ಬೆಂಗಳೂರು: 26, 27ರಂದು ಶ್ರೀ ತ್ಯಾಗರಾಜ, ಶ್ರೀ ಪುರಂದರ ಆರಾಧನಾ ಉತ್ಸವ

Upayuktha
0

     ಸಂಗೀತ ಸೇವೆ- ಗೋಷ್ಠಿ ಗಾಯನ- ಸನ್ಮಾನ- ಪ್ರವಚನ- ಕೃತಿ ಲೋಕಾರ್ಪಣೆ

ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದಿಂದ ಆಯೋಜನೆ 






ಬೆಂಗಳೂರು: ರಾಜಧಾನಿಯ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯವು ಜ. 26 ಮತ್ತು 27ರಂದು ಸಂತ ಶ್ರೀ ತ್ಯಾಗರಾಜ ಸ್ವಾಮಿಗಳ ಮತ್ತು ಶ್ರೀ ಪುರಂದರದಾಸರ ಆರಾಧನಾ ಸಂಗೀತೋತ್ಸವ ಹಮ್ಮಿಕೊಂಡಿದೆ.


ನಗರದ ಬಸವನಗುಡಿಯಲ್ಲಿರುವ ಉಡುಪಿ ಶ್ರೀಮನ್ ಮಧ್ವಾಚಾರ್ಯ ಮಹಾ ಸಂಸ್ಥಾನ ಪುತ್ತಿಗೆ ಮಠದ (ಗೋವರ್ಧನ ಗಿರಿ ದೇಗುಲ) ಸಭಾಂಗದಲ್ಲಿ 26ರ ಸಂಜೆ 4ಕ್ಕೆ ಉತ್ಸವಚು ಕಿರಿಯ ವಿದ್ಯಾರ್ಥಿಗಳ ಹರಿದಾಸರ ದೇವರನಾಮ ಗೋಷ್ಠಿ ಗಾಯನದಿಂದ ವಿಧ್ಯುಕ್ತವಾಗಿ ಚಾಲನೆ ಗೊಳ್ಳಲಿದೆ. ಸಂಜೆ 5.45 ರಿಂದ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಲಿದ್ದಾರೆ. ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಶ್ರೀಕಂಠ ಭಟ್ ನೇತೃತ್ವದಲ್ಲಿ ರಾತ್ರಿ 7.45ಕ್ಕೆ ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಗೋಷ್ಠಿ ಗಾಯನ ನೆರವೇರಲಿದೆ.


ಸಂಕೀರ್ತನ ಉತ್ಸವ:

27ರ ಬೆಳಗ್ಗೆ 7.30 ಕ್ಕೆ ಗೋವರ್ಧನ ಗಿರಿಯ ಶ್ರೀ ಕೃಷ್ಣ ದೇವರಿಗೆ ದೇವರನಾಮಗಳ ಸಂಕೀರ್ತನ ಉತ್ಸವ ಸಮರ್ಪಣೆಯಾಗಲಿದೆ. 8.30ರಿಂದ ಹಿರಿಯ ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತ ಗಾಯನ ನೆರವೇರಲಿದೆ.


ಬೆಳಗ್ಗೆ 9.30ಕ್ಕೆ  ಶ್ರೀ ತ್ಯಾಗರಾಜ ಸ್ವಾಮಿಗಳ ‘ಘನರಾಗ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ’ ಸಂಪನ್ನಗೊಳ್ಳಲಿದೆ. ಹಿರಿಯ ಗಾಯಕರು, ವಿದ್ವಾಂಸರು ಏಕ ಕಂಠದಲ್ಲಿ ಪಂಚರತ್ನ ಕೃತಿಗಳನ್ನು ಹಾಡಲಿರುವುದು ವಿಶೇಷ.


ಚಿತ್ರಗಳು: (ಎಡದಿಂದ ಬಲಕ್ಕೆ) ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್, ಪಂಡಿತ  ಪವಮಾನಾಚಾರ್ ಕಲ್ಲಾಪುರ, ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ, ಪಂಡಿತ್ ಗುರುಮೂರ್ತಿ ವೈದ್ಯ, ವಿದ್ವಾನ್ ಎಚ್.ಎಸ್. ಸುಧೀಂದ್ರ


ಪುಸ್ತಕ ಲೋಕಾರ್ಪಣೆ- ಗಣ್ಯರಿಗೆ ಸನ್ಮಾನ :

ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ಪ್ರಕಟಿಸಿರುವ, ಹರಿದಾಸರ ಪ್ರಚಲಿತ ದೇವರನಾಮಗಳ ಪುಸ್ತಕ ‘ಭಕ್ತಿ ಸನ್ನುತಿ- ಭಾಗ 2’ ಲೋಕಾರ್ಪಣೆ 27ರ ಬೆಳಗ್ಗೆ 11.30ಕ್ಕೆ ನೆರವೇರಲಿದೆ. ಉಡುಪಿ ಭಂಡಾರಕೇರಿ ಮಹಾ ಸಂಸ್ಥಾನ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭ ಖ್ಯಾತ ಅಧ್ಯಾತ್ಮ ಪ್ರವಚನಕಾರ, ಪಂಡಿತ  ಪವಮಾನಾಚಾರ್ ಕಲ್ಲಾಪುರ, ನಾಡಿನ ಹಿರಿಯ ಮೃದಂಗ ವಿದ್ವಾಂಸ ಎಚ್.ಎಸ್. ಸುಧೀಂದ್ರ ಖ್ಯಾತ ತಬಲಾ ವಾದಕ ಪಂಡಿತ್ ಗುರುಮೂರ್ತಿ ವೈದ್ಯ ಅವರಿಗೆ ಸನ್ಮಾನಿಸಲಾಗುವುದು. ಗಾಯನ ಸಮಾಜದ ಅಧ್ಯಕ್ಷ ಡಾ. ಎಂ.ಆರ್.ವಿ. ಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


ಸಂಜೆ 4ಕ್ಕೆ ವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ಹರಿದಾಸರ ದೇವರನಾಮ ಗೋಷ್ಠಿ ಗಾಯನವಿದೆ. 5ಕ್ಕೆ ದೇವರನಾಮ ಉಚಿತ ಕಲಿಕಾ ಶಿಬಿರದ ಸಮಾರೋಪ ಸಮಾರಂಭ ನೆರವೇರಲಿದೆ. ಶಿಬಿರದಲ್ಲಿ ರಾಮದೇವರ ಕುರಿತಾದ ದೇವರನಾಮಗಳನ್ನು ಕಲಿತ ನೂರಾರು ನಾಗರಿಕರು ಸಾಮೂಹಿಕ ಗಾಯನ ಪ್ರಸ್ತುತಿ ಮಾಡಲಿದ್ದಾರೆ. ಖ್ಯಾತ ವಾಗ್ಮಿ, ಪಂಡಿತ ಪವಮಾನಾಚಾರ್ಯ ಕಲ್ಲಾಪುರ ಅವರು ಪ್ರವಚನ ನೀಡಲಿದ್ದಾರೆ.


ಎರಡೂ ದಿನಗಳ ಕಾರ್ಯಕ್ರಮದಲ್ಲಿ ಗಾಯಕರಿಗೆ ಮತ್ತು ವಿದ್ಯಾರ್ಥಿಗಳ ಗೋಷ್ಠಿ ಗಾಯನಗಳಿಗೆ ವಿದ್ವಾನ್ ಮೈಸೂರು ಸಂಜೀವ್ ಕುಮಾರ್ (ವಯೋಲಿನ್) ವಿದ್ವಾನ್ ಮೈಸೂರು ಪಿ.ಎಸ್. ಶ್ರೀಧರ್ (ಮೃದಂಗ) ಮತ್ತು ಪಂಡಿತ್ ಗುರುಮೂರ್ತಿ ವೈದ್ಯ (ತಬಲಾ) ಸಹಕಾರ ನೀಡಲಿದ್ದಾರೆ . ಸಂಗೀತ ಆಸಕ್ತರು ಭಾಗವಹಿಸಬೇಕು ಎಂದು ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ತಿಳಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top