- ಜಿ. ಟಿ. ಶ್ರೀಧರ ಶರ್ಮಾ, ಸಾಗರ
"ಅಳು" ಅಥವಾ ದುಃಖ, ನೋವು, ಉಮ್ಮಳ ರಾಮಾಯಣದ ತುಂಬಾ ಹಾಸಿಹೊಕ್ಕಿದೆ. ಬಹುಶಃ ಈ ಅಳುವೇ ಇಂದೂ ಕೂಡ ಜನರ ಬದುಕಿನಲ್ಲಿಯೂ ಹಾಸಿಹೊಕ್ಕಿದೆ. ಇದರಿಂದ ಹೊರಬರಲೂ ನಾವು ಇಂದೂ ರಾಮಾಯನವನ್ನೇ ಅಭ್ಯಾಸಮಾಡಿ ಅನುಸರಿಸಬೇಕಿದೆ. ರಾಮಾಯನದ ಕೆಳಗಿನ ಈ ಶಾಪಶ್ಲೋಕವೇ ಮಹಾಕಾವ್ಯಕ್ಕೆ ಪ್ರೇರಣೆ ಎಂಬುದು ರಾಮಾಯಣ ಓದಿದವರಿಗೆಲ್ಲರಿಗೂ ಗೊತ್ತು.
"ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ || ಯತ್ ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಮ್ ||
ಇಂದೂ ಉತ್ತಮವಾಗಿ ಬಾಳಿ- ಬದುಕುತ್ತಿರುವವರು ಕೂಡ ಸಾಕಷ್ಟು ನೋವನ್ನು ಅನುಭವಿಸಿ ಅದರಿಂದ ಹೊರಬಂದವರೆ. ಉತ್ಕೃಷ್ಟ ಸಾಹಿತ್ಯ ರಚನೆ ಮಾಡಿರುವ ಬೇಂದ್ರೆ, ಕಾರಂತ ಮೊದಲಾದವರೂ ಕೂಡ ಇಂಥ ನೋವುಂಡವರೇ ಸರಿ. ಕಾರಂತರಂತೂ 'ತುಂಬಾ ಉಮ್ಮಳದಿಂದ ಇದ್ದೇನೆ' ಎಂದಿದ್ದರು! ಬೇಂದ್ರೆಯವರ 'ನೀ ಹೀಂಗ ನೊಡಬೇಡ ನನ್ನ' ಮುಂತಾದ ಕವನಗಳು. ಈ ದೃಷ್ಟಿಯಿಂದ ರಾಮಾಯಣದ ಓದು ಇಂದಿಗೂ ಪ್ರಸ್ತುತ. ಇದರೊಂದಿಗೆ ರಾಮ- ರಾವಣರ ಜೀವನಕತೆಯೊಂದಿಗೆ ವಾಲ್ಮೀಕಿಯ ಜೀವನಕತೆಯೂ ರಾಮಾಯಣ ಕಾವ್ಯದಲ್ಲಿದೆ. ಹೀಗೆ ಬದುಕಿನಲ್ಲಿ ಸಾಧನೆ ಮಾಡಿದವರೆಲ್ಲರ ಜೀವನವೂ ತಮ್ಮ ಸಾಧನೆಯೊಂದಿಗೇ ಕೂಡಿರುತ್ತದೆ. ವಾಲ್ಮೀಕಿಯಾಗುವ ಮೊದಲಿನ ಬೇಡನ ಬದುಕನ್ನು ಒಮ್ಮೆ ಅವಲೋಕಿಸಿ. ಅವನ ಮನೆಯವರು ಹೇಳಿದರಂತೆ- ''ನಿನ್ನ ಪಾಪ ಪುಣ್ಯ ನಿನಗೇ ಹೊರತು ನಮಗಲ್ಲ; ನಿನ್ನ ಹಣ ಸಂಪಾದನೆಯಲ್ಲಿ ಮಾತ್ರ ನಾವು ಭಾಗಿಗಳು''. ಬಹುಶಃ ಅಂದಿಗಿಂತ ಇಂದು ಇದು ಹೆಚ್ಚು ಪ್ರಸ್ತುತ, ಹಾಗಾಗಿ ನಾವು ಈಗಲೂ ರಾಮಾಯಣವನ್ನು ಅನುಸಂಧಾನಮಾಡಬೇಕಿದೆ. ರಾಮಾಯಣದ ಅಪರೂಪದ ಸಂಗತಿಯೊಂದು ಇದರ ಓದುಗರಿಗೆ ಸದಾ ಹಸಿರು- "ಶ್ರೀ ರಾಮಚಂದ್ರನ ಸಭೆಯಲ್ಲಿಯೇ ರಾಮಾಯಣದ ಗಾಯನ" (ಕಥೆಯ ನೇರವರದಿ!) ಈಗಲೂ ನಾವು ನಮ್ಮ ದೇಶದ ಲೋಕಸಭೆ- ರಾಜ್ಯಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ವಿಧಾನಪರಿಷತ್ತುಗಳಲ್ಲಿ ಅನುಸರಿಸುತ್ತಿದ್ದೇವೆ. ಅಂದರೆ ರಾಮಾಯಣ ಇಂದೂ ಪ್ರಸ್ತುತವಾಗಿದೆ!.
"ಕೊಟ್ಟು ಬಾಳು- ಬಿಟ್ಟು ಬಾಳು"-
ಇಡೀ ರಾಮಾಯಣವನ್ನು ನಾವು ಅನುಸಂಧಾನಮಾಡಿದರೆ? ರಾಮಾಯಣದ ಒಂದು ಸಂದೇಶವೆಂದರೆ ನಾವು 'ಕೊಟ್ಟು ಬಾಳಬೇಕು- ಬಿಟ್ಟು ಬಾಳಬೇಕು. ದಶರಥನಿಗೆ ಮೊದಲು ಮಕ್ಕಳಿರಲಿಲ್ಲ. ಕೌಸಲ್ಯೆ, ಸುಮಿತ್ರೆಯರಿಬ್ಬರಿಗೂ ಇಲ್ಲ. ಮೂರನೆಯ ಮಡದಿ ಕೇಕಯ ದೇಶದ ರಾಜ ತನ್ನ ಮಗಳನ್ನು ಕೊಡಲು ಮುಂದೆ ಬಂದನಾದರೂ ಒಂದು ಶರತ್ತಿನ ಮೇಲೆ- "ನನ್ನ ಮಗಳು ಕೈಕೆಯಲ್ಲಿ ಹುಟ್ಟುವ ಮಗನಿಗೇ ಪಟ್ಟಕಟ್ಟಬೇಕು". ಬೇರೆ ವಿಧಿಯಿಲ್ಲ, ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ. ಅಂದರೆ ದಶರಥ ಕೊಡಲು-ಬಿಡಲು ಒಪ್ಪಿಕೊಂಡ! ಅನಂತರದ ಕತೆ, ಕೌಸಲ್ಯೆಗೆ ಹಿರಿಯ ಮಗ ರಾಮ, ಕೈಕೇಯಿಯ ಮಗ ಭರತ ಎರಡನೆಯವನು, ಸುಮಿತ್ರೆಯ ಮಕ್ಕಳಾದ ಲಕ್ಷ್ಮಣ- ಶತ್ರುಘ್ನರು ಕಿರಿಯರು. ಮುಂದೆ ರಾಮಾಭಿಷೇಕದ ಕತೆ ಎಲ್ಲರಿಗೂ ಗೊತ್ತು. ತನ್ನದೇ ಹಿಂದಿನ ಹಟಹಿಡಿದ ಕೈಕೆಯಿಂದಾಗಿ ರಾಮನಿಗೆ ವನವಾಸ, ಭರತನಿಗೆ ರಾಜ್ಯಾಭಿಷೇಕ!. ಇಲ್ಲಿಯೂ ಶ್ರೀರಾಮ ಕೊಟ್ಟು- ಬಿಟ್ಟು ಬಾಳಿ- ಬದುಕಿದ. ಈಗ ಆಗುತ್ತಿರುವುದೂ ಇದೇ- ಕಾಣದ ಕೈಗಳಿಂದ ಅಥವಾ 'ಏನೇನೋ' ಕಾರಣಗಳಿಂದ ಕೆಲವರು ಕೊಟ್ಟು- ಬಿಟ್ಟು ಬಾಳಬೇಕಾಗುತ್ತದೆ. ಇದು ಮನೆ- ಹಳ್ಳಿ- ಪಂಚಾಯಿತಿಗಳಿಂದ ರಾಜ್ಯ- ರಾಷ್ಟ್ರ ಮಟ್ಟದ ವರೆಗೂ ಇದೆ. ಹೀಗೆ 'ಕೊಡುವ- ಬಿಡುವ' ಪರಂಪರೆ ರಾಮಾಯಣ ಕಾಲದ್ದಾದರೂ ಇಂದಿಗೂ ಪ್ರಸ್ತುತ!.
ಮನೆಯ ಸ್ತ್ರೀಯರಲ್ಲಿ ಹೊಂದಾಣಿಕೆ:-
ದಶರಥನಿಗೆ ಮೂವರು ಪತ್ನಿಯರು. ವಿಶೇಷವೆಂದರೆ ಮೂವರೂ ಹೊಂದಿಕೊಂಡೇ ಇದ್ದರು. ಹಿರಿಯ ರಾಣಿ ಕೌಸಲ್ಯೆಯಂತೂ ಸಹನೆಯ ಸಾಕಾರದಂತಿದ್ದು ಉಳಿದ ಇಬ್ಬರನ್ನೂ ಸದಾ ಇನ್ನಿಲ್ಲದಂತೆ ಪ್ರೀತಿಸುತ್ತಿದ್ದಳು. ತನ್ನ ಮುದ್ದು ಮಗ ಶ್ರೀರಾಮನಿಗೆ ಪಟ್ಟಾಭಿಷೇಕ ತಪ್ಪಿಸಿ ವನವಾಸಕ್ಕೆ ಕಳುಹಿಸಿದರೂ ಕೈಕೇಯಿಯ ಬಗ್ಗೆ ಕಿಂಚಿತ್ತೂ ದ್ವೇಷವಿಲ್ಲ! ಒಮ್ಮೆ ದಶರಥನೇ ಕೌಸಲ್ಯೆ ಕುರಿತು ಹೀಗೆ ಹೇಳುತ್ತಾನೆ- "ನಿನ್ನನ್ನು ಕೈಜೋಡಿಸಿ ಕೇಳಿಕೊಳ್ಳುತ್ತೇನೆ, ಶತ್ರುಗಳಲ್ಲೂ ದೋಷಕಾಣದ ನೀನು ಪ್ರಸನ್ನಳಾಗು". ಮಗನಿಗಾಗಿ ಸರ್ವಸ್ವನ್ನೂ ಕಳೆದುಕೊಂಡರೂ ಈ ರಾಮ- "ಕೌಸಲ್ಯಾ ಸುಪ್ರಜಾ ರಾಮ". ಅಂದರೆ ಒಂದು ಮನೆ- ಗ್ರಾಮ- ನಗರ- ದೇಶ ಸುಖ- ನೆಮ್ಮದಿಯಿಂದ ಇರಬೇಕಾದರೆ ಆ ಮನೆಯಲ್ಲಿರುವ ಮಾತೆಯರೆಲ್ಲರೂ ಹೊಂದಿಕೊಂಡಿರಬೇಕು- ಕೊಟ್ಟು ಪಡೆಯುತ್ತಿರಬೇಕು. ಹೀಗೆ ಈ ಸಂದೇಶ ಇಂದಿಗೂ ಪ್ರಸ್ತುತ ಎಂಬುದು ಕೌಸಲ್ಯೆ ಮತ್ತಿಬ್ಬ ರಾಣಿಯರ ಬದುಕು- ಬಾಳೇ ನಮಗೆ ತಿಳಿಸುತ್ತದೆ.
ಸಿಕ್ಕೊಡನೆ ದಕ್ಕಿಸಿಕೊಳ್ಳಬಾರದು:
ನಮ್ಮ ದೇಶದ ಹೆಸರಿನೊಂದಿಗೇ ಅಂಟಿಕೊಂಡಿರುವ ಭರತನ ಬದುಕೇ ನಮಗೆ ಇಂದೂ ಪ್ರಸ್ತುತ. ಕಾರಣ ಅನಾಯಾಸವಾಗಿ ಒದಗಿಬಂದ ಅಯೋಧ್ಯೆಯ ಅಧಿಕಾರವನ್ನು ಆತ ಒಪ್ಪಕೊಳ್ಳಲೇ ಇಲ್ಲ. ಬದಲಾಗಿ ತನ್ನಣ್ಣ ಪ್ರಭು ಶ್ರೀರಾಮನ ಪಾದುಕೆಗಳನ್ನೇ ರಾಜನೆಂದು ಸ್ವೀಕರಿಸಿ ರಾಜ್ಯಭಾರ ಮಾಡಿದ ಅಪರೂಪದ ' ರಾಜಸಂತ!. ಈಗಲೂ ಹೀಗೆ ಸೇನೆಗೋ, ಸರ್ಕಾರಿ ಕೆಲಸಕ್ಕೋ ಸೇರಿದ ಹಿರಿಯ ಸಹೋದರರು ತಾತ್ಕಾಲಿಕವಾಗಿ ತಮ್ಮ ತಮ್ಮ ಮನೆಗಳಿಂದ ದೂರದಲ್ಲಿರುತ್ತಾರೆ. ಆವಾಗ ಕಿರಿಯ ಸಹೋದರನಿಗೆ ತಾತ್ಕಾಲಿಕವಾಗಿ ಮನೆಯ ಹೊಣೆಗಾರಿಕೆ- ಅಂದರೆ ಜವಾಬ್ದಾರಿ ಬಂದರೂ ತಾನೇ ಸದಾ ಆಕ್ರಮಿಸಬಾರದು. ಅಥವಾ ಒಮ್ಮೊಮ್ಮೆ ವಯೋವೃದ್ಧ ತಂದೆ ಯಾವುದೋ ಒತ್ತಡಕ್ಕೆ ಒಳಗಾಗಿ ಕಿರಿಯ ಮಗನಿಗೇ ಅಧಿಕಾರ ಹಸ್ತಾಂತರಿಸಿದರೂ ಫಕ್ಕನೆ ಮೇಲೆ ಕೂತು ಒಡಹುಟ್ಟಿದವರನ್ನು ದೂರ ಸರಿಸಬಾರದು ಅಥವಾ ಸಿಕ್ಕೊಡನೆ ದಕ್ಕಿಸಿಕೊಳ್ಳಬಾರದು. ಈ ಸಂದೇಶವೂ ನಮಗೆ ಭರತನ ಮೂಲಕ ವಾಲ್ಮೀಕಿ ಮಹರ್ಷಿಗಳು ಕೊಟ್ಟಿರುತ್ತಾರೆ. ಹಾಗಾಗಿ ಇದೊಂದು ಸಾರ್ವಕಾಲಿಕ ಆದರ್ಶ!, ಸದಾ ನಮಗೆಲ್ಲರಿಗೂ ಪ್ರಸ್ತುತ!.
ಕೂಡಿ ಬಾಳಿದರೆ?
"ಮರ್ಯಾದಾ ಪುರುಷೋತ್ತಮ"ನೆಂದೇ ಭಾರತೀಯರೆಲ್ಲರ ಹೃನ್ಮನಗಳಲ್ಲಿ ಚಿರಂತನ ಸ್ಥಾನ ಪಡೆದಿರುವ ಶ್ರಿರಾಮಚಂದ್ರನಿಂದ ನಾವು ಕಲಿತಷ್ಟೂ ಇದೆ, ಅನುಸರಿಸುವಷ್ಟೂ ಇದೆ. ಇತ್ತೀಚಿಗೆ ನಮ್ಮ ದೇಶದ ಎಲ್ಲಕಡೆ 'ಕೂಡುಕುಟುಂಬ' ದ ಆದರ್ಶವೇ ನೇಪಥ್ಯಕ್ಕೆ ಸರಿಯುತ್ತಿದೆ. ಇನ್ನು ಮುಂದೆ ಗಂಡ- ಹೆಂಡತಿ ಒಟ್ಟಿಗೇ ಬಾಳಿ- ಬದುಕಿದರೆ ಅದೇ ಕೂಡುಕುಟುಂಬವಾದಿತು! ಆದರೆ ಶ್ರೀರಾಮಚಂದ್ರ ಆದರ್ಶ ಮಗ, ಸಹೋದರ, ಪತಿ, ದೊರೆ, ಪಿತ ಎಲ್ಲವೂ ಆಗಿದ್ದ. ಇವೆಲ್ಲವುಗಳಿಗೂ ಅವನಲ್ಲಿದ್ದ ತ್ಯಾಗ ಗುಣ ಅದ್ವಿತೀಯವಾದದ್ದು. ಉಪನಿಷತ್ತಿನ "ತ್ಯಾಗದಿಂದ ಮಾತ್ರ ಅಮೃತತ್ವ" ಎಂಬುದಕ್ಕೆ ಸಾಕಾರ ಮೂರ್ತಿ ಶ್ರೀರಾಮಚಂದ್ರ! ತಂದೆಯ ಮಾತು ಉಳಿಯಲು ಮಗ ಕಾಡಿಗೆ ಹೋಗಬೇಕು! ರಾಮ ತಂದೆಯ ಸತ್ಯಸಂಧತೆಗಾಗಿ ಕೈಗೆ ಬರಬಹುದಾಗಿದ್ದ ( ನಾಳೆಯೇ ಪಟ್ಟಾಭಿಷೇಕ) ಅಧಿಕಾರವನ್ನು ತಾನೇ ತ್ಯಾಗಮಾಡಿ ಕಾಡಿಗೆ ಹೊರಟ! ಅಪ್ಪನ ಮಾತು ಉಳಿಯಬೇಕೆಂದರೆ ಮಕ್ಕಳು ಕೂಡಿ ಬಾಳಬೇಕು ಎಂಬುದನ್ನು ನಮಗೆಲ್ಲರಿಗೂ ಕಲಿಸದೇ ಕಲಿಸಿದ, ತಿದ್ದದೇ ತಿದ್ದಿದ!. ಪ್ರಜೆಯೊಬ್ಬನ ಮಾತಿಗೂ ಮನ್ನಣೆಯಿತ್ತು ಕೈಹಿಡಿದ ಸೀತೆಯನ್ನೂ ದೂರಮಾಡಿದ! ಹೀಗೆ ಮೊದಲಿನಿಂದ ಕೊನೆಯತನಕ ಹಿರಿಯರಾದವರು ನಿರ್ಲಿಪ್ತತೆಯಿಂದ ಎಲ್ಲವನ್ನೂ ಬಿಡುತ್ತ ಬಿಡುತ್ತ ಕೂಡಿ ಬಾಳಬೇಕೆಂಬುದು ಈ ರಾಮಾಯಣದ ಒಂದು ಸಂದೇಶ- ಇದು ಇಂದಿಗೂ ಪ್ರಸ್ತುತ!
ವ್ಯಕ್ತಿಗಳಂತೆ ವ್ಯವಸ್ಥೆಯೂ ಮುಖ್ಯ:-
ರಾಮಾಯಣ ನಮಗೆ ಇಂದೂ ಪ್ರಸ್ತುತವಾಗುವುದು ಅದು ವ್ಯಕ್ತಿಗಳಂತೆ ವ್ಯವಸ್ಥೆಗೂ ಮನ್ನಣೆ- ಮಹತ್ವ ಕೊಟ್ಟಿರುವುದು.. ಒಂದು ಜನಾಂಗ ಸಂತೃಪ್ತಿಯಿಂದ ಇರಬೇಕಾದರೆ ಅಲ್ಲಿನ ಎಲ್ಲ ವ್ಯವಸ್ಥೆ ಸರಿಯಿರಬೇಕಾಗುತ್ತದೆ. ನೀರಿನ ವ್ಯವಸ್ಥೆ- ಆರ್ಥಿಕ ವ್ಯವಸ್ಥೆ, ಮಳೆ ಬಂದರೆ? ಬಾರದಿದ್ದರೆ ? ರಾಜರು ಅಂದರೆ ಆಡಳಿತ ನಡೆಸುವವರು ಹೇಗಿರಬೇಕು ಮುಂತಾದ ಎಲ್ಲ ಮಾಹಿತಿ-ವಿಚಾರಗಳೂ ರಾಮಾಯನದಲ್ಲಿವೆ. ಮಂತ್ರಿಗಳ ಕರ್ತವ್ಯ, ಪ್ರಜೆಗಳ ಮಾತುಗಳಿಗೂ ಬೆಲೆ ಕೊಡಬೇಕು ಮುಂತಾದ ಸಂಗತಿಗಳೂ ಕೂಡ ರಾಮಾಯಣದಲ್ಲಿವೆ. ರಾಮಾಯಣದ ಎಲ್ಲ ವಿಚಾರಗಳನ್ನು ಮಾಡಿದಾಗ ಅದು ಇಂದಿಗೂ ಪ್ರಸ್ತುತ ಎಂಬುದು ತಿಳಿಯುತ್ತದೆ. ರಾಮರಾಜ್ಯದಲ್ಲಿ ಅತಿವೃಷ್ಟಿ- ಅನಾವೃಷ್ಟಿ ಎರಡೂ ಇರಲಿಲ್ಲವಂತೆ! ಅಂದರೆ ಅಧಿಕಾರಿಗಳು ಹೇಗಿರಬೇಕು? ಪ್ರಕೃತಿಯನ್ನು ಹೇಗೆ ರಕ್ಷಿಸಬೇಕು ಮುಂತಾದ ಸಮಗತಿಗಳು ಇಂದಿಗೂ ಪ್ರಸ್ತುತ ಅರಿತು ಆಚರಿಸಬೇಕಷ್ಟೆ.
ಪುರುಷರಂತೆ ಸ್ತ್ರೀಯರೂ:-
ರಾಮಾಯಣದಲ್ಲಿ ಬರುವ ಪುರುಷರಂತೆ ಸ್ತ್ರೀಯರೂ ಕೂಡ ಗೌರವಾರ್ಹರು, ಹಾಗೂ ಅನುಕರಣಯೋಗ್ಯರು. ಜನಕ ಮಹಾರಾಜನ ಮಗಳಾದ ಸಿತಾದೇವಿ ವನವಾಸಕ್ಕೆ ಹೊಗಬೇಕಾಗುತ್ತದೆ. ಆವಾಗ ಆಕೆ ಹೇಳುವ ಈ ಮಾತುಗಳು- "ಗಂಡನೊಡನೆ ಹೇಗೆ ಬಾಳಬೇಕೆಂಬುದನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಸ್ತ್ರೀಯರಿಗೆ ನೂರು ಗಂಡುಮಕ್ಕಳಿದ್ದರೂ ಅವಳು ಗಂಡನ ಅಧೀನದಲ್ಲಿಯೇ ಅವನ ಸುಖದೊಡನೆಯೇ ಬಾಳಬೇಕಾದುದೇ ನ್ಯಾಯ. ತಾಯೀ ನಾನು ನನ್ನ ತವರು ಮನೆಯಲ್ಲಿಯೂ ಹಿರಿಯ ಮಗಳು, ಹೊಕ್ಕ ಮನೆಯಲ್ಲಿಯೂ ಹಿರಿಯ ಸೊಸೆ. ಹಾಗಾಗಿ ನಾನು ಎಂದೂ ಧರ್ಮವನ್ನು ಮೀರಲಾರೆ"-ಇತ್ಯಾದಿ. ಅಲ್ಪ- ಸ್ವಲ್ಪ ಭಿನ್ನಾಭಿಪ್ರಾಯಗಳೇನೇ ಇರಲಿ ಗಂಡ- ಹೆಂಡತಿ ಪರಸ್ಪರ ಅರಿತು- ಒಂದಾಗಿ ಬಾಳುವುದರಲ್ಲಿ ಎರಡು ಮನೆಯ ಎಲ್ಲರಿಗೂ ಹಿತ, ಅಗತ್ಯ- ಅನಿವಾರ್ಯ ಕೂಡ. ಇಡೀ ಸೀತಾಮಾತೆಯ ತ್ಯಾಗಮಯ ಜೀವನವೇ ನಮಗಿಂದೂ ಪ್ರಾಯಶಃ ಮುಂದೂ ಪ್ರಸ್ತುತ. ಅಂತೆಯೇ ರಾಮಾಯಣದಲ್ಲಿ ಬರುವ ಉಳಿದ ಸ್ತ್ರೀಯರೂ ಒಂದಲ್ಲ ಒಂದು ವಿಧದಲ್ಲಿ ಅನುಕರಣಯೋಗ್ಯರು.
ಹೇಗಿರಬಾರದು- ಚಾಡಿ ಹೇಳಬಾರದು ಎಂಬ ಸಂದೇಶಕೊಡುವ ಮಂಥರೆ ಕೂಡ ಪ್ರಸ್ತುತ. ಅಂದರೆ ಮನೆಯೊಡೆಯುವ ಸ್ತ್ರೀಯನ್ನು ಕಂಡಾಗ ನಾವು ಹೇಳುತ್ತೇವೆ- "ದಯಮಾಡಿ ಮಂಥರೆಯಾಗಬೇಡ. ಬೇಕಿದ್ದರೆ ಸೀತಾಮಾತೆಯಾಗು, ಆಗದಿದ್ದರೆ ಸುಮ್ಮನಿದ್ದುಬಿಡು''
ಸುತ್ತಲಿದ್ದವರೊಡನೆಯೂ ಬಾಳಬೇಕು:-
ಒಂದು ಸಮಾಜ ಎಂದರೆ ಬರಿದೆ ಮಾನವರಲ್ಲ. ನಮ್ಮ ಸುತ್ತಮುತ್ತಲಿರುವ ಪ್ರಾಣಿಪಕ್ಷಿಗಳೂ ನಮ್ಮ ಬದುಕಿಗೆ ಪೂರಕ. ರಾಮಾಯಣದಲ್ಲಿ ರಾಮನ ಪಾತ್ರಕ್ಕೆ ಸರಿಸಮನಾಗಿ ಸದಾ ನೆನಪಿನಲ್ಲಿ ಉಳಿಯುವವನು ವಾನರಶ್ರೇ಼ಷ್ಠ ಆಂಜನೇಯ. ನಂಬಿಕೆಗೆ, ಭಕ್ತಿಗೆ ಎಂದೂ ಕಳಂಕತರದೇ ರಾಮ-ಸೀತೆ -ಲಕ್ಷ್ಮಣ ಮೊದಲಾದವರೊಂದಿಗೆ ಸದಾ ಹೊಂದಿಕೊಂಡು ಬಾಳಿ- ಬದುಕಿದ ಆಂಜನೇಯನು ನಮಗೆ ಸದಾ ಪ್ರಸ್ತುತ. ನಾವು ಎಲ್ಲರೊಂದಿಗೂ ಹೊಂದಿಕೊಂಡು ಹೋಗುವ ಗುಣಗ್ರಾಹಿಗಳಾಗಬೇಕು. ಅಂತೆಯೇ ಜಟಾಯು ಪಕ್ಷಿ ಕೂಡ. (ಪುಟದ ಮಿತಿಯಿರುವುದರಿಂದ ವಿವರಿಸಿಲ್ಲ).
ಹೀಗೆ ರಾಮಾಯಣ ಆದಿಕಾವ್ಯ- ವಾಲ್ಮೀಕಿ ಆದಿಕವಿಯೆಂದು ನಾವೆಂದೂ ಉಪೇಕ್ಷೆ ಮಾಡುವಂತಿಲ್ಲ- ಮಾಡಬಾರದು ಕೂಡ. ಇದು ಆದಿಕಾವ್ಯವೇ ಹೊರತು ಅಂತ್ಯಕಾವ್ಯವಲ್ಲ. ಅಂದಿನಿಂದ ಇಂದೂ ಕೂಡ ಈ ರಾಮಾಯಣ ಮತ್ತು ಇದರಲ್ಲಿ ಬರುವ ಎಲ್ಲ ಕಥೆಗಳೂ- ಪಾತ್ರಗಳೂ ಸದಾ ಪ್ರಸ್ತುತ ಎಂಬುದರಲ್ಲಿ ಸಾಸಿವೆಯಷ್ಟೂ ಸಂಶಯವಿಲ್ಲ.
- ಜಿ. ಟಿ. ಶ್ರೀಧರ ಶರ್ಮಾ,
ವಿಶ್ರಾಂತ ಮುಖ್ಯಶಿಕ್ಷಕ, ಬದ್ಧತೆಯ ಬರಹಗಾರ
"ಅಥರ್ವ" 80 ಅಡಿ ರಸ್ತೆ, ಮೂರನೆಯ ತಿರುವು
ವಿಜಯನಗರ ಬಡಾವಣೆ, ಸಾಗರ-577401 ದೂರವಾಣಿ:- 9480473568
ಲೇಖಕರ ಸಂಕ್ಷಿಪ್ತ ಪರಿಚಯ:
ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯ. ಲೇಖಕರು. ವರದಪುರದ ಶ್ರೀ ಶ್ರೀಧರ ಸ್ವಾಮಿಗಳ ಬಗ್ಗೆ ಆರು ಪುಸ್ತಕಗಳನ್ನು ಬರೆದಿದ್ದಾರೆ. ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಗಾಢವಾದ ಬರಹಗಾರರು. ಸದ್ಯ ಸಾಗರದ ವಿಜಯನಗರ ಬಡಾವಣೆಯಲ್ಲಿ ನೆಲಸಿದ್ದಾರೆ. ಭಗವಾನ್ ಶ್ರೀಧರರ ಬಗ್ಗೆ ಇವರ ಓದು- ಬರಹ ವಿಶೇಷವಾದದ್ದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ