ಭಾರತ... ಈ ವಿಶಾಲವಾದ ರಾಷ್ಟ್ರದ ವಿಚಾರಗಳನ್ನು ಬರೆಯಲು ಪುಟಗಳೇ ಸಾಲದು. ಇಂತಹ ದೇಶದ ವಿಚಾರಗಳನ್ನು ಬೆರೆಯುವುದೇ ಹೆಮ್ಮೆಯ ವಿಷಯ.
“ಭಾರತ ಮಾತೆ” ಎನ್ನುವದು ಭಾರತೀಯರಾದ ನಾವು ನಮ್ಮ ದೇಶಕ್ಕೆ ನೀಡುವ ಗೌರವ. ಭಾರತವನ್ನು ಹೆಣ್ಣೆಂದು ಪರಿಗಣಿಸಲಾಗಿದೆ.
ಇಂತಹ ನಾಡಿನಲ್ಲಿ ಹೆಣ್ಣಿಗೆ ಅಪಾರವಾದ ಗೌರವ ನೀಡುತ್ತಾರೆ. ಹಾಗೂ ಅವರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಒಂದು ಕಾಲದಲ್ಲಿ ಬ್ರಿಟಿಷರ ಅಧೀನದಲ್ಲಿದ್ದ ಭಾರತ ಇಂದು ಪ್ರತಿಭಾವಂತ ರಾಷ್ಟ್ರಗಳಲ್ಲಿ ಒಂದಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ ಪಡುವಂತಹ ವಿಚಾರ. ಇದರ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ದೇಶಕ್ಕಾಗಿ ದುಡಿದು, ಮಡಿದ ಹಲವಾರು ಜೀವಗಳ ಪರಿಶ್ರಮವಿದೆ. ಇಂದಿಗೂ ದೇಶಭಕ್ತರಾದ ಭಾರತೀಯರು ಭಾರತದ ಶ್ರೇಯಸ್ಸಿಗಾಗಿ ದುಡಿಯುತ್ತಲೇ ಇದ್ಧಾರೆ.
ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ರೈತರು ಕೋಟ್ಯಾಂತರ ಜೀವಿಗಳಿಗೆ ಅನ್ನದಾತರಾಗಿದ್ದಾರೆ. ಹಾಗಾಗಿ ರೈತರು "ದೇಶದ ಬೆನ್ನೆಲುಬು" ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಹಲವಾರು ಮತ, ಧರ್ಮಗಳನ್ನು ಹೊಂದಿರುವ ಈ ರಾಷ್ಟ್ರದಲ್ಲಿ ಎಲ್ಲಾ ಧಾರ್ಮಿಕ ಸಂಸ್ಥೆಗಳನ್ನು ನಿರ್ಮಿಸಲು ಅನುಮತಿಯಿದೆ ಹಾಗೂ ಒಂದು ಧರ್ಮದಿಂದ ಮಾತೊಂದು ಧರ್ಮಕ್ಕೆ ವರ್ಗಾವಣೆಯಾಗುವ ಹಕ್ಕನ್ನು ಭಾರತೀಯರಿಗೆ ಭಾರತದ ಸಂವಿಧಾನವು ನೀಡಿದೆ.
ಇಷ್ಟೇ ಅಲ್ಲದೇ ವಿಜ್ಞಾನದ ನಿಟ್ಟಿನಲ್ಲೂ ಭಾರತ ಮುಂದಿದೆ. ಇತ್ತೀಚೆಗೆ ಭಾರತ ಹಾರಿಸಿದ ಚಂದ್ರಯಾನ-3 ರ ಗೆಲುವು ಇದಕ್ಕೆ ಉದಾಹರಣೆಯಾಗಿದೆ.ಇದು ಪ್ರತಿಯೊಬ್ಬ ಭಾರತೀಯನ ಗೆಲುವಾಗಿದೆ. ಹಾಗೂ ಇದಕ್ಕೆ ಶ್ರಮಿಸಿದಂತಹ ISRO-ವಿಜ್ಞಾನಿಗಳಿಗೆ ಭಾರತೀಯರೆಲ್ಲರೂ ಋಣಿಯಾಗಿದ್ದಾರೆ.
ಇದು ಒಂದು ಉದಾಹರಣೆಯಾದರೆ ಭಾರತೀಯರು ವಿಜ್ಞಾನದಲ್ಲಿ ಇಂತಹ ಸಾವಿರಾರು ಸಂಶೋಧನೆ, ಸಾಧನೆಗಳನ್ನು ಮಾಡಿದ್ದಾರೆ. ಆದರೂ ಸಹ ಇಲ್ಲಿಯ ಜನ ನಮ್ಮ ಸಂಸ್ಕೃತಿಯನ್ನು ಎಂದಿಗೂ ಮರೆಯದೆ ಇರುವುದು ಇಲ್ಲಿಯ ಜನರ ವಿಶೇಷತೆ.
ಉದಾಹರಣೆ ನೀಡುವುದಾದರೆ- ಮಿಸೈಲ್ ಮ್ಯಾನ್ ಎಂದೇ ಪ್ರಖ್ಯಾತರಾಗಿರುವ ಭಾರತದ ವಿಜ್ಞಾನಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ಸರಳತೆ, ಧಾರ್ಮಿಕ ಆಚರಣೆಗಳು ಎಲ್ಲರ ಮನಸೆಳೆದಿದೆ. ಇವರು ಮುಸಲ್ಮಾನರಾಗಿದ್ದರೂ ಎಲ್ಲಾ ಧರ್ಮಗಳನ್ನು ಪಾಲಿಸುತ್ತಿದ್ದುದು ಹಾಗೂ ಎಲ್ಲಾ ಧರ್ಮದ ಆಚರಣೆಗಳನ್ನು ಮಾಡುತ್ತಿದ್ದುದು ಇವರ ವ್ಯಕ್ತಿತ್ವವನ್ನು ತೋರುತ್ತದೆ. ಹೀಗೆಯೇ ಹಿಂದೂ ಸಂತರಾದ ಸ್ವಾಮಿ ವಿವೇಕಾನಂದರು ಭಾರತ ರಾಷ್ಟ್ರದ ಬಗ್ಗೆ ಚಿಕಾಗೊನಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿರುವುದು ಇಂದಿಗೂ ಎಲ್ಲಾ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ.
ಇಂತಹ ಮಹಾ ಪುರುಷರು ಸರ್ವ ಧರ್ಮ ಸಮನ್ವಯತೆಯನ್ನು ಸಾರಿದ್ದಾರೆ. ಎಷ್ಟೇ ಹೆಸರು, ಹಣ ಸಂಪಾದಿಸಿದರೂ ಭಾರತೀಯರು ನೆಲ, ಸಂಸ್ಕೃತಿಗೆ ನೀಡುವ ಗೌರವ ಎಂದಿಗೂ ಕಡಿಮೆಯಾಗಿಲ್ಲಾ. "ನೆರಳು ಎಲ್ಲರನ್ನು ಹಿಂಬಾಲಿಸುವಂತೆ ಭಾರತೀಯ ಸಂಸ್ಕೃತಿಯು ಪ್ರತಿಯೊಬ್ಬ ಭಾರತೀಯನನ್ನು ಹಿಂಬಾಲಿಸುತ್ತದೆ" ಎಂಬ ಮಾತು ಒಪ್ಪಬೇಕಾದ ವಿಚಾರವಾಗಿದೆ. ಹಲವಾರು ದಾಸರ ಉಕ್ತಿಗಳು ಭಾರತದ ಸಂಸ್ಕೃತಿಯನ್ನು ಸಾರುತ್ತದೆ ಹಾಗೂ ಹಲವಾರು ವಚನಕಾರರು ವಚನಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಇಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿರುವ ನಾವೇ ಪುಣ್ಯವಂತರು, ಹಾಗು ಇಲ್ಲಿಗೆ ನಮ್ಮ ಪ್ರಯತ್ನಗಳನ್ನು ನಿಲ್ಲಿಸಿದೆ ಭಾರತದ ಶ್ರೇಯಸ್ಸಿಗಾಗಿ, ಉನ್ನತಿಗಾಗಿ ದುಡಿಯೋಣ, ಹಾಗೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಮೇಲೆತ್ತಿ ಮೆರೆಸೋಣ.
ಸಿರಿಗನ್ನಡಂ ಗೆಲ್ಗೆ.
- ಲಿಖಿತ ಸಿ ಜಿ
ವಿಜಯ ಕಾಲೇಜು ಆರ್.ವಿ ರೋಡ್, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ