ಶಿವನಲ್ಲಿ ಅಪಾರ ಭಕ್ತಿಯುಳ್ಳವರು ಶಿವಶರಣರು

Upayuktha
0




ಶಿವನಲ್ಲಿ ಅಪಾರ ಭಕ್ತಿಯುಳ್ಳವರು ಶಿವಶರಣರು. ಶಿವನೇ ತಮ್ಮ ಉಸಿರು. ಅವನಿಗಾಗಿ ಏನನ್ನು ಬೇಕಾದರೂ ಮಾಡುವರು. ಇಹಪರದ ಚಿಂತೆಯಿಲ್ಲ. ಶಿವಸೇವೆಯೊಂದೇ ಅವರ ಜೀವನದ ಗುರಿ. ಸಾಮಾನ್ಯವಾಗಿ ದೇವರಪೂಜೆಗೆ, ಹಿಂದಿನ ದಿನದ ನಿರ್ಮಾಲ್ಯ ತೆಗೆದು, ಗರ್ಭಗುಡಿ ಶುಚಿಮಾಡಿ, ಅಂದಿನ ಪೂಜೆಗೆ ಅಣಿಮಾಡುವುದು ನಡೆದು ಬಂದ ಸಂಪ್ರದಾಯ. ಅದೊಂದು ಶಿವಾಲಯ. ದೇವರ ಪೂಜೆ ಮುಗಿಸಿ, ರಾತ್ರಿ ದೇವಾಲಯದ ಬೀಗವನ್ನು ಹಾಕಿಹೋಗಿರುವ ಅರ್ಚಕರು. ಅದೇ ಊರಿನಲ್ಲಿ ಒಬ್ಬ ಶಿವಭಕ್ತ ದಂಪತಿಗಳು. ಶ್ರಮಜೀವಿಗಳು. ಕಷ್ಟಪಟ್ಟು ದುಡಿದ ಹಣದಿಂದ ಆಹಾರವನ್ನು, ತಯಾರಿಸಿ, ದೇವರಿಗೆ ಶಿವನೇ ನೀನು ಮೊದಲು ಊಟ ಮಾಡು ಎಂದು ಹೇಳಿ, ಅವನಿಗೆ ಅರ್ಪಿಸಿದ, ಆನಂತರ ಅವರು ಊಟ ಮಾಡುವ ಅಭ್ಯಾಸ. ಅವರು ಪ್ರೀತಿಯಿಂದ ಬಡಿಸಿದ ಊಟ, ಶಿವನಿಗೆ ಬಹಳ ರುಚಿ. ದೇವಾಲಯದಲ್ಲಿ ಅರ್ಚಕ ಮಾಡುವ ವಿಧ ವಿಧ ಪಕ್ವಾನ್ನಗಳಿಗಿಂತ, ಆ ಬಡದಂಪತಿಗಳ ಮನೆಯ ಅಕ್ಕಿಯ ಗಂಜಿಯೇ ಆವನಿಗೆ ಮೃಷ್ಟಾನ್ನ.





ಆದರೆ, ಆ ಶಿವಭಕ್ತರು ಎಂದಿಗೂ ದೇವಾಲಯಕ್ಕೆ ಬಂದವರೇ ಅಲ್ಲ. ಅಂದು ರಾತ್ರಿ, ಅಕ್ಕಿಯ ನುಚ್ಚು ತೆಗೆದು, ಗಂಜಿ ಮಾಡಿ ಶಿವನ ಮುಂದೆ ಇಟ್ಟು, ಶಿವನೇ ಮೊದಲು ನೀನು ಉಣ್ಣು ಎನ್ನುತ್ತಾರೆ. ಆಗ ಮನೆಯ ಮುಂದೆ ಒಬ್ಬ ವಯಸ್ಸಾದ ಮುದುಕ, ಹಸಿವಾಗುತ್ತಿದೆ. ಏನಾದರು ಕೊಡಿ ಎಂದು ಬರುತ್ತಾನೆ. ಅವನನ್ನು ಒಳಗೆ ಕರೆದು ಕುಳ್ಳಿರಿಸಿ, ಅಕ್ಕಿಯ ನುಚ್ಚಿನ ಅಂಬಲಿಯನ್ನೇ ಕೊಡುತ್ತಾರೆ. ಅದನ್ನು ಆಸ್ವಾದಿಸುತ್ತಾ ಕುಡಿದ ಮುದುಕನು, ಬಹಳ ಚೆನ್ನಾಗಿದೆ. ರುಚಿಯಾಗಿದೆ. ಸ್ವಲ್ಪ ಮನೆಗೂ ಕೊಡಿ. ತೆಗೆದುಕೊಂಡು ಹೋಗುತ್ತೇನೆ. ಎನ್ನುತ್ತಾನೆ. ಸಂತೋಷದಿಂದ  ಉಳಿದ ಅಂಬಲಿಯನ್ನೆಲ್ಲ ಶಿವನಿಚ್ಛೆಯಂತೆಯೇ. ಆಗಲಿ ಎಂದು ಕೊಟ್ಟಕಳಿಸುತ್ತಾರೆ. ಅಂದು ರಾತ್ರಿ ಶಿವನಾಮ ಸ್ಮರಣೆಯೇ ಅವರ ಆಹಾರ.





ಅಂದು ಬೆಳಗಿನ ಜಾವ, ಆ ಊರ ರಾಜನಿಗೆ ಕನಸು. ಶಿವನು ಊಟ ಮಾಡಿ, ಬೆರಳನ್ನು ಚೀಪುತ್ತಾ, ರಾಜ ಈ ಅಂಬಲಿ ಎಷ್ಟು ರುಚಿಯಾಗಿದೆ ಗೊತ್ತಾ? ಎಂದು ಹೊಗಳುತ್ತಾನೆ. ರಾಜನಿಗೆ ಶಿವನನ್ನು ಕನಸಿನಲ್ಲಿ ಕಂಡು ಅಚ್ಚರಿ, ಸಂತಸ. ಮಾರನೆಯ ದಿನ ಹೇಗೂ ದೇವರತೇರು ಇದೆಯಲ್ಲ. ಅಲ್ಲೇ ಹೋಗಿ ದರ್ಶನ ಮಾಡುವುದು ಎಂದು ನಿರ್ಧರಿಸುತ್ತಾನೆ. ಇತ್ತ, ಶುಭೋದಯದಲ್ಲಿ, ದೇವಾಲಯದ ಬೀಗ ತೆರೆದ, ಅರ್ಚಕರಿಗೆ ಆಘಾತ. ರಾತ್ರಿ ಶುಚಿ ಮಾಡಿದ ಗರ್ಭಗುಡಿಯೆಲ್ಲೆಲ್ಲಾ ಗಂಜಿ ಚೆಲ್ಲಾಡಿದೆ, ಗಲೀಜಾಗಿದೆ. ರಾತ್ರಿ ಏನಾಯಿತೆಂದು ತಿಳಿಯುತ್ತಿಲ್ಲ. ರಾಜನಿಗೆ ಸುದ್ದಿ ತಲಪಿತು.





ರಾಜನಿಗೆ ಬೆಳಗಿನ ಜಾವ ಕಂಡ ಕನಸು ನೆನಪಾಗುತ್ತದೆ. ಮನಸಿನಲ್ಲಿಯೇ ಆ ಭಕ್ತನು ಯಾರಿರಬಹುದೆಂದು ಯೋಚಿಸುತ್ತಾ, ಗರ್ಭಗುಡಿ ಶುಚಿ ಮಾಡಿ ಮುಂದಿನ ಕಾರ್ಯಗಳನ್ನು ಮಾಡಲು ಹೇಳುತ್ತಾನೆ. ತೇರು ಹೊರಡುತ್ತದೆ. ಸರಾಗವಾಗಿ ಉರುಳುತ್ತಿದ್ದ ಚಕ್ರಗಳು, ಒಂದುಗುಡಿಸಿಲಿನ ಮುಂದೆ ಬಂದು, ಕಾರಣವಿಲ್ಲದೆಯೇ ನಿಂತು ಬಿಡುತ್ತವೆ. ಏನು ಮಾಡಿದರೂ ಜಗ್ಗುವುದಿಲ್ಲ. ರಾಜನಿಗೆ ಅನುಮಾನ ಬಂದು, ಆ ಗುಡಿಸಲಿನ ದಂಪತಿಗಳನ್ನು ಬಂದು ಕಾಣುತ್ತಾನೆ. ಅವರ ಮನೆಯಲ್ಲಿ ಅಕ್ಕಿಯ ಅಂಬಲಿಯು ಬೇಯುತ್ತಿರುತ್ತದೆ. ರಾಜನಿಗೆ ಇವರ ಮನೆಯ ಅಂಬಲಿಯನ್ನೇ ಶಿವ ರುಚಿಯಾಗಿರುವುದೆಂದು ಚಪ್ಪರಿಸುತ್ತಾ ಕುಡಿದಿರುವುದು ಎಂಬುದು ತಿಳಿಯುತ್ತದೆ. ಆ ದಂಪತಿಗಳಿಗೆ ನಮಸ್ಕಾರ ಮಾಡಿ, ಹೊರಗೆ ಬಂದು ತೇರನ್ನು ಎಳೆಯ ಬೇಕೆಂದು ಕೇಳಿಕೊಳ್ಳುತ್ತಾನೆ.




ಅವರಿಗೋ ಭಯಮಿಶ್ರಿತ ನಾಚಿಕೆ. ಆದರೂ, ರಾಜನ ಮಾತಿಗೆ ಕಟ್ಟುಬಿದ್ದು, ತೇರಿನ ಹಗ್ಗಕ್ಕೆ ಕೈ ಹಾಕುತ್ತಾರೆ. ತೇರು ಸರಸರನೆ ಚಲಿಸಲಾರಂಭವಾಗುತ್ತದೆ. ಈ ಶರಣಾಗತಿಗೆ ಏನೆಂದು ಹೆಸರಿಡುವುದು? ನಮ: ಶಿವಾಯ ಎಂದು ಹೇಳಲಷ್ಟೇ ಸಾಧ್ಯ.




- ಮೀನಾಕ್ಷಿ ಮನೋಹರ




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top