ಆಳ್ವಾಸ್ ಸಂಶೋಧನಾ ನೀತಿ ಕರಡು ಬಿಡುಗಡೆ

Upayuktha
0

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ: ಸಂಶೋಧನೆ, ಪೇಟೆಂಟ್, ಉತ್ಪಾದನೆಯಲ್ಲಿ ವಿನೂತನ ಹೆಜ್ಜೆ 




ಮೂಡುಬಿದಿರೆ: ಶೈಕ್ಷಣಿಕ, ಸಾಂಸ್ಕøತಿಕ, ಕ್ರೀಡೆಯಲ್ಲಿ ಅನನ್ಯ ಛಾಪು ಮೂಡಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಹಲವಾರು ಆವಿಷ್ಕಾರಿಕ ಕೊಡುಗೆಗಳನ್ನು ನೀಡುತ್ತಿದ್ದು, ಗುರುವಾರ ‘ಆಳ್ವಾಸ್ ಸಂಶೋಧನಾ ನೀತಿ’ ಕರಡನ್ನು ಬಿಡುಗಡೆ ಮಾಡಿತು. 




ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಎಂಬಿಎ ವಿಚಾರ ಸಂಕಿರಣ ಸಭಾಂಗಣದಲ್ಲಿ ‘ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಸ್ತುತತೆ' ಕುರಿತು ಶನಿವಾರ ಹಮ್ಮಿಕೊಂಡ  ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಣಿಪಾಲ ಸ್ಕೂಲ್ ಆಫ್ ಲೈಫ್‍ಸೈನ್ಸ್ ನಿರ್ದೇಶಕ ಡಾ.ಬಿ.ಎಸ್. ಸತೀಶ್ ರಾವ್ ಕರಡು ಬಿಡುಗಡೆ ಮಾಡಿದರು. 




ಬಳಿಕ ಮಾತನಾಡಿದ ಅವರು, ‘ಸಂಶೋಧನೆ ಇಲ್ಲದೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಉಳಿವಿಲ್ಲ. ಅಧ್ಯಯನಕ್ಕೆ ಭವಿಷ್ಯವಿಲ್ಲ’ ಎಂದರು. ‘ಜ್ಞಾನ- ವಿಜ್ಞಾನಗಳ ಸೌಂದರ್ಯವು ಸಂಶೋಧನೆಯಲ್ಲಿ ಇದೆ. ದೃಷ್ಟಿಕೋನ, ಕಾರ್ಯಕ್ರಮ, ಮೌಲ್ಯಗಳ ಮೂಲಕ ಈಗಾಗಲೇ ಜಗತ್ತಿನ ಜನರ ಹೃದಯಕ್ಕೆ ಪರಿಚಿತವಾಗಿರುವ ಆಳ್ವಾಸ್, ಸಂಶೋಧನಾ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ’ ಎಂದರು. 




ಸಂಶೋಧನೆಯು ವೃತ್ತಿಯಲ್ಲ. ಅದು ಮನೋತ್ಸಾಹ. ಜೀವನ ಪ್ರೀತಿ. ವೃತ್ತಿಯ ರೀತಿ-ನೀತಿ. ಆದರೆ, ಪರಿಣಾಮಕಾರಿ ಜಾರಿಗೆ ಆಡಳಿತ ವರ್ಗದ ಬೆಂಬಲ ಅತ್ಯಗತ್ಯ ಎಂದು ಉಲ್ಲೇಖಿಸಿದರು. ಶೈಕ್ಷಣಿಕ ಸಂಸ್ಥೆಗಳಿಗೆ ಶ್ರೇಯಾಂಕ ನೀಡುವ ಸಂಸ್ಥೆಗಳು ಸಂಶೋಧನಾ ಮಟ್ಟವನ್ನು ಪರಿಶೀಲಿಸುತ್ತಿವೆ. ಭವಿಷ್ಯದಲ್ಲಿ ಪದವಿ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಲಿದೆ’ ಎಂದರು.  ಸ್ವಯಂ ಆರ್ಥಿಕ ವ್ಯವಸ್ಥೆ ಹೊಂದಿದ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಕಾಡೆಮಿಕ್ ಶ್ರೇಷ್ಠತೆ, ಸಂಶೋಧನೆ, ಆವಿಷ್ಕಾರ ಹಾಗೂ ಸಾಮಾಜಿಕ ಪರಿಣಾಮವು ಬಹುಮುಖ್ಯವಾಗಿದೆ’ ಎಂದು ವಿವರಿಸಿದರು.  




‘ಈ ನಿಟ್ಟಿನಲ್ಲಿ ಕ್ರಿಯಾಶೀಲ ಆಡಳಿತ ಮಂಡಳಿ, ಸಕ್ರಿಯ ಬೋಧಕ ಸಿಬ್ಬಂದಿ ಹಾಗೂ ಸಂಶೋಧಕರು, ಸಂಶೋಧನಾ ಲೇಖನಗಳಿಗೆ ಪ್ರೋತ್ಸಾಹ, ಬಾಹ್ಯ ಅನುದಾನ ಪಡೆಯುವುದು, ದರ್ಶನ ಮತ್ತು ಜಾಲ, ಪಿಎಚ್.ಡಿ ಪದವೀಧರ ಸಿಬ್ಬಂದಿ, ನಿರ್ವಹಣಾ ಸಲಹಾ ಕಾರ್ಯ, ಬೌದ್ಧಿಕ ಆಸ್ತಿ, ತಂತ್ರಜ್ಞಾನ ಪರಿವರ್ತನೆ, ಗ್ರಹಿಕೆಯ ಉನ್ನತೀಕರಣ, ಸಂಶೋಧನೆಗೆ ಬೇಕಾದ ಮೂಲ ಸೌಕರ್ಯ, ಸಂಶೋಧನೆಯ ಗುರುತಿಸುವಿಕೆ, ಸಂಶೋಧನಾ ಸಂಸ್ಕøತಿಯ ಪೋಷಣೆ, ವಿಶ್ಲೇಷಣೆ, ಸಂಶ್ಲೇಷಣೆ, ಛಲ ಮತ್ತು ಪರಿಶ್ರಮ, ಆತ್ಮವಿಶ್ವಾಸ, ಸೃಜನಶೀಲತೆ, ಆವಿಷ್ಕಾರಿಕ ಮನೋಭಾವ, ಹೊಂದಾಣಿಕೆ, ಪ್ರಕಟಣೆ, ನೈತಿಕತೆ ಹಾಗೂ ಕಾನೂನು ಪಾಲನೆ ಅತೀ ಅಗತ್ಯ’ ಎಂದರು.




ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಪಿಎಚ್.ಡಿಯು ಅಧ್ಯಯನದ ಅಂತಿಮ ಘಟ್ಟವಲ್ಲ, ಅದು ಸೃಜನಶೀಲ ಸಂಶೋಧನೆ   ಆರಂಭ’ ಎಂದರು. ಒಂದು ಸಂಸ್ಥೆಯಲ್ಲಿ ಅಭಿವೃದ್ಧಿ ಜೊತೆ ವ್ಯಕ್ತಿತ್ವಗಳ ಅಂತರ ದೂರ ಮಾಡಲು ನಾಯಕತ್ವ ಬಹುಮುಖ್ಯ. ಅಂತಹ ಸಂಬಂಧವನ್ನು ಕಟ್ಟಿಕೊಟ್ಟಿದ್ದೇವೆ. ಶಿಕ್ಷಣದ ಜೊತೆ ಇತರ ಚಟುವಟಿಕೆಗಳು, ನಿರ್ವಹಣಾ ಸಲಹಾ ಘಟಕ, ಕೈಗಾರಿಕಾ ಸಹಯೋಗದ ಜೊತೆ ನಾಲ್ಕನೇ ಹೆಜ್ಜೆಯಾಗಿ ಆಳ್ವಾಸ್ ಸಂಶೋಧನಾ ಕೇಂದ್ರ ಅಭಿವೃದ್ಧಿ ಪಡಿಸುತ್ತಿದ್ದೇವೆ’ ಎಂದರು.   




ಸಂಶೋಧನೆ, ಪೇಟೆಂಟ್ ಹಾಗೂ ಉತ್ಪಾದನೆಯ ದಿಶೆಯಲ್ಲಿ ಸಂಶೋಧನಾ ನೀತಿಯನ್ನು ರಚಿಸಿದ್ದು, ದೇಶದ ಪ್ರತಿಷ್ಠಿತ ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರಗಳ ತಜ್ಞರು ಕರಡು ರಚನೆಯಲ್ಲಿ ಪಾಲ್ಗೊಂಡಿದ್ದಾರೆ’ ಎಂದು ವಿವರಿಸಿದರು.  ಹಿಂದೆ ಕಲಿಕೆಯ ಹಸಿವು ಹೆಚ್ಚಿದ್ದು, ಅವಕಾಶ ಕಡಿಮೆ ಇತ್ತು. ಈಗಿನ ಸ್ಥಿತಿ ತದ್ವಿರುದ್ಧವಾಗಿದೆ. ನಾವು ಯಾಕಾಗಿ ಸಂಶೋಧನೆ ಮಾಡುತ್ತೇವೆ ಎಂಬ ಅರಿವಿರಬೇಕು’ ಎಂದು ವಿಶ್ಲೇಷಿಸಿದರು. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ವೇದಿಕೆ ಕಲ್ಪಿಸುವುದು ಆಳ್ವಾಸ್ ಆಶಯ. ಸಂಶೋಧನೆ ಮತ್ತು ಅಭಿವೃದ್ಧಿ ಪ್ರೋತ್ಸಾಹಿಸಲು ವ್ಯವಸ್ಥಿತ ವಾತಾವರಣ ರೂಪಿಸುತ್ತಿದ್ದೇವೆ’ ಎಂದರು. 




ಯಾವುದೇ ವಿಚಾರದ ಕುರಿತು ಮೇಲ್ನೋಟದ ಓದು ತರವಲ್ಲ. ಆಳ ಅಧ್ಯಯನವು ಬದುಕು ಮತ್ತು ಸಮಾಜಕ್ಕೆ ಬೆಳಕಾಗುತ್ತದೆ. ವಿದ್ಯಾರ್ಥಿಗಳೇ ನಮ್ಮ ಬ್ರ್ಯಾಂಡ್ ರಾಯಭಾರಿಗಳು. ಸಶಕ್ತ ವಿದ್ಯಾರ್ಥಿಗಳೇ ನಮ್ಮ ಸಂಪತ್ತು ಎಂದು ಶ್ಲಾಘಿಸಿದರು. ನಮ್ಮ ಸಂಸ್ಥೆಯಲ್ಲಿ ನಮ್ಮ ಯಾವುದೇ ಕಾರ್ಯಕ್ರಮಗಳು ಪ್ರತ್ಯೇಕವಲ್ಲ. ಎಲ್ಲವೂ ಶಿಕ್ಷಣದ ಅವಿಭಾಜ್ಯ ಅಂಗ’ ಎಂದ ಅವರು, ‘ಕನ್ನಡ ಶಾಲೆ, ಕ್ರೀಡಾ-ಸಾಂಸ್ಕøತಿಕ ದತ್ತು, ನುಡಿಸಿರಿ, ವಿರಾಸತ್, ಪ್ರಗತಿ, ಸಿಎ ತರಬೇತಿ ಮತ್ತಿತರ ಕಾರ್ಯಕ್ರಮಗಳ ಮೂಲಕ ಆಳ್ವಾಸ್ ಸಶಕ್ತ ಶಿಕ್ಷಣ ನೀಡುತ್ತಿದೆ. ಮುಂದಿನ ಹೆಜ್ಜೆಯಾಗಿ ‘ಆಳ್ವಾಸ್ ಸಂಶೋಧನಾ ಕೇಂದ್ರ’ವನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ’ ಎಂದರು. 




ಎನ್ ಐ ಟಿಕೆ  ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಅರುಣ್ ಎಂ. ಇಸ್ಲೂರ್ ಮಾತನಾಡಿ, ಶೈಕ್ಷಣಿಕ ಮೌಲ್ಯ ವರ್ಧನೆಗೆ ಸಂಶೋಧನೆ ಮತ್ತು ಅಭಿವೃದ್ಧಿ ಅವಶ್ಯ ಎಂದರು. ಜ್ಞಾನ ವರ್ಧನೆ, ಬೋಧನಾ ಗುಣಮಟ್ಟದ ನಿರಂತರ ಪ್ರಗತಿ, ಆವಿಷ್ಕಾರ ಮತ್ತು ಸೃಜನಶೀಲತೆ, ವಿದ್ಯಾರ್ಥಿಗಳ ಕಲಿಕಾ ಅನುಭವದ ಪ್ರಗತಿ, ಭವಿಷ್ಯದ ಸವಾಲುಗಳಿಗೆ ಸಿದ್ಧತೆ, ವಿಮರ್ಶಾತ್ಮಕ ಚಿಂತನೆಯ ಕೌಶಲ, ಸ್ಪರ್ಧಾತ್ಮಕತೆ, ಕೈಗಾರಿಕೆ ಮತ್ತು ಸಾಮಾಜಿಕ ಅವಶ್ಯಕತೆಗಳಿಗೆ ಸ್ಪಂದನೆ, ಸುಸ್ಥಿರತೆ ಹಾಗೂ ಅನುಷ್ಠಾನವು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಂದ ಸಾಧ್ಯ. ಸಂಶೋಧನಾ ದುರ್ನಡತೆಯಲ್ಲಿ ಜಗತ್ತಿನ ಎರಡನೇ ಸ್ಥಾನವನ್ನು ಭಾರತ ಅಲಂಕರಿಸಿದೆ. ಇದು ಕೆಟ್ಟ ಬೆಳವಣಿಗೆ. ಸಂಶೋಧನಾ ನೈತಿಕತೆ ಹಾಗೂ ಕಾನೂನು ಪಾಲಿಸುವ ಮೂಲಕ ಭಾರತ ಅತ್ಯುತ್ತಮ ಸಂಶೋಧಕರ ದೇಶ ಆಗಬೇಕು ಎಂದರು.  




ಆಳ್ವಾಸ್ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಮುಖ್ಯಸ್ಥ ಡಾ. ರಿಚರ್ಡ್ ಪಿಂಟೊ ಮಾತನಾಡಿ, ‘ಅಕಾಡೆಮಿಕ್ ಮತ್ತು ಸಂಶೋಧನೆಯು ಆತುರದ ವ್ಯವಹಾರ ಅಲ್ಲ. 1950ರಲ್ಲೇ 5 ಐಐಟಿಯನ್ನು ಅಂದಿನ ಪ್ರಧಾನಿ ನೆಹರೂ ಆರಂಭಿಸಿದರು. ಅದರ ಪ್ರಭಾವ ಇಂದು ಕಾಣುತ್ತಿದ್ದೇವೆ. ಪ್ರತಿ ಸಂಸ್ಥೆಯಲ್ಲಿ ಸಂಶೋಧನಾ ಕೇಂದ್ರ ಅವಶ್ಯ’ ಎಂದರು.  ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆನಾರ್ಂಡಿಸ್ ಸಂಶೋಧನಾ ಸಾಧ್ಯತೆಗಳ ಬಗ್ಗೆ ವಿವರಿಸಿದರು. 




ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.. ಮಹಮದ್ ಸದಾಕತ್, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ವನಿತಾ ಶೆಟ್ಟಿ, ಆಳ್ವಾಸ್ ಆತ್ಮ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಸುಬ್ರಹ್ಮಣ್ಯ ಪದ್ಯಾಣ, ಮಾನವ ಸಂಪನ್ಮೂಲ ಅಧಿಕಾರಿ ಭರತ್ ರೈ ಇದ್ದರು. ಎಂಬಿಎ ಪ್ರಾಧ್ಯಾಪಕಿ ಡಾ.ಕ್ಯಾಥರಿನ್ ನಿರ್ಮಲಾ ಕಾರ್ಯಕ್ರಮ ನಿರೂಪಿಸಿದರು. ಧ್ವನಿ ತಂಡವು ಪ್ರಾರ್ಥನೆ ನೆರವೇರಿಸಿತು. 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top