ಆಳ್ವಾಸ್ ಕಾಲೇಜಿನಲ್ಲಿ ಬದುಕು ಗೆದ್ದವರ ‘ಪುನರ್ಜನ್ಮ ಕೌಟುಂಬಿಕ ಸಮ್ಮಿಲನ’

Upayuktha
0

ವ್ಯಸನ ಮುಕ್ತರೇ ಸ್ವಸ್ಥ ಸಮಾಜದ ರಾಯಭಾರಿಗಳು: ಡಾ. ಅಶೋಕ ದಳವಾಯಿ



ವಿದ್ಯಾಗಿರಿ
: ಶುಭ್ರ ಶೋಭಿತ ಮೊಗದಲ್ಲಿ ಮಂದಹಾಸ, ಬಾಚಿದ ಕೂದಲು, ಶ್ವೇತವರ್ಣದ ಪಂಚೆ- ಅಂಗಿ, ಮೇಲೊಂದು ಶಾಲು, ವರ್ಣಮಯ ಸೀರೆ, ಸಂಭ್ರಮದ ಸಿಂಗಾರ, ಹಣೆಯಲ್ಲೊಂದು ಅಧ್ಯಾತ್ಮದ ಕಳೆ, ಅಚ್ಚುಕಟ್ಟಾದ ಧಿರಿಸು, ನಡಿಗೆಯಲ್ಲಿ ಗಾಂಭಿರ್ಯ, ಮನ ತುಂಬಿದ ಪ್ರೀತಿ, ಆತ್ಮವಿಶ್ವಾಸದ ನೋಟ. ಅದು ಅಕ್ಷರಶಃ ಬದುಕಿನ ‘ಪುನರ್ಜನ್ಮ’ದ ಸಮ್ಮಿಲನ.  ಈ ಸಂತೃಪ್ತಿಯ ಕೌಟುಂಬಿಕ ಕಳೆಯ ಕಾರ್ಯಕ್ರಮ ವಿದ್ಯಾಗಿರಿಯಲ್ಲಿನ ಆಳ್ವಾಸ್ ಕಾಲೇಜಿನ  ಮೋಹಿನಿ ಅಪ್ಪಾಜಿ ನಾಯಕ ಸಭಾಂಗಣದಲ್ಲಿ ಭಾನುವಾರ ಕಂಗೊಳಿಸಿತು.



ಅದು, ಆಳ್ವಾಸ್ ಪುನರ್ಜನ್ಮ (ದುಶ್ಚಟ ನಿವಾರಣಾ ಸಮಗ್ರ ವೈದ್ಯಕೀಯ ಕೇಂದ್ರ)ವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಮೂಡುಬಿದಿರೆ ತಾಲ್ಲೂಕು ಘಟಕದ ಸಹಯೋಗದಲ್ಲಿ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡ ‘ವ್ಯಸನ ಮುಕ್ತರ ಕುಟುಂಬ ಸಮ್ಮಿಲನ ಕಾರ್ಯಕ್ರಮ'.



ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣದ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಡಾ.ಅಶೋಕ್ ದಳವಾಯಿ, ‘ಸ್ವಚ್ಛ - ಸ್ವಸ್ಥ- ಸುಂದರ ಸಮಾಜ ನಿರ್ಮಾಣಕ್ಕೆ ವ್ಯಕ್ತಿ ಅಭಿವೃದ್ಧಿ ಮುಖ್ಯ. ಇಂತಹ ವ್ಯಕ್ತಿತ್ವ ನಿರ್ಮಾಣಕ್ಕೆ ವ್ಯಸನ ಮುಕ್ತರೇ ರಾಯಭಾರಿಗಳು’ ಎಂದು ಶ್ಲಾಘಿಸಿದರು. ಸರ್ಕಾರ ನಾವೇ ಕಟ್ಟಿದ ಅಂಗ. ಆದರೆ, ಸರ್ಕಾರವೇ ಎಲ್ಲ ಮಾಡಲು ಸಾಧ್ಯವಿಲ್ಲ. ಪ್ರತಿ ವ್ಯಕ್ತಿ ತನ್ನ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿದಾಗ ಸರ್ಕಾರವು ಯಶಸ್ವಿಯಾಗಿ ದೇಶವನ್ನು ಮುನ್ನಡೆಸಲು ಸಾಧ್ಯ’ ಎಂದರು. 



‘ದೇಶದ ಅಭಿವೃದ್ಧಿಯು ಕೇವಲ ಸರ್ಕಾರದ ಕರ್ತವ್ಯ ಎಂದು ಭಾವಿಸುವುದು ತಪ್ಪು. ಮನೆ ಅಭಿವೃದ್ಧಿಯಾದರೆ ಗ್ರಾಮ, ಗ್ರಾಮದಿಂದ ತಾಲ್ಲೂಕು, ತಾಲ್ಲೂಕಿನಿಂದ ಜಿಲ್ಲೆ, ಜಿಲ್ಲೆಯಿಂದ ರಾಜ್ಯ, ರಾಜ್ಯದಿಂದ ದೇಶದ ಅಭಿವೃದ್ಧಿ ಸಾಧ್ಯ. ಪ್ರತಿ ಮನೆಯ ಅಭಿವೃದ್ಧಿಯು ಯಜಮಾನನ ಮೇಲೆ ಇರುತ್ತದೆ. ಯಜಮಾನನೇ ಕುಡುಕನಾದರೆ, ಆತನ ಬದುಕು ಮಾತ್ರವಲ್ಲ, ದೇಶಕ್ಕೇ ತೊಂದರೆ’ ಎಂದು ವಿಶ್ಲೇಷಿಸಿದರು. 



‘ಜೀವನ ನಡೆಸಲು ಆದಾಯ ಬೇಕು. ಆದಾಯಕ್ಕೆ ಉದ್ಯೋಗ ಬೇಕು. ಅದರಿಂದ ಜೀವನ ಕಲ್ಯಾಣವಾಗಲು ಸಾಧ್ಯ. ನಮ್ಮ ದೇಶದಲ್ಲಿ 142 ಕೋಟಿ ಜನಸಂಖ್ಯೆ ಇದ್ದು, ಎಲ್ಲವನ್ನೂ ಈಡೇರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಆದರೆ, ನಮ್ಮ 4 ಪಟ್ಟು ಭೌಗೋಳಿಕ ವಿಸ್ತಾರ ಹೊಂದಿದ ಅಮೇರಿಕಾದಲ್ಲಿ ಇರುವುದು ಕೇವಲ 32 ಕೋಟಿ ಜನಸಂಖ್ಯೆ. ಹೀಗಾಗಿ, ಅವರಿಗೆ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗಿವೆ’ ಎಂದರು. 



‘ಮದ್ಯಪಾನದ ನಿಷೇಧಕ್ಕೆ ಮಹಾತ್ಮ ಗಾಂಧಿ ಹೋರಾಡಿದ್ದರು. ಬುದ್ಧ, ಬಸವಣ್ಣ ಎಲ್ಲರೂ ಸ್ವಸ್ಥ ಸಮಾಜದ ಪರಿಕಲ್ಪನೆ ನೀಡಿದ್ದರು. ಆದರೆ, ಈಗೀಗ ವ್ಯಸನದ ಪ್ರಮಾಣ ಹೆಚ್ಚುತ್ತಿದ್ದೆ. ವ್ಯಸನಕ್ಕೆ ಒಳಗಾಗುವವರ ವಯಸ್ಸು 19ರಿಂದ 13ಕ್ಕೆ ಇಳಿದಿದೆ. ಮದ್ಯಪಾನ ಹಲವು ದುಶ್ಚಟಕ್ಕೆ ಎಡೆಮಾಡುತ್ತಿದ್ದು, ಎಚ್‍ಐವಿಯಿಂದ ಸಾಯುವವರ ಸಂಖ್ಯೆಯೂ ಹೆಚ್ಚುತ್ತಿದೆ’ ಎಂದು ಎಚ್ಚರಿಸಿದರು.  ಹೆಣ್ಣನ್ನು ದೇವತೆ ಎನ್ನಬೇಡಿ. ಆಕೆಯನ್ನು ಪೂಜೆ ಮಾಡಬೇಡಿ. ಬದುಕಿನಲ್ಲಿ ಉತ್ತಮ ಶಿಕ್ಷಣ, ಅವಕಾಶವನ್ನು ನೀಡಿ. ನಾವು ಮಾತಿಗಿಂತ ಕೃತಿಯಲ್ಲಿ ಸಾಧಿಸಬೇಕು. ನಮ್ಮ ಮಕ್ಕಳು ಶ್ರೇಷ್ಠ ವ್ಯಕ್ತಿಗಳಾಗಬೇಕು ಎಂಬ ಗುರಿ ಇರಬೇಕು’ ಎಂದರು. ಒಬ್ಬ ಸಾಧಕ ಏನೆಲ್ಲಾ ಮಾಡಬಹುದು ಎಂಬುದನ್ನು ಮಾದರಿಯಾಗಿ ತೋರಿಸಿದ ಶ್ರೇಷ್ಠ ವ್ಯಕ್ತಿ ಡಾ. ಎಂ.ಮೋಹನ ಆಳ್ವ. ಶಿಕ್ಷಣದ ಜೊತೆ ಉದ್ಯೋಗ ಹಾಗೂ ಹಲವಾರು ಅವಕಾಶಗಳನ್ನು ಆಳ್ವಾಸ್ ಸೃಷ್ಟಿಸಿದೆ’ ಎಂದು ಪ್ರಶಂಸಿಸಿದರು. 



ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಅಧ್ಯಕ್ಷ ಡಾ.ಮೋಹನ ಆಳ್ವ ಮಾತನಾಡಿ, ‘ನನ್ನ ಬದುಕಿನಲ್ಲಿ ಒಂದು ವರ್ಷ ಮದ್ಯದ ಗುತ್ತಿಗೆಯನ್ನು ನಿರ್ವಹಿಸಬೇಕಾದ ದೌರ್ಭಾಗ್ಯ ಬಂತು. ಅದರೆ, ನಾನು ಮದ್ಯಕ್ಕೆ ದಾಸನಾಗಲಿಲ್ಲ. ಈ ತನಕ ಹನಿ ಮದ್ಯ ಸೇವಿಸಿಲ್ಲ’ ಎಂದು ವೈಯಕ್ತಿಕ ಬದುಕನ್ನು ತೆರೆದಿಟ್ಟರು.   



ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಆಯೋಜಿಸುತ್ತಿದ್ದ ವ್ಯಸನ ಮುಕ್ತಿ ಶಿಬಿರ ಹಾಗೂ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದೇನೆ. ಹೆಗ್ಗಡೆ ಪ್ರಕಾರ, ‘ಪರಿವರ್ತನೆ’ಯೇ ಬೀಜಮಂತ್ರ. ಅದು ಗಿಡವಾಗಿ, ಮರವಾಗಿ, ಫಲ ನೀಡಿ, ಸಮಾಜಕ್ಕೆ ನೆರಳು ನೀಡಬೇಕು. ವ್ಯಸನ ಮುಕ್ತರೇ ಜನಜಾಗೃತರಾಗಬೇಕು’ ಎಂದರು.  ಹನಿ ನೀರು ಸ್ಪರ್ಶಿಸದೇ ಸಮುದ್ರ ದಾಟಬಹುದು. ಆದರೆ, ಕಣ್ಣೀರಿಲ್ಲದೇ ಮದ್ಯವ್ಯಸನಿ ಪತ್ನಿ ಸಂಸಾರ ಸಾಗಿಸಲು ಸಾಧ್ಯವಿಲ್ಲ’ ಎಂಬ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಅವರ ಮಾತನ್ನು ಅರ್ಥೈಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು. 



‘ದೇಶದ 142 ಕೋಟಿ ಜನ ಸಂಖ್ಯೆಯೂ ಸಂಪನ್ಮೂಲ ವ್ಯಕ್ತಿಗಳಾದರೆ ದೇಶದ ಅಭಿವೃದ್ಧಿ ಸಾಧ್ಯ. ಈ ಪೈಕಿ 49 ಕೋಟಿ ವಿದ್ಯಾರ್ಥಿಗಳಿದ್ದು, ಅವರೆಲ್ಲ ಸಾಮಾಜಿಕ ಪರಿಕಲ್ಪನೆ ಹೊಂದಬೇಕು. ಪ್ರತಿ ವ್ಯಕ್ತಿಯೂ ಪಂಚೇಂದ್ರೀಯಗಳಿಗೆ ಸಂಸ್ಕಾರ ನೀಡಿ ದುಶ್ಚಟ ಮುಕ್ತರಾಗಿ, ಜೀವನ ಅನುಭವಿಸಬೇಕು’ ಎಂದರು. ನಮಗೆಲ್ಲ ಆಪತ್ತು ಬರುವಾಗ ಆರೋಗ್ಯದ ಚಿಂತೆ’ ಎಂದ ಅವರು, ‘ಹೊಸ ವರ್ಷದ ಆಚರಣೆ ಸಂದರ್ಭ ರಾಜ್ಯದಲ್ಲಿ 600 ಕೋಟಿ ಮದ್ಯ ಮಾರಾಟಗೊಂಡಿದೆ. ವಾರ್ಷಿಕ 38 ಸಾವಿರ ಕೋಟಿ ರೂಪಾಯಿ ಮೌಲ್ಯದ ಮದ್ಯ ರಾಜ್ಯದಲ್ಲಿ ಬಿಕರಿಯಾಗುತ್ತಿದೆ. ಸರ್ಕಾರಕ್ಕೆ ಆದಾಯದ ಶೇ 22 ಭಾಗ ಮದ್ಯದಿಂದ ಬರುತ್ತಿದೆ ಎಂದರು. 



‘ಜಾತಿ, ಭಾಷೆ,  ಪ್ರದೇಶಗಳನ್ನು ಮೀರಿದ ಸ್ವಸ್ಥ ಸಮಾಜ ನಿರ್ಮಿಸಬೇಕು. ವ್ಯಸನಮುಕ್ತಿಯು ಶಿಕ್ಷಣದ ಭಾಗ. ಈ ನಿಟ್ಟಿನಲ್ಲಿ ಏಪ್ರಿಲ್‍ನಲ್ಲಿ ವಿದ್ಯಾಗಿರಿ ಯಲ್ಲಿ ಮದ್ಯ ವ್ಯರ್ಜನ ಶಿಬಿರ ಆಯೋಜಿಸುತ್ತೇವೆ’ ಎಂದರು. ಕಷ್ಟ, ನೋವು, ಖುಷಿಗೆ ಕುಡಿಯುತ್ತೇವೆ ಎಂಬುದು ನೆಪ ಮಾತ್ರ. ಸ್ವಲ್ಪ ಸ್ವಲ್ಪ ಬಿಡುತ್ತೇವೆ ಎಂಬುದೂ ಸಬೂಬು. ಮದ್ಯಪಾನ ಆರಂಭದಲ್ಲೇ ನಿಗ್ರಹಿಸಿ. ನಿಯಂತ್ರಣದಲ್ಲಿ ತಾಯಿ ಮತ್ತು ಪತ್ನಿಯ ಪಾತ್ರ ಬಹುಮುಖ್ಯ’ ಎಂದರು. 



ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ‘ಮನುಷ್ಯ ಜೀವನ ನಮಗೆ ದೊರೆತ ಶ್ರೇಷ್ಠ ಅವಕಾಶ. ಜವಾಬ್ದಾರಿ ಅರಿತು ಬಾಳಿದರೆ ಸ್ವರ್ಗ’ ಎಂದರು. ಮಾದಕ ವ್ಯಸನ ಎಂಬ ದಾರಿಯಲ್ಲಿ ಹೋಗುವ ಮಾರಿ ತಂದು ಕೌಟುಂಬಿಕ ಬದುಕು ಕಳೆದುಕೊಳ್ಳುವುದು ಬೇಡ’ ಎಂದರು.



ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ, ‘ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ನಿಮ್ಮ ಕುಟುಂಬವನ್ನು ಸದೃಢಗೊಳಿಸಿ’ ಎಂದರು. ದೇಶದಲ್ಲಿ ಶಿಕ್ಷಣ ಸೌಲಭ್ಯಗಳ ಕೊರತೆ ಇತ್ತು. ಸ್ವಾತಂತ್ರ್ಯದ ಸಿಕ್ಕಿದ ಸಂದರ್ಭದಲ್ಲಿ ಜಿಲ್ಲೆಯಲ್ಲೂ ಎರಡೇ ಕಾಲೇಜುಗಳು ಇತ್ತು. ಈಗ ಅವನ್ನೆಲ್ಲ ಮೀರಿ ಮುನ್ನಡೆಯುತ್ತಿದ್ದೇವೆ’ ಎಂದರು. ಸರ್ಕಾರಗಳು ಸದುದ್ದೇಶದಿಂದ ಯೋಜನೆ ತರುತ್ತವೆ. ಎಂ.ವೀರಪ್ಪ ಮೊಯಿಲಿ ಸಿಇಟಿ ತಂದರು. ಇಂದಿರಾ ಗಾಂಧಿ ತಂದ ಉಳುವವನೇ ಹೊಲದೊಡೆಯ ಕಾಯಿದೆಯಿಂದ ಜಿಲ್ಲೆ ಅಭಿವೃದ್ಧಿಗೆ ಕಾರಣವಾಯಿತು. ಈಗ ವೀರೇಂದ್ರ ಹೆಗ್ಗಡೆ ಚಿಂತನೆ ಹಾಗೂ  ಡಾ.ಎಂ.ಮೋಹನ ಆಳ್ವ ಕಾಯಕಲ್ಪದಿಂದ ನಾವು ವ್ಯಸನ ಮುಕ್ತ ಸಮಾಜ ನಿರ್ಮಿಸುವೆಡೆಗೆ ಹೆಜ್ಜೆ ಇಡುತ್ತಿದ್ದೇವೆ’ ಎಂದರು. 



ಆಳ್ವಾಸ್ ಪದವಿ ಕಾಲೇಜಿನ ಡಾ.ಕುರಿಯನ್ ಪ್ರಾಸ್ತಾವಿಕವಾಗಿ ಮಾತನಾಡಿ, 1.35 ಲಕ್ಷ ಮಂದಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ದುಶ್ಚಟ ಮುಕ್ತರಾಗಿದ್ದಾರೆ. ಈ ಅಭಿಯಾನದಲ್ಲಿ ಆಳ್ವಾಸ್ ನಿರಂತರವಾಗಿ ತೊಡಗಿಸಿಕೊಂಡು ಬಂದಿದೆ ಎಂದರು.ವ್ಯಸನವು ಸುಮಾರು 200ಕ್ಕೂ ಅಧಿಕ ಕಾಯಿಲೆಗೆ ಕಾರಣವಾಗಿವೆ. ಅಪರಾಧಿ ಚಟುವಟಿಕೆಗಳು ಹೆಚ್ಚಿವೆ. ಸಂಪನ್ಮೂಲದ ನಾಶವಾಗುತ್ತಿದೆ ಎಂದು ಮಾಹಿತಿ ನೀಡಿದರು. 



ಕಾರ್ಯಕ್ರಮ ನಿರೂಪಿಸಿದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ, ‘ಆಳ್ವಾಸ್ ಪುನರ್ಜನ್ಮವು ವ್ಯಸನ ಮುಕ್ತರಿಗೆ 28 ದಿನಗಳ ಶಿಬಿರಗಳನ್ನು ಕಳೆದ 4 ವರ್ಷಗಳಿಂದ ಹಮ್ಮಿಕೊಂಡು 750 ಮಂದಿಯನ್ನು ವ್ಯಸನ ಮುಕ್ತವಾಗಿ ಮಾಡಿದೆ’ ಎಂದರು. ವ್ಯಸನಮುಕ್ತಿ ಕುರಿತು ಜಾಗೃತಿ ಮೂಡಿಸುವ ಕಲಾವಿದ ವೆಂಕಿ ಫಲಿಮಾರು ನಿರ್ಮಿಸಿದ ಮೃತ್ತಿಕಾ ಕಲಾಕೃತಿ ಹಾಗೂ ಚಿತ್ರಕಲಾವಿದ ಶ್ರೀನಾಥ್ ಮಣಿಪಾಲ್ ರಚಿಸಿದ ಚಿತ್ರವನ್ನು ಅನಾವರಣಗೊಳಿಸಲಾಯಿತು. 



ಮದ್ಯ ವ್ಯಸನ ಮುಕ್ತರಾಗಿ ಮಾದರಿ ಬದುಕು ಸಾಗಿಸುತ್ತಿರುವ ಮಂಗಳೂರು ಬ್ರಿಂಡೇಲ್‍ನ ರಾಜು ಪೂಜಾರಿ, ಮೂಡುಬಿದಿರೆ ಮಾರ್ನಾಡು ಗ್ರಾಮದ ನಾರಾಯಣ ಆಚಾರ್, ಪುಚ್ಚೆಮೊಗರಿನ ಸುಂದರ ನಲ್ಕೆ, ಕಾರ್ಕಳ ತಾಲ್ಲೂಕು ಹೊಸ್ಮಾರಿನ ರಾಘವೇಂದ್ರ ಕಾಮತ್, ನಂದಳಿಕೆಯ ಲೀಲಾಧರ ಶೆಟ್ಟಿಗಾರ್, ಬೆಳ್ತಂಗಡಿ ತಾಲ್ಲೂಕು ವೇಣೂರು ಮಿತ್ತಲಾಡಿಯ ಸೋಮನಾಥ ಪೂಜಾರಿ ಅವರನ್ನು ಅಭಿನಂದಿಸಲಾಯಿತು.  ವ್ಯಸನ ಮುಕ್ತರ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಆಳ್ವಾಸ್ ಸಾಂಸ್ಕøತಿಕ ತಂಡದಿಂದ ವಿವಿಧ ಪ್ರದರ್ಶನಗಳು ನಡೆದವು. 



ಮಾದಕ ವ್ಯಸನದಿಂದ ಕುಟುಂಬದ ಮೇಲೆ ಬೀರುವ ದುಷ್ಪರಿಣಾಮ ಕುರಿತು ಮಂಗಳೂರಿನ ಬೈಕಾಡಿಯ ಮಂದಾರ ತಂಡವು ‘ಮಾದಕ- ಮಾರಕ' ಕಿರು ನಾಟಕ ಪ್ರದರ್ಶನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಸಾಹಿತಿ ಸತೀಶ ಕುಲಕರ್ಣಿ ಅವರ 'ಕಟ್ಟುತ್ತೇವ ನಾವು ಕಟ್ಟುತ್ತೇವ' ಹಾಡಿನೊಂದಿಗೆ ಭರವಸೆ ಮೂಡಿಸಿದರು.



ಎಂಸಿಸಿ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಮಹಾಬಲ ಕುಲಾಲ್, ಸಮಾಲೋಚಕಿ ಸುಮನ್ ಪಿಂಟೊ, ಉಡುಪಿ ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಮಣಿಪಾಲ ಕೆಎಂಸಿಯ ಮನೋ ಸಾಮಾಜಿಕ ತಜ್ಞ ಪ್ರವೀಣ್ ಜೈನ್, ಆಳ್ವಾಸ್ ಪುರ್ನಜನ್ಮದ ವೈದ್ಯಕೀಯ ನಿರ್ದೇಶಕ ಡಾ.ವಿನಯ್ ಆಳ್ವ ಇದ್ದರು. ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕಿ ಡಾ.ಮಧುಮಾಲಾ ವಂದಿಸಿದರು.


ಗೋಷ್ಠಿಗಳು: 

ಬಳಿಕ ನಡೆದ ಗೋಷ್ಠಿಯಲ್ಲಿ ಮಾತನಾಡಿದ  ಉಡುಪಿ ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ‘ವ್ಯಕ್ತಿ ಎಷ್ಟೇ ಒಳ್ಳೆಯವನ್ನಾಗಿದ್ದರೂ, ಮದ್ಯಪಾನ ಸೇವನೆಯಿಂದ ರಾಕ್ಷಸನಾಗುತ್ತಾನೆ. ಕುಡಿತದಿಂದ ಹೊರಬಂದರೂ, ಪ್ರಭಾವ ತನ್ನ ಮಕ್ಕಳ ಜೀವನದ ಮೇಲೂ ಬೀರುತ್ತದೆ. ಮಕ್ಕಳ ಮೇಲಿನ ಕಾಳಜಿ ಕಡಿಮೆಯಾದಾಗ, ಮಕ್ಕಳಿಗೂ ತಂದೆ-ತಾಯಿ ಮೇಲಿನ ಬದ್ಧತೆ ಕಡಿಮೆಯಾಗುತ್ತದೆ. ಕುಡಿತದಿಂದ ಹೊರಗೆ ಬಂದಾಗ ಅದೇ ಮಕ್ಕಳಿಗೆ ಕೊಡುವ ದೊಡ್ಡ ಆಸ್ತಿ’ ಎಂದರು.  ಖಿನ್ನತೆ, ಮಾನಸಿಕ ಕುಗ್ಗುವಿಕೆ, ಒತ್ತಡಕ್ಕೆ ಸಿಲುಕುವ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದು, ನಮಗೆ ಏನೇ ಆದ್ರೂ ತಂದೆ ತಾಯಿ ನಮ್ಮೊಂದಿಗೆ ಇದ್ದಾರೆ ಎಂಬ ನಂಬಿಕೆ ಮಕ್ಕಳಿಗೆ ಬರುವಷ್ಟು ವ್ಯಸನಿಗಳು ಬದಲಾಗಬೇಕು’ ಎಂದರು.



ಕೆ.ಎಂ.ಸಿ ಮಣಿಪಾಲದ ಮನೋ ಸಾಮಾಜಿಕ ತಜ್ಞ  ಪ್ರವೀಣ್ ಜೈನ್  ಮಾತನಾಡಿ, ‘ವ್ಯಸನ ಒಂದು ರೋಗ, ರೋಗಿಯನ್ನು ಸರಿಪಡಿಸುವುದಲ್ಲ ಮುಖ್ಯವಾಗಿ ರೋಗವನ್ನು ಸರಿಪಡಿಸಬೇಕು. ಒಬ್ಬ ವ್ಯಸನಿ ಎಷ್ಟೇ ಚಿಕಿತ್ಸೆ ನೀಡಿದರೂ ಪುನಃ, ಪುನಃ ಕುಡಿಯಲು ಬಯಸುತ್ತಾನೆಂದರೆ, ಪ್ರಮುಖವಾಗಿ ನನ್ನಿಂದ ಕುಡಿತ ಬಿಡಲು ಸಾಧ್ಯವಿಲ್ಲ ಎಂಬ ನಕಾರಾತ್ಮಕ ಭಾವನೆ ಕಾರಣ. ವಿಫಲ ಪ್ರಯತ್ನಗಳು, ಸೂಕ್ತ ಕಾಲದಲ್ಲಿ  ಚಿಕಿತ್ಸೆಯ ಅಲಭ್ಯತೆಯೂ ಕಾರಣವಾಗುತ್ತವೆ’ ಎಂದರು. 



‘ಒಬ್ಬ ವ್ಯಕ್ತಿಯ ಚೇತರಿಕೆಯಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಮಾತ್ರವಲ್ಲ ಅದರೊಂದಿಗೆ ಮನೆಯವರ ಪಾತ್ರ, ಸಮಾಜದ ಪಾತ್ರ ಕೂಡ ಮುಖ್ಯ, ಪರಿವರ್ತನೆಗೊಂಡ ವ್ಯಸನಿಯೊಂದಿಗೆ ನಕಾರಾತ್ಮಕ ಚಿಂತನೆ ಬಾರದಂತೆ ಕಾಲಕಳೆಯುವ ಮನೋಭಾವ ನಮ್ಮಲ್ಲಿರಬೇಕು’ ಎಂದರು.


ಆಳ್ವರು ಹೇಳಿದ ಎರಡು ಸೀಟಿನ ಕತೆ


‘ಈ ಹಿಂದೆ ನಾನು ಬೆಂಗಳೂರಿಗೆ ಆಗಾಗ್ಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದೆನು. ಮದ್ಯ, ಗುಟ್ಕಾ, ಸಿಗರೇಟು ಇತ್ಯಾದಿ ವ್ಯಸನಿಗಳು ನನ್ನ ಬಳಿ ಕುಳಿತುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ನನ್ನ ಪಕ್ಕದ ಆಸನವನ್ನೂ ಕಾಯ್ದಿರಿಸಿಕೊಳ್ಳುತ್ತಿದೆನು. ವ್ಯಸನಿಗಳು ಕುಳಿತರೆ ನನಗೆ ನಿದ್ದೆ ಬರುತ್ತಿರಲಿಲ್ಲ’ ಎಂದು ಡಾ.ಎಂ. ಮೋಹನ ಆಳ್ವ ಹೇಳಿದರು. 



‘ಆದರೆ, ಆಗ ನನಗೆ ಬಹುವಾಗಿ ಕಾಡುತ್ತಿದ್ದ ವಿಚಾರವು ವ್ಯಸನಿಗಳ ಕುಟುಂಬಸ್ಥರ ಪರಿಸ್ಥಿತಿ. ವ್ಯಸನಿಯ ಪತ್ನಿ ಹೇಗೆ ಹಾಸಿಗೆ ಹಂಚಿಕೊಳ್ಳಬೇಕು. ಮಕ್ಕಳು ಹೇಗೆ ಜೊತೆಗಿರಬೇಕು? ಎಂಬುದೇ ಮನಸ್ಸಿಗೆ ನೋವುಂಟು ಮಾಡುತ್ತಿತ್ತು’ ಎಂದು ಖೇದ ತೋಡಿಕೊಂಡರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top