ಡಾ.ಬ.ಲ. ಸುರೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಬಂದಗದ್ದೆ ಗ್ರಾಮದ ಪಕ್ಕದಲ್ಲಿರುವ ದಿಗಟೇಕೊಪ್ಪ ಎಂಬ ಹಳ್ಳಿಯವರು. ಕಳೆದ ನಲವತ್ತೆರೆಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ. ತಮ್ಮ ಹದಿನೆಂಟನೇ ವಯೋಮಾನದಲ್ಲಿ ಭಾರತೀಯ ಸೈನ್ಯವನ್ನು ಸೇರಿ ಕೆಲವೇ ವರ್ಷದಲ್ಲಿ ಅನಾರೋಗ್ಯದಿಂದಾಗಿ ವೈದ್ಯಕೀಯ ನಿವೃತ್ತಿ ಹೊಂದಿದವರು. ನಂತರ ಕರ್ನಾಟಕ ಜಲಮಂಡಳಿಯಲ್ಲಿ ಇಪ್ಪತ್ತೊಂದು ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು. 2007-08 ರಲ್ಲಿ ಝೀ ಕನ್ನಡವಾಹಿನಿಯಲ್ಲಿ ಫಿಕ್ಷನ್ ಹೆಡ್ ಆಗಿ ಕಾರ್ಯನಿರ್ವಹಿಸಿದವರು.
ಕಥೆ, ಕಾದಂಬರಿ, ನಾಟಕ, ಕವನಸಂಕಲನ, ಕಿರುತೆರೆ-ಹಿರಿತೆರೆ ಸಾಹಿತ್ಯ-ನಿರ್ದೇಶನ, ರೇಡಿಯೋ ಪ್ರಹಸನ, ನಟನೆ, ರಂಗಭೂಮಿ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಆರು ಕವನ ಸಂಕಲನ, ಆರು ಕಾದಂಬರಿ, ಒಂದು ಕಥಾಸಂಕಲನ, ಇಪ್ಪತ್ತನಾಲ್ಕು ನಾಟಕಗಳು ಇವರ ಪ್ರಕಟಿತ ಕೃತಿಗಳು. ಇವರು ರಚಿಸಿದ “ಶ್ರೀಲಲಿತಾ ಮಹಾತ್ರಿಪುರಸುಂದರೀ, ಶ್ರೀ ಸಾಯಿ ಲೀಲಾಮೃತ” ಪಾರಾಯಣ ಗ್ರಂಥಗಳು ಹಾಗೂ “ಶ್ರೀವಿಷ್ಣುಸಹಸ್ರನಾಮ-ಮಹಾಕಾವ್ಯ” ಪೂಜನೀಯವಾಗಿವೆ. ಬಲಸು ಗೆಳೆಯರ ಬಳಗ ಹೊರತಂದ “ಬಲಸು ಬರಹ ಬುತ್ತಿ” ಇವರ 30ನೇ ವರ್ಷದೊಳಗಿನ ಸಮಗ್ರ ಸಾಹಿತ್ಯ ಸಂಕಲನವಾಗಿದೆ. ‘ಸಾಧನಾಯೋಗಿ ಶ್ರಮಗಾನ’ ವಿಜಯನಗರ ಸಾಂಸ್ಕೃತಿಕ ವೇದಿಕೆಯವರು ಪ್ರಕಟಿಸಿದ ಇವರ ಪರಿಚಯಾತ್ಮಕ ಹೊತ್ತಿಗೆ. ‘ಸಮಕ್ಷಮ’ ಇವರ ಐವತ್ತನೇ ವರ್ಷಕ್ಕೆ ಸಂಭ್ರಮ ಯುವ ವೇದಿಕ ಹೊರತಂದ ಬಲಸು ಅಭಿನಂದನಾ ಗ್ರಂಥ ಇದಾಗಿದೆ. ಪೂಜ್ಯ ಗುರುಗಳಾದ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಯಾನೆ ಪಾರ್ಥಸಾರಥಿ ವಿಠಲದಾಸರಿಂದ “ಸಿರಿಕಾಂತವಿಠಲದಾಸ” ಅಂಕಿತ ಪಡೆದು ಹರಿದಾಸ ಪರಂಪರೆಯನ್ನು ಒಪ್ಪಿ ಅಪ್ಪಿದವರು. “ವಿಶ್ವಧರ್ಮ ಮತ್ತು ವಿಶ್ವಶಾಂತಿಗೆ ಶಿರಡಿ ಸಾಯಿಬಾಬಾರ ಕೊಡುಗೆ, ಕ್ರಮಿಸಿದ ಮಾರ್ಗ, ಜೀವನ, ದರ್ಶನ, ಸಾಧನಾ” ಎಂಬ ವಿಷಯದಲ್ಲಿ ಪಿಹೆಚ್.ಡಿ ಪದವಿಯನ್ನು, “ಪಾರ್ಥಸಾರಥಿ ವಿಠಲದಾಸರ ಕೃತಿಶ್ರೇಣಿ- ಅಧ್ಯಯನ” ವಿಷಯದಲ್ಲಿ ಡಿ.ಲಿಟ್ ಪದವಿಯನ್ನೂ ಪಡೆದಿದ್ದಾರೆ.
ರಂಜಿತಾ, ರಶ್ಮಿ, ಪ್ರೊಫೆಸರ್, ಮಹಾಕ್ಷತ್ರಿಯ, ನಾಗರಿಕ ಮುಂತಾದ ಹದಿನಾಲ್ಕು ಚಲನಚಿತ್ರಗಳಿಗೆ ಸಾಹಿತ್ಯ ಸಂಭಾಷಣೆ ಬರೆದಿದ್ದಾರೆ. ಅಮ್ಮ, ದ್ವಿತೀಯ, ಸೀತಾಪತಿ ಸಿಟಿಲೈಫ್, ತಾಳೋ ನೋಡೋಣ ಮುಂತಾದ ಹಲವಾರು ವಾರದ ಧಾರಾವಾಹಿಗಳು; ಮನೆತನ, ಮಹಾಯಜ್ಞ, ಕವಲುದಾರಿ, ಕನ್ಯಾದಾನ, ಕಂಕಣ, ಕುಂಕುಮಭಾಗ್ಯ, ಬಣ್ಣದಬುಗುರಿ, ಜೈ ಹನುಮಾನ್ ಮುಂತಾದ ಹಲವು ಜನಮನ್ನಣೆಗಳಿಸಿದ ಮೆಗಾ ಧಾರಾವಾಹಿಗಳ ಬರವಣಿಗೆ ಇವರದ್ದು. ಜನಪ್ರಿಯತೆಯ ಉತ್ತುಂಗವೇರಿದ್ದ “ಗುರುರಾಘವೇಂದ್ರ ವೈಭವ” ಧಾರಾವಾಹಿಯ ಬರಹ ಹಾಗೂ ನಿರ್ದೇಶನ ಡಾ.ಬ.ಲ.ಸುರೇಶ ಅವರದ್ದು. ಇದೊಂದು ಇತಿಹಾಸ ಸೃಷ್ಟಿಸಿದ ಕಿರುತೆರೆ ಧಾರಾವಾಹಿಯಾಗಿದೆ. ಕಿರುತೆರೆಯಲ್ಲಿ ಕನ್ನಡ ಮೂಲಕಥೆಯ ಮೊಟ್ಟಮೊದಲ ಮೆಗಾ ಧಾರಾವಾಹಿ ಹಾಗೂ ಒಂದು ತಾಸಿನ ಧಾರಾವಾಹಿ ಬರೆದ ಕೀರ್ತಿಗೆ ಸುರೇಶ ಅವರು ಭಾಜನರು. ಮೊದಲ ಬಾರಿಗೆ ಕಿರುತೆರೆಯಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಕಂತುಗಳನ್ನು ಬರೆದು “ಸಾವಿರದ ಸರದಾರ” ಎಂಬ ಸನ್ಮಾನಕ್ಕೆ ಪಾತ್ರರಾದವರು. ಕನ್ನಡ ಕಿರುತೆರೆ ಬರಹಗಾರರಿಗೆ ಹೆಚ್ಚಿನ ಘನತೆ-ಗೌರವ ತಂದುಕೊಟ್ಟ ಇವರಿಗೆ ಸಂದ ಗೌರವ ಕೊಡಮಾಡಲ್ಪಟ್ಟ ಪ್ರಶಸ್ತಿಗಳು ನೂರಾರು. ಹೀಗಿದ್ದೂ ಅತ್ಯಂತ ಸರಳಜೀವಿ! ಮಾದ್ಯಮಗಳಿಂದ ಸ್ಟಾರ್ ಡೈಲಾಗ್ ರೈಟರ್, ಕಿರುತೆರೆಯ ಸಚಿನ್, ಡೈಲಾಗ್ ಡೈನಮೋ, ಡೈಲಾಗ್ ಕಿಂಗ್, ಕಿರುತೆರೆಯ ದಂತಕಥೆ, ಟಿ.ವಿ. ಸೀರಿಯಲ್ ಜಗತ್ತಿನ ಸವ್ಯಸಾಚಿ, ಕಿರುತೆರೆಯ ದೈತ್ಯಪ್ರತಿಭೆ ಎಂಬೆಲ್ಲಾ ಪ್ರಶಂಸೆಗೆ ಪಾತ್ರರಾದವರು ಹಾಗೂ ನಾಡಿನಾದ್ಯಂತ ಹಲವಾರು ಸಂಘಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟವರು.
ಬರಹ: ಕುಮುದವಲ್ಲಿ ಅರುಣಮೂರ್ತಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ