ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ
ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ||
ಈ ಸಂಸ್ಕೃತ ಸಾಲುಗಳ ಅರ್ಥವೇನೆಂದರೆ ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಎಲ್ಲಿ ಸ್ತ್ರೀಯರು ಅವಮಾನಗೊಳಿಸಲ್ಪಡುತ್ತಾರೊ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂದು. ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ. ಪ್ರಕೃತಿಯನ್ನು, ಭೂಮಿಯನ್ನು, ನದಿಗಳನ್ನು, ಪರ್ವತಗಳನ್ನು ಅಷ್ಟೇ ಅಲ್ಲ ಈ ಪ್ರಪಂಚದ ಅತ್ಯಂತ ಶ್ರೇಷ್ಠ ಸಂಗತಿಗಳೆಲ್ಲವನ್ನೂ ಹೆಣ್ಣೆಂದು ಭಾವಿಸಿಯೇ ಗೌರವಿಸುವುದು ಭಾರತೀಯ ಪರಂಪರೆಯ ಶ್ರೇಷ್ಠತೆ. ಈ ಪ್ರಕೃತಿ ಮಾತೆ ಹೆಣ್ಣು. ಈ ಭೂಮಿ ಹೆಣ್ಣು. ನಮ್ಮ ಭಾರತ ಮಾತೆ ಹೆಣ್ಣು. ನಮ್ಮ ಕನ್ನಡ ಮಾತೆ ಹೆಣ್ಣು ಎಂದು ಹೋಲಿಕೆಗಳನ್ನು ಮಾಡಿ ಯಾವಾಗಲೂ ಹೇಳುತ್ತೇವೆ. ಹೆಣ್ಣು ಸಂಸಾರದ ಕಣ್ಣು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಭೇಟಿ ಬಚಾವೋ ಭೇಟಿ ಪಡಾವೋ ಎಂಬ ಎಲ್ಲಾ ಘೋಷ ವಾಕ್ಯಗಳು ಹೆಣ್ಣುಮಕ್ಕಳ ಪ್ರಾಮುಖ್ಯತೆಯನ್ನು ಕುರಿತು ಹೇಳುತ್ತವೆ. ವಿಶ್ವದ ಅಧಿದೇವತೆ ಹೆಣ್ಣು, ವಿಶ್ವ ಮಾತೆ ಹೆಣ್ಣು.
ಮಹಾಕಾವ್ಯ ರಾಮಾಯಣದ ಸನ್ನಿವೇಶವೊಂದರಲ್ಲಿ ಸೀತೆಯ ಆಸೆ ಪೂರೈಸಲೆಂದು ಪತಿ ಶ್ರೀರಾಮನು ಮಾಯಾ ಜಿಂಕೆಯನ್ನು ಬೆನ್ನತ್ತಿ ಹೋಗಿದ್ದನು. ಮಹಾಕಾವ್ಯ ಮಹಾಭಾರತ ಸನ್ನಿವೇಶವೊಂದರಲ್ಲಿ ಭೀಮನು ದ್ರೌಪದಿಯ ಆಜ್ಞೆಯ ಕಾರಣದಿಂದಾಗಿ ದುಶ್ಯಾಸನನ ಎದೆ ಬಗೆದು ರಕ್ತವನ್ನು ಆಕೆಯ ಮುಡಿಗೆ ನೇವರಿಸಿ ತಾನು ಮಾಡಿದ ಪ್ರಮಾಣವನ್ನು ಪೂರ್ಣಗೊಳಿಸಿದ್ದನು. ವೇದಗಳ ಕಾಲದಲ್ಲಿ ಅಪಲಾ , ಸುಭದ್ರ, ಗಾರ್ಗಿ, ಮೈತ್ತೇಯಿ, ಸಿಕತಾ, ಘೋಷ, ವಿಶ್ವಾವರ , ನಿವಾವರಿ , ಲೋಪಾಮುದ್ರ, ಮುಂತಾದ ಮಹಿಳೆಯರು ವಿದ್ವತ್ತಿನಲ್ಲಿ ಸರ್ವ ಸ್ವತಂತ್ರವನ್ನು ಪಡೆದಿದ್ದರು. ಒಂದು ಕಾಲದಲ್ಲಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ವಿಚಾರಗಳಲ್ಲಿ ಸ್ತ್ರೀಯರೂ ಪರಿಗಣಿಸಲ್ಪಡುತ್ತಿದ್ದರು. ಮಹಾಕಾವ್ಯಗಳ ಕಾಲದಲ್ಲಿ ಅನೇಕ ಸ್ತ್ರೀಯರು ರಾಜಮಾತೆ ಎಂಬ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. ರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಮಾತೆ ಜೀಜಾಬಾಯಿ ಸೇರಿದಂತೆ ಅನೇಕ ವೀರ ಮಾತೆಯರು ನಮಗೆ ಸಾಕ್ಷಿಯಾಗಿದ್ದಾರೆ.
ಇಂದು ನಾವು ಆಧುನಿಕ ವೈಜ್ಞಾನಿಕ ತಂತ್ರಜ್ಞಾನದ ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ಇಪ್ಪತ್ತೊಂದನೇ ಶತಮಾನದ ಸಂಕೀರ್ಣ ಜಗತ್ತು ವಿಶ್ವ ಗ್ರಾಮವೆನಿಸಿದೆ. ಶಿಕ್ಷಣ ತಜ್ಞರಾದ ರಾಧಾಕೃಷ್ಣನ್ ರವರು ಹೇಳುವಂತೆ " ಮಾನವ ಇಂದು ಆಕಾಶದಲ್ಲಿ ಹಕ್ಕಿಯಂತೆ ಹಾರುವುದನ್ನು ಕಲಿತ, ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತ. ಆದರೆ ಮೌಲ್ಯಗಳುಳ್ಳು ಮಾನವನಾಗಿ ಬದುಕುವುದನ್ನು ಕಲಿಯಲಿಲ್ಲ'' ಎಂಬ ಮಾತು ಮಾನವನ ಇಂದಿನ ಬದುಕನ್ನು ಪ್ರಶ್ನಿಸುತ್ತದೆ. ಸಂಕೀರ್ಣ ಜಗತ್ತಿನ ಹೆಣ್ಣು ಮಗಳು ಇಂದು ಸಂಕಷ್ಟದಲ್ಲಿದ್ದಾಳೆ. ಶೋಷಣೆಗೆ ಒಳಗಾಗುವವಳಿದ್ದಾಳೆ. ವಿವಿಧ ರೀತಿಯ ಕಿರುಕುಳಗಳನ್ನು ಅನುಭವಿಸುತ್ತಿದ್ದಾಳೆ. ಮುಖ್ಯವಾಗಿ ಸಮಾನತೆ ಸ್ವಾತಂತ್ರ್ಯ ಇದ್ದರೂ ಬಳಸಲು ಸಾಧ್ಯವಾಗದಿರುವುದು.
ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ಕಿರುಕುಳ, ಹೆಣ್ಣಿನ ಮೇಲಾಗುತ್ತಿರುವ ಶೋಷಣೆಯನ್ನು ತಪ್ಪಿಸಲು ಭಾರತ ಸರ್ಕಾರ 2008 ರಲ್ಲಿ ಜನವರಿ 24 ನ್ನು ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸುವ ಮೂಲಕ ಹೆಣ್ಣು ಮಕ್ಕಳಿಗಿರುವ ಸಮಸ್ಯೆಗಳ ನಿವಾರಣೆಯಲ್ಲಿ ಎಲ್ಲರೂ ಭಾಗವಹಿಸಿ ಪರಿಹಾರ ಒದಗಿಸುವ ಸಲುವಾಗಿ ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಘೋಷಿಸಿ, ಉದ್ಘಾಟಿಸಿತು. ಅಂದಿನಿಂದ ಜನವರಿ 24, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಹೆಣ್ಣು ಮಕ್ಕಳ ರಕ್ಷಣೆ, ಅಭಿವೃದ್ಧಿ, ಬೆಳವಣಿಗೆ ವಿಚಾರದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಪುರುಷನ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಪ್ರಮುಖ ಪಾತ್ರ ವಹಿಸುತ್ತಿರುವ ಹೆಣ್ಣನ್ನು ಗೌರವಿಸುವುದಕ್ಕಾಗಿ ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಅದುವೇ ಜನವರಿ 24 ರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಈ ಕಾರ್ಯಕ್ರಮದ ಉದ್ದೇಶವನ್ನು ತಿಳಿಯುವುದಾದರೆ ದೇಶದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಹೆಣ್ಣುಮಕ್ಕಳ ಆರೋಗ್ಯ, ಪೋಷಣೆ ಮತ್ತು ರಕ್ಷಣೆ ಅದಲ್ಲದೆ ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಜಾಗೃತಿ ಅಭಿಯಾನವನ್ನು ಆಚರಿಸಲಾಗುತ್ತದೆ.
ಇಪ್ಪತ್ತೊಂದನೇ ಶತಮಾನದಲ್ಲಿ ಹೆಣ್ಣು ಕಾಲಿಡದ ಕ್ಷೇತ್ರಗಳೇ ಇಲ್ಲವೆನ್ನಬಹುದು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ, ವೈಜ್ಞಾನಿಕ, ವೈಮಾನಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ್ದಾಳೆ. ಸೈನಿಕಳಾಗಿ, ಆರಕ್ಷಕಳಾಗಿ, ಅಧಿಕಾರಿಯಾಗಿ , ಚಾಲಕಳಾಗಿ, ಮಾಧ್ಯಮ ಮಿತ್ರಳಾಗಿ, ಶಿಕ್ಷಕಿಯಾಗಿ, ವಿಜ್ಞಾನಿಯಾಗಿ, ' ವೈದ್ಯಳಾಗಿ ಮನೆಯನ್ನು ಸಲಹುವವಳಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾಳೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸಹಧರ್ಮಿಣಿಯಾಗಿ, ಮಗಳಾಗಿ, ಸೊಸೆಯಾಗಿ, ಅತ್ತಿಗೆ-ನಾದಿನಿಯಾಗಿ, ಅಕ್ಕ- ತಂಗಿಯಾಗಿ, ಎಲ್ಲರನ್ನೂ , ಎಲ್ಲವನ್ನೂ ಸಹಿಸುವ ಅಮ್ಮನಾಗಿ ಅಭೂತಪೂರ್ವ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸುತ್ತಿರುವ ಹೆಣ್ಣು ಸರ್ವಶ್ರೇಷ್ಠಳು. ಇಂತಹ ಹೆಣ್ಣಿಗೆ ವರ್ಷದಲ್ಲಿ ಒಂದು ದಿನವೇನು, ವರ್ಷಪೂರ್ತಿ ಮೀಸಲಿಟ್ಟರೂ ತಪ್ಪಲ್ಲ. ಆದ್ದರಿಂದ ಪ್ರತೀ ವರ್ಷ ಜನವರಿ 24 ನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಘೋಷಿಸಿರುವುದು ಅರ್ಥಪೂರ್ಣ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಆರೋಗ್ಯ ಸುಧಾರಣೆಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿ, ವಿವಿಧ ರೀತಿಯ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸಮಾಜದ ಸರ್ವರೂ ಕೈಜೋಡಿಸೋಣ.
ಹೆಣ್ಣು ಮಕ್ಕಳ ಜನ್ಮ ದಿನಾಚರಣೆಯನ್ನು ಕುಟುಂಬ ಮತ್ತು ಸಮುದಾಯದಲ್ಲಿ ಆಚರಿಸುವುದು. ಹೆಣ್ಣು ಎಂದರೆ ಬೇರೆ ಮನೆಯ ವಸ್ತು ಎಂಬ ಭಾವನೆಯಿಂದ ಹೊರಬಂದು ಅವರ ಬಗ್ಗೆ ಹೆಮ್ಮೆಯ ಭಾವನೆಯನ್ನು ತಳೆಯುವುದು. ಹುಡುಗರು ಮತ್ತು ಹುಡುಗಿಯರ ನಡುವೆ ಸಮಾನತೆ ಉತ್ತೇಜಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು. ಶಾಲೆಗಳಲ್ಲಿ ಹೆಣ್ಣು ಮಗುವಿಗೆ ಸುರಕ್ಷಿತ ಪ್ರವೇಶ ನೀಡುವುದು. ಸಮಾಜದ ಸಮಾನ ಸದಸ್ಯರಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಗೌರವಿಸಲು ಗಂಡು ಮಕ್ಕಳಿಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸುವುದು. ಲಿಂಗ ಪತ್ತೆ ಪರೀಕ್ಷೆಯ ಯಾವುದೇ ಘಟನೆಗಳನ್ನು ಪ್ರೋತ್ಸಾಹಿಸದಿರುವುದು. ನೆರೆಹೊರೆಯ ಮಹಿಳೆಯರು ಮತ್ತು ಹುಡುಗಿಯರ ಸುರಕ್ಷಿತ ಮತ್ತು ಹಿಂಸೆ-ಮುಕ್ತಗೊಳಿಸಲು ಶ್ರಮಿಸುವುದು. ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಅಲ್ಲಿ ಶಾಂತಿ ನೆಲೆಸಿರುತ್ತದೆ ಎಂಬುದನ್ನು ಎಲ್ಲರೂ ಅರಿತು ಹೆಣ್ಣಿನ ಸ್ಥಾನ ಮಾನಗಳಿಗೆ ಕುಂದುಂಟಾಗದಂತೆ ನಡೆದುಕೊಳ್ಳೋಣ. ಸರ್ವರಿಗೂ ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು.
- ಕೆ. ಎನ್. ಚಿದಾನಂದ
ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


