ಮೇಕೇರಿಯಲ್ಲಿ ರಕ್ತದಾನ ಶಿಬಿರ : 50ನೇ ಬಾರಿ ರಕ್ತದಾನ ಮಾಡಿದ ಪೊಲೀಸ್ ರಾಮಪ್ಪ ಅವರಿಗೆ ಸನ್ಮಾನ

Upayuktha
0


ಮಡಿಕೇರಿ: ಇಲ್ಲಿಗೆ ಸಮೀಪದ ಮೇಕೇರಿಯ ಸ್ವಾಗತ ಯುವಕ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಉತ್ತಮ ಆಡಳಿತ ದಿನದ ಪ್ರಯುಕ್ತ ವರ್ಷದ ಗ್ರಾಮೀಣ ಮಟ್ಟದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಡಿಸೆಂಬರ್ 29ರಂದು ಆಯೋಜಿಸಲಾಗಿತ್ತು.


ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಅತಿಥಿಗಳು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಂದರ್‌ರಾಜ್ ಪಾಲ್ಗೊಂಡಿದ್ದರು. ಇದೇ ಸಂದರ್ಭ 50ನೇ ಬಾರಿಗೆ ರಕ್ತದಾನ ಮಾಡಿದ ಕೊಡಗು ಜಿಲ್ಲಾ ಪೊಲೀಸ್  ಸಿಬ್ಬಂದಿ ಬಿ.ಎಂ  ರಾಮಪ್ಪ,  ಎಲ್‌ಎಲ್‌ಬಿ  ಪದವಿ ಪೂರೈಸಿದ ಗ್ರಾಮದ ಪದವಿದರರಾದ ಪಿ.ಆರ್. ಪ್ರಜೀತ ರಾಜನ್, ವಿ.ಬಿ ಹರ್ಷಿತಾ, ಸಿ.ವೈ. ಲಿಖಿತ್ ಹಾಗೂ 1974ರಲ್ಲಿ ಮೇಕೇರಿ ಗ್ರಾಮದಲ್ಲಿ ಸ್ವಾಗತ ಯುವಕ ಸಂಘವನ್ನು ಸ್ಥಾಪಿಸಿದ ಸ್ವಾಗತ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಓಡಿಯಾನ ಉಲ್ಲಾಸ್ ಅವರನ್ನು ಸ್ವಾಗತ ಯುವಕ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


50ನೇ ಬಾರಿಗೆ ರಕ್ತದಾನ ಮಾಡಿದ ಪೊಲೀಸ್ ಸಿಬ್ಬಂದಿ ಬಿ.ಎಂ ರಾಮಪ್ಪ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ನಮ್ಮ ಊರಿನಲ್ಲೇ 50ನೇ ಬಾರಿಗೆ ರಕ್ತದಾನ ಮಾಡಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು. ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ಅನುಕೂಲವಾಗುತ್ತದೆ. ಅಲ್ಲದೆ ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದರಲ್ಲದೇ ಮದುಮೇಹ ಮತ್ತು ಬೊಜ್ಜು ಕರಗುವಿಕೆಗೆ ರಕ್ತದಾನ ಮಾಡುವುದರಿಂದ ಸಹಕಾರಿಯಾಗುತ್ತದೆ ಎಂದರು. 


ಇದೇ ಸಂದರ್ಭ ಗ್ರಾಮದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಕಾರ್ಮಿಕ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಡ್ ನೋಂದಾವಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. 


ಈ ಸಂದರ್ಭ ರಕ್ತದಾನದ ಮಹತ್ವದ ಬಗ್ಗೆ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ, ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಕಾರ್ಮಿಕ ಅಧಿಕಾರಿ ಯತ್ನಿಟ, ವಿಶ್ವಕರ್ಮ ಕಾರ್ಡ್ ನೊಂದಾವಣೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಸಿ.ಎನ್ ರಘು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ ಸುಕುಮಾರ್ ಮಾತನಾಡಿದರು. 


ವೇದಿಕೆಯಲ್ಲಿ ಗೌರಿ ಶಂಕರ ದೇವಾಲಯ ಸಮಿತಿ ಅಧ್ಯಕ್ಷರಾದ ಕೆ.ಕೆ. ಪೂರ್ಣಯ್ಯ, ಮೇಕೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶುಭಾ ಭರತ್, ಗ್ರಾ.ಪಂ ಸದಸ್ಯರಾದ ಕೆ.ಎನ್ ಕೀರ್ತನ್, ಎಂ.ಯು ಹನೀಫ್, ಸುಶೀಲಾ ಮಧು, ಮೇಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಬಿತಾ ನಾಗೇಶ್, ಎಸ್‌ಡಿಎಂಸಿ ಅಧ್ಯಕ್ಷೆ ಟಿ.ಯು. ಮೀನಾಕುಮಾರಿ, ಸ್ವಾಗತ ಯುವಕ ಸಂಘದ ಅಧ್ಯಕ್ಷ ಟಿ.ಎನ್ ಉಮೇಶ್, ಕಾರ್ಯದರ್ಶಿ ಪವನ್ ಖಜಾಂಚಿ ಭವನ್ ಹಾಗೂ ಮಾಜಿ ಅಧ್ಯಕ್ಷರಾದ ಪಿ.ಎಂ ದಾಮೋಧರ್ ಸೇರಿದಂತೆ ಸ್ಥಳೀಯರು ಹಾಜರಿದ್ದರು.


12 ವರ್ಷದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಂದಿ ರಕ್ತದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಗಮನಸೆಳೆದರು. ಮೇಕೇರಿ, ಕಗ್ಗೋಡ್ಲು, ಬಿಳಿಗೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಒಟ್ಟು 73 ಮಂದಿ ರಕ್ತದಾನಿಗಳು ರಕ್ತದಾನ ಮಾಡಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top