ಶೈಕ್ಷಣಿಕ ತರಬೇತಿಗಳು ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಸಹಾಯಕ: ಹೆಚ್.ಕೆ. ವಿಜಯಲಕ್ಷ್ಮಿ

Upayuktha
0


ಹಾಸನ: ಶೈಕ್ಷಣಿಕ ತರಬೇತಿಗಳು ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಸಹಾಯಕವಾಗುತ್ತವೆ. ತರಬೇತಿಗಳು ಮುಖಾಮುಖಿಯಾಗಿರಲಿ ಅಥವಾ ವೆಬಿನಾರ್ ತರಗತಿಗಳಾಗಿರಲಿ, ಅವು ವಿಷಯಾಧಾರಿತವಾಗಿದ್ದು, ಅವುಗಳ ಫಲಾನುಭವಿಗಳು ಮಕ್ಕಳೇ ಆಗಿರುತ್ತಾರೆ ಎಂದು ಹಾಸನ ಡಯಟ್ ನ ಉಪನ್ಯಾಸಕರಾದ ಹೆಚ್. ಕೆ. ವಿಜಯಲಕ್ಷ್ಮಿ ಹೇಳಿದರು. 


ಎರಡು ವರ್ಷಗಳಿಂದ ನಿರಂತರವಾಗಿ ಪ್ರತಿ ಶನಿವಾರ ವಿದ್ಯಾಪ್ರವೇಶ ಮತ್ತು ನಲಿಕಲಿ ಜಿಲ್ಲಾ ತಂಡವು ಆಯೋಜಿಸಿ ಡಯಟ್ ವತಿಯಿಂದ ನಡೆಸಲಾಗುತ್ತಿರುವ ಆನ್ಲೈನ್ ವಿಶೇಷ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ ಸಂಚಾಲಕರಾಗಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು ಎಲ್ಲಾ ವಿಷಯಧಾರಿತ ತರಬೇತಿಗಳ ಫಲಾನುಭವಿಗಳು ಮಕ್ಕಳೇ ಆಗಿರುತ್ತಾರೆ. ಈ ಹಿನ್ನಲೆಯಲ್ಲಿ ಶಿಕ್ಷಕರು ಹೆಚ್ಚು ಆಸಕ್ತಿಯಿಂದ ಮಕ್ಕಳಿಗೆ ಪಾಠವನ್ನು ಅನುಕೂಲಿಸಬೇಕು. ಪ್ರತೀ ವಿದ್ಯಾರ್ಥಿಯೂ ಈ ದೇಶದ ಆಸ್ತಿ ಎಂಬುದನ್ನು ನಾವು ಮರೆಯಬಾರದು. ಶಿಕ್ಷಕರ ಪರಿಶ್ರಮ ಸಾರ್ಥಕವಾಗಬೇಕಾದರೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಅತ್ಯಗತ್ಯ ಎಂದರು.


ಪ್ರಸ್ತುತ 2024 ರ ಜನವರಿ ತಿಂಗಳು ಇಂಗ್ಲಿಷ್ ಮಾಸಾಚರಣೆಯ ಅವಧಿಯಾಗಿದ್ದು, ಹಾಸನ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಫೆಸ್ಟ್ ಶೈಕ್ಷಣಿಕ ಕಾರ್ಯಕ್ರಮ ನಡೆಯುತ್ತಿದೆ ಮತ್ತು ಇದನ್ನು ಹಾಸನ ಡಯಟ್ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದೆ.  ಶಾಲೆಗಳಲ್ಲಿ ಇಂಗ್ಲಿಷ್ ಫೆಸ್ಟ್  ಆಚರಣೆ ಮಾಡಲು ಅನುಕೂಲವಾಗುವಂತೆ ಸಾಹಿತ್ಯವನ್ನು ಡಯಟ್ ವತಿಯಿಂದಲೇ ಸಿದ್ಧಪಡಿಸಿ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರಾಂಶುಪಾಲರಾದ ಹೆಚ್.ಕೆ. ಪುಷ್ಕಲತಾ ರವರ ಪರಿಕಲ್ಪನೆ ಇದಾಗಿದ್ದು ಅಗತ್ಯ ಮತ್ತು ಸೂಕ್ತ ಮಾರ್ಗದರ್ಶನದೊಂದಿಗೆ ಜಿಲ್ಲೆಯಾದ್ಯಂತ ನಡೆಯುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು, ಪೋಷಕರ, ಗ್ರಾಮಸ್ಥರ, ಎಸ್‌ಡಿಎಂಸಿ ಸಮಿತಿಯವರ ಸಹಕಾರದೊಂದಿಗೆ ಇಂಗ್ಲಿಷ್ ಹಬ್ಬವನ್ನು ಮಾಡುವ ಮೂಲಕ ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮ ಒಂದು ಯಶೋಗಾಥೆಯಾಗಲಿದೆ ಎಂದು ಹೇಳಿದರು. 


ನಗರದ ಆರ್. ಸಿ. ರಸ್ತೆಯಲ್ಲಿರುವ ಜಿಜಿಜೆಸಿ ಪ್ರಧಾನ ಪ್ರೌಢಶಾಲೆಯ ಸಹ ಶಿಕ್ಷಕರಾದ ಕೆ.ಎನ್. ಚಿದಾನಂದ ರವರು ಸಂಪನ್ಮೂಲ ವ್ಯಕ್ತಿಯಾಗಿ ಆನ್ ಲೈನ್ ಕ್ಲಾಸ್ ನ್ನು ನಿರ್ವಹಣೆ ಮಾಡುತ್ತ ಶಿಕ್ಷಕರನ್ನು ಕುರಿತು  ಭಾಷೆ ಒಂದು ಸಂಪರ್ಕ ಮಾಧ್ಯಮವಾಗಿದ್ದು, ಮಗವಿನ ಸರ್ವತೋಮುಖ ಬೆಳವಣಿಗೆ ಭಾಷೆಯ ಮೂಲಕವೇ ಆಗುತ್ತದೆ. ಮಗು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಭಾಷೆ ಪ್ರಧಾನ ಅಗತ್ಯವೆನಿಸುತ್ತದೆ. ಈ ನಿಟ್ಟಿನಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಯಲು ಮೂಲ ಮತ್ತು ಅತ್ಯಗತ್ಯ ವ್ಯಾಕರಣಾಂಶಗಳನ್ನು ಶಿಕ್ಷಕರು ಅನುಕೂಲಿಸಬೇಕು. ಇಂದಿನ ತರಗತಿಯಲ್ಲಿ ವಿವಿಧ ಹಾಗೂ ವಿಭಿನ್ನ ಸಂದರ್ಭಗಳಲ್ಲಿ ಸಹಾಯಕ ಕ್ರಿಯಾಪದಗಳ ಅರ್ಥಸಹಿತ ಬಳಕೆಯನ್ನು ಉದಾಹರಣೆಗಳೊಂದಿಗೆ ಅನುಕೂಲಿಸಲಾಯಿತು. ಪರಿಶುದ್ಧ ಭಾಷೆಯನ್ನು ಮಗು ಕಲಿಯಲು ಇಂಗ್ಲಿಷ್ ನ ಈ ಅಧ್ಯಾಯಗಳು ಬಹಳ ಪ್ರಮುಖವಾಗಿದೆ ಎಂದು ಹೇಳಿದರು. 


ಹಾಸನ ತಾಲ್ಲೂಕಿನ ಜಿ.ಎಲ್.ಪಿ.ಎಸ್, ಕಣಜನಹಳ್ಳಿ ಶಾಲಾ  ಶಿಕ್ಷಕ ಲೋಕೇಶ್ ರವರು ತಾಂತ್ರಿಕವಾಗಿ ಆಯೋಜನೆ ಮಾಡಿದರು. ಶಿಕ್ಷಕಿ ರಮ್ಯ ರವರು ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕರಾದ ಮಮತಾ ರವರ ಕಾರ್ಯಕ್ರಮ ನಿರೂಪಣೆಯಲ್ಲಿ ಡಿ. ಶಾಂತಾಮಣಿ ರವರು ಪ್ರಾರ್ಥಿಸಿದರೆ ಶಿಕ್ಷಕಿ ರಾಧಾಮಣಿ ರವರು ಸರ್ವರನ್ನು ವಂದಿಸಿದರು. ರಾಜ್ಯದ ವಿವಿಧ ತಾಲ್ಲೂಕುಗಳು ಹಾಗೂ ಜಿಲ್ಲೆಗಳಿಂದ ಸುಮಾರು ಎರಡುನೂರು ಶಿಕ್ಷಕರು ಆನ್ ಲೈನ್ ಟೆಲಿಗ್ರಾಂ ಗ್ರೂಪ್ ನಲ್ಲಿ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top