ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ 75ನೇ ಗಣರಾಜ್ಯೋತ್ಸವ

Upayuktha
0



ಬೆಂಗಳೂರು: ಕೇವಲ ದಶಕಗಳ ಹಿಂದೆ ನಮ್ಮ ಯುವಜನ ಉನ್ನತ ಶಿಕ್ಷಣದ ತರುವಾಯ ವಿದೇಶಗಳಲ್ಲಿ ಉದ್ಯೋಗ ಅರಸಲು ಕಾತುರರಾಗಿದ್ದರು. ಆದರೆ ಈಗ ಅಚ್ಚರಿ ಮೂಡಿಸುವ ರೀತಿಯಲ್ಲಿ ಪರಿಸ್ಥಿತಿ ಬದಲಾಗಿದೆ. ಬಹುತೇಕ ತಂತ್ರಜ್ಞರು ನಮ್ಮ ದೇಶದಲ್ಲಿಯೇ ಉಳಿದು ಉದ್ಯಮ ಪ್ರಾರಂಭಿಸಿ ತಂತ್ರಜ್ಞಾನದ ನವನವೀನ ಅನ್ವೇಷಣೆಗಳಿಗೆ ವೇದಿಕೆ ಕಲ್ಪಿಸಿದ್ದಾರೆ, ಕಲ್ಪಿಸುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ದೇಶ ಸಾಧಿಸಿರುವ ಅಪೂರ್ವ ಪ್ರಗತಿ. ಇಂದು ಆರ್ಥಿಕ ಸಬಲತೆಯಿಂದ ನಮ್ಮ ದೇಶ ಜಗತ್ತಿನಲ್ಲಿ ಐದನೇ ಸ್ಥಾನ ಪಡೆದಿದೆ. ಇನ್ನೇನು ಮೂರನೇ ಸ್ಥಾನಕ್ಕೆ ಜಿಗಿಯುವ ಸಮಯ ದೂರವಿಲ್ಲ. ಈಗಾಗಲೇ ಅನೇಕ ಯಶೋಗಾಥೆಗಳು ದಂತಕತೆಗಳ ರೀತಿ ಜನ ಮಾನಸದಲ್ಲಿ ನೆಲೆಯೂರಿವೆ. ಮುಂಬರುವ ದಿನಗಳಲ್ಲಿ ಈ ಯಶೋಗಾಥೆಗಳು ದ್ವಿಗುಣಗೊಳ್ಳಲಿವೆ. ನಮ್ಮ ದೇಶದ ಬೆನ್ನೆಲುಬಾಗಿರುವ ನಮ್ಮ ಯುವ ತಂತ್ರಜ್ಞರು, ವಿಜ್ಞಾನಿಗಳು ಹಾಗೂ ಚಿಂತಕರು ದೇಶವನ್ನು 2047ರ ಹೊತ್ತಿಗೆ ಮುಂದುವರಿದ ಸಂಪದ್ಭರಿತ ರಾಷ್ಟ್ರವಾಗಿಸುವುದರಲ್ಲಿ ಸಂಶಯವೇ ಇಲ್ಲ’, ಎಂದು ಹಿರಿಯ ಇಂಡಿಯನ್ ಪೊಲೀಸ್  ಸರ್ವಿಸ್ ಅಧಿಕಾರಿ ಹಾಗೂ ಸೆಂಟ್ರಲ್ ರಿಸರ್ವ್ ಪೊಲೀಸ್  ದಳದ ಇನ್ಸ್ಪೆಕ್ಟರ್ ಜನರಲ್ ತುಮ್ಮಾಲ ವಿಕ್ರಂ ನುಡಿದರು. 




ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿತವಾಗಿದ್ದ 75ನೇ ಗಣರಾಜ್ಯೋತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.  ಮುಂದುವರಿದು ಶ್ರೀಯುತರು - ‘ಯಾವ ಕಾರಣಕ್ಕೂ ರಾಜ್ಯಾಂಗದ ಮೂಲಭೂತ ಧ್ಯೇಯವಾದ ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯ ವಿರುದ್ಧ ಹೋಗಬೇಡಿ, ತತಕ್ಷಣದ ಲಾಭಗಳಿಗಾಗಿ ದೇಶದ ನೈತಿಕ ಮೌಲ್ಯಗಳನ್ನು ಕಡೆಗಣಿಸಬೇಡಿ’, ಎಂದು ಯುವಜನರಿಗೆ ಕರೆ ನೀಡಿದರು.




ಸಮಾರಂಭದಲ್ಲಿ ವಿಶೇಷ ಉಪನ್ಯಾಸ ಪ್ರಸ್ತುತ ಪಡಿಸಿದವರು ನಿಟ್ಟೆ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಸಂದೀಪ್ ಶಾಸ್ತ್ರಿ. ತಮ್ಮ ಭಾಷಣದಲ್ಲಿ ಶ್ರೀಯುತರು – ‘ನಮ್ಮ ದೇಶದಲ್ಲಿರುವ ಜನಸಂಖ್ಯೆಯಲ್ಲಿ ಶೇಕಡಾ 98ರಷ್ಟು ಮಂದಿ ಮೊತ್ತಮೊದಲ ಗಣರಾಜ್ಯೊತ್ಸವದ ನಂತರ ಹುಟ್ಟಿದವರು. ಕೇವಲ ಶೇಕಡಾ ಎರಡರಷ್ಟು ಜನ ಮಾತ್ರ ಸ್ವಾತಂತ್ರ್ಯ ಪೂರ್ವದಲ್ಲಿ ಜನ್ಮ ತಾಳಿದವರು. ಅದರಿಂದಲೇ ಹಿರಿಯರ ಅನುಭವ ಹಾಗೂ ಕಿರಿಯರ ಪ್ರತಿಭೆ ಮೇಳವಿಸಿ ನಾವಿಂದು ಪ್ರಗತಿ ಪಥದಲ್ಲಿ ಸಾಗುತ್ತಿದ್ದೇವೆ’, ಎಂದು ನುಡಿದರು.




ಸಮಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಎನ್.ಸಿ.ಸಿ ಕೆಡೆಟ್‍ಗಳ ಪಥ ಸಂಚಲನ ಹಾಗೂ ಇನ್ನಿತರ ಚಟುವಟಿಕೆಗಳು ನೊಡುಗರನ್ನು ರೋಮಾಂಚನಗೊಳಿಸಿದವು. ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಕಳೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಕಾಲೇಜಿನ ಪ್ರತಿಭಾನ್ವಿತ ಎನ್.ಸಿ.ಸಿ ಕೆಡೆಟ್‍ಗಳನ್ನು ಗೌರವಿಸಲಾಯಿತು. ಅಲ್ಲದೆ ಡ್ರೋನ್ ಹಾರಾಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಸಭಿಕರ ಮೆಚ್ಚುಗೆಗಳಿಸಿದವು.




ಸಭೆಯ ಅಧ್ಯಕ್ಷತೆ ವಹಿಸಿದ್ದವರು - ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್. ಪ್ರಾರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದವರು - ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್. ಸಂಸ್ಥೆಯ ಎನ್.ಸಿ.ಸಿ ಅಧಿಕಾರಿ ಮೇಜರ್ ರಾಜೇಶ್ ನಂದಳಿಕೆ ಹಾಗೂ ಇತರೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top