75ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಬಣ್ಣನೆ: ಆಳ್ವಾಸ್ ಆವರಣವೇ ಮಿನಿ ಭಾರತ
ಮೂಡುಬಿದಿರೆ: ಕಣ್ಣು ಹಾಯಿಸಿದಷ್ಟೂ ಕೇಸರಿ, ಬಿಳಿ, ಹಸಿರು ವರ್ಣ, ಸಾಗರದ ಅಲೆಗಳಂತೆ ಹಾರಾಡಿದ ತ್ರಿವರ್ಣ ಧ್ವಜ, ಬಾನೆತ್ತರಕ್ಕೆ ಚಿಮ್ಮಿದ ತ್ರಿವರ್ಣ ರಂಗಿನ ಚಿತ್ತಾರ, ಉಕ್ಕಿ ಬಂದ ದೇಶಪ್ರೇಮದ ಭಕ್ತಿ, ಮಕ್ಕಳಲ್ಲಿ ಮನೆ ಮಾಡಿದ ಸಂಭ್ರಮ, ಮಾಜಿ ಸೈನಿಕರಿಂದ ಧ್ವಜಕ್ಕೆ ವಂದನೆ, ತ್ರಿವರ್ಣದಲ್ಲಿ ಬರೆದ ALVAS’ (ಆಳ್ವಾಸ್). ಅಮೃತ ಕಾಲದದಲ್ಲಿ ಕಂಗೊಳಿಸಿದ ‘ಮಿನಿ ಭಾರತ’.
ಗಣರಾಜ್ಯೋತ್ಸವ ಅಮೃತ ಕಾಲದ ಈ ಅಮೃತ ಘಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿ ಆವರಣದ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ಹಮ್ಮಿಕೊಂಡ 75ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಕಂಡುಬಂತು. ವಂದೇ ಮಾತರಂ ಗಾಯನದ ಬಳಿಕ ಕಾರ್ಯಕ್ರಮದ ಮುಕುಟಕ್ಕೆ ಕಿರೀಟ ಇಟ್ಟಂತೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಆರೋಹಣ ಮಾಡಿದ ತ್ರಿವರ್ಣ ಧ್ವಜದ ಎತ್ತರದಲ್ಲಿ ಹಾರಾಡಿತು. ರಾಷ್ಟ್ರಗೀತೆ ‘ಜನ ಗಣ ಮನ’ ಮೊಳಗಿತು. ‘ಕೋಟಿ ಕಂಠೋಂಸೇ ನಿಖ್‍ಲೇ...’ ಗಾನಕ್ಕೆ ಸೇರಿದ್ದ 30 ಸಾವಿರಕ್ಕೂ ಅಧಿಕ ಮಂದಿ ಪುಟಾಣಿ ಧ್ವಜಗಳನ್ನು ಬೀಸುತ್ತಾ ದನಿಗೂಡಿಸಿದರು. ಅಕ್ಷರಶಃ ಅಮೃತ ಕಾಲವೇ ಅನುರಣಿಸಿತು.
ಧ್ವಜಾರೋಹಣ ಮಾಡಿ ಮಾತನಾಡಿದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ‘ಆಳ್ವಾಸ್ ಮಿನಿಭಾರತ’ ಎಂದು ಬಣ್ಣಿಸಿದರು. ‘ಭಾರತದ ಸಂಸ್ಕೃತಿಯ ಸಾರವನ್ನು ನಾವು ಕರ್ನಾಟಕದಲ್ಲಿ ಕಾಣಬಹುದು. ಆದರೆ, ಕರ್ನಾಟಕದ ಸಂಸ್ಕೃತಿ ಸಾರವನ್ನು ನಾವೆಲ್ಲ ಆಳ್ವಾಸ್‍ನಲ್ಲಿ ನೋಡಬೇಕು. ಆಳ್ವಾಸ್ ನಮ್ಮ ಸಂಸ್ಕೃತಿ ಬಿಂಬಿಸುವ ಮಿನಿ ಭಾರತ’ ಎಂದರು. ‘ರೈತರು, ಶೋಷಿತರು, ಬಡವರು ಸೇರಿದಂತೆ ದೇಶದ ಧ್ವನಿ ರಹಿತರೆಲ್ಲ ಇಷ್ಟೊಂದು ಧೈರ್ಯದಿಂದ ಈ ದೇಶದಲ್ಲಿ ಜೀವಿಸಲು ಕಾರಣವೇ ಡಾ.ಬಿ.ಆರ್. ಅಂಬೇಡ್ಕರ್ ಪ್ರಣೀತ ಸಂವಿಧಾನ’ ಎಂದರು.
‘ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಬಂತು. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಯಾಯಿತು. ದೇಶದ ಏಕತೆಯನ್ನು ಸಂವಿಧಾನ ಉಳಿಸಿದೆ. ಪ್ರತಿ ಭಾರತೀಯನೂ ಈ ಸಂವಿಧಾನದ ಇತಿಹಾಸ, ಅರ್ಥ ತಿಳಿದುಕೊಳ್ಳಬೇಕು’ ಎಂದರು. ‘ಆಳ್ವಾಸ್ ಆವರಣವೇ ಮಿನಿ ಭಾರತದ ಹಾಗಿದೆ. ಪ್ರದೇಶ, ಭಾಷೆ, ಜಾತಿ, ಧರ್ಮಗಳನ್ನು ಮೀರಿ ಎಲ್ಲ ಮಕ್ಕಳು ಒಂದಾಗಿದ್ದೀರಿ. ವಿದ್ಯಾರ್ಥಿಗಳು ಬಲಿಷ್ಠರಾದರೆ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯ. ಅಂತಹ ದೇಶಭಕ್ತಿಯ ಕೆಲಸವನ್ನು ಡಾ.ಎಂ. ಮೋಹನ ಆಳ್ವ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.
‘ಪ್ರಜಾಪ್ರಭುತ್ವವೇ ದೇಶದ ಸೌಂದರ್ಯ. ನಾವೆಲ್ಲ ಒಗ್ಗಟ್ಟಿನಿಂದ ಇದ್ದರೆ ಮಾತ್ರ ದೇಶವು ಒಂದನೇ ಸ್ಥಾನಕ್ಕೆ ಏರಲು ಸಾಧ್ಯ. ಅದಕ್ಕಾಗಿ ಸಂವಿಧಾನದ ಆಶಯವನ್ನು ಬದುಕಿನಲ್ಲಿ ಪಾಲಿಸಿ. ಒಂದೇ ಮಕ್ಕಳಂತೆ ಬಾಳಿ’ ಎಂದರು. ‘ಮಾತು ದೇಶಕ್ಕೆ ಮಾರಕವಾಗದಿರಲಿ. ಸಂವಿಧಾನ ಆಶಯ ಅರಿತು ಬಾಳಿ. ಮಾನವೀಯತೆ ಮತ್ತು ಕರುಣೆ ಅವಶ್ಯ ಎಂದ ಅವರು, ಸ್ವಾಮಿ ವಿವೇಕಾನಂದರು ಹೇಳಿದಂತೆ ನಮ್ಮನ್ನು ಉಡುಗೆ-ತೊಡುಗೆಯ ಬದಲಾಗಿ ಸಂಸ್ಕೃತಿಯು ‘ಜಂಟಲ್ ಮ್ಯಾನ್’ ಮಾಡಬೇಕು. ನಾವೆಲ್ಲ ಲಾಭಕ್ಕಿಂತ ಮೌಲ್ಯಕ್ಕೆ ಒತ್ತು ನೀಡಿ ಬದುಕಬೇಕು’ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಎನ್‍ಸಿಸಿ ಸೀನಿಯರ್ ಅಂಡರ್ ಆಫೀಸರ್ ಇಂದ್ರೇಶ್ ಗೌಡ ನೇತೃತ್ವದಲ್ಲಿ ಗೌರವ ರಕ್ಷೆ ನೀಡಲಾಯಿತು. ಬಳಿಕ ಎನ್‍ಸಿಸಿ ಸೀನಿಯರ್ ಅಂಡರ್ ಆಫೀಸರ್ ಹರ್ಷಾರೆಡ್ಡಿ ನೇತೃತ್ವದಲ್ಲಿ ಗೌರವ ವಂದನೆ ನೀಡಲಾಯಿತು. ಸಿಡಿಮದ್ದು ಸಿಂಚನವು ಗಮನ ಸೆಳೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮಾಜಿ ಸಚಿವರಾದ ಪಿಪಿ.ಜಿ.ಆರ್. ಸಿಂಧ್ಯಾ, ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ, ಸುಮಾರು 250ಕ್ಕೂ ಅಧಿಕ ಮಾಜಿ ಸೈನಿಕರು ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


