣವಲ್ಲಿದೆ?
ಇನ್ನು ಕಿಷ್ಕಿಂದೆಯ ವಳಿ ಮುಖಿಗಳ ಕುಟುಂಬ:
ಒಂದೇ ಮೈಯಿಂದ ಜನ್ಮಿಸಿ ಬಂದ ವಾಲಿ-ಸುಗ್ರೀವರು ಋಕ್ಷರಜಸ್ಸ್ ನ ಮಕ್ಕಳು. ಆಹಾರ ಸೇವಿಸುವುದು, ಬಿದ್ದ ಹಣ್ಣನ್ನು ಹೆಕ್ಕಿ ತಿನ್ನುವುದು 'ಆಡುವುದು -ಪಾಡು ವುದು ಜೊತೆ ಜೊತೆಗೆ . ಆದರೆ ದುಂದುಭಿಯ ಪ್ರಕರಣದಿಂದ ಕುಟುಂಬ ವಿಭಕ್ತವಾಯಿತು. ಅಣ್ಣ ತಮ್ಮಂದಿರು ಕೈಗೆ ಸಿಕ್ಕಿದ್ದರಲ್ಲಿ ಹೊಡಕೊಂಡುಬದ್ಧ ಹಗೆಗಳಾದರು. ಸುಗ್ರೀವನ ಪತ್ನಿಯನ್ನೇ ತಾನಿರಿಸಿಕೊಂಡು ಆತನನ್ನು ಕಿಷ್ಕಿಂದಿಯಿಂದಲೇ ಹೊರದಬ್ಬಿದ . ಅಲ್ಲಿಗೂ ದಾಶರಥಿ ದರ್ಶನವಾಯಿತು. ರಾಮ ಸುಗ್ರೀವನ ನ್ಯಾಯ ಆಲಿಸಿ ವಾಲಿ ವಧಾರ್ಹ ಎಂದು ನಿಶ್ಚಯಿಸಿ ಬಾಣಪ್ರಯೋಗಿಸಿದ. ಆದರೆ ಕೊಲ್ಲಲಿಲ್ಲ. ಮುಂದಿನ್ನು ಬದುಕುವ ಆಶೆಯಿದ್ದರೆ ಮರಳಿ ತೆಗೆವೆ ಬಾಣವ ನೋಯದಂತೆ ಎಂಬ ಆಯ್ಕೆಯನ್ನೂ ಕೊಟ್ಟ.... ಜೊತೆಗೆ ಹಿಂದಿನಂತೆಯೇ ಭ್ರಾತೃತ್ವ ಬಂಧದಿಂದಿರಬೇಕು ಎಂದೂ ಸೇರಿಸಿದ. ಪಾಲಿಗೆ ತಾನೇನು ಎಂಬ ಸ್ವಸ್ವರೂಪ ಜ್ಞಾ
ನದಿಂದ ಹರಣ ನೀಗಲು ಬ ಒಪ್ಪಿದ. ತರಳ ಅಂಗದ ನನ್ನು ಸುಗ್ರೀವನ ಮಡಿಲಿಗೆ ಹಾಕಿ, ಮಡದಿ ರುಮೆಯನ್ನು ಮರಳಿಸಿದ .ಇಲ್ಲೂ ವಾನರ ಸಂತತಿಯಾದರೂ ನರರಂತೆ ವರ್ತಿಸಿ ಅವಿಭಕ್ತ ಕುಟುಂಬಕ್ಕೆ ದಾರಿ ಮಾಡಿಕೊಟ್ಟರು ವಾಲಿ ಸುಗ್ರೀವರು.
ಇನ್ನೂ ಮುಂದೆ ಹೋದಾಗ ಸಾಗರದಾಚೆಗಿನ ರಾಕ್ಷಸ ರಾವಣನ ಕುಟುಂಬ. ಸಕಲ ಶಾಸ್ತ್ರ ಕೋವಿದನೂ ಮಹಾ ಮೇಧಾವಿಯೂ, ಮಹಾ ಪರಾಕ್ರಮಿಯೂ ಆಗಿ ಬೆಳೆದ "ಲಂಕೇಶ್ವರೋವಾ ರಾವಣೇಶ್ವರೋವಾ" ಎಂಬ ನೆಗಳ್ತೆಯನ್ನು ಪಡೆದ ಕೈಕಸಾ ಪುತ್ರ ರಾವಣನ ಹಿರಿಮೆ-ಗರಿಮೆಯ ವ೦ಶ. ವರಬಲಗಳಿದ್ದರೂ ದೈವಬಲವಿಲ್ಲದ ನತದೃಷ್ಟ. ತಂಗಿ ಶೂರ್ಪನಖೆಯಿಂದಾಗಿ ತನ್ನ ಅಧಃಪತನಕ್ಕೆ ತಾನೇ ಕಾರಣನಾದ. ತಮ್ಮ ವಿಭೀಷಣವನ್ನು ಹೊರದಬ್ಬಿ ಕುಟುಂಬದ ಐಕ್ಯತೆಯನ್ನು ಮುರಿದ. ಇಲ್ಲಿ ಸಹಾಯಕರಾಗಿ ಬಹಳ ಮಂದಿ ಇದ್ದರೂ ರಾವಣ ತಬ್ಬಲಿಯಾದ. ಕೊನೆಗೂ ಅಸುನೀಗುವ ಕಾಲಕ್ಕೆ ತಮ್ಮ ವಿಭೀಷಣನಿಗೇ ಪಟ್ಟಕಟ್ಟಬೇಕೆಂದು ಹೇಳಿಯೇ ಅಸುನೀಗಿದ. ನಂತರ ವಿಭೀಷಣ ರಾಜನಾದ.
ಈ ಮೂರೂ - ಮಾನವ- ಕಪಿ - ರಾಕ್ಷಸ ವರ್ಗಗಳನ್ನು ಗೆದ್ದಾಗ ರಾಜ್ಯವನ್ನು ಆಳುವ ಹಕ್ಕು ಶ್ರೀರಾಮನಿಗಿದ್ದರೂ ತಾನು ಗೆದ್ದು ಕುಟುಂಬ ಗೆಲ್ಲುವಂತೆ ಮಾಡಿದ. ಎಲ್ಲೆಲ್ಲಾ ಕೌಟುಂಬಿಕ ಸಮಸ್ಯೆ ಇತ್ತೋ ಅಲ್ಲೆಲ್ಲಾ ಅವಿಭಕ್ತತೆಯ ಅನಿವಾರ್ಯತೆಯನ್ನು ಸಾದರಪಡಿಸಿದ ಅಯೋಧ್ಯೆ - ಕಿಷ್ಕಿಂದೆ - ಸುವರ್ಣ ಲಂಕೆ... ಹೀಗೆ ಜಗದಗಲ ಸಾಗಿ ತನ್ನ ವ್ಯಾಪಕತ್ವವನ್ನು ಮೆರೆದ ಶ್ರೀರಾಮನಿಗೆ ನೂರ ಎಂಟು ನಮನಗಳು.
-ವರ್ಕಾಡಿ ರವಿ ಅಲೆವೂರಾಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


