-ಪ್ರಭಂಜನ ಮುತ್ತಿಗಿ
ಶ್ರೀರಾಮಾವತಾರದ ಉದ್ದೇಶ
ಶ್ರೀವೈಕುಂಠದ ದ್ವಾಲಪಾಲಕರಾದ ಶ್ರೀ ಜಯ ವಿಜಯರು ಶಾಪಗ್ರಸ್ತರಾಗಿ ಎತ್ತಿದ ಎರಡನೇ ರಾಕ್ಷಸ ರೂಪವೇ ರಾವಣ-ಕುಂಭಕರ್ಣ. ಮೇಲ್ನೋಟಕ್ಕೆ ರಾವಣ-ಕುಂಭಕರ್ಣರ ಸಂಹಾರಕ್ಕಾಗಿ ಶ್ರೀ ರಾಮ ಅವತಾರ ಮಾಡಿದ ಎಂದು ತೋರಿದರೂ, ಅಯೋಧ್ಯೆಯಲ್ಲಿ ಜನಿಸಿ , ಹಲವಾರು ರಾಕ್ಷಸರನ್ನು ಸಂಹರಿಸಿ, ಸಾಮಾನ್ಯ ವ್ಯಕ್ತಿಯಂತೆ ಸರಳ ಜೀವನ ನಡೆಸಿ, ಪಿತೃವಾಕ್ಯ ಪರಿಪಾಲಕನಾಗಿ, ಏಕ ಪತ್ನಿ ವ್ರತಸ್ಥನಾಗಿ, ಸತ್ಯಸಂಧನಾಗಿ, ಪ್ರಜೆಗಳಿಗಾಗಿ, ಪ್ರಜೆಗಳಿಂದಲೇ ಪಟ್ಟಾಭಿಷೇಕ ಪಡೆದು ಸಾತ್ವಿಕ ತಾತ್ವಿಕ ದೈವತ್ವದ ಸ್ವರೂಪ ಪ್ರಚುರಪಡಿಸಿದ ಶ್ರೀ ರಾಮ.
ಸುಂದರಕಾಂಡ:
ಶ್ರೀ ರಾಮಾಯಣದ ಹೃದಯ ಭಾಗ "ಸುಂದರಕಾಂಡ". ರಾವಣ ಸೀತೆಯನ್ನು ಮೋಸದಿಂದ ಅಪಹರಿಸಿದ ಮೇಲೆ, ಶ್ರೀ ರಾಮ ಸೀತೆಯನ್ನು ಹುಡುಕುತ್ತಾ ಕಿಷ್ಕಿಂದೆ ಕುರಿತಾಗಿ ಹೋದ. ವಾಲೀ ನಿಗ್ರಹಿಸಿ, ಸುಗ್ರೀವನ ಜೊತೆಗೂಡಿ ಸೀತಾನ್ವೇಷಣೆಗೆ ಹೋರಟ. ಹನುಮನ ಪರಾಕ್ರಮ ಅರಿತ ಶ್ರೀರಾಮ, ಹನುಮನ ಹೃದಯದಲ್ಲಿ ತಾನೇ ನೆಲೆಸಿ, ಅಮಾನುಷೇಯ ಕೃತ್ಯಗಳನ್ನು ಮಾಡಿಸಿದ.
ಸುಂದರೇ ಸುಂದರೋ ರಾಮ: ಸುಂದರೇ ಸುಂದರ: ಕಪಿ:
ಸುಂದರೇ ಸುಂದರೀ ಸೀತಾ ಸುಂದರೇ ಕಿಂ ನ ಸುಂದರಂ
ಶ್ರೀ ರಾಮ ಸುಂದರಾತಿ ಸುಂದರ. ಸೀತೆಯ ಸುಂದರಿ, ಹನುಮಂತ 32 ಲಕ್ಷಣಗಳಿಂದ ಕೂಡಿದ ಸೌಂದರ್ಯರಾಶಿ. ಆಶೋಕವನವೆಲ್ಲಾ ಸುಂದರ, ಲಂಕಾ ಪಟ್ಟಣವೂ ಸುಂದರ, ಸುಂದರಕಾಂಡದ ಸಂಸ್ಕೃತ ಶ್ಲೋಕಗಳೂ ಅತೀ ಸುಂದರ. ಸುಂದರಕಾಂಡದ ಇನ್ನೊಂದು ವಿಶೇಷ, ಈ ಕಾಂಡ ಸಂಪೂರ್ಣ ರಾಮ ಭಕ್ತನಾದ ಹನುಮನಿಗೆ ಮೀಸಲಿಟ್ಟಿದ್ದು ಶ್ರೀ ಹನುಮಂತ ದೇವರ ಪರಾಕ್ರಮ,ಕಾರ್ಯನಿಷ್ಠೆ, ಅನನ್ಯ ಭಕ್ತಿಯ ಸ್ವರೂಪವನ್ನು ಸವಿಸ್ತಾರವಾಗಿ ವರ್ಣಿಸಲಾಗಿದೆ.
ರಾವಣನಿಂದ ಅಪಹರಿಸಲ್ಪಟ್ಟ ಸೀತೆಯನ್ನು ಹುಡುಕಲು ವಾಯು ಮಾರ್ಗದಲ್ಲಿ ಹೋಗಲು ಹನುಮ ಪರ್ವತದ ಮೇಲೆ ಬೃಹದಾಕಾರವಾಗಿ ಬೆಳೆದು, ಲಂಕಾ ಕಡೆ ಏಕಾಗ್ರತೆಯಿಂದ ನೋಡಿ ಶಿಖರವನ್ನು ಕಾಲಿನಿಂದ ತುಳಿದ ಹಾರಿದ. ಹನುಮ ಹಾರಿದ ರಭಸಕ್ಕೆ ಪರ್ವತದ ಮರಗಳ ಮೇಲಿದ್ದ ಹೂಗಳು ಕೆಳಗೆ ಉದುರಿದವು. ದೂರದಿಂದ ನೋಡುವವರಿಗೆ ಹನುಮನ ವಿಶೇಷ ಶಕ್ತಿಗೆ ಮೆಚ್ಚಿ ದೇವಲೋಕದಿಂದ ಪುಷ್ಪವೃಷ್ಟಿ ಯಾಗುತ್ತಿದೆ ಎಂದು ಭಾಸವಾಯಿತು.
ದಾರಿಯಲ್ಲಿ ಸಾಗರದ ರಾಜ ಶ್ರೀರಾಮನ ಕಾರ್ಯಕ್ಕೆ ಹೋಗುತ್ತಿರುವ ಹನುಮನಿಗೆ ಆತಿಥ್ಯ ಕೊಡಲು ಮೈನಾಕ ಪರ್ವತಕ್ಕೆ ಹೇಳಿದ. ಮೈನಾಕ “ಹನುಮಂತ ಉತ್ತಮ ಕಾರ್ಯಕ್ಕೆ ಹೋಗುತ್ತಿರುವ ನೀನು ನನ್ನಲ್ಲಿ ವಿಶ್ರಮಿಸಿ ಜೇನು ಕುಡಿದು, ಹಣ್ಣು ತಿಂದು ಹೊರಡು ಅಂದ. ನಿನ್ನ ಅತಿಥ್ಯಕ್ಕೆ ಸಂತೋಷವಾಯಿತು, ಆದರೆ ನಾನು ಸೂರ್ಯಾಸ್ತಕ್ಕೆ ಮೊದಲು-ಲಂಕೆಯನ್ನು ಸೇರಬೇಕು ಎಂದು ಹೇಳಿ ನಿಲ್ಲದೆ ಹೊರಟುಹೋದ.
ದೇವತೆಗಳು ನಾಗಮಾತೆಯಾದ ಸುರಸೆಯನ್ನು ಕರೆದು ಶ್ರೀ ಹನುಮಂತನ ಸಾಮರ್ಥ್ಯವನ್ನು ಪರೀಕ್ಷಿಸು” ಎಂದು ಕೇಳಿದರು. ಸುರಸೆ ಹನುಮಂತನಿಗೆ, “ನಿನ್ನನ್ನು ದೇವತೆಗಳು ನನಗೆ ಆಹಾರವಾಗಿ ಕೊಟ್ಟಿದ್ದಾರೆ ಎಂದು ತನ್ನ ದೊಡ್ಡ ಬಾಯನ್ನು ತೆಗೆದಳು. ಹನುಮ ತನ್ನ ಶರೀರವನ್ನು ಬೆಳೆಸಿದ. ಸುರಸೆ ಬಾಯಿಯನ್ನು ಬೆಳಸಿದಳು. ತಕ್ಷಣ ಹನುಮ ಬೆರಳಿನಷ್ಟು ಚಿಕ್ಕವನಾಗಿ ಸುರಸೆಯ ಬಾಯೊಳಕ್ಕೆ ಹೋಗಿ ಹೊರಗೆಬಂದ. ಹನುಮಂತನ ಮಹಿಮೆ ನೋಡಿ ಸುರಸೆ ಹರಿಸಿ ದಾರಿಬಿಟ್ಟಳು.
ಮುಂದೆ ಸಿಂಹಿಕೆ ಎಂಬ ರಾಕ್ಷಸಿ ಹನುಮನ ನೆರಳನ್ನು ಎಳೆಯಲು ಶುರು ಮಾಡಿದಳು. ಇದನ್ನು ಗಮನಿಸಿದ ಹನುಮ ತನ್ನ ಶರೀರವನ್ನು ಬೆಳೆಸಿದ. ಸಿಂಹಿಕೆಯೂ ತನ್ನ ಶರೀರವನ್ನು ಬೆಳೆಸಿದಳು. ಹನುಮಂತ ಸಣ್ಣವನಾಗಿ ಅವಳ ಬಾಯಲ್ಲಿ ಹೊಕ್ಕು, ಎದೆಯನ್ನು ಸೀಳಿ ಹೊರಗೆ ಬಂದುಬಿಟ್ಟ. ಸಿಂಹಿಕೆ ಅಲ್ಲೇ ಸತ್ತುಬಿದ್ದಳು. ಈ ಎರೆಡೂ ಪ್ರಕರಣಗಳಲ್ಲಿ ವಿಶೇಷವೆಂದರೆ ಹನುಮ ಬೃಹದಾಕಾರವಾಗಿ ಬೆಳೆಯುವ ಹಾಗೂ ಚಿಕ್ಕದಾಗಿ ಕುಗ್ಗುವ ಸಾಮರ್ಥ್ಯವನ್ನು ಪ್ರಚುರಪಡಿಸಿದ.
ಹನುಮ ಲಂಕೆಯಲ್ಲಿ ಲಂಬಗಿರಿ ಎಂಬ ಪರ್ವತದ ಮೇಲಿಳಿದು ಚಿಕ್ಕ ಮರಿಯ ರೂಪಕ್ಕೆ ಬದಲಾಗಿ ಲಂಕೆಯ ಮಹಾದ್ವಾರದಲ್ಲಿ ರಾಕ್ಷಸಿ ಲಂಕೆಯನ್ನು ವಧಿಸಿ, ಎಡಗಾಲಿಟ್ಟು ಲಂಕೆಯ ಒಳಕ್ಕೆ ಹೋದ. ಸೀತಾದೇವಿಯನ್ನು ಹುಡುಕುತ್ತಾ ರಾವಣನ ಅಂತಃಪುರವನ್ನು ಪ್ರವೇಶಿಸಿದ. ಹನುಮನ ಎದುರಿಗೆ ಅಶೋಕವನ ಕಾಣಿಸಿತು. ಅಲ್ಲಿ ಶಿಂಶುವಾ ಎಂಬ ಮರದ ಮೇಲೆ ಹತ್ತಿ ಹನುಮ ಕೊಂಬೆಗಳ ಸಂದಿನಿಂದ ನೋಡಿದಾಗ ರಾಕ್ಷಸ ಸ್ತ್ರೀಯರ ಮಧ್ಯದಲ್ಲಿ ಮಣ್ಣುಹಿಡಿದ ಸೀರೆಯುಟ್ಟು, ಉಪವಾಸದಿಂದ ತಪಸ್ಸು ಮಾಡುವ ರೀತಿ ಕುಳಿತ ಸೀತೆ ಕಾಣಿಸಿದಳು. ಸೀತೆಯನ್ನು ನೋಡಿ ಹನುಮನ ಕಣ್ಣಲ್ಲಿ ಆನಂದ ಬಾಷ್ಪಗಳು ಉದುರಿದವು. ಅಷ್ಟರಲ್ಲಿ ರಾವಣ ಸೀತೆ ಇರುವ ಅಶೋಕವನಕ್ಕೆ ಬಂದ.
ಸೀತೆಯ ಬಳಿ ಬಂದ ರಾವಣ ಭೂಮಿಯ ಮೇಲೆ ಮಲಗಿ ಉಪವಾಸ ಮಾಡುವ ಅವಶ್ಯಕತೆ ನಿನಗೇನು? ಅಂತಃಪುರಕ್ಕೆ ಬಂದು ಅಲ್ಲಿರುವ ವಸ್ತ್ರ, ಆಭರಣಗಳನ್ನು ಧರಿಸು, ನನ್ನ ಜೊತೆ ಹಾಯಾಗಿರು ಎಂದ. ಸೀತಾ "ರಾವಣಾ, ನಿನ್ನ ಮನಸ್ಸನ್ನು ನಿನ್ನವರ ಬಳಿಯೇ ಇಟ್ಟುಕೋ. ನೀನು ಮಾಡುವ ಪಾಪಗಳಿಗೆ ಸರಿಯಾದ ಪ್ರಾಯಶ್ಚಿತ್ತ ಅನುಭವಿಸುತ್ತೀಯ. ಎಂದಾಗ ರಾವಣ ಒಂದು ತಿಂಗಳು ಒಳಗೆ ನನ್ನಲ್ಲಿ ಬರದಿದ್ದರೆ ಕೊಂದುಬಿಡಿ ಎಂದು ಹೇಳಿ ಅಲ್ಲಿಂದ ಹೊರಟ.
ರಾವಣನ ಕೈಲಿ ಸಾಯುವುದಕ್ಕಿಂತ ಸಾಯುವುದೇ ಮೇಲು ಎಂದು ಸೀತೆ ತನ್ನ ಕೂದಲನ್ನು ಮರದ ಕೊಂಬೆಗೆ ಕಟ್ಟಿ ಉರಿಬಿಗಿದು ಸಾಯಲು ನಿರ್ಧರಿಸಿದಳು. ಸಾಯಲು ಸಿದ್ಧಳಾಗುತ್ತಿದ್ದ ಸೀತೆಗೆ ಹನುಮ ರಾಮಕಥೆಯನ್ನು ಹೇಳುವುದೇ ಸರಿ’ ಎಂದುಕೊಂಡು ರಾಮಕಥೆಯನ್ನು ಆರಂಭಿಸಿದ. ರಾಮನಾಮವನ್ನು ಕೇಳಿ ಸೀತೆ ಕತ್ತಿಗೆ ಸುತ್ತಿಕೊಂಡಿದ್ದ ಜಡೆಯನ್ನು ಬಿಚ್ಚಿದಳು. ಆನಂದದಿಂದ ಮರದ ಮೇಲೆ ನೋಡಿದಳು. ಸೀತೆಯ ಕಿವಿಗೆ ಮಾತ್ರ ಕೇಳುವಂತೆ, ನಿಧಾನವಾಗಿ ಬಂದು, "ಅಮ್ಮಾ! ನಾನು ರಾಮ ದೂತ. ನನ್ನ ಹೆಸರು ಹನುಮ ಎಂದು, ಶ್ರೀ ರಾಮ ಕಳುಹಿಸಿದ ಮುದ್ರಿಕೆಯ ಕೊಟ್ಟು, ಶ್ರೀ ರಾಮ ಬಂದು ನಿಮ್ಮನ್ನು ಕಾಪಾಡುತ್ತಾನೆ" ಅಂದ.
ನಂತರ ಹನುಮಂತ ಸೀತೆ ಇರುವ ಜಾಗ ಬಿಟ್ಟು, ಉಳಿದ ಅಶೋಕವನವನ್ನು ನಾಶಮಾಡಿದ, ರಾವಣನಿಗೆ ಕೋಪಬಂದು, ತನ್ನ ಸಾವಿರಾರು ಕಿಂಕರರನ್ನು ಕರೆದು, "ಆ ವಾನರನನ್ನು ಬಂಧಿಸಿ" ಎಂದು ಹೇಳಿದ. ಹನುಮ ಎಲ್ಲರನ್ನು ನಿಗ್ರಹಿಸಿದ. ಯುದ್ಧಕ್ಕೆ ಬಂದ ರಾವಣ ಮಗನಾದ ಅಕ್ಷಕುಮಾರನನ್ನು ಸಂಹರಿಸಿದ. ತನ್ನ ಮಗನ ಸಾವನ್ನು ಕೇಳಿ ರಾವಣನಿಗೆ ಮೊದಲ ಬಾರಿ ಸೋಲು, ಭಯಗಳು ಒಮ್ಮೆಲೇ ಉಂಟಾದವು. ಇಂದ್ರಜಿತ್ತನ ನೋಡಿ, "ಹೇಗಾದರೂ ಮಾಡಿ ಆ ವಾನರವನ್ನು ಹಿಡಿ, ಎಂದು ಕಳಿಸಿದ. ಇಂದ್ರಜಿತು ಹನುಮನ ಮೇಲೆ ಬ್ರಹ್ಮಸ್ತ್ರ ಪ್ರಯೋಗಿಸಿ ಹನುಮನ ಬಂಧಿಸಿ ರಾವಣನಲ್ಲಿ ಕರೆದುಕೊಂಡು ಹೋದ.
ಹನುಮನಿಗೆ, ನೀನು ಯಾರು? ಯಾರ ಕಾರಣಕ್ಕಾಗಿ ಬಂದೆ? ಅಶೋಕ ವನವನ್ನು ಏಕೆ ನಾಶ ಮಾಡಿದೆ?" ಎಂದು ಕೇಳಿದ. ರಾವಣನ ಸಿಂಹಾಸನದ ಎತ್ತರಕ್ಕೆ ತನ್ನ ಬಾಲವನ್ನು ಬೆಳೆಸಿ ಅದರ ಮೇಲೆ ಕುಳಿತ ಹನುಮ "ನಾನು ರಾಮನ ದೂತ. ನನ್ನ ಹೆಸರು ಹನುಮ. ನಾನು ರಾಕ್ಷಸನೂ ಅಲ್ಲ, ನರನೂ ಅಲ್ಲ. ತಟಸ್ಥನಾದ ವಾನರ. ಆದ್ದರಿಂದ ರಾವಣಾ, ನಿನ್ನ ಒಳಿತಿಗಾಗಿ ಒಂದೆರೆಡು ಮಾತುಗಳನ್ನು ಹೇಳುತ್ತೇನೆ. ನಾನು ಸೀತೆಯನ್ನು ಅಶೋಕವನದಲ್ಲಿ ನೋಡಿದೆ. ನೀನು ನಿನ್ನ ಮೃತ್ಯುವನ್ನು ತಂದಿಟ್ಟುಕೊಂಡಿದ್ದೀಯ. ಸೀತೆಯನ್ನು ಬಿಟ್ಟು ಬಿಡು ಇಲ್ಲದಿದ್ದರೆ ನಿನ್ನ ಸಾವು ಖಂಡಿತ" ಎಂದ. ತುಂಬು ಸಭೆಯಲ್ಲಿ ಹನುಮ ಮಾತನಾಡಿದ್ದನ್ನು ಸಹಿಸದೆ ಕೋಪಗೊಂಡ ರಾವಣ, "ಈ ವಾನರವನ್ನು ಕೊಂದುಬಿಡಿ" ಎಂದ. ತಕ್ಷಣ ವಿಭೀಷಣ ಮೇಲಕ್ಕೆದ್ದು, "ಅಣ್ಣ! ನೀನು ವೇದವನ್ನು, ಧರ್ಮಗಳನ್ನು ಓದಿಕೊಂಡಿದ್ದೀಯ. ದೂತರನ್ನು ಕೊಲ್ಲುವುದು ಸರಿಯಲ್ಲ ಎಂದ. ವಿಭೀಷಣನ ಮಾತಿಗೆ ಸಮ್ಮತಿಸಿದ ರಾವಣ, "ಕೋತಿಗಳಿಗೆ ಅವರ ಬಾಲವೆಂದರೆ ತುಂಬಾ ಇಷ್ಟ. ಆದ್ದರಿಂದ ಈ ಕೋತಿಯ ಬಾಲವನ್ನು ಸುಟ್ಟುಬಿಡಿ ಎಂದು ಆಜ್ಞೆ ಮಾಡಿದ.
ಹನುಮನ ಬಾಲಕ್ಕೆ ಲಂಕೆಯಲ್ಲಿ ಇರುವ ಎಲ್ಲಾ ಸ್ತ್ರೀಯರ ಬಟ್ಟೆ ಸುತ್ತಿದರು ಸಾಲದಾದವು. ಆದರೂ ಬಟ್ಟೆ ಸುತ್ತಿ, ತುಪ್ಪ ಸವರಿ ಬೆಂಕಿ ಹಚ್ಚಿದರು. ಕ್ಷಣ ಮಾತ್ರದಲ್ಲೇ ಹನುಮ ಇಡೀ ಲಂಕೆಗೆ ಬೆಂಕಿ ಇಟ್ಟು ಕಾರ್ತೀಕ ದೀಪೋತ್ಸವ ನೆಡೆಸಿದ. ನಂತರ ಹನುಮ ಸೀತೆಯ ಬಳಿಬಂದು, “ಅಮ್ಮಾ ಲಂಕೆಯನ್ನೆಲ್ಲಾ ಸುಟ್ಟುಬಿಟ್ಟಿದ್ದೇನೆ. ರಾವಣನಿಗೆ ಹೇಳಬೇಕಾದದ್ದನ್ನು ಹೇಳಿದ್ದೇನೆ. ನಾನಿನ್ನು ಹೊರಡುತ್ತೇನೆ. ಎಂದು ಸೀತೆಯಿಂದ ಚೂಡಾಮಣಿ ಪಡೆದು ಹೊರಟ.
ರಾಮನ ಬಳಿ ಬಂದು, “ರಾವಣ ಸೀತೆಯನ್ನು ಅಶೋಕವನದ ಶಂಶುವಾ ವೃಕ್ಷದ ಕೆಳಗೆ ಇಟ್ಟಿದ್ದಾನೆ. ಎಂದು ಅರುಹಿ ಚೂಡಾಮಣಿಯನ್ನು ರಾಮನಿಗೆ ಸಮರ್ಪಿಸಿದ. ಹನುಮನ ಮಾತಿನಿಂದ ಸಂತೋಷಪಟ್ಟ ರಾಮ, “ಹನುಮ ನೀನು ಮಾಡಿದ ಕೆಲಸ ಅಸಾಮಾನ್ಯವಾದುದು. ಸಮುದ್ರವನ್ನು ದಾಟಿ, ಸೀತೆಯ ದರ್ಶನ ಮಾಡಿ, ಪ್ರಭು ಹೇಳಿದಕ್ಕಿಂತ ಹೆಚ್ಚದ್ದನ್ನೇ ಮಾಡಿದ್ದಿಯ. ಎಂದು ಹೇಳಿ ಹನುಮನನ್ನು ಗಟ್ಟಿಯಾಗಿ ಆಲಿಂಗಿಸಿಕೊಂಡ. ನಂತರ ವಾನರ ಸಹಾಯದಿಂದ ಸಮುದ್ರಕ್ಕೆ ಸೇತುವನ್ನು ನಿರ್ಮಿಸಿ ಮುಂದೆ ಯುದ್ಧಕಾಂಡಕ್ಕೆ ಪೀಠಿಕೆಯನ್ನು ಹಾಕಿದ.
ಶ್ರೀ ರಾಮಚರಿತೆ ಭೂಮಿಯಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂದು ತೋರಿಸುವ ದಿನದರ್ಶಕದಂತೆ, ಶ್ರೀರಾಮ ಆದರ್ಶ ಜೀವನವನ್ನು ಸ್ವತಃ ನೆಡೆಸಿದ. ಮುಂದೆ ಯಾವುದೇ ಸಾತ್ತ್ವಿಕ ಜೀವಿ ಹುಟ್ಟು ಹಾಗೂ ಸಾವಿನ ಮಧ್ಯ, ಯಾವ ಮೌಲ್ಯಗಳನ್ನು ರೂಢಿಸಿಕೊಂಡು ಜೀವನ ನೆಡೆಸಿದರೆ ಇಹ- ಪರದಲ್ಲೂ ನೈಜವಾದ ಸುಖವನ್ನು ಅನುಭವಿಸಿ ಮುಕ್ತಿ ಪಡೆಯಬಹುದು ಎಂದು ತೋರಿಸಿಕೊಟ್ಟು ಶ್ರೀ ರಾಮ. ಕೇವಲ ಮಾನವನಲ್ಲದೆ ಪ್ರಾಣಿಗಳ ಸಹಾಯವನ್ನು ಪಡೆದು ಪ್ರಕೃತಿಯನ್ನು ಪ್ರೀತಿಸುತ್ತಾ ಪ್ರಕೃತಿದತ್ತವಾದ ಕಷ್ಟ ಸುಖಗಳನ್ನು ಸಮ ಚಿತ್ತದಿಂದ ಎಲ್ಲರೊಡನೆ ಹಂಚಿಕೊಂಡು ಇಡೀ ಭಾರತವನ್ನು ಸೀತೆಯ ಹುಡುಕುವ ನೆಪದಲ್ಲಿ ಪಾದಯಾತ್ರೆ ಮಾಡಿ ಹೋದಕಡೆಯಲ್ಲಾ ಆದರ್ಶದ ಬೀಜ ಬಿತ್ತುತ್ತಾ ಇಡೀ ಭರತ ಭೂಮಿಯನ್ನು ಹಿಂದೂ ಸನಾತನ ಧರ್ಮದ ಕರ್ಮ ಭೂಮಿಯನ್ನಾಗಿಸಿ ಯುಗಾಂತರಗಳಲ್ಲೂ ಸನಾತನ ಧರ್ಮದ ಶಾಶ್ವತವಾಗಿರುವಂತೆ ಅಡಿಪಾಯ ಹಾಕಿ ಹಿಂದೂ ಧರ್ಮ ರಕ್ಷಣೆ ಮಾಡಿದ ಶ್ರೀ ರಾಮ.
-ಪ್ರಭಂಜನ ಮುತ್ತಿಗಿ
9886278424
ಲೇಖಕರ ಕಿರುಪರಿಚಯ:
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಶ್ರೀ ಲಕ್ಷ್ಮೀನಾರಾಯಣಾಚಾರ್ಯ ಹಾಗೂ ಶ್ರೀಮತಿ ಉಷಾಬಾಯಿ ಅವರ ದ್ವಿತೀಯ ಪುತ್ರರಾಗಿ ಜನಿಸಿ, ಶ್ರೀ ವ್ಯಾಸರಾಜ (ಸೋಸಲೆ) ಮಠದ ಶ್ರೀ ವಿದ್ಯಾಪಯೋನಿಧಿ ತೀರ್ಥರ ಆಶೀರ್ವಾದದಿಂದ, ಲೌಕಿಕ ಹಾಗೂ ಧಾರ್ಮಿಕ ವಿದ್ಯಾಭ್ಯಾಸ ಮಠದಲ್ಲೇ ಇದ್ದು ಪೂರೈಸಿ, ಶ್ರೀ ಮಠದ ಹಲವಾರು ದಿನನಿತ್ಯದ ಸಂಪ್ರದಾಯಗಳು ಹಾಗು ಆಚರಣೆಗಳನ್ನು ತಿಳಿದುಕೊಂಡು ನಂತರ, ಕವಿತೆ, ಕಾವ್ಯ, ದೇವರನಾಮಗಳು, ಕಥೆ ಇತ್ಯಾದಿ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದು ಶ್ರೀ ವಿದ್ಯಾವಾಚಸ್ಪತಿ ತೀರ್ಥರ ಆಶೀರ್ವಾದದಿಂದ ಅವರ ಉಪನ್ಯಾಸಗಳ ನಿರಂತರ ಕೇಳುವಿಕೆ ಹಾಗು ಶ್ರೀ ವಿದ್ಯಾವಿಜಯ ತೀರ್ಥ ಶ್ರೀಪಾದಂಗಳವರ ಆಶೀರ್ವಾದದಿಂದ ವಿಷಯ ನಿರೂಪಣೆಯ ಆಳ ಅಗಲ ಪ್ರಬಂಧ ಮಂಡನೆ ಶೈಲಿಯನ್ನು ಕಲೆತಿದ್ದಾರೆ ಪ್ರಸ್ತುತ ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ