ಗೋವಾದಲ್ಲಿ ಕನ್ನಡ ಭವನ ಶೀಘ್ರ ನಿರ್ಮಾಣ: ಸಚಿವ ಶಿವರಾಜ ತಂಗಡಗಿ

Upayuktha
0

ಪಣಜಿ: ಗೋವಾ ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಇಡೀ ಗೋವಾದ ಜನಸಂಖ್ಯೆ 15 ಲಕ್ಷ. ಕರ್ನಾಟಕದಿಂದ ಗೋವಾದಲ್ಲಿ ಉದ್ಯೋಗಕ್ಕಾಗಿ ಬಂದು ಹೋಗುವವರ ಸಂಖ್ಯೆ ಕೂಡ ಇದಕ್ಕಿಂತ ಹೆಚ್ಚಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಕನ್ನಡಿಗರಿರುವ ಗೋವಾದಲ್ಲಿ ಶೀಘ್ರದಲ್ಲಿಯೇ ಕನ್ನಡ ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಗೋವಾ ಕನ್ನಡಿಗರಿಗೆ ಭರವಸೆ ನೀಡಿದರು.



ಗೋವಾದ ವಾಸ್ಕೊ ಜುವಾರಿನಗರದಲ್ಲಿರುವ ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು. ಗೋವಾದ ವಿವಿಧ ಸರ್ಕಾರಿ ಇಲಾಖೆಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಸಕ್ತ ಬಾರಿ ಗೋವಾದಲ್ಲಿ ಕನ್ನಡ ಭವನಕ್ಕೆ ಕನಿಷ್ಠ ಒಂದು ಎಕರೆ ಅಥವಾ ಅರ್ಧ ಎಕರೆಯನ್ನಾದರೂ ಭೂಮಿಯನ್ನೂ ಖರೀದಿಸುತ್ತೇವೆ. ಇಷ್ಟು ಹೊತ್ತಿಗಾಗಲೇ ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕತ್ತು, ಬೇರೆ ರಾಜ್ಯಗಳಲ್ಲಿ ಕನ್ನಡ ಭವನ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಕೂಡ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡೋಣ ಎಂದಿದ್ದಾರೆ. ಇದೀಗ ಗೋವಾದಲ್ಲಿ ಎರಡು ಕಡೆಗಳಲ್ಲಿ ಜಾಗ ವೀಕ್ಷಣೆ ಮಾಡಿದ್ದೇವೆ ಎಂದು ಸಚಿವ ಶಿವರಾಜ ತಂಗಡಗಿ ನುಡಿದರು.



ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ಧಣ್ಣ ಮೇಟಿ ಮಾತನಾಡಿ- ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ನಮ್ಮ ಬಹು ವರ್ಷಗಳ ಕನಸಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕನ್ನಡ ಭವನಕ್ಕಾಗಿ ಸತತ ಪ್ರಯತ್ನ ನಡೆಸುತ್ತಾ ಬಂದಿದ್ದೇವೆ. ಆದರೆ ಪ್ರಸಕ್ತ ಬಾರಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಲಿದೆ ಎಂಬ ವಿಶ್ವಾಸ ನಮಗಿದೆ ಎಂದರು. ಈ ಸಂದರ್ಭದಲ್ಲಿ ಗೋವಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಚಿವ ಶಿವರಾಜ್ ತಂಗಡಗಿ ರವರಿಗೆ ಕನ್ನಡ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ.ಸಿದ್ಧಣ್ಣ ಮೇಟಿ ಮನವಿ ಪತ್ರ ಸಲ್ಲಿಸಿದರು.



ಈ ಸಂದರ್ಭದಲ್ಲಿ ವಿಜಯಪುರ ಜಿಪಂ ಮಾಜಿ ಅಧ್ಯಕ್ಷ ನೀಲಮ್ಮ ಮೇಟಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಕಸಾಪ ಗೋವಾ ರಾಜ್ಯ ಗೌ. ಕಾರ್ಯದರ್ಶಿ ನಾಗರಾಜ ಗೋಂದಕರ್, ಕಸಾಪ ಗೋವಾ ರಾಜ್ಯ ಘಟಕದ ಮಹಿಳಾ ಪ್ರತಿನಿಧಿ ವಿದ್ಯಾ ದಿನ್ನಿ, ಶ್ರೀ ಯಲ್ಲಾಲಿಂಗೇಶ್ವರ ಮಠದ ಅರ್ಚಕ ಕಂಬಳ್ಳ ಮಹಾರಾಜರು, ಕಸಾಪ ಗೋವಾ ರಾಜ್ಯ ಘಟಕದ ಗೌ.ಕೋಶಾಧ್ಯಕ್ಷ ಪುಟ್ಟಸ್ವಾಮಿ ಗುಡಿಗಾರ, ಸಂಘ ಸಂಸ್ಥೆಗಳ ಪ್ರತಿನಿಧಿ ಪಡದಯ್ಯಾ ಹಿರೇಮಠ, ಕಸಾಪ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಪರಶುರಾಮ ಕಲಿವಾಳ, ಸಾಲಸೇಟ್ ತಾಲೂಕಾಧ್ಯಕ್ಷ ಬಸವರಾಜ್ ಬನ್ನಿಕೊಪ್ಪ, ಕಸಾಪ ಪಣಜಿ ತಾಲೂಕಾಧ್ಯಕ್ಷ ಹನುಮಂತ ಗೊರವರ್, ಉತ್ತರ ಗೋವಾ ಜಿಲ್ಲಾಧ್ಯಕ್ಷ ಮಡಿವಾಳಯ್ಯ ಗಣಾಚಾರಿ, ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಕರವೇ ಗೋವಾ ರಾಜ್ಯಾಧ್ಯಕ್ಷ ಮಂಜು ನಾಟೀಕರ್, ಶ್ರೀ ದಾಮೋದರ ಸೇವಾ ಸಮೀತಿಯ ಅಧ್ಯಕ್ಷ ಸಂಗಮೇಶ್ ಹಗರಿ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top