ಹಬ್ಬದ ಸಡಗರವೆನ್ನುವುದು ಕೇವಲ ನಮ್ಮ ನಮ್ಮ ಮನೆಗಳಿಗೆ ಮಾತ್ರ ಸೀಮಿತವಾಗಿರಬಾರದು, ಖುಷಿಯನ್ನು ಹಂಚುವಲ್ಲಿ ಜಿಪುಣತನವಿರಬಾರದು ಅಲ್ಲವೇ? ಈ ಸುಗ್ಗಿ ಸಂಕ್ರಾಂತಿ ಎನ್ನುವುದು ಒಂದು ರೀತಿ ಭಾವನೆಗಳನ್ನು ಬೆಸೆಯುವುದು ಎಂದರೆ ತಪ್ಪಿಲ್ಲ, ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎನ್ನುವ ನಾಣ್ಣುಡಿಯಂತೆ ಎಳ್ಳು ಬೆಲ್ಲವನ್ನು ಸಡಗರದಿ ಎಲ್ಲರ ಮನೆಗೂ ಹಂಚುವ ನೆಪದಲ್ಲಾದರೂ ಒಬ್ಬರ ಮನೆಗೆ ಇನ್ನೊಬ್ಬರು ಹೋಗಿ ಕೊಟ್ಟು ಬರುವಾಗ ಹೊಸ ಹೊಸ ವ್ಯಕ್ತಿಗಳ ಪರಿಚಯ ಹೊಸ ಹೊಸ ಬಾಂಧವ್ಯಗಳು ಬೆಸೆಯುವುದರಲ್ಲಿ ಸಂದೇಹವಿಲ್ಲ.
ಅದರಲ್ಲೂ ಹೆಣ್ಣುಮಕ್ಕಳಿರುವ ಮನೆಯಲ್ಲಿ ಸಂಭ್ರಮ ತುಸು ಹೆಚ್ಚೇ ಎನ್ನಬಹುದು. ಹಬ್ಬ ಹರಿದಿನ ಎಂದರೆ ವಿಶೇಷವಾಗಿ ಶೃಂಗರಿಸಿಕೊಂಡು ನೋಡೇ ನನ್ನ ಬಟ್ಟೆ ಎಷ್ಟು ಚೆಂದ ಇದೆ ಎಂದು ನುಲಿಯುತ್ತಿದ್ದ ಬಾಲ್ಯಗಳು ಇಂದಿಗೆ ಕೊಂಚಮಟ್ಟಿಗೆ ಕಡಿಮೆಯಾಗಿದೆ ಎಂದರೂ ಅಲ್ಲಲ್ಲಿ ಇನ್ನೂ ನಮ್ಮ ಹಬ್ಬಗಳ ಸಂಸ್ಕೃತಿ ಉಳಿದಿದೆ ಎಂದರೆ ತಪ್ಪಾಗಲಾರದು.
ಸಾಮಾನ್ಯವಾಗಿ ಕೆಲವೊಂದು ಹಬ್ಬ ಹರಿದಿನಗಳು ನಮ್ಮ ಮನೆಗಷ್ಟೇ ಸೀಮಿತವಾಗಿರುತ್ತದೆ, ಇನ್ನು ಕೆಲವೊಂದು ಹಬ್ಬಗಳಲ್ಲಿ ಅವರನ್ನು ಕರೆದು ಅರಿಶಿನ ಕುಂಕುಮ ಕೊಡುವ ಪದ್ದತಿಯಿರುತ್ತದೆ, ಆದರೆ ನಾವೇ ಇನ್ನೊಬ್ಬರ ಮನೆಗೆ ಹೋಗಿ ಭಾಂದವ್ಯ ಬೆಸೆಯುವ ಎಳ್ಳು ಬೆಲ್ಲವನ್ನು ಹಂಚಿ ಬರುವ ಹಬ್ಬವೆಂದರೆ ಇದುವೇ ನಮ್ಮ ಸಂಕ್ರಾಂತಿ. ಇದು ಕೇವಲ ನಮ್ಮ ಮನೆಗಷ್ಟೇ ಸೀಮಿತವಾದ ಹಬ್ಬವಲ್ಲ, ಎಲ್ಲರೂ ಒಟ್ಟಾಗಿ ಸೇರಿ ಮಾಡುವ ಸಂಕ್ರಾಂತಿ ಜಾತ್ರೆ ಎಂದರೆ ಸರಿಯಾಗುತ್ತದೆ.
ದನ ಕರುಗಳ ಮೈ ತೊಳೆದು ಚೆಂದದಿ ಅಲಂಕರಿಸಿ ಕಿಚ್ಚಾಯಿಸುವ ಜಾಗಕ್ಕೆ ಕರೆದುಕೊಂಡು ಹೋಗುತ್ತಿದ್ದರೆ ಅದನ್ನು ಕಣ್ತುಂಬಿಕೊಳ್ಳುವ ಸಂಭ್ರಮವೇ ಬೇರೆಯಿತ್ತು, ಇತ್ತೀಚಿನ ದಿನಗಳಲ್ಲಿ ಅದೆಲ್ಲ ಕಡಿಮೆಯಾಗಿದೆ, ಈಗ ಯಾವುದೂ ಮೊದಲಿನಂತಿಲ್ಲ, ಆದರೂ ಕೆಲವರ ಮನೆಯಲ್ಲಿ ಇನ್ನೂ ದನ ಕರುಗಳನ್ನು ಈಗಲೂ ಅಲಂಕರಿಸಿ ಶಾಸ್ತ್ರ ಸಂಪ್ರದಾಯಗಳನ್ನು ಆಚರಿಸುವ ಪದ್ದತಿ ಹಾಗೆ ಇದೆ, ಇನ್ನೂ ನಮ್ಮ ಸಂಸ್ಕೃತಿ ಪರಂಪರೆಗಳನ್ನು ರೂಢಿಯಲ್ಲಿರಿಸಿಕೊಂಡಿರುವವರು ಇದ್ದಾರೆ, ಆದ್ದರಿಂದಲೇ ನಮ್ಮ ನೆಲದ ಹಬ್ಬಗಳಿಗೆ ಹಬ್ಬದ ವಾತವರಣಕ್ಕೆ ವಿಶೇಷ ಕಳೆಯಿರುತ್ತದೆ ಎನ್ನಬಹುದು.
ಸೂರ್ಯದೇವನು ದಕ್ಷಿಣದಿಂದ ಉತ್ತರದೆಡೆಗೆ ತನ್ನ ಪಥವನ್ನು ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸುವ ಪುಣ್ಯ ಕಾಲವೇ ಉತ್ತರಾಯಣ. ಮಾಗಿಯ ಚಳಿಯಿಂದ ಪ್ರಕೃತಿಯಲ್ಲಿ ಗಿಡ ಮರಗಳು ತನ್ನ ಕಳೆಯನ್ನು ಕಳೆದುಕೊಂಡಿದ್ದು ಉತ್ತರಾಯಣದಲ್ಲಿ ಭಾಸ್ಕರನ ಕಿರಣಗಳ ಸ್ಪರ್ಶದಿಂದ ಲವಲವಿಕೆಯಿಂದ ಕೂಡಿ ಹಸಿರಿನಿಂದ ಕಂಗೊಳಿಸಲು ಕಾತರದಿಂದ ಕಾಯುತ್ತಿರುತ್ತವೆ. ಹಾಗೆ ರೈತನಿಗೆ ಇದು ಸುಗ್ಗಿ ಕಾಲ, ಸಮೃದ್ಧ ಫಸಲಿನಿಂದ ಭೂ ತಾಯಿಯು ಕಂಗೊಳಿಸುವ ಹರ್ಷ ಕಾಲ.
ಸಂಕ್ರಾಂತಿ ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸುವ ಹಬ್ಬವಾಗಿದ್ದು ಪ್ರಕೃತಿಯನ್ನು ಮತ್ತು ಜಾನುವಾರುಗಳನ್ನು ಆರಾಧಿಸುವ ಹಬ್ಬವಾಗಿದೆ, ಇದು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವೂ ಹೌದು, ಆದರೆ ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕವಾದ ಹಬ್ಬ ಆಚರಿಸುವ ಬದಲು ಕೇವಲ ಎಳ್ಳು ಬೆಲ್ಲ ಕಬ್ಬು ಹಂಚಿದರೆ ಸಂಕ್ರಾತಿಯ ಹಬ್ಬ ಆಚರಿಸಿದಂತೆ ಎಂಬ ಮನಸ್ಥಿತಿ ತಲುಪಿರುವ ನವ ನಾಗರೀಕರಿಗೆ ಇದರ ತಿಳುವಳಿಕೆಯ ಅವಶ್ಯಕತೆಯಿದೆ ಎನಿಸುತ್ತದೆ. ಕೇವಲ ಯಾಂತ್ರಿಕತೆಯ ಪರಿಧಿಯಲ್ಲಿ ಈ ಹಬ್ಬಗಳು ನಡೆದುಕೊಂಡು ಬರುತ್ತಿವೆ ಎಂದರೂ ಸರಿಯೇ.
ಕೆಲಸದ ಒತ್ತಡಗಳ ನಡುವೆ ಹಿಂದಿನ ಕಾಲದಲ್ಲಿ ಇಂತಿಷ್ಟೇ ಪ್ರಮಾಣದಲ್ಲಿ ಎಳ್ಳು ಬೆಲ್ಲ ಎಲ್ಲವನ್ನೂ ಬೆರೆಸಿ ಮನೆಯಲ್ಲೇ ಶುಚಿಯಿಂದ ರುಚಿಯಾಗಿ ತಯಾರಿಸುತ್ತಿದ್ದ ಎಳ್ಳು ಬೆಲ್ಲವು ಇಂದು ಮಾರುಕಟ್ಟೆ ಅಥವಾ ಅಂಗಡಿಗಳಿಂದ ತಂದು ಹಂಚುವುದು ರೂಡಿಯಾಗಿದೆ, ಸದ್ಯ ಮಾಡಲು ಸಮಯವಿಲ್ಲ ಎಂದು ಹಬ್ಬವನ್ನೂ ಆಚರಿಸದೆ ಇರುವವರು ಕಡಿಮೆ, ಇದು ಪುಣ್ಯವಷ್ಟೇ, ಯಾಕೆ ಈ ಮಾತು ಎಂದರೆ ನಮ್ಮ ಹಿಂದೂ ಸಾಂಪ್ರದಾಯಿಕದ ಪ್ರಕಾರ ಯುಗಾದಿ ಹಬ್ಬ ನಮಗೆಲ್ಲ ಸಂಭ್ರಮ ತರುವ ಹೊಸ ವರ್ಷ, ಆದರೆ ಕೆಲವರು ಅಂದೂ ಕೂಡ ಕೇವಲ ಅಲಂಕಾರಕ್ಕಷ್ಟೇ ಯುಗಾದಿ ಸಂಭ್ರಮಿಸಿ ಮನೆಯಲ್ಲಿ ಸಿಹಿಯನ್ನೂ ಮಾಡದೆ ಹೊರಗಿನ ಹೋಟೆಲ್ ಗಳಿಗೆ ಹೋಗಿ ತಿಂದು ಬರುವುದು ನೋಡಿದಾಗ ಸಿದ್ದವಿರುವ ಎಳ್ಳು ಬೆಲ್ಲವನ್ನಾದರೂ ತಂದು ಆಚರಿಸುವ ಪದ್ದತಿಯನ್ನು ಇಟ್ಟುಕೊಂಡಿದ್ದಾರೆಂದು ಸಂತೋಷಪಡಬೇಕು.
ಏನೇ ಆಗಲಿ ನಮ್ಮ ಸಂಸ್ಕೃತಿ, ನಮ್ಮ ಪರಂಪರೆ, ನಮ್ಮ ನಾಡು ನುಡಿ ಎಲ್ಲವೂ ಹೆಮ್ಮೆಯ ಪ್ರತೀಕ, ನಾವು ಎಷ್ಟೇ ವಿದ್ಯಾವಂತರಾಗಿ ನಾಗರೀಕತೆಯ ಸೋಗಿಗೆ, ನಮ್ಮದಲ್ಲದ ಆಚರಣೆಗೆ ಮರುಳಾದರೂ, ಎಲ್ಲೇ ಇದ್ದರೂ ನಮ್ಮ ಹಿಂದಿನವರು ನಡೆಸಿಕೊಂಡು ಬಂದಿರುವ ಸಂಪ್ರದಾಯಬದ್ದವಾದ ಹಬ್ಬ ಹರಿದಿನಗಳನ್ನು ಆಚರಿಸುವುದನ್ನು ನಿಲ್ಲಿಸಬಾರದು, ಹಾಗೆ ಅದು ಕೇವಲ ಯಾಂತ್ರಿಕತೆಯಾಗಿರದೆ ಮುಕ್ತ ಮನಸ್ಸಿನಿಂದ ಎಲ್ಲರೊಡನೆ ಒಟ್ಟಾಗಿ ಹಬ್ಬ ಆಚರಿಸುವುದರಿಂದ ಸುಮನಸುಗಳ ಭಾಂದವ್ಯ ಬೆಸೆಯಲು ಸಾಧ್ಯವಾಗುವುದು.
ಕುಣಿಗಲ್, ತುಮಕೂರು ಜಿಲ್ಲೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ