|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುರುಷೋತ್ತಮ ರಾಮ- ವ್ಯಕ್ತಿತ್ವ ವಿಕಸನದ ಪರಮೋಚ್ಚ ಪ್ರತೀಕ

ಪುರುಷೋತ್ತಮ ರಾಮ- ವ್ಯಕ್ತಿತ್ವ ವಿಕಸನದ ಪರಮೋಚ್ಚ ಪ್ರತೀಕ

 ಶ್ರೀರಾಮ ಕಥಾ ಲೇಖನ ಅಭಿಯಾನ-5:



-ಗಿರಿಜಾ. ಎಸ್.ದೇಶಪಾಂಡೆ. ಬೆಂಗಳೂರು


|| ಶ್ರೀ ರಾಮ ರಾಮೇತಿ ಮನೋರಮೇ| ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ||


ರುಣಾಮಯಿ ಭಗವಾನ್ ಶ್ರೀರಾಮನು ಪ್ರತೀ ಜೀವಿಗೂ ದಯೆ ಮತ್ತು ಕರುಣೆಯನ್ನು ತೋರಿಸುವವನಾಗಿದ್ದಾನೆ. ಒಬ್ಬ ವ್ಯಕ್ತಿಯಾಗಿ ಶ್ರೀರಾಮನು ಎಲ್ಲರಿಗೂ ಆದರ್ಶ ವ್ಯಕ್ತತ್ವ ಹೊಂದಿದವನಾಗಿರುವನು. ಆಕರ್ಷಕ ರೂಪದ ಶ್ರೀರಾಮನು ಭವ್ಯವಾದ ಮೈಕಟ್ಟು, ವಿಶಾಲವಾದ ಎದೆ, ಪ್ರಕಾಶಮಾನವಾದ ಮೈಬಣ್ಣ, ಉದಾತ್ತ ತಲೆ, ಆಕರ್ಷಕವಾದ ಹಣೆ ಮಹಾನ್ ಪರಾಕ್ರಮ ಹೊಂದಿದ ವ್ಯಕ್ತಿ. ಶ್ರೀರಾಮನು ಅತ್ಯುನ್ನತ ಆದರ್ಶಗಳ ಸಾಕಾರಮೂರ್ತಿ ಭಗವಂತ ನಡೆದು ಬಂದ ದಾರಿ, ನಂಬಿದ ಧರ್ಮ ಗುಣಲಕ್ಷಣಗಳು ಅವನನ್ನು ನಿಜವಾದ ದೇವರ ಅವತಾರವನ್ನಾಗಿ ಮಾಡಿತು. ಶ್ರೀ ರಾಮಚಂದ್ರನು ವಿಷ್ಣುವಿನ ಏಳನೇಯ ಅವತಾರವಾಗಿದ್ದಾನೆ. ತ್ರೇತಾಯುಗದಲ್ಲಿ ಜನಿಸಿದ ರಾಮನು ಇಂದಿಗೂ ನಮ್ಮ ಭಾರತೀಯ ಜೀವನ ಶೈಲಿಯ ಮೇಲೆ ಆಳವಾದ ಪ್ರಭಾವ ಹೊಂದಿದ್ದಾನೆ ಎಂಬುದನ್ನು ತೋರಿಸುತ್ತದೆ.



ರಘುಕುಲ ಭೂಷಣ ಭಗವಾನ್ ಶ್ರೀ ರಾಮಚಂದ್ರನಂತೆ ಮರ್ಯಾದೆಯ ರಕ್ಷಕರು ಇಲ್ಲಿಯವರೆಗೆ ಇನ್ನೊಬ್ಬರು ಹುಟ್ಟಿಲ್ಲವೆಂದು ಹೇಳಿದರೆ ಅದು ಅತಿಶಯೋಕ್ತಿಯಾಗುವದಿಲ್ಲ. ಶ್ರೀರಾಮನು ಸಾಕ್ಷಾತ್ ಪೂರ್ಣಬ್ರಹ್ಮ ಪರಮಾತ್ಮನಾಗಿದ್ದಾನೆ. ಧರ್ಮ ರಕ್ಷಣೆಗಾಗಿ ಹಾಗೂ ಲೋಕಗಳ ಉದ್ಧಾರಕ್ಕಾಗಿಯೇ ಅವತರಿಸಿದ್ದನು. ಶ್ರೀರಾಮನು ಯಾವಾಗಲೂ ಎಲ್ಲರ ಮುಂದೆ ತಾನು ಒಬ್ಬ ಸದಾಚಾರಿ ಆದರ್ಶ ವ್ಯಕ್ತಿಯಾಗಿ ಸಿದ್ಧಮಾಡಲು ಪ್ರಯತ್ನ ಮಾಡಿದನು. ಅವನ ಆದರ್ಶ ಲೀಲೆಗಳನ್ನು ಓದಿ, ಕೇಳಿ, ಸ್ಮರಣೆ ಮಾಡುವದರಿಂದ ಹೃದಯದಲ್ಲಿ ಪವಿತ್ರ ಭಾವತರಂಗಗಳು ಎದ್ದು ಮನಸ್ಸು ಮುಗ್ಧವಾಗುತ್ತದೆ. ಶ್ರೀರಾಮನು ಸದ್ಗುಣಗಳ ಸಾಗರವೇ ಆಗಿದ್ದನು. ಸತ್ಯ, ಸೌಹಾರ್ದತೆ, ದಯೆ, ಕ್ಷಮೆ ಮೃದುತ್ವ, ಧೀರತೆ, ವೀರತೆ, ಗಾಂಭೀರ್ಯ, ಅಸ್ತ್ರ-ಶಸ್ತ್ರಗಳ ಜ್ಞಾನ, ಪರಾಕ್ರಮ, ನಿರ್ಭಯತೆ, ವಿನಯ, ಶಾಂತಿ, ಸಹನೆ, ಉಪರತಿ, ಸಂಯಮ, ನಿಃಷ್ಪ್ರಹತೆ, ನೀತಿತಜ್ಞೆ, ತೇಜಸ್ಸು, ಪ್ರೇಮ, ತ್ಯಾಗ, ಗೌರವರಕ್ಷಣೆ, ಏಕಪತ್ನಿವ್ರತ, ಪ್ರಜಾರಂಜನೆ, ಬ್ರಾಹ್ಮಣಭಕ್ತಿ, ಮಾತಾ-ಪಿತೃಭಕ್ತಿ, ಗುರುಭಕ್ತಿ, ಭ್ರಾತೃಪ್ರೇಮ, ಮೈತ್ರೀ, ಶರಣಾಗತ ವತ್ಸಲತೆ, ಸರಳತೆ, ವ್ಯವಹಾರ ಕುಶಲತೆ, ಪ್ರತಿಜ್ಞಾಪಾಲನೆ, ಸಾಧುಸಂತರ ರಕ್ಷಣೆ, ದುಷ್ಟದಮನ, ನಿರ್ವೈರತೆ, ಲೋಕಪ್ರೀಯತೆ, ಚಾಡಿಮಾತನ್ನು ಕೇಳದೇ ಹೇಳದೇ ಇರುವದು, ಬಹುಜ್ಞತೆ, ಧರ್ಮಜ್ಞತೆ, ಧರ್ಮಪರಾಯಣತೆ, ಪವಿತ್ರತೆ ಮುಂತಾದ ಎಲ್ಲ ಗುಣಗಳೂ ಮರ್ಯಾದಾಪುರುಷೋತ್ತಮ ಶ್ರೀರಾಮನಲ್ಲಿ ಪೂರ್ಣರೂಪದಿಂದ ವಿಕಾಸ ಹೊಂದಿದ್ದವು.


ತಂದೆ- ತಾಯಿ, ಬಂಧು- ಮಿತ್ರ, ಪತ್ನಿ- ಪುತ್ರ, ಸೇವಕ- ಪ್ರಜೆ, ಮುಂತಾದವರ ಜೊತೆ ರಾಮನ ಅಸಾಧಾರಣವಾದ ಆದರ್ಶವರ್ತನೆಯಿತ್ತು ಎಂಬುದನ್ನು ಸ್ಮರಿಸಿಕೊಂಡರೆ ಮನಸ್ಸು ಅತ್ಯಂತ ಆನಂದಭರಿತವಾಗುತ್ತದೆ.


ಶ್ರೀರಾಮನ ಮಾತೃಭಕ್ತಿ

ಶ್ರೀ ರಾಮನ ಮಾತೃಭಕ್ತಿ ಅತ್ಯಂತ ಆದರ್ಶವಾಗಿತ್ತು. ಅದು ಅವರ್ಣನೀಯವಾದುದು. ಮಾತೆ ಕೌಸಲ್ಯೆ ಇತರ ಮಾತೆಯರ ಮಾತು ಹಾಗಿರಲಿ, ಕೈಕೇಯಿಯು ಕಠೋರವಾಗಿ ವರ್ತಿಸಿದರೂ ಅವಳ ವಿಚಾರದಲ್ಲಿ ಶ್ರೀರಾಮನ ವ್ಯವಹಾರವು ಸದಾ ಭಕ್ತಿ ಮತ್ತು ಗೌರವಪೂರ್ಣವಾಗಿಯೇ ಇತ್ತು. ಶ್ರೀ ರಾಮನ ಮಾತೃಭಕ್ತಿಯ ಹಲವಾರು ಉದಾಹರಣೆಗಳು ಸಿಗುತ್ತವೆ.


ಪಿತೃಭಕ್ತಿ

ಮಾತೃಭಕ್ತಿಯಂತೆ ಶ್ರೀರಾಮನ ಪಿತೃಭಕ್ತಿಯೂ ಅತ್ಯಂತ ಅದ್ಭುತವಾಗಿತ್ತು. ಶ್ರೀರಾಮನು ಮನಸ್ಸಿನಲ್ಲಿ ತಂದೆಯ ಆಜ್ಞೆಯನ್ನು ಪಾಲನೆ ಮಾಡಲು ಎಷ್ಟು ಉತ್ಸಾಹ, ಸಾಹಸ, ಮತ್ತು ದೃಢನಿಶ್ಚಯ ವಿತ್ತೆಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಲಕ್ಷ್ಮಣ, ಭರತ, ಋಷಿಮುನಿಗಳ ಜೊತೆಗೆ ಮಾತನಾಡುವ ಸಮಯದಲ್ಲಿಯೂ ಶ್ರೀರಾಮನು ಪಿತೃಭಕ್ತಿಯ ವಿಚಾರದಲ್ಲಿ ಬಹಳ ಮಾತುಗಳನ್ನು ಹೇಳಿರುವದಲ್ಲದೇ ಶ್ರೀರಾಮನ ಬಾಲಲೀಲೆಯನ್ನು ವರ್ಣನೆಮಾಡುವಾಗಲೂ ಯಾವಾಗಲೂ ಪಿತೃಸೇವೆಯಲ್ಲಿ ಮಗ್ನನಾಗಿರುತ್ತಾನೆಂದು ಹೇಳಲಾಗಿದೆ.


ಏಕಪತ್ನೀವ್ರತ

ಶ್ರೀರಾಮನ ಏಕಪತ್ನಿವ್ರತವೂ ಬಹಳ ಆದರ್ಶಪೂರ್ಣವಾಗಿತ್ತು. ಶ್ರೀರಾಮನು ಸ್ವಪ್ನದಲ್ಲಿ ಕೂಡ ಜಾನಕಿಯನ್ನು ಬಿಟ್ಟು ಪರಸ್ತ್ರೀಯನ್ನು ನೆನೆಯಲಿಲ್ಲ. ಸೀತೆಯನ್ನು ಕಾಡಿಗೆ ಕಳುಹಿಸಿದ ಮೇಲೆ ಯಜ್ಞಮಾಡುವಾಗ ಪತ್ನಿಯ ಅವಶ್ಯಕತೆ ಉಂಟಾದಾಗ ಶ್ರೀರಾಮನು ಸೀತೆಯ ಸ್ವರ್ಣ ಪ್ರತಿಮೆಯನ್ನು ಇಟ್ಟುಕೊಂಡು ಕೆಲಸ ಪೂರ್ಣ ಮಾಡಿದನು. ಭಗವಾನ್ ಶ್ರೀರಾಮನಿಗೆ ಸೀತೆಯ ಮೇಲೆ ಎಷ್ಟು ಪ್ರೇಮವಿತ್ತೆಂಬುದರ ನಿದರ್ಶನವು ಸೀತಾಪಹರಣದ ನಂತರ ಪ್ರಸಂಗವನ್ನು ಓದುವದರಿಂದ ಗೊತ್ತಾಗುತ್ತದೆ. ಶ್ರೀರಾಮನು ಪರಮವೀರ, ಧೀರ, ಸಹಿಷ್ಣುವಾಗಿದ್ದರೂ ಆ ಸಮಯದ ರೋಧನೆ ಅತ್ಯಂತ ಕರುಣಾಪೂರ್ಣವೂ ಮತ್ತು ಹೃದಯವಿದ್ರಾವಕವೂ ಆಗಿದೆ.


ಭಾತೃಪ್ರೇಮ

ಶ್ರೀರಾಮನ ಭ್ರಾತೃಪ್ರೇಮವೂ ಅತುಲನೀಯವಾಗಿತ್ತು. ಶ್ರೀರಾಮನು ಸಹೋದರರೊಂದಿಗೆ ಪ್ರೀತಿಯಿಂದಲೇ ಇದ್ದನು.ಯಾವಾಗಲೂ ಅವರ ರಕ್ಷಣೆ ಮಾಡುತ್ತಿದ್ದನು. ಅವರು ಸದಾ ಸಂತೋಷವಾಗಿರುವಂತೆ ಪ್ರಯತ್ನ ಮಾಡುತ್ತಿದ್ದನು. ಲಕ್ಷ್ಮಣನು ಒಂದು ಕ್ಷಣವೂ ಶ್ರೀರಾಮನಿಂದ ಅಗಲಿರಲು ಇಚ್ಛಿಸುತ್ತಿರಲಿಲ್ಲ. ಶ್ರೀರಾಮನ ವಿಯೋಗ ಅವನಿಗೆ ಅಸಹನೀಯವಾಗಿತ್ತು. ವಿಶ್ವಾಮಿತ್ರ ಋಷಿಗಳ ಯಜ್ಞದ ರಕ್ಷಣೆಗಾಗಿ ಅವನೂ ಶ್ರೀರಾಮನ ಜೊತೆಗೆ ವನಕ್ಕೆ ಹೋದನು. ಶ್ರೀರಾಮನ ಆದರ್ಶ ಭ್ರಾತೃಪ್ರೇಮ ಕಾರ್ಯಗಳಿಂದ ನಾವೆಲ್ಲರೂ ಯಥಾಯೋಗ್ಯವಾಗಿ ಶಿಕ್ಷಣ ಪಡೆದುಕೊಳ್ಳಬೇಕು.



ಸಖ್ಯಪ್ರೇಮ

ಶ್ರೀರಾಮನಿಗೆ ಮಿತ್ರರ ಜೊತೆಯಲ್ಲಿ ಅತುಲನೀಯವಾದ ಪ್ರೇಮವಿತ್ತು. ಮಿತ್ರರಿಗಾಗಿ ಏನುಮಾಡಿದರೂ ಅದು ಅಲ್ಪವೆಂದು ತಿಳಿಯುತ್ತಿದ್ದನು. ಆದರೆ ಮಿತ್ರರು ಮಾಡಿದ ಸಣ್ಣ ಕೆಲಸವನ್ನೂ ಸಹ ಬಹಳ ದೊಡ್ಡದಾಗಿ ಪರಿಗಣಿಸಿ ಹೆಚ್ಚು ಪ್ರಶಂಸೆ ಮಾಡುತ್ತಿದ್ದನು. ಸುಗ್ರೀವ ಮುಂತಾದ ಮಿತ್ರರು ಭಗವಾನ ಶ್ರೀರಾಮನ ಸಖ್ಯಪ್ರೇಮವನ್ನು ಬಾರಿಬಾರಿಗೂ ಪ್ರಶಂಸಿಸಿರುವದು ಕಂಡುಬರುತ್ತದೆ. ರಾಮನ ವರ್ತನೆಯಿಂದ ಎಷ್ಟು ಮುಗ್ಧರಾಗಿದ್ದರೆಂದರೆ ಅವರಿಗೆ ಧನ, ಜನ, ಭೋಗ ಸುಖದ ಸ್ಮರಣೆಯೂ ಆಗುತ್ತಿರಲಿಲ್ಲ. ಅವರು ಯಾವಾಗಲೂ ಶ್ರೀರಾಮನಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಲೂ ಸಹ ಸಿದ್ಧರಾಗಿದ್ದರು.


ಶರಣಾಗತ ವತ್ಸಲತೆ

ರಾವಣನಿಂದ ಅಪಮಾನಿತನಾದ ವಿಭೀಷಣನು ಶ್ರೀರಾಮನಿಗೆ ಶರಣಾಗಿ ಬಂದಾಗ ನಡೆದಂತಹ ಪ್ರಸಂಗವು ಭಗವದ್ಭಕ್ತರ ಹೃದಯದಲ್ಲಿ ಉತ್ಸಾಹ ಮತ್ತು ಆನಂದದ ಅಲೆಯನ್ನೇ ಎಬ್ಬಿಸುತ್ತದೆ.ಶ್ರೀರಾಮನು ಪ್ರೇಮತುಂಬಿದ ದೃಷ್ಟಿಯಿಂದ ಹಾಗೂ ಮಾತುಗಳಿಂದ ವಿಭೀಷಣನಿಗೆ ಧೈರ್ಯವಾಗಿರುವಂತೆ ಹೇಳಿ ಆಗಲೇ ಲಕ್ಷ್ಮಣನಿಂದ ಸಮುದ್ರದ ಜಲ ತರಿಸಿ ಅಲ್ಲೇ ವಿಭೀಷಣನಿಗೆ ಲಂಕೆಯ ಅಧಿಪತಿಯನ್ನಾಗಿ ಅಭಿಷೇಕ ಮಾಡಿದನು.


ಪ್ರಜಾರಂಜನೆ

ಪ್ರಜೆಗಳನ್ನು ಎಲ್ಲ ರೀತಿಯಿಂದಲೂ ಸಂತೋಷವಾಗಿಡುವಂತಹ ಶ್ರೀರಾಮನ ಗುಣವು ಹೆಚ್ಚು ಆದರ್ಶಪೂರ್ಣವಾಗಿತ್ತು. ತನ್ನ ಪ್ರಜೆಗಳನ್ನು ಮಕ್ಕಳಿಗಿಂತಲೂ ಹೆಚ್ಚು ವಾತ್ಸಲ್ಯ ಪ್ರೇಮದಿಂದ ಪಾಲಿಸುತ್ತಿದ್ದನು. ಪ್ರಜೆಗಳ ಹಿತವನ್ನೇ ಬಯಸುವ ಪ್ರಭುವಿನ ಮೇಲೆ ಜನರಿಗೆ ಅದ್ಭುತ ಪ್ರೇಮವಿತ್ತು. ರಾಮಚಂದ್ರನು ಪರಾಕ್ರಮಿಯಾಗಿಯೂ ಎಷ್ಟೊಂದು ಕ್ಷಮಾಶೀಲನಾಗಿದ್ದನೆಂದರೆ ತನ್ನ ಕುರಿತು ಯಾರಾದರೂ ಅಪರಾಧ ಮಾಡಿದರೂ ಅದನ್ನು ಅವನು ಅಪರಾಧವೆಂದು ಭಾವಿಸುತ್ತಲೇ ಇರಲಿಲ್ಲ.


ಪರಾಕ್ರಮ

ಜನಕಪುರದಲ್ಲಿ ಜನಕ ಮಹಾರಾಜನ ಆಸ್ಥಾನದಲ್ಲಿದ್ದ ಶಿವಧನಸ್ಸನ್ನು ಶ್ರೀರಾಮನು ಅನಾಯಾಸದಿಂದ ಎತ್ತಿ ಬಗ್ಗಿಸಿ ಮುರಿದು ಹಾಕಿದನು. ವಿಷ್ಣುವಿನ ಬಿಲ್ಲಿಗೆ ಬಾಣಹೂಡಿ ಪರಶುರಾಮನ ತೇಜಸ್ಸನ್ನು ಪಡೆದುಕೊಂಡನು. ಪಂಚವಟಿಯಲಿ 14 ಸಾವಿರ ರಾಕ್ಷಸರನ್ನು ಯಾರ ಸಹಾಯವೂ ಇಲ್ಲದೇ ಹೊಡೆದು ಕೆಡವಿದನು. ವಾಲಿಯಂತಹ ಮಹಾ ಯೋಧನನ್ನು ಒಂದೇ ಬಾಣದಿಂದ ಕೊಂದು ಹಾಕಿದನು. ಧನುಸ್ಸಿಗೆ ಬಾಣವನ್ನು ಹೂಡಿದ ಕೂಡಲೇ ಸಮುದ್ರ ಅಲ್ಲೋಲಕಲ್ಲೋಲವಾಯಿತು. ಸಮುದ್ರ ರಾಜನು ಭಯಭೀತನಾಗಿ ಶರಣಾಗತನಾದನು. ಲಂಕೆಗೆ ಹೋಗಿ ರಾಕ್ಷಸರ ಸಮೇತ ಕುಂಭಕರ್ಣ, ರಾವಣರನ್ನು ವಧಿಸಿ ಸಮಸ್ತ ವಿಶ್ವದಲ್ಲಿ ವಿಜಯಪತಾಕೆ ಹಾರಿಸಿದನು.


ರಾಮನ ಸದ್ಗುಣಗಳು

ಕರುಣಾಮಯಿ- ರಾಮನು ಪ್ರತೀ ಜೀವಿಗೂ ದಯೆ ಮತ್ತು ಕರುಣೆಯನ್ನು ತೋರಿಸುವ ವ್ಯಕ್ತಿ. ವಾತ್ಸಲ್ಯ ಹರಡುವವನು, ಕೇಳಿದ್ದನ್ನು ಉದಾರವಾಗಿ ನೀಡುವವನು. ರಾಜಭೋಗ ತ್ಯಜಿಸಿ ಸರಳ ಜೀವನದತ್ತ ನಡೆದವನು ಶ್ರೀರಾಮ.


ಪುರುಷೋತ್ತಮ

ಒಬ್ಬ ವ್ಯಕ್ತಿಯಾಗಿ ಶ್ರೀರಾಮನು ಎಲ್ಲರಿಗೂ ಆದರ್ಶ ವ್ಯಕ್ತಿತ್ವ ಹೊಂದಿದವನು. ತನ್ನ ಎಲ್ಲ ನೈತಿಕ ಹೊಣೆಗಾರಿಕೆಯನ್ನು ಪೂರೈಸಿದ್ದರಿಂದ ಶ್ರೀರಾಮ ಪುರುಷೋತ್ತಮನೆನಿಸಿದ್ದಾನೆ.


ಆಕರ್ಷಕ ರೂಪ

ರಾಮನ ರೂಪವೆಂದರೆ ಭವ್ಯವಾದ ಮೈಕಟ್ಟು, ಪ್ರಕಾಶಮಾನವಾದ ಮೈಬಣ್ಣ, ಉದಾತ್ತ ತಲೆ, ಆಕರ್ಷಕ ಹಣೆ. ಮಹಾನ್ ಪರಾಕ್ರಮ ಹೊಂದಿರುವವನು, ಹಿರಿಯರ ಮೇಲಿನ ಗೌರವ, ಮಕ್ಕಳ ಮೇಲಿನ ಪ್ರೀತಿ, ಕಷ್ಟದ ಸಮಯದಲ್ಲಿ ಬೆಂಬಲ, ಹೋರಾಡುವ ಧೈರ್ಯ ಇವುಗಳಿಂದ ರಾಮನಿಗೆ ಆಕರ್ಷಕ ನೋಟವನ್ನು ನೀಡಿತು.


ಒಂದು ಮಾತು ಒಂದೇ ಬಾಣ.

ರಾಮನ ಸಿದ್ಧಾಂತವೆಂದರೆ ತಪ್ಪದ ಮಾತು, ಏಕಪತ್ನಿವ್ರತಸ್ಥ, ರಾಮನು ಸತ್ಯವಾದಿ, ಪಿತೃವಾಕ್ಯ ಪರಿಪಾಲಕ, ಹಿರಿಯರು ಏನೇ ಹೇಳಿದರೂ ಅದನ್ನು ಶಿರಸಾವಹಿಸಿ ಮಾಡಬೇಕು ಎಂದು ತೋರಿಸಿಕೊಟ್ಟವನು ಶ್ರೀರಾಮ.


ರಾಮರಾಜ್ಯ

ಶ್ರೀರಾಮ ಜನಕರಾಜ ರಕ್ಷಕ, ಶ್ರೀರಾಮನ ವ್ಯಕ್ತಿತ್ವ ಪ್ರತಿಯೊಬ್ಬ ವ್ಯಕ್ತಿಗೂ ಆದರ್ಶ, ಗುಣಗಳು ಆದರ್ಶ, ರಕ್ಷಣೆಯ ಕವಚ, ಶ್ರೀರಾಮ ಮಂತ್ರ ರಕ್ಷಣೆಯ ಕವಚವಾಗಿದೆ.

"ಶ್ರೀ ರಾಮ ಜಯರಾಮ ಜಯಜಯ ರಾಮ".




-ಗಿರಿಜಾ. ಎಸ್.ದೇಶಪಾಂಡೆ. ಬೆಂಗಳೂರು

GirijaShankar,Flat no.303

D.S.MAX.SANKALPNo.21/22.Subramanyapur

Post.TURAHALLI Bangaluru- 560061

Contact no- 9739388300.


ಲೇಖಕಿಯ ಸಂಕ್ಷಿಪ್ತ ಪರಿಚಯ:

ಗಿರಿಜಾ.ಎಸ್. ದೇಶಪಾಂಡೆ ಅವರ ಲೇಖನಗಳು- ಮಕ್ಕಳ ಕಥೆಗಳು, ಅಡುಗೆಯ ರೆಸೆಪಿಗಳು, ಸಂದರ್ಶನ ಲೇಖನಗಳು, ಕವನಗಳು, ಶಿಶುಗೀತೆಗಳು, ಹನಿಕತೆ, ಕತೆಗಳು, ವಾರಪತ್ರಿಕೆ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ.ಪ್ರತೀ ಬುಧವಾರ ಡೈಲಿ ನ್ಯೂಸ್‌ ಪತ್ರಿಕೆಯಲ್ಲಿ ಅಂಕಣ ಬರಹ. ಕನ್ನಡ ಸ್ನಾತಕೋತ್ತರ ಪದವಿ. ಶಿಕ್ಷಕಿಯಾಗಿ ತರಬೇತಿಯಲ್ಲಿ ಪದವಿ. 

ಕೃತಿಗಳು- ಸಂವಾದಿನಿ (ವಿವಿಧ ರಂಗದಲ್ಲಿ ಸಾಧನೆಗೈದ ಮಹಿಳೆಯರ ಪರಿಚಯದ ಪುಸ್ತಕ), ಸಂಜೀವಿನಿ (ಆರೋಗ್ಯ ಲೇಖನಗಳ ಸಂಗ್ರಹ)., ಜೇನುಗೂಡು (ಹನಿ ಹನಿ ಅನುಭವಗಳ ಪರಿಚಯ), ಸಂಸ್ಕೃತಿ (ನಮ್ಮ ಆಚರಣೆಗೊಂದು ಭಾವಾರ್ಥ), ಆನಂದಶಂಕರ ಜಗದ್ಗುರು ಶಂಕರಾಚಾರ್ಯರ ಸೌಂದರ್ಯ ಲಹರಿ, ಶಿವಾನಂದ ಲಹರಿ ಶ್ಲೋಕದ ಅರ್ಥ, ತಾತ್ಪರ್ಯ ಸಹಿತ. ಚಿಗುರು ಕೃತಿ ತಯಾರಿ ಹಂತದಲ್ಲಿದೆ. ಪ್ರಶಸ್ತಿಗಳು- 2019 ರಲ್ಲಿ ಶ್ರೇಷ್ಟ ಅಂಕಣಗಾರ್ತಿಯಾಗಿ ಸಾಹಿತ್ಯಶ್ರೀ ಪ್ರಶಸ್ತಿ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸೇವಾರತ್ನ, ಲಲಿತಾ ಪ್ರಶಸ್ತಿ. 86 ನೇಯ ಕನ್ನಡ ಸಾಹಿತ್ಯ ಪರಿಷತ್ತು ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕಿಯಾಗಿ ಸನ್ಮಾನ.


1 Comments

  1. ಶ್ರೀ ರಾಮನ ಕುರಿತಾದ ಸಂಕ್ಷಿಪ್ತವಾಗಿ ಬರಹ ಭಾಳ ಚೆನ್ನಾಗಿದೆ. ಅಭಿನಂದನೆಗಳು

    ReplyDelete

Post a Comment

Post a Comment

Previous Post Next Post