ದೇಶದ ಬಹುದೊಡ್ಡ ಕಾನೂನೇ ಸಂವಿಧಾನ: ಡಾ. ಸಿ. ಕೆ. ಕಿಶೋರ್ ಕುಮಾರ್

Upayuktha
0



ಮಂಗಳೂರು: ಇಡೀ ದೇಶಕ್ಕೇ ಬಹುದೊಡ್ಡ ಕಾನೂನು ಎಂದರೆ ಸಂವಿಧಾನ. ೧೯೫೦ರ ದಶಕದಲ್ಲೇ ದೇಶದ ವೈವಿಧ್ಯತೆ, ವೈಶಿಷ್ಟ್ಯತೆಯನ್ನು ಗಮನಿಸಿ ಡಾ. ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನದಿಂದ ಇಡೀ ಜಗತ್ತಿನಲ್ಲೇ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಹಾಗೂ ನಿರ್ದೇಶಕ ಡಾ. ಸಿ. ಕೆ. ಕಿಶೋರ್ ಕುಮಾರ್ ಅವರು ಅಭಿಪ್ರಾಯಪಟ್ಟರು. 



ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂವಿಧಾನದ ಚೌಕಟ್ಟಿನ ಒಳಗೆ ಸಮಾಜ, ನಾಗರಿಕರು ಹಾಗೂ ಶಿಕ್ಷಣ ಸಂಸ್ಥೆಗಳೂ ಸೇರಿಕೊಂಡಿವೆ. ಹಾಗಾಗಿ ಪ್ರತಿಯೊಬ್ಬರೂ ಸಂವಿಧಾನದ ನೀತಿ ನಿಯಮಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಈ ಶುಭದಿನದ ಆಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೇ ಬದುಕಿಡೀ ಬದ್ಧತೆಯೊಂದಿಗೆ ಸಾಗಿಬೇಕಿದೆ ಎಂದು ಹೇಳಿದರು. 



ಉತ್ತಮ ಸಮಾಜ ನಿರ್ಮಾಣ ಮಾಡಲು ಕೇವಲ ಹಕ್ಕುಗಳ ಕುರಿತು ಹೋರಾಟ ಮಾಡದೇ ಕರ್ತವ್ಯಗಳ ಕಡೆಗೂ ಹೆಚ್ಚು ಗಮನ ಹರಿಸಬೇಕಿದೆ. ಕರ್ತವ್ಯ ನಿಷ್ಠೆ ಬೆಳೆಸಿಕೊಂಡರೆ ಹಕ್ಕಿನ ಕುರಿತಾದ ಹೋರಾಟಕ್ಕೆ ಪೂರ್ಣ ವಿರಾಮ ಹಾಕಬಹುದು. ಆ ನಿಟ್ಟಿನಲ್ಲಿ ಸಂವಿಧಾನದಲ್ಲಿ ತಿಳಿಸಿರುವ ಕರ್ತವ್ಯಗಳ ಕಡೆಗೆ ಮುಖ ಮಾಡಿ ಪ್ರಗತಿಯತ್ತ ಹೆಜ್ಜೆ ಹಾಕೋಣ ಎಂದು ಆಶಯ ವ್ಯಕ್ತಪಡಿಸಿದರು. 



ಬಡತನ, ನಿರುದ್ಯೋಗದಂತಹ ಸಾಮಾಜಿಕ ಸಮಸ್ಯೆಗಳು ಒಂದಲ್ಲಾ ಒಂದು ದಿನ ಕೊನೆಯಾಗುತ್ತದೆ. ದೇಶ ಇನ್ನೂ ಯೌವ್ವನಾವಸ್ಥೆಯಲ್ಲಿದೆ. ಈ ದೃಷ್ಟಿಯಿಂದ ಸಾಕಷ್ಟು ದೂರ ಕ್ರಮಿಸಬೇಕಿದೆ. ಸಂವಿಧಾನ ಕೊಡಮಾಡಿರುವ ಸ್ವಾತಂತ್ರ್ಯ, ಸಮಾನತೆಯನ್ನು ದುರುಪಯೋಗ ಪಡಿಸಿಕೊಳ್ಳದೇ ಜಾಗೃತರಾಗಿ ದೇಶದ ಆಸ್ತಿಗಳಾಗಿ ಬದುಕುವ ಜವಾಬ್ದಾರಿ ಪ್ರತಿ ನಾಗರಿಕನದ್ದಾಗಿದೆ ಎಂದು ಹೇಳಿದರು. 



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ವಹಿಸಿದ್ದರು. ವಿದ್ಯಾರ್ಥಿ ಸಂಘದ ಉಪನಿರ್ದೇಶಕಿ ಡಾ. ಲತಾ ಎ. ಪಂಡಿತ್, ಕಾಲೇಜಿನ ಭೂದಳದ ಮುಖ್ಯಸ್ಥ ಡಾ. ಜಯರಾಜ್, ನೌಕಾದಳದ ಮುಖ್ಯಸ್ಥ ಪ್ರೊ. ಯತೀಶ್ ಕುಮಾರ್, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಕೇಶವಮೂರ್ತಿ, ಸ್ನಾತಕೋತ್ತರ ವಿಭಾಗಗಳ ಸಂಯೋಜಕರು ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.        




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top