ಮಂಗಳೂರು ವಿವಿಯಲ್ಲಿ ಅಮ್ಮೆಂಬಳ ಪ್ರಶಸ್ತಿ ಪ್ರದಾನ

Upayuktha
0

ಕನ್ನಡಪರ ಕೆಲಸಕ್ಕೆ ಆತ್ಮಸ್ಥೈರ್ಯ ತುಂಬಿ : ಡಾ.ಮಹಾಬಲೇಶ್ವರ ಎಂ.ಎಸ್



ಮುಡಿಪು:  ಕನ್ನಡಪರ,‌ ಕನ್ನಡ‌ ಸಾಹಿತ್ಯದ  ಕೆಲಸ ಮಾಡುವವರಿಗೆ ಆತ್ಮಸ್ಥೈರ್ಯವನ್ನು ತುಂಬಿ ಹುರುಪು  ನೀಡುವ ಕಾರ್ಯ ನಿರಂತರವಾಗಿ ನಡೆಯಬೇಕು.  ಕನ್ನಡ ಭಾಷೆ‌ ಎಂಟು ಜ್ಞಾನ ಪೀಠ ಪ್ರಶಸ್ತಿಗಳನ್ನು ತಂದುಕೊಟ್ಟಿರುವುದು ಕನ್ನಡದ ಶಕ್ತಿಯಾಗಿದೆ. ಅಮ್ಮೆಂಬಳ ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನವು ಕನ್ನಡದ  ವಿದ್ವಾಂಸರನ್ನು, ಸಾಹಿತಿಗಳನ್ನು  ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಿರುವುದು ಪ್ರಶಸ್ತಿಯ ಹಿರಿಮೆ ಗರಿಮೆಯನ್ನು ಹೆಚ್ಚಿಸಿದೆ ಎಂದು ಕರ್ಣಾಟಕ ಬ್ಯಾಂಕ್ ನ ಮಾಜಿ ನಿರ್ದೇಶಕರು, ಕಾರ್ಯನಿರ್ವಹಣಾಧಿಕಾರಿ ಡಾ.ಮಹಾಬಲೇಶ್ವರ ಎಂ.ಎಸ್.ಅವರು ಹೇಳಿದರು.




ಅಮ್ಮೆಂಬಳ ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ  ಇದರ ವತಿಯಿಂದ ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಬುಧವಾರ ಹಿರಿಯ ಸಾಹಿತಿಗಳಾದ  ಡಾ.ಹಿ.ಚಿ.ಬೋರಲಿಂಗಯ್ಯ, ಡಾ.ಬಸವರಾಜ ಕಲ್ಗುಡಿ, ಡಾ.ಪಾದೆಕಲ್ಲು ವಿಷ್ಣುಭಟ್, ಡಾ.ಬಿ. ಜನಾರ್ದನ ಭಟ್ ಅವರಿಗೆ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. 



ಕನ್ನಡ ನೆಲ ಜಲ ಸೇರಿದಂತೆ ಕನ್ನಡ‌ ಭಾಷೆಯ ಸಂರಕ್ಷಣೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಸಾಮಾಜಿಕ ಜವಾಬ್ಧಾರಿಯೊಂದಿಗೆ ಹೋರಾಡಿದರೆ ಇಂದು ಯಾವುದೇ ಕನ್ನಡ ಶಾಲೆಗಳು ಮುಚ್ಚಲು ಸಾಧ್ಯವಿಲ್ಲ ಎಂದರು.




ಮಂಗಳೂರು ವಿವಿ ಕುಲಪತಿ ಪ್ರೊ.ಜಯರಾಜ್ ಅಮೀನ್ ಅವರು ಮಾತನಾಡಿ ಸಾಹಿತ್ಯ ಕ್ಷೇತ್ರಕ್ಜೆ ನೀಡಿದ ಅಪೂರ್ವ ಕೊಡುಗೆಗಾಗಿ ನೀಡುವ ಅಮ್ಮೆಂಬಳ  ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ ವತಿಯಿಂದ ನೀಡುವ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿಯು ಅತ್ಯಂತ ಮಹತ್ವವಾದುದು. ನಾಲ್ಬರು ಹಿರಿಯ ಸಾಹಿತಿಗಳಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಸಂದಿವೆ ಎಂದರು.



ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಣರಾದ ಡಾ.ಹರಿಕೃಷ್ಣ ಪುನರೂರು ಅವರು  ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.




ಡಾ.ಹಿ.ಚಿ.ಬೋರಲಿಂಗಯ್ಯ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕನ್ನಡದ ಕೆಲಸಗಳನ್ನು ನಾವು ತಪಸ್ಸಿನ ರೀತಿಯಲ್ಲಿ ನಾವು ಮುನ್ನಡೆಸಿದರೆ ಕನ್ನಡಕ್ಕೆ ಇನ್ನಷ್ಟು ಜ್ಞಾನಪೀಠ ಪ್ರಶಸ್ತಿಗಳು ಅರಸಿಕೊಂಡು ಬರಲಿವೆ. ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಅತ್ಯಂತ ಗೌರವಯುತ ಪ್ರಶಸ್ತಿಯಾಗಿದ್ದು, ಕೃತಜ್ಞನಾಗಿದ್ದೇನೆ  ಎಂದರು. 



ಡಾ.ಬಸವರಾಜ ಕಲ್ಗುಡಿ ಅವರು ಮಾತನಾಡಿ, ಕನ್ನಡ ಜೀವಂತವಾಗಿ,‌ಸೃಜನ ಶೀಲತೆಯೊಂದಿಗೆ ಮುನ್ನಡೆಯಲು ತುಳುನಾಡಿನ ವಿದ್ವಾಂಸರ ಕೊಡುಗೆಯೂ ಅಪಾರವಾದುದು. ಅಮ್ಮೆಂಬಳರ ಕವಿತೆಗಳಲ್ಲಿ ಲೌಕಿಕತೆಯ ಪರ ಧ್ವನಿಯಿದೆ. ನವೋದಯ ಕಾಲದಲ್ಲಿ ಇದು ವಿಶೇಷ ಎಂದರು. 



ಪ್ರೊ.ಪಾದೆಕಲ್ಲು ವಿಷ್ಣುಭಟ್ ಅವರು ಮಾತನಾಡಿ,‌ ಪಂಡಿತ ಪರಂಪರೆಯನ್ನು ನೋಡಿದ ತೃಪ್ತಿ ನನಗಿದೆ. ಹಿರಿಯ ಪಂಡಿತರಾದ ಅಮ್ಮೆಂಬಳ ಶಂಕರನಾರಾಯಣ ನಾವಡರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದರು. 



ಡಾ.ಬಿ.ಜನಾರ್ದನ ಭಟ್ ಅವರು ಮಾತನಾಡಿ, ಅಮ್ಮೆಂಬಳ ಶಂಕರನಾರಾಯಣ ನಾವಡರು ಸಾಹಿತ್ಯದ ಅಂತರ್ಜಲವನ್ನು ವೃದ್ಧಿಸಿದವರು. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದರು.



ಉಳ್ಳಾಲದ ಮಾಜಿ ಶಾಸಕರಾದ ಜಯರಾಮ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 



ಕನ್ನಡ ವಿಭಾಗದ ಅಧ್ಯಕ್ಷರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.



ಕುವೆಂಪು ಭಾಷಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಗಿರೀಶ್ ಭಟ್ ಅಜಕ್ಕಳ ಅವರು ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಪ್ರೊ.ಎ.ವಿ.ನಾವಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.



ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ‌‌ ನಿರೂಪಿಸಿದರು. ಡಾ.ಗಾಯತ್ರಿ ನಾವಡ ಅವರು ವಂದಿಸಿದರು.ಶ್ರೀದೇವಿ ಕಲ್ಲಡ್ಕ ಭಾವಗೀತೆಗಳನ್ನು ಹಾಡಿದರು. ಸಮಾರಂಭದಲ್ಲಿ ಜಾನಪದ ವಿದ್ವಾಂಸ ಪ್ರೊ.ಕೆ ಚಿನ್ನಪ್ಪಗೌಡ, ಅಮ್ಮೆಂಬಳ ಅವರ ಶಿಷ್ಯ ಪ್ರೊ.ಸುಬ್ಬ ಪಕ್ಕಳ, ಕನ್ನಡ ವಿಭಾಗದ ಡಾ.ನಾಗಪ್ಪ ಗೌಡ, ಡಾ.ಯಶುಕುಮಾರ್ ಮತ್ತಿತರರು ಭಾಗವಹಿಸಿದ್ದರು. ಪ್ರಶಸ್ತಿಯು ಸನ್ಮಾನ, ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ನಗದು ಒಳಗೊಂಡಿತ್ತು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top