ಚಿತ್ರ ಕೃಪೆ: ಪ್ರೊ. ಜಿ. ವೆಂಕಟಸುಬ್ಬಯ್ಯ ಸಂಪಾದಿತ ಸಚಿತ್ರ ರಾಮಾಯಣ ದರ್ಶನ
-ಸತ್ಯಕಾಮ ಶರ್ಮಾ
‘ನ ಭೀತೋ ಮರಣದಾಸ್ಮಿ ಕೇವಲಂ ದೂಷಿತೋ ಯಶಃ’- ಶ್ರೀ ರಾಮಚಂದ್ರ
(ನನಗೆ ಮರಣದ ಭೀತಿ ಇಲ್ಲ. ನನಗೆ ಭೀತಿ ಇರುವುದು ಕೇವಲ ಕಳಂಕ ಅಂಟಿರುವ ಯಶಸ್ಸಿನದ್ದು.)
ಸೂರ್ಯ ವಂಶಿ, ಸೀತಾವಲ್ಲಭ, ಮರ್ಯಾದಾ ಪುರುಷೋತ್ತಮನಿಗೆ ಕಳಂಕದ ಭೀತಿಯೇ?
ಹೌದು! ಆದರೆ ಆ ಭೀತಿ ಜನಸಾಮಾನ್ಯರಿಗೆ ಇರುವಂತಹ ಪುಕ್ಕಲುತನ ಅಲ್ಲ. ಅದು ವಿವೇಕಿಗೆ ಇರುವ ಜಾಗೃತ ಮನಸ್ಥಿತಿ. ಶ್ರೀರಾಮ ತನ್ನಸುತ್ತ ತಾನೆ ಹಾಕಿಕೊಂಡಂತೆ ಒಂದು ಲಕ್ಷ್ಮಣ ರೇಖೆ! ಮತ್ತು ಅದರಲ್ಲೇ ಅಡಗಿರುವುದು ಶ್ರೀರಾಮನ ಶ್ರೇಷ್ಠತನ! ಅವನನ್ನು ಕಳಂಕ ಲೇಪಿತ ಯಶಸ್ಸಿನಿಂದ ದೂರವಿಟ್ಟದ್ದು ಆ ಎಚ್ಚರ, ಆ ಪರಿವೆ.
ಯಶಸ್ಸನ್ನು ಹೇಗಾದರೂ ಪಡೆಯಬಹುದು ಮತ್ತು ಜಗದ ಕಣ್ಣಿಗೆ ಕಾಣುವುದು ಕೇವಲ ಯಶಸ್ಸು, ಯಶಸ್ಸು ಮತ್ತು ಯಶಸ್ಸು ಮಾತ್ರ! ಯಶಸ್ಸಿನಿಂದ ಪ್ರಸಿದ್ಧಿ, ಕೀರ್ತಿ ಪ್ರಸಿದ್ಧಿಯಿಂದ ಹೆಸರು, ಪ್ರಚಾರ. ಇದು ಸರಪಳಿ ಕ್ರಿಯೆಯ ಹಾಗೆ ಮುಂದುವರಿದು, ಯಶಸ್ವೀ ವ್ಯಕ್ತಿಗಳಲ್ಲಿ ಅಹಂಕಾರದ ಮದ ಏರುವಂತೆ ಮಾಡುತ್ತದೆ.
ಸಮಾಜವಾದರೂ ಅಷ್ಟೇ. ಅದಕ್ಕೆ ಯಶಸ್ಸು ಮುಖ್ಯ. ಯಶಸ್ಸನ್ನು ಹೇಗೆ ಸಾಧಿಸಲಾಯಿತು ಅನ್ನುವುದು ಜನಸಾಮಾನ್ಯರಿಗೆ ಅಮುಖ್ಯ, ಗೌಣ. ಅದೇನಿದ್ದರೂ ಪಿಸುಗುಟ್ಟಲು ಮಾತ್ರ- ʼಗುಸುಗುಸುಪ್ಪುʼ ! 'ಇರ್ಬಹುದು… ಅದನ್ನೆಲ್ಲಾ ಕಟ್ ಕೊಂಡು ನಮ್ಗೇನಾಗ್ಬೇಕಿದೆ?ʼ ಅನ್ನೋ ಉಢಾಫೆ!
ಇದನ್ನೇ Honoré de Balzac (ಒನೋರೆ ಡಿ ಬಾಲ್ಜಾಕ್) ಎಂಬ ಪ್ರಸಿದ್ಧ ಫ್ರೆಂಚ್ ಕಾದಂಬರಿಕಾರ ಮತ್ತು ನಾಟಕಕಾರ ಹೇಳಿದ್ದು 'ಪ್ರತಿಯೊಂದು ಅಗಾಧ ಸಂಪತ್ತಿನ ಹಿಂದೆ ಅಪಾರ ಅಪರಾಧ ಅಡಗಿರುತ್ತದೆʼ ಎಂದು. ಅಪರಾಧ ಎಂದರೆ ಕೊಲೆ ಸುಲಿಗೆ ದರೋಡೆ ವಂಚನೆ ಮಾತ್ರವಲ್ಲ. ಶಕುನಿಯ ಕುತಂತ್ರ, ಕಳ್ಳಾಟಗಳು ಇದಕ್ಕೆ ಹೊರತಲ್ಲ. ನಂಬಿಕೆ ದ್ರೋಹ ಕೂಡಾ ಒಂದು ಅಪರಾಧವೇ! ಇದು ಅಧಿಕಾರದಾಹಿ ರಾಜಕಾರಿಣಿಗಳಿಗೆ ಲೀಲಾಜಾಲ! ಆಶ್ವಾಸನೆಗಳನ್ನು ಕೊಡುವುದು ಮತ್ತು ಕೊಟ್ಟ ಮಾತಿಗೆ ತಪ್ಪುವವರಿಗೆ ಇಲ್ಲಿ ಯಶಸ್ಸು ಕಟ್ಟಿಟ್ಟದ್ದು! ವಚನ ಭ್ರಷ್ಟತೆ ಅನ್ನುವುದು ರಾಜಕಾರಣಕ್ಕೆ ಇನ್ನೊಂದು ಹೆಸರು. ಅದು ಆಧಿಕಾರಕ್ಕೆ ಏರಲು ಇರುವ ಒಂದು ವಾಮ ಮಾರ್ಗ. ರಾಘವನದ್ದು ರಾಮ ಮಾರ್ಗ! ಅದು ರಾವಣ ಸಂಹಾರಕ್ಕೆ, ಒಂದು ಸುಭಿಕ್ಷ, ಸಮೃದ್ಧ, ಸಂಪನ್ನ ನಾಡು ನಿರ್ಮಾಣಕ್ಕೆ ಅರ್ಥಾತ್ ರಾಮ ರಾಜ್ಯ ಸ್ಥಾಪನೆಗೆ ಇರುವ ರಹದಾರಿ.
ರಾಮನಿಗೆ ಒಲಿದಂತಹಾ ಯೋಗ ಕಲಿಯುಗದಲ್ಲಿ ಒಲಿದವರನ್ನು ಒಮ್ಮೆ ಊಹಿಸಿ ನೋಡಿ. ʼಅಲ್ಲಾ ಅಯೋಧ್ಯೆಯ ಅರಸನಾಗುವ ಚಿನ್ನದಂಥಾ ಅವ್ಕಾಶ ಬಿಟ್ಟು ಅಪ್ಪ ಕೊಟ್ಟ ಮಾತನ್ನು ಉಳ್ಸೋಕೆ ಅಂತ ಕಾಡಿಗೆ ಹೊರಟ್ನಲ್ಲಾ ಇವ್ನಿಗೆ ತಲೆಗಿಲೆ ನೆಟ್ಗಿದೆಯಾ?ʼ ಸತ್ಯ ಸಂಧರನ್ನು, ನಿಯತ್ತಾಗಿ ಇರುವವರನ್ನು, ವಚನಬದ್ದವಾಗಿರುವವರನ್ನು, ಸಂದಿಗ್ಧಗಳಲ್ಲಿ, ಸೂಕ್ಷ್ಮ ಸನ್ನಿವೇಶಗಳಲ್ಲಿ ʼಸತ್ಯಂ ವದ, ಧರ್ಮಂ ಚರʼ ಎಂಬಂತೆ ಅಚಲವಾಗಿರುವವರನ್ನು- ಜನತೆ ನೋಡುವ ಪರಿ ಇದು!
ರಾಮನ ಗುರಿ ರಾಜ್ಯಭಾರ, ರಾಜ ವೈಭೊಗದ ಕಡೆಗಲ್ಲ ರಾಮರಾಜ್ಯದ ಕಡೆಗೆ. ಅವನ ಚಿತ್ತ ಸಿಂಹಾಸನದತ್ತ ಅಲ್ಲ, ಆಶ್ವಾಸನೆಯತ್ತ ಅದರಂತೆ ನಡೆಯುವುದರತ್ತ. ಅವನು ಶ್ರೀರಾಮ, ಶ್ರೀಸಾಮಾನ್ಯನಲ್ಲ! ಅವನು ವಚನಬದ್ಧ. ವಚನ ಭ್ರಷ್ಟನಾಗಲಾರ ಮತ್ತುಅವನಿಗೆ ʼವಚನಭ್ರಷ್ಟʼ ನೆಂಬ ಕಳಂಕ ದ ಪಟ್ಟ ತನಗೆ ಅಂಟಿಕೊಂಡರೆ ಎಂಬ ʼಭೀತಿʼಯೆದುರಿಗೆ, ವನವಾಸದ ಕಾಠಿಣ್ಯ, ಕಠೋರತೆಗಳು ತೀರಾ ನಗಣ್ಯ. ಆ ಭೀತಿಯೆ ಅವನನ್ನು ಮರ್ಯಾದಾ ಪುರುಷೋತ್ತಮ ಮಾಡಿರುವುದು.
'ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?ʼ
(ಕವಿ ಗೋಪಾಲಕೃಷ್ಣ ಅಡಿಗರ 'ಶ್ರೀರಾಮ ನವಮಿಯ ದಿವಸʼ ಕವಿತೆಯಿಂದ)
ಆಚಾರಃ ಕುಲಮಾಖ್ಯಾತಿ
ʼನಡವಳಿಕೆ ಕುಲವನ್ನು ಹೇಳುತ್ತದೆʼ ಎಂಬ ಸುಭಾಷಿತದಂತೆ ಶ್ರೀರಾಮನ ನಡವಳಿಕೆ ಸತ್ಯಹರಿಶ್ಚಂದ್ರನ ನಡವಳಿಕೆಯನ್ನು ನೆನಪಿಸುತ್ತದೆ. ಸತ್ಯಹರಿಶ್ಚಂದ್ರನು ಸೂರ್ಯವಂಶಿ. ಸಂಪೂರ್ಣ ರಾಮಾಯಣದಲ್ಲಿ ಸತ್ಯಹರಿಶ್ಚಂದ್ರನ ಕಥೆ ಬಂದೇ ಬರುತ್ತದೆ. ಸತ್ಯ ಸಂಧನೂ, ಕೊಟ್ಟ ಮಾತಿನಂತೆ ನಡೆಯುವವನೂ ಆದ ಅವನು ರಾಜನ ಸುಖಭೋಗಗಳನ್ನು ತೊರೆದು ಸ್ಮಶಾನದ ಪಾಲಾದ ಕಥೆ ಜನಜನಿತ. ಶ್ರೀರಾಮ ಅದೇ ನಡವಳಿಕೆಯವನು ಮತ್ತು ಅದು ಅವನ ಕುಲವನ್ನು ಸಾರಿ ಹೇಳುತ್ತದೆ. ಇಬ್ಬರೂ ವಚನಬದ್ಧರು.
“ಶ್ರೀರಾಮನು ಕೇವಲ ನಿನ್ನ ಮಗನಲ್ಲ. ಭೂಭಾರವನ್ನು ಕಡಿಮೆ ಮಾಡಲು ಅವತರಿಸಿದ ಶ್ರೇಷ್ಠ ವ್ಯಕ್ತಿಯು.”- ಬ್ರಹ್ಮರ್ಷಿ ವಿಶ್ವಾಮಿತ್ರರು ದಶರಥನಿಗೆ ಹೀಗೆ ತಿಳಿಹೇಳಿದಾಗ ಶ್ರೀರಾಮನಿಗೆ ವಯಸ್ಸು ಇನ್ನೂ ಹದಿನಾರು ದಾಟಿರಲಿಲ್ಲ. ಅಂದ ಹಾಗೆ ʼ ಅನ್ಯಮಿಂದ್ರಂ ಕರಿಷ್ಯಾಮಿʼ ಎಂದು ಘೋಷಿಸುವ ಮೂಲಕ ಮೂರು ಲೋಕಗಳಲ್ಲಿ ಸಂಚಲನ ಮೂಡಿಸಿದ ಈ ಮಹರ್ಷಿ ಎಂದಿಗೂ ಕೂಡಾ ʼಇನ್ನೊಬ್ಬ ರಾಮನ್ನು ಸೃಷ್ಟಿಸುತ್ತೇನೆʼ ಅನ್ನಲಿಲ್ಲ. ಅದು ಸಾಧ್ಯ ಅಂದುಕೊಂಡವನು ಬ್ರಹ್ಮರ್ಷಿ ಪಟ್ಟವನ್ನೇರುವುದೇ ಅಸಾಧ್ಯ!
“ಯದ್ಯದಾಚರತಿ ಶ್ರೇಷ್ಠಃ ತತ್ತ ದೇವೇತರೋ ಜನಃ
ಸ ಯತ್ಪ್ರಣಾಮಂ ಕುರುತೇ ಲೋಕಸ್ತದನುವರ್ತತೇ”-ಸುಭಾಷಿತ
(ಶ್ರೇಷ್ಠನು ಯಾವ ರೀತಿ ನಡೆದುಕೊಳ್ಳುತ್ತಾನೋ ಇತರರೂ ಅದೇ ರೀತಿ ನಡೆದುಕೊಳ್ಳುತ್ತಾರೆ. ಅವನು ಯಾವುದನ್ನು ಪ್ರಮಾಣವೆಂದು ಸ್ವೀಕರಿಸುತ್ತಾನೋ (ನಂಬುತ್ತಾನೋ) ಲೋಕವೂ ಅದನ್ನೇ ಅನುಸರಿಸುತ್ತದೆ.)
ಹಾಗೆ ನೋಡಿದರೆ ಇಡೀ ವಾಲ್ಮೀಕಿ ರಾಮಾಯಣವು ಒಂದು ವಚನಬದ್ಧ ನಡವಳಿಕೆಗಳ ಸರಮಾಲೆ, ಸರಪಳಿ ಕ್ರಿಯೆ.
ʼಮಾ ನಿಷಾದʼ ಎಂದ ಕವಿ ವಾಲ್ಮೀಕಿ, ರಾಮಾಯಣ ರಚನೆಗೆ ತನಗೆ ತಾನೇ ಬದ್ಧನಾದ! ಅವನು ಹೆಣೆದ ಮಹಾಕಾವ್ಯದ ಮಹಾ ನಾಯಕ ಮತ್ತು ಇತರ ನಿರ್ಣಾಯಕ ಪಾತ್ರಗಳು ವಚನಬದ್ಧತೆಯ ಸುಳಿಯಲ್ಲಿ, ಸಿಕ್ಕುಗಳಲ್ಲಿ ಸಿಲುಕಿ ನರಳಿ, ಬಸವಳಿದವು. ಅಗ್ನಿಕುಂಡದಿಂದ ಎದ್ದು ಬಂದವು!
ರಾಮಾಯಣದಲ್ಲಿ ಭಾರೀ ತಿರುವಿಗೆ ಕಾರಣವಾಗುವ ಕೈಕೇಯಿಯು, ದಶರಥನು ತನಗೆ ಈ ಹಿಂದೆ ನೀಡಿದ ಎರಡು ವರಗಳ ಮೇರೆಗೆ ಅವನಿಂದ ವಾಗ್ದಾನಗಳನ್ನು ಪಡೆಯುವ ಮುನ್ನ ಆಡುವ ಮಾತುಗಳು:
“ಮಹಾರಾಜ, ನೀನು ರಾಮನ ಮೇಲೆ ಆಣೆಯಿಟ್ಟು ಭರವಸೆ ನೀಡಿದ್ದೀಯ. ಆಡಿದ ಮಾತಿಗೆ ತಪ್ಪಲಾಗದು”.
ದಶರಥ: “ರಘುವಂಶದ ರಾಜರು ಆಡಿದ ಮಾತಿಗೆ ಬದ್ಧರಾಗಿದ್ದಾರೆ” ಎಂದು ಪೀಠಿಕೆ ಹಾಕಿಯೇ, ಅವಳು ತನ್ನ ಬಳಿ ಕೇಳುತ್ತಿರುವ ಆ ಎರಡು ವಚನಗಳು ಎನೆಂದು ಅರುಹು ಅನ್ನುತ್ತಾನೆ.
ಅವಳ ಕೋರಿಕೆಗಳನ್ನು ಕೇಳಿ ದಶರಥನಿಗೆ ಎದೆಯೊಡೆದಂತಾಗುತ್ತದೆ. ರಾಮನ ಬದಲಿಗೆ ಭರತನಿಗೆ ಪಟ್ಟಾಭಿಷೇಕ ಎಂಬ ಬಯಕೆಯನ್ನು ಹಾಗೂ ಹೀಗೂ ಒಪ್ಪಬಹುದು. ಆದರೆ ರಾಮನಿಗೆ ವನವಾಸ? ಇದಂತೂ ದಶರಥನಿಗೆ ಮರ್ಮಾಘಾತ ನೀಡಿದ ಬೇಡಿಕೆ! ಇದನ್ನಾದರೂ ಕೈಬಿಡು ಎಂದು ಅವನು ಪರಿಪರಿಯಾಗಿ ಕೈಕೇಯಿಯನ್ನು ಬೇಡಿಕೊಂಡದ್ದಕ್ಕೆ ಅವಳ ನಿಷ್ಠುರ ನುಡಿಳು:
“ಸೂರ್ಯವಂಶದ ಪ್ರಸಿದ್ಧ ಮಹಾರಾಜರಾದ ನೀವು ಆಡಿದ ಮಾತನ್ನು ನಡೆಸಿ ಕೊಡದೆ ಹೀಗೆ ಬೇಡುವುದು ಸರಿಯೆ? ನಾನು ಹೇಳಿದಂತೆ…ವರಗಳನ್ನು ಕೊಟ್ಟು ಮಾತಿನಂತೆ ನಡೆಯಿರಿ”. ಮರುದಿನವೂ ಅವಳದ್ದು ಅದೇ ಧಾಟಿ “ನಿನಗೆ ಮನಸ್ಸಿಲ್ಲದಿದ್ದರೆ ಬಿಡು. ಆಡಿದ ಮಾತಿಗೆ ತಪ್ಪಿ ಭ್ರಷ್ಟನಾಗು!”
ಹೌದು! ರಘುವಂಶದ ಘನತೆ, ಪ್ರತಿಷ್ಠೆ, ಹಿರಿಮೆ, ಗರಿಮೆ ಇರುವುದು ಸಾಮ್ರಾಜ್ಯದ ವಿಸ್ತೀರ್ಣದಲ್ಲಲ್ಲ, ಸಂಪತ್ತಿನಲ್ಲಲ್ಲ, ತುಂಡರಸರ, ಸೇನೆಯ, ದಾಸಿಯರ, ಸೇವಕರ ಸಂಖ್ಯೆಯಲ್ಲಿ ಅಲ್ಲ. ಅವರು ವಚನಬದ್ಧರು, ನ್ಯಾಯನೀತಿ ಪಾಲಕರು, ಸತ್ಯಸಂಧರು ಮತ್ತು ಗುರುಹಿರಿಯರ ಮಾತಿಗೆ ತಲೆಬಾಗುವವರು ಎಂಬ ಹೆಸರಿನಲ್ಲಿ!
ಕೈಕೇಯಿ ಹೇಳಿಕಳಿಸಿದ್ದಾಳೆ ಎಂದು ಅವಳ ಅರಮನೆಯನ್ನು ಪ್ರವೇಶಿಸಿದ ರಾಮನಿಗೆ ಹೈರಾಣಾಗಿ ಬಿದ್ದಿರುವ ತಂದೆ ದಶರಥನನ್ನು ಕಂಡು ಗಾಬರಿ. ಅವನು ಏನಾಯಿತು ಎಂದು ಕೇಳಲು, ಕೈಕೇಯಿ ತಾನು ಎರಡು ವರಗಳನ್ನು ಕೇಳಿದ್ದರಿಂದ ಹೀಗಾಗಿದೆ ಎಂದು ಅವನಿಗೆ ತಿಳಿಸುತ್ತಾಳೆ. ʼಏನು ಆ ಎರಡು ವರಗಳು?ʼ ಎಂದು ತಿಳಿಯುವ ಮುನ್ನವೇ ರಾಮನು ದಶರಥನ ಬಳಿ “ತಂದೆಯೇ, ಆಡಿದ ಮಾತಿಗೆ ತಪ್ಪಿ ರಘುವಂಶದ ರಾಜರು ನಡೆಯುವುದು ಸಾಧ್ಯವೇ? ತಾವು ಆಜ್ಞೆಮಾಡಿ. ನಾನು ತಮ್ಮ ಮಾತನ್ನು ಉಳಿಸುತ್ತೇನೆ” ಅನ್ನುತ್ತಾನೆ. ಇದಕ್ಕೂ ದಶರಥ ಉತ್ತರಿಸದೇ ಇದ್ದಾಗ ಕೈಕೇಯಿ “ರಾಮ, ನೀನು ನನ್ನ ಮಾತನ್ನು ನಡೆಸಿಕೊಡುವೆಯಾ? ಆ ಮೂಲಕ ಮಹಾರಾಜರ ಮಾತನ್ನು ಉಳಿಸುವೆಯಾ, ಮಹಾರಾಜರಿಗೆ ಅಪಕೀರ್ತಿ ಬರುವುದನ್ನು ತಪ್ಪಿಸುವೆಯಾ?” ಎಂದು ಕೇಳಿಕೊಳ್ಳುತ್ತಾಳೆ.
ಈ ಮಾತಿಗೆ ರಾಮನು ನೀಡುವ ಉತ್ತರ ಮಾರ್ಮಿಕವಾಗಿದೆ:
"ಅಯೋಧ್ಯೆಯ ಅರಸ, ರಘುವಂಶದ ಮಹಾರಾಜ ಮಾತು ಕೊಟ್ಟಿದ್ದಾರೆಂದರೆ ಅದು ಖಂಡಿತಾ ನೆರವೇರುವುದು. ಏನೇ ಆಗಲಿ ನಾನು ಖಂಡಿತವಾಗಿಯೂ ಅವರ ಮಾತನ್ನು ನೆರವೇರಿಸುತ್ತೇನೆ. ಇದರಲ್ಲಿ ಎರಡು ಮಾತಿಲ್ಲ. ದಶರಥ ಮಹಾರಾಜ ಮಾತಿಗೆ ತಪ್ಪಿದ ಎಂದೆನಿಸಲು ಬಿಡುವುದಿಲ್ಲ"
ಅರಸೊತ್ತಿಗೆ ಭರತನಿಗೆ, ವನವಾಸ ತನಗೆ
ಆ ಎರಡು ವಚನಗಳು ಏನೆಂಬುದು ರಾಮನಿಗೆ ತಿಳಿದು ಬರುವುದು ಮುಂದೆ. ಅದನ್ನು ಕೂಡಾ ಅವನು ಯಾವ ಮುಲಾಜಿಲ್ಲದೇ ಒಪ್ಪಿಕೊಳ್ಳುತ್ತಾನೆ. ಅವನೆದುರಿಗೆ- ಪಿತೃವಾಕ್ಯ ಪರಿಪಾಲನೆ ಮತ್ತು ಪಿತೃವಿಗೆ ವಚನಭ್ರಷ್ಟನೆಂಬ ಪಟ್ಟ ಬರದಂತೆ ತಡೆಯುವುದು- ಈ ಎರಡು ದೊಡ್ಡ ಹೊಣೆಗಾರಿಕೆಗಳಿವೆ. ವಸಿಷ್ಠ, ವಿಶ್ವಾಮಿತ್ರರಂಥಹ ಅತಿರಥ ಮಹಾರಥರ ಗರಡಿಯಲ್ಲಿ ಬೆಳೆದ ಕಟ್ಠಾಳು ಅಲ್ಲವೇ ಅವನು!
ಅವನ ಜಾಗದಲ್ಲಿ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಇದ್ದಿದ್ದರೆ, “ 'ವನʼ ಎಂದರೆ ನಂದನವನ, ಉದ್ಯಾನವನಗಳೂ ಆಗಬಹುದಲ್ಲ?” ಎಂದು ಕೈಕೇಯಿಯ ಮಾತಿನಲ್ಲಿರುವ ಹುಳುಕುಗಳನ್ನು (ಲೂಪ್ ಹೋಲ್ಸ್) ಹಿಡಿದು, “ಇಲ್ಲೇ ಅರಮನೆಯ ಸುತ್ತಮುತ್ತ ವನದಲ್ಲಿ ಹದಿನಾಲ್ಕು ವರ್ಷ ಕಾಲಕಳೆಯುತ್ತೇನೆ” ಎಂದು ವರವನ್ನೇ ತಿದ್ದಿ, ಇಡೀ ರಾಮಾಯಣದ ಗತಿಯನ್ನೇ ಬದಲಿಸುತ್ತಿದ್ದನೇನೋ?
ದಶರಥನಾದರೂ ಅಷ್ಟೆ! ಕೈಕೇಯಿಯ ಅನಿವಾರ್ಯತೆ ಅವನಿಗೇನಿದೆ? ಅವಳನ್ನು ಹೊರಗಟ್ಟಿ, ರಾಮನಿಗೆ ಪಟ್ಟಾಭಿಷೇಕ ಮಾಡಿ ಮಿಕ್ಕುಳಿದ ರಾಣಿಯರೊಂದಿಗೆ ಹಾಯಾಗಿರಬಹುದಿತ್ತು. ಆದರೆ ಅವನು ಹಾಗೆ ಮಾಡಲಾರ! ಅವನನ್ನು ಕಟ್ಟಿಹಾಕಿದ್ದು ಅವನ ವಚನ ಬದ್ಧತೆ. ಪತ್ನಿಯಾದವಳನ್ನು ಅಗ್ನಿಸಾಕ್ಷಿಯಾಗಿ ಕೈಹಿಡಿದಾಗ, ಸಮಸ್ತರೆದುರು ಸಪ್ತಪದಿ ತುಳಿದಾಗ ವಿನಿಮಯ ಮಾಡಿಕೊಂಡ ವಚನಗಳಿಗೆ ಅವನು ಬದ್ಧ.
ಪುತ್ರ ರಾಮನಿಗೆ ಬಂದೊದಗಿದ ವನವಾಸದ ದುರವಸ್ಥೆಯನ್ನು ಕಂಡು ಮರುಗುತ್ತಿದ್ದ ತಾಯಿ ಕೌಸಲ್ಯಳನ್ನು ರಾಮ ಸಮಾಧಾನಪಡಿಸಿದ್ದು ಹೀಗೆ: “ರಾಜ್ಯದಾಸೆಗಾಗಿ, ಅಧಿಕಾರಕ್ಕಾಗಿ, ತಂದೆಯವರ ವಚನವನ್ನು ಅಪಮಾನಿಸುವುದು ಸರಿಯೇ? ಮನು ವಂಶದವರು ಹಿಂದೆ ಯಾರೂ ಈ ರೀತಿ ಮಾಡಿಲ್ಲ.”
ಇದೇ ವಚನಬದ್ಧತೆ ಭರತನದ್ದು! 'ರಾಮನೆದುರಿಗೆ ಅದೇನೋ ಅವನ ಪಾದುಕೆಗಳನ್ನು ಸಿಂಹಾಸನದ ಮೇಲೆ ಇಟ್ಟದ್ದಾಯಿತು. ʼರಾಜ್ಯಭಾರ ಅವನ ಹೆಸರಿನಲ್ಲಿ ತಾನು ನಿಮಿತ್ತ ಮಾತ್ರʼ ಎಂದದ್ದಾಯಿತು. ಆದರೆ ಅಯೋಧ್ಯೆಯ ಅರಸೊತ್ತಿಗೆಯನ್ನು ಗಟ್ಟಿಗೊಳಿಸಲು ಇದು ತನಗೆ ದೊರೆತ ಸುವರ್ಣಾವಕಾಶ! ರಾಮ ಮರಳಿ ಬರುವಷ್ಟರಲ್ಲಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳುಬೇಕುʼ ಎಂಬ ಯೋಚನೆ ಕೂಡಾ ಭರತನತ್ತ ಸುಳಿಯಲಿಲ್ಲ. ಅವನಿಗೆ ಈ ಎಲ್ಲಾ ಅವಕಾಶಗಳಿದ್ದವು. ಆದರೆ ಅವನಲ್ಲು ಹರಿಯುತ್ತಿದ್ದದ್ದು ರಾಮನ ರಕ್ತ. ಅವನು ಕೂಡಾ ವಚನಬದ್ಧ.
ಸೀತೆ ರಾಮನೊಂದಿಗೆ ವನವಾಸಕ್ಕೆ ಸಿದ್ಧಳಾದುದು ಇದೇ ವಚನಬದ್ಧತೆಯ ದೆಸೆಯಿಂದ. ಅವರು ಸತಿಪತಿಯರು- ಲಕ್ಷ್ಮೀನಾರಾಯಣರು- ಅವರದ್ದು 'ಲಿವಿಂಗ್ ಟುಗೆದರ್' ಸಂಬಂಧವಲ್ಲ, ಅದು ಲಿವಿಂಗ್, ಶೇರಿಂಗ್ & ಡಯಿಂಗ್ ಟುಗೆದರ್ʼ ಅನುಬಂಧ!
ಸೀತೆಯನ್ನು ರಾವಣನಿಂದ ಮುಕ್ತಿಗೊಳಿಸುದರಲ್ಲೂ ರಾಮನು ಕ್ಷತ್ರಿಯ ಧರ್ಮಕ್ಕೆ ಬದ್ಧನಾಗಿದ್ದ-ಯುದ್ಧ ಮಾಡಿ, ರಾವಣನ ಸಂಹಾರ ಮಾಡಿಯೇ ಅವಳನ್ನು ಮರಳಿ ಪಡೆಯುತ್ತೇನೆ ಎಂಬ ನಿಲುವಿಗೆ ಅವನು ಬದ್ಧ. ಅದರಂತೇ ನಡೆದ ಕೂಡಾ. ಅವನು ʼಲಂಕೆಯನ್ನು ತಾನು ಗೆದ್ದೆ, ಹೀಗಾಗಿ ಇದು ತನಗೆ ಸೇರಿದ ರಾಜ್ಯʼ ಅನ್ನಲಿಲ್ಲ. ವಚನಬದ್ಧನಾಗಿ ವಿಭೀಷಣನನ್ನು ಲಂಕೆಯ ಗದ್ದುಗೆಗೆ ಏರಿಸಿ ತಾನು ಸೀತಾಸಮೇತನಾಗಿ ಸೇನೆಯೊಂದಿಗೆ ಅಯೋಧ್ಯೆಗೆ ಮರಳಿದ.
ಸೀತೆಯ ವಿಷಯದಲ್ಲಿ ಕಠಿಣನಾದ ನಿಜ. ಆದರೆ ತನ್ನ ಸತಿ ರಾವಣನ ವಶದಲ್ಲಿದ್ದಾಗ, ಮುಂದೆ ತನ್ನಿಂದಾಗಿಯೆ ಅವಳು ವನವಾಸ ಅನುಭವಿಸುವಂತಾದಾಗಲೂ, ಏಕಾಂಗಿ ರಾಮನ ಮನಸ್ಸು ಜಾರಲಿಲ್ಲ, ಅವನು ವ್ಯಭಿಚಾರಿಯಾಗಲಿಲ್ಲ. ಅವನಿಗೇನು ದಾಸಿಯರ ಕೊರತೆಯಿತ್ತೇ? ಹೋಗಲಿ 'ತನ್ನ ತಂದೆ ದಶರಥನಿಗೆ ಮೂವರು ಪತ್ನಿಯರು ಇದ್ದರಲ್ಲವೇ? ತಾನೇಕೆ ಏಕಪತ್ನೀವ್ರತಸ್ಥನಾಗಿರಬೇಕು?ʼ ಎಂಬ ಸಮಜಾಯಿ಼ಷಿಗೆ ಅವನು ಮುಂದಾಗಲಿಲ್ಲ. ವಚನ ಬದ್ಧನಾದ ಅವನು ವಿರಹ ದುಃಖವನ್ನು ನುಂಗಿದನೇ ಹೊರತು ಅಶುದ್ಧನಾಗಲಿಲ್ಲ. ಹೀಗಾಗಿಯೇ ಸೀತೆಯ ಪರಿಶುದ್ಧತೆಯನ್ನು ಅವನು ಶಂಕಿಸಿದ್ದು ತೀರಾ ತಪ್ಪು ಅನ್ನುವಂತಿಲ್ಲ. ಏಕೆಂದರೆ ಅವನಿಗೆ ಆ ಒಂದು 'ಭೀತಿʼ ಇತ್ತು ಮತ್ತು ಅಂಥಾ ಭೀತಿಯೇ ಸಜ್ಜನರನ್ನು, ಸಮಾಜವನ್ನು ಕಾಪಾಡುವುದು.
ರಾಮನನ್ನು ಭಕ್ತಿಯಿಂದ ಭಜಿಸುವವರು, ರಾಮಾಯಣವನ್ನು ನಿಷ್ಠೆಯಿಂದ ಪಾರಾಯಣ ಮಾಡುವವರು, ರಾಮಾಯಣವನ್ನು ವೀಕ್ಷಿಸುವವರು; ಎಲ್ಲರೂ, ಈ ಆರ್ಯಾವರ್ತದ ಸನಾತನ ಸಂಸ್ಕೃತಿಯ ತಿರುಳಾದ ವಚನಬದ್ಧತೆಯ ದೃಷ್ಟಿಯಿಂದಲೂ ರಾಮಾಯಣವನ್ನು ನೋಡುವಂತಾಗಬೇಕು.
ನಮ್ಮ ಸಮಾಜದ, ಸಮುದಾಯದ ವರಿಷ್ಠರು, ಧಾರ್ಮಿಕ ಮುಖಂಡರು, ರಾಜಕೀಯ ನೇತಾರರು ಮತ್ತು ಸ್ವತಹ ನಾವು ವಚನಬದ್ಧರಾಗಿರುವಂತೆ ಎಚ್ಚರ ವಹಿಸಬೇಕು. ವಚನಭ್ರಷ್ಟರನ್ನು ವರ್ಜಿಸಬೇಕು.
ಶ್ರೀಸಾಮಾನ್ಯರಲ್ಲಿ ಶ್ರೀರಾಮನ ಸಂಸ್ಕಾರ ಆವಿರ್ಭವಿಸಿದಾಗಲೇ ರಾಮರಾಜ್ಯದ ಕನಸು ನನಸಾಗುವುದು, ರಾಮಾಯಣದ ಕಥನ ಸಾರ್ಥಕವಾಗುವುದು.
(ರಾಮಾಯಣದ ಸಂಭಾಷಣೆಗಳನ್ನು ಶ್ರೀ ಜಿ ವಿ ಶಾಸ್ತ್ರಿ ವಿದ್ವಾನ್ ಎಂ ಎ ಬಿಎಡ್ ವಿರಚಿತ ʼಸಂಪೂರ್ಣ ರಾಮಾಯಣʼ ಕೃತಿ—ಪ್ರಕಾಶಕರು: ಪಿ ಸಿ ಶಾಬಾದಿ ಮಠ ಬುಕ್ ಡಿಪೋ- ದಿಂದ ಆಯ್ದುಕೊಳ್ಳಲಾಗಿದೆ).
- ಸತ್ಯಕಾಮ ಶರ್ಮಾ ಕೆ.
ಲೇಖಕರ ಕಿರು ಪರಿಚಯ
ಸತ್ಯಕಾಮ ಶರ್ಮಾ ಕೆ. (ಕಾಸರಗೋಡು) ವೃತ್ತಿ- ಪ್ರವೃತ್ತಿ ಎರಡೂ ಬರಹವೇ ಆಗಿರುವ ಇವರು ನಿರಂತರ ಓದು, ಸತತ ಬರೆಯುವ ಅಭ್ಯಾಸ ಮತ್ತು ಸ್ವಾಧ್ಯಯನದಿಂದ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಿಪಕ್ವತೆ ಸಾಧಿಸಿದ, ನುರಿತ ಲೇಖಕ, ಕವಿ, ಕಥೆಗಾರ, ಕಂಟೆಂಟ್ ಬರಹಗಾರ ಮತ್ತು ಅನುವಾದಕ. ವಿಜ್ಞಾನದಿಂದ ಹಿಡಿದು ಅಧ್ಯಾತ್ಮ, ಪರಿಸರ, ಕನ್ನಡ ಪರ ಕಾಳಜಿಯವರೆಗೆ ವೈವಿಧ್ಯಮಯ ವಿಷಯಗಳಲ್ಲಿ ಇವರು ಬರೆದ ಲೇಖನಗಳು ಮತ್ತು ಕಥೆ, ಕವಿತೆಗಳು ನಾಡಿನ ಮುಂಚೂಣಿಯ ದಿನ ಪತ್ರಿಕೆಗಳು, ನಿಯತಕಾಲಿಕಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿವೆ. ವಿಜ್ಞಾನ ಪದವೀಧರರಾದ ಇವರ ಓದಿನ ಹರವು ಅಪಾರ. ʼದಿ ಡೈಲಿ ನ್ಯೂಸ್ʼ ದಿನಪತ್ರಿಕೆಗೆ ಕೆಲಕಾಲ ಅಂಕಣಕಾರರಾಗಿದ್ದ ಇವರು ಬ್ಲಾಗರ್ ಮತ್ತು ಸೃಜನಶೀಲ ಚಿಂತಕರು.
Mobile: 9880387759
email: sathyakamasharma@gmail.com
Address: 1st Floor, 93/2, 2nd Main, 1st Block
Thyagaraja Nagara, Bangalore- 560 028
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ