- ಸಿರಿಕಾಂತವಿಠಲ ಡಾ.ಬ.ಲ. ಸುರೇಶ
ತ್ರೇತಾಯುಗದ ಆ ಕಾಲಘಟ್ಟದಲ್ಲಿ ಜನಕ ಮಹಾರಾಜನು ಮಗಳು ಜಾನಕಿಯ ಸ್ವಯಂವರ ಸಂಬಂಧ ಶಿವಧನುಸ್ಸನ್ನು ಪಣಕ್ಕೆ ಇರಿಸಿದ್ದನು. ಧನುಸ್ಸನ್ನು ಹೆದೆಯೇರಿಸುವ ಕ್ಷತ್ರಿಯ ಶೂರನಿಗೆ ಮಗಳನ್ನು ಧಾರೆ ಎರೆಯುವ ಸಂಕಲ್ಪವಾಗಿತ್ತು. ಅತಿರಥಮಹಾರಥ ಕ್ಷತ್ರಿಯ ಕುವರರಿಗೂ ಆ ಧನುಸ್ಸು ಎತ್ತಿ ಹೆದೆಯೇರಿಸಲಾಗದಿದ್ದಾಗ ಜನಕರಾಜನೂ ಚಿಂತಿತನಾದನು. ಆ ಹೊತ್ತಿಗೆ ಬಂದ ಶ್ರೀ ರಾಮಚಂದ್ರನು ಆ ಮಹಾಭಯಂಕರವಾದ ಶೈವಧನುಸ್ಸು ಹೆದೆಯೇರಿಸಲು ಬಗ್ಗಿಸಿದಾಗ ಅದು ಮುರಿದು ಹೋಯಿತು. ಅದು ಮುರಿದುಹೋಗಬಹುದು ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಈ ರೀತಿ ಶೈವಧನಸ್ಸು ಮುರಿದುದು ಮಹಾಶ್ಚರ್ಯ ಸಂಗತಿಯಾಗಿ ಮೂರು ಲೋಕದಲ್ಲೂ ಹರಡಿ ಹೊಗಳಲ್ಪಟ್ಟಿತು.
ದೇವ ಗಂಧರ್ವ ಚಾರಣರು ರಾಮನ ಈ ಕಾರ್ಯವನ್ನು ಹೊಗಳುತ್ತಾ ಹೋಗುತ್ತಿರಲು ಅದನ್ನು ಕೇಳಿದ ಪರಶುರಾಮನು ಆಶ್ಚರ್ಯಚಕಿತನಾದನು. ಮಹಾ ಶಿವಭಕ್ತನೂ, ಶಿವನಿಂದ ವರಪ್ರಸಾದಿತನೂ ಆದ ಭಾರ್ಗವರಾಮನಲ್ಲಿ ನಾನು ಕ್ಷತ್ರಿಯ ವಂಶವನ್ನೇ ನಿರ್ನಾಮ ಮಾಡಿದ ಮಹಾ ಶಕ್ತಿಶಾಲಿ ಎಂಬ ಅಹಂಕಾರವೊಂದು ಮನೆ ಮಾಡಿತ್ತು. 'ಒಬ್ಬ ದಶರಥ ಪುತ್ರ ರಾಮ ಶೈವಧನುಸ್ಸು ಮುರಿದನೆಂದರೆ! ಶಿವನಿಗೆ ಆದ ಅವಮಾನವಲ್ಲವೇ! ಅವನು ಹೆದೆಯೇರಿಸಿ ಬಾಣ ಹೂಡಿದ್ದರೆ ಅದು ಬೇರೆ ಮಾತು, ಶಿವನ ಧನುಸ್ಸು ಮುರಿಯುವುದೆಂದರೆ? ಅದು ಆ ಕ್ಷತ್ರಿಯ ಕುವರನ ಅಹಂಕಾರವೇ ಸರಿ' ಎಂದು ಭಾವಿಸಿದನು. ಆ ಭಾವನೆಯು ಅವನಲ್ಲಿನ ಕ್ಷಾತ್ರತೇಜಸ್ಸನ್ನೂ ಕೋಪವನ್ನೂ ಉದ್ಧೀಪನಗೊಳಿಸಿ ಕೆರಳಿಸಿತು. ರಾಮನ ಈ ಕೀರ್ತಿಯನ್ನು ಕ್ಷಣಮಾತ್ರವೂ ಸಹಿಸದಾದನು. ತಪ್ಪು ಮಾಡಿದೆ ರಾಮ ಎಂದು ಉದ್ಗರಿಸಿದನು. 'ಏ.. ನೀಚ ದುರ್ಮದ ಕ್ಷತ್ರಿಯನೇ.. ನಿನ್ನ ಅಹಂಕಾರವನ್ನು ಇಂದೇ ಅಡಗಿಸುವೆನು' ಎಂಬುದಾಗಿ ನಿಶ್ಚಯವನ್ನೂ ಮಾಡಿ, ಹೆಗಲಿಗೆ ಗಂಡುಕೊಡಲಿಯನ್ನೇರಿಸಿ ಎಡಗೈಯ್ಯಲ್ಲಿ ವೈಷ್ಣವ ಧನುಸ್ಸನ್ನು ತೆಗೆದುಕೊಂಡು ತನ್ನ ಆಶ್ರಮದಿಂದ ಹೊರಟನು.
ಈ ರೀತಿಯಾಗಿ ಕೋಪದಿಂದ ಹುಂಕರಿಸುತ್ತಿರುವ ಪರಶುರಾಮನನ್ನು ನೋಡಿ ದೇವರ್ಷಿಗಳು, ಈಗ ಮತ್ತೆ ಇವನು ಭೂಮಿಯನ್ನು ಕ್ಷತ್ರಿಯಶೂನ್ಯವನ್ನಾಗಿ ಮಾಡುವನೇನೋ? ಎಂದು ಹೆದರಿದರು. ಬಹು ಕೋಪದಿಂದ ಕೂಡಿದ ಪರಶುರಾಮನನ್ನು ನೋಡಿ ಭೂಮಿಯು ನಡುಗ ತೊಡಗಿತು. ಸೂರ್ಯನು ತೇಜೋಹೀನನಾದನು. ಆಕಾಶವು ಧೂಳಿನಿಂದ ತುಂಬಿ ಮಲಿನವಾಯಿತು. ಪ್ರಳಯದಲ್ಲಿ ಹೇಗೋ ಹಾಗೆ ಸಮುದ್ರಗಳು ಎಲ್ಲೆಯನ್ನು ಉಲ್ಲಂಘಿಸಿದವು. ಹೀಗೆ ಭಯಂಕರವಾದ ಕೋಪದಿಂದ ಯುಕ್ತನಾಗಿ ಪರಶುರಾಮನು ಬರುತ್ತಾ ಮಾರ್ಗದಲ್ಲಿ ವಿವಾಹವೇ ಮೊದಲಾದ ಮಂಗಳ ಕಾರ್ಯಗಳನ್ನು ಮುಗಿಸಿ ಸೇನೆಯೊಡನೆ ಬರುತ್ತಿರುವ ಶ್ರೀ ರಾಮಚಂದ್ರನನ್ನು ಕಂಡನು.
'ಎಲೈ ನೀಚ ಕ್ಷತ್ರಿಯನಾದ ರಾಮನೇ, ಪರಾಕ್ರಮದಿಂದ ಹೆಚ್ಚಿದವನಾಗಿ ಬಹು ಮೂಢನಾಗಿರುವೆ. ನೀನು ಮಾಡಬಾರದ ಕೆಲಸವನ್ನು ಮಾಡಿ ನಾನೇ ಶೂರನೆಂದು ತಿಳಿದಿರುವೆ. ನಿನ್ನ ಕ್ಷತ್ರಿಯ ಕುಲಕ್ಕೆ ಯಮಸದೃಶನಾದ ನಾನು ಇರುವೆನೆಂದು ಇಲ್ಲಿಯವರೆವಿಗೂ ನಿನಗೆ ಗೊತ್ತಿರಲಿಲ್ಲವೋ? ಈಗಲೂ ಕ್ಷತ್ರಿಯರನ್ನು ಕೊಲ್ಲುವ ಕೊಡಲಿಯ ಅಲಗು ಮೊಂಡಾಗಿಲ್ಲ. ಬಹುಕಾಲಕ್ಕೆ ನನ್ನ ಪರಶುವಿಗೆ ನಿನ್ನ ದೇಹದಿಂದ ಹೊರಬರುವ ಬಿಸಿರಕ್ತ ಪಾನ ಮಾಡುವುದರಿಂದ ಪಾರಣೆಯಾಗುತ್ತದೆ. ದುಷ್ಟರ ವಿಷಯದಲ್ಲಿ ಕ್ಷಮೆಯನ್ನು ಯಾವಾಗಲೂ ಮಾಡಬಾರದು. ಮೊದಲಿನಲ್ಲಿ ಉಪೇಕ್ಷೆ ಮಾಡಿದರೆ ರೋಗವು ಕಾಲಕ್ರಮದಲ್ಲಿ ಹಾವಿಗೆ ಹಾಲೆರೆದಂತೆ ಹೇಗೆ ಮೃತ್ಯುಸ್ವರೂಪವಾಗುವುದೋ ಹಾಗೆಯೇ ದುಷ್ಟರ ವಿಷಯದಲ್ಲಿ ತೋರುವ ಕ್ಷಮಾಗುಣವೂ ಕಡೆಯಲ್ಲಿ ಅಂತಕವಾಗುವುದು. ಈ ವಿಷಯದಲ್ಲಿ ಸಮಾಧಾನವು ಗುಣಕಾರಿಯಲ್ಲ. ಇದಕ್ಕೆ ತಕ್ಕ ಶಿಕ್ಷೆಯಾಗಲೇಬೇಕು.
ಈ ಪ್ರಕಾರವಾಗಿ ಪರಶುರಾಮನು ಹೇಳುತ್ತಿರಲು ಕಮಲನೇತ್ರನಾದ ರಾಘವ ರಾಮನು ಅವನ ಪಾದಗಳಿಗೆ ನಮಸ್ಕಾರಿಸಿ ಪರಿಪರಿಯಾಗಿ ಉಪಚರಿಸಿ, 'ನನ್ನಿಂದ ತಪ್ಪಾಗಿದ್ದರೆ ಮನ್ನಿಸಿ ಗುರುವೇ' ಎಂದು ಕ್ಷಮಯಾಚನೆ ಮಾಡಿದನು. ಹೀಗೆ ಕ್ಷಮಾಪ್ರಾರ್ಥನೆ ಮಾಡಿದರೂ ಪರಶುರಾಮನು ಕ್ಷಮಿಸದೇ ಇನ್ನೂ ಹೆಚ್ಚಾಗಿ ತಿರಸ್ಕಾರದ ನುಡಿಗಳನ್ನಾಡಲು ಮೊದಲಿಟ್ಟನು. ಆಗ ರಾಘವನ ಕಣ್ಣುಗಳು ಕೆಂಪಾದವು.. 'ಎಲೌ ಪರಶುರಾಮನೇ, ನೀನು ಬ್ರಾಹ್ಮಣನು, ಆದ ಕಾರಣ ನಿನ್ನ ಮೇಲೆ ಕೋಪಿಸಿಕೊಳ್ಳಲಾಗದು. ಏಕೆಂದರೆ ರಘವಂಶೋತ್ಪನ್ನರ ಶಸ್ತ್ರಗಳ ಅಲಗು ಬ್ರಾಹ್ಮಣರ ವಿಷಯದಲ್ಲಿ ಮೊಂಡಾದುದು. ಇದೋ ನನ್ನ ಕುತ್ತಿಗೆ ಸಿದ್ಧವಾಗಿದೆ. ಇದನ್ನು ನಿನ್ನ ಕೊಡಲಿಗೆ ಆಹುತಿಯಾಗಿಸಬಹುದು. ರಾಘವರಾದ ನಮಗೆ ಬ್ರಾಹ್ಮಣರು ಮತ್ತು ಗೋವುಗಳು ಯಾವಾಗಲೂ ಪೂಜನೀಯರು' ಹೀಗೆ ರಾಮನು ಹೇಳಲು ಇನ್ನೂ ಹೆಚ್ಚಾಗಿ ಕೋಪಗೊಂಡ ಭಾರ್ಗವನು 'ಎಲೈ ಕ್ಷತ್ರಿಯಾಧಮನೇ, ನೀನು ಬಹಳ ದುಷ್ಟನು. ನನ್ನನ್ನು ಸಾಮಾನ್ಯ ಬ್ರಾಹ್ಮಣನೆಂದು ತಿಳಿದೆಯೋ? ಕ್ಷತ್ರಿಯರೆಲ್ಲರಿಗೂ ಪ್ರತ್ಯಕ್ಷವಾದ ಮೃತ್ಯುವೇ ನಾನೆಂಬುದು ನಿನಗೆ ಗೊತ್ತಿಲ್ಲವೇನೋ ಪಾಪ..? ಎಂದು ನಕ್ಕನು.
ಪರಶುರಾಮನ ಅಹಂಕಾರದ ಮಾತಿಗೆ ರಘುರಾಮನು ಎಲೈ ಪರಶುರಾಮ.. ನೀನು ರೇಣುಕಾ ಪುತ್ರನೆಂದು ತಿಳಿದಿದ್ದೇನೆ. ನನ್ನನ್ನು ಬ್ರಹ್ಮಬಂಧುವಾದ ನಿನ್ನಿಂದ ಹತರಾದ ಕ್ಷತ್ರಿಯವಂಶದವರಲ್ಲಿ ಇವನೊಬ್ಬ ಎಂದು ತಿಳಿದೆಯೋ? ಇವನು ಕೆರಳಿ ನಿಂತರೆ ತಡೆಯುವ ಸಾಮರ್ಥ್ಯನಿನಗಿರದು ನಾವಾಗಲೀ.. ನಮ್ಮ ಅಸ್ತ್ರಶಸ್ತ್ರವಾಗಲೀ ಬ್ರಾಹ್ಮಣರಿಗೆ ಮೊದಲು ತಲೆಬಾಗುವುದೇ ಹೊರತು ಘಾಸಿ ಗೊಳಿಸುವುದಿಲ್ಲ. ಈಗ ನೀನು ತುಂಬಾ ಮುಂದೊತ್ತಿ ಬಂದಿರುವೆ. ಈ ಕ್ಷಣದಲ್ಲಿ ಬ್ರಹ್ಮಣ್ಯವನ್ನಾಗಲೀ, ಕ್ಷಾತ್ರವನ್ನಾಗಲೀ ಜಾಗ್ರತೆಯಾಗಿ ಒಂದನ್ನು ತ್ಯಜಿಸು, ಇನ್ನು ಮುಂದೆ ಎರಡನ್ನೂ ಇಟ್ಟುಕೊಂಡಿರಲಾರೆ'.
ರಾಮನು ಹೀಗೆ ಹೇಳಲು ಕೋಪದಿಂದ ಪರಶುರಾಮನು; 'ಎಲೈ ರಾಮನೇ.. ನಿನಗೆ ಅದೆಷ್ಟು ಅಹಂಕಾರ! ನಿನಗೆ ಧಿಕ್ಕಾರವು!' ಎಂದು ಹೇಳುತ್ತಾ ತನ್ನಲ್ಲಿದ್ದ ವೈಷ್ಣವ ಧನುಸ್ಸನ್ನು ಆ ಕೂಡಲೇ ರಾಮನಿಗೆ ಕೊಟ್ಟು 'ಎಲೈ ರಾಮ.. ವ್ಯರ್ಥವಾಗಿ ಜಂಬ ಕೊಚ್ಚುವುದರಿಂದ ಫಲವಿಲ್ಲ, ಅದೃಷ್ಟ ಬಲದಿಂದ ಪುರಾತನವಾದ ಶೈವಧನುಸ್ಸನ್ನು ಮುರಿದೆ! ಇದೋ ಈ ನನ್ನ ವೈಷ್ಣವ ಧನುಸ್ಸಿಗೆ ಹೆದೆಯೇರಿಸು, ಇದು ನಿನ್ನಿಂದ ಅಸಾಧ್ಯವು.. ಅಸಾಧ್ಯವನ್ನು ಸಾಧ್ಯವಾಗಿಸಿ ಮುಂದೆ ಮಾತನಾಡು ಹಾಗೂ ನನ್ನೆದುರಿಗೆ ಧೈರ್ಯದಿಂದ ನಿಲ್ಲು. ನಿನ್ನ ಅಹಂಕಾರವನ್ನು ದ್ವಂದ್ವಯುದ್ಧದಲ್ಲಿಯೂ ಅಡಗಿಸಬಲ್ಲೆ ಬಲ್ಲೆಯಾ..' ಎಂದು ನಕ್ಕನು. ಪರಶುರಾಮನ ಮಾತನ್ನು ಕೇಳಿ ರಾಮನು ಆ ವೈಷ್ಣವ ಧನುಸ್ಸನ್ನು ತೆಗೆದುಕೊಂಡು ನಿಮಿಷಾರ್ಧದಲ್ಲೇ ಲೇಲೆಯಿಂದ ಬಗ್ಗಿಸಿ ಹೆದೆಯೇರಿಸಿದನು. ಆ ಮೇಲೆ ಬತ್ತಳಿಕೆಯಿಂದ ತೀಕ್ಷಣವಾದ ಬಾಣವನ್ನು ತೆಗೆದು ಬಿಲ್ಲಿಗೆ ಸೇರಿಸಿ ಆಕರ್ಣಾಂತವಾಗಿ ಎಳೆದು ಪರಶುರಾಮನಿಗೆ ತನ್ನ ಸಾಮರ್ಥ್ಯ ತೋರಿಸಿದನು. 'ಹೇ ಭಾರ್ಗವರಾಮ.. ನನ್ನ ಸಾಮರ್ಥ್ಯ ಪರೀಕ್ಷೆಗೆ ಈ ವೈಷ್ಣವ ಧನುಸ್ಸು ನನಗೆ ನೀಡಿದೆ. ಇದನ್ನು ಹೆದೆಯೇರಿಸಿ ನಿಂತಿರುವೆ. ಇದಕ್ಕೆ ಹೂಡಿದ ಬಾಣವು ಸಾಮಾನ್ಯದ್ದಲ್ಲ ಇದು ಬೀರುವ ಪರಿಣಾಮವೂ ಅನಾಹುತಕಾರಿ ಆಗಬಹುದು. ನೀನು ಬ್ರಾಹ್ಮಣನು ಆದ ಕಾರಣ ನಿನ್ನ ಮೇಲೆ ಈ ಬಾಣ ಪ್ರಯೋಗ ಮಾಡಲಾಗದು, ಅಲ್ಲದೇ ನೀನು ವಿಶ್ವಾಮಿತ್ರನ ಸಂಬಂಧಿಯು, ಆ ಕಾರಣಕ್ಕಾಗಿಯೂ ಇದನ್ನು ನಿನ್ನ ಮೇಲೆ ಪ್ರಯೋಗಿಸಲಾರೆ. ಜಾಗ್ರತೆಯಾಗಿ ಈ ಶ್ರೇಷ್ಠವಾದ ಬಾಣವು ಎಲ್ಲಿ ಬೀಳಬೇಕೆಂಬುದನ್ನು ಹೇಳು. ನೀನು ಒಂದರ್ಥದಲ್ಲಿ ಪಾಪಿಯಾದರೂ ನನಗೆ ಗುರುವು. ಪ್ರಾಣಿಗಳನ್ನು ಕೊಲ್ಲುವ ಈ ಬಾಣದಿಂದ ನಿನ್ನ ಪ್ರಾಣವು ಹೋಗದಿರುವಂತೆ ಜಾಗ್ರತೆಯಾಗಿ ಈ ಮಹಾಬಾಣಕ್ಕೆ ಲಕ್ಷ್ಯವನ್ನು ತೋರಿಸು. ಏಕೆಂದರೆ ಇದು ಅಮೋಘವಾದುದು, ಹಾಗೆ ಮಾಡಿ ಬದುಕು' ಎಂದನು.
ಪರಶುರಾಮನು, ರಾಘವನ ಮಾತು ಕೇಳಿ ಅವನ ಅದ್ಭುತವಾದ ಪರಾಕ್ರಮವನ್ನು ನೋಡಿ, ಇವನು ಸಾಮಾನ್ಯನಲ್ಲವು! ಇವನು ನಾಶರಹಿತನಾದ ಪರಮಾತ್ಮನೇ, ಎಂದು ತಿಳಿದು ಭೂಮಿಯಲ್ಲಿ ಉದ್ದಂಡವಾಗಿ ನಮಸ್ಕರಿಸಿ ಹೇಳಿದನು- .ರಾಮನೇ, ನೀನು ಪರಸ್ವರೂಪನೆಂದೂ, ಪ್ರಕೃತಿಗಿಂತಲೂ ಶ್ರೇಷ್ಠನಾದ ಪುರುಷನೆಂದೂ, ಜಗತ್ತಿನ ರಕ್ಷಣೆಗೋಸ್ಕರ, ನಟನಂತೆ, ನರನಿಗೆ ಸಮಾನನಾಗಿ ಜನಿಸಿರುವೆ. ಈಗ ನನಗೆ ಎಲ್ಲವೂ ಮನನವಾಗುತ್ತಿದೆ. ನನ್ನ ಅಹಂಕಾರದ ಫಲವಾಗಿ ಈ ಪರೀಕ್ಷೆ ನನಗೆ ಎದುರಾಗಿದೆ. ಬಿಟ್ಟೆನೆಂದರೂ ಬಿಡದ ಮಾಯೆಯಲ್ಲಿ ನಾನು ಈಗಲೂ ಬಂದಿಯಾಗಿರುವೆ, ಹೀಗಿದ್ದೂ ನಾನು ಬದುಕಬೇಕಿದೆ. ಹೇ ದಶರಥ ಪುತ್ರ.. ಇಲ್ಲಿಯವರೆಗೆ ನಾನು ಅನೇಕವಾದ ತಪಸ್ಸಿನಿಂದ ಪುಣ್ಯಲೋಕಗಳನ್ನು ಸಂಪಾದಿಸಿದ್ದೇನೆ. ಆ ಎಲ್ಲ ಪುಣ್ಯಲೋಕಗಳನ್ನೂ ಬಾಣಕ್ಕೆ ಲಕ್ಷ್ಯವನ್ನಾಗಿ ಕೊಟ್ಟು ನಾನು ಜೀವಿಸುತ್ತೇನೆ.. ನಾನು ಏಕೆ ಹೀಗೆ ವರ್ತಿಸಿದೆ ಎಂದು ನನಗೆ ತಿಳಿಯದಾಗಿದೆ! ನನ್ನ ಬದುಕಿಸು' ಎಂದು ಕೋರಿದನು. ರಾಮನು ಹಾಗೆಯೇ ಆಗಲೆಂದು ಉಗ್ರವಾದ ತನ್ನ ಬಾಣವನ್ನು ಪರಶುರಾಮನ ಪುಣ್ಯಲೋಕಗಳಿಗೆ ಲಕ್ಷ್ಯವಾಗಿಸಿದನು. ಇದರಿಂದಾಗಿ ಭಾರ್ಗವರಾಮ ಆರ್ಜಿಸಿದ್ದ ಎಲ್ಲ ಪುಣ್ಯವೂ ನಷ್ಟವಾಗಿ ಹೋಯಿತು.
ಅನಂತರದಲ್ಲಿ ಪರಶುರಾಮನನ್ನು ಕುರಿತು, 'ಓ ಭಾರ್ಗವನೇ, ನಿನಗೆ ನಮಸ್ಕಾರವು. ನಾನಾಡಿದ ಕೋಪದ ನುಡಿಗಳನ್ನು ಕ್ಷಮಿಸು. ನನಗೆ ಯಾವಾಗಲೂ ಬ್ರಾಹ್ಮಣನಾದವನು ಗುರುವು. ಈ ರೀತಿಯಾದ ರಾಮನ ಮಾತನ್ನು ಕೇಳಿ ಪರಶುರಾಮನು ನಾಚಿಕೆಯಿಂದ ಕೂಡಿ ರಾಮನಿಗೆ ಪ್ರದಕ್ಷಿಣೆ ನಮಸ್ಕಾರವನ್ನು ಮಾಡಿ, ತಾನು ಬಂದಂತೆ ಹೊರಟು ಹೋದನು; ಭಾರ್ಗವರಾಮ ಹೋದ ದಾರಿಯತ್ತ ನೋಡಿದ ಶ್ರೀರಾಮಚಂದ್ರನು ಶ್ರೀದೇವಿಯ ಲೀಲೆಗೆ ತಲೆಬಾಗಿ ಎಲ್ಲವನ್ನೂ ವಿಧಿಗೆ ಬಿಟ್ಟು ಅವನಿಗೆ ಮಂಗಳವನ್ನು ಹಾರೈಸಿ ತನ್ನ ದಾರಿಯತ್ತ ಸಾಗಿದನು ಸ್ಥಿರವಾದ ಮನಸ್ಸು ಬುದ್ಧಿ ವಿವೇಕ ಇಲ್ಲದಿದ್ದರೆ ಎಂತಹ ತಪಸ್ವಿಯ ತಪಸ್ಸನ್ನೂ ಕೋಪ, ಅವಿವೇಕ, ಆಸೆ ಕೆಡಿಸುತ್ತದೆ ಎಂಬುದಕ್ಕೆ ವಿಷ್ಣು ಅಂಶನಾದ ಪರಶುರಾಮ ಪ್ರಪಂಚಕ್ಕೆ ದೃಷ್ಟಾಂತವಾದನು. ರಾಮನಿಂದ ಬೀಳ್ಕೊಟ್ಟು ಹೊರಟ ಪರಶುರಾಮನು ಹೋಗುತ್ತಾ ದಾರಿಯಲ್ಲಿ ಬಹುವಾದ ಪಶ್ಚಾತ್ತಾಪದ ದುಃಖವನ್ನು ಅನುಭವಿಸಿದನು. ಮುಂದೆ ಸಂವರ್ತನ ಋಷಿಯ ಸಲಹೆಯಂತೆ ಗುರು ದತ್ತಾತ್ರೇಯಮುನಿಗೆ ಶರಣು ಹೋಗಿ, ಜಗಜ್ಜನನಿಯ ಲೀಲಾವಿನೋದವಾದ ಶ್ರೀ ತ್ರಿಪುರಾರಹಸ್ಯ ಕಥಾಮೃತವನ್ನು ಕೇಳಿ ತಿಳಿದು ಜನ್ಮವನ್ನು ಪುನೀತವಾಗಿಸಿಕೊಂಡನು.
-ಸಿರಿಕಾಂತವಿಠಲ ಡಾ.ಬ.ಲ.ಸುರೇಶ
ವಿಳಾಸ: ಸಾಹಿತಿ ಹಾಗೂ ಕಿರುತೆರೆ ನಿರ್ದೇಶಕರು
43/26, 'ಹುಲಿಮನೆ' 10ನೇ ಅಡ್ಡರಸ್ತೆ
ಭೋವಿಪಾಳ್ಯ, ಮಹಾಲಕ್ಷ್ಮೀಪುರಂ
ಬೆಂಗಳೂರು-560 086
ಮೊ: +91 9480490615
*********
ಲೇಖಕರ ಸಂಕ್ಷಿಪ್ತ ಪರಿಚಯ:
ಡಾ.ಬ.ಲ. ಸುರೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಬಂದಗದ್ದೆ ಗ್ರಾಮದ ಪಕ್ಕದಲ್ಲಿರುವ ದಿಗಟೇಕೊಪ್ಪ ಎಂಬ ಹಳ್ಳಿಯವರು. ಕಳೆದ ನಲವತ್ತೆರೆಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ. ತಮ್ಮ ಹದಿನೆಂಟನೇ ವಯೋಮಾನದಲ್ಲಿ ಭಾರತೀಯ ಸೈನ್ಯವನ್ನು ಸೇರಿ ಕೆಲವೇ ವರ್ಷದಲ್ಲಿ ಅನಾರೋಗ್ಯದಿಂದಾಗಿ ವೈದ್ಯಕೀಯ ನಿವೃತ್ತಿ ಹೊಂದಿದವರು. ನಂತರ ಕರ್ನಾಟಕ ಜಲಮಂಡಳಿಯಲ್ಲಿ ಇಪ್ಪತ್ತೊಂದು ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು. 2007-08 ರಲ್ಲಿ ಝೀ ಕನ್ನಡವಾಹಿನಿಯಲ್ಲಿ ಫಿಕ್ಷನ್ ಹೆಡ್ ಆಗಿ ಕಾರ್ಯನಿರ್ವಹಿಸಿದವರು.
ಪೂರ್ಣ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಓದಿ:
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ