ಕುಂದಾಪುರ: ಡಿ.09 ಶನಿವಾರದಂದು ರಾತ್ರಿ 9:30ರಿಂದ ಯಕ್ಷ ಕಾಶಿ ಕುಂದಾಪುರ ನೆಹರು ಮೈದಾನದಲ್ಲಿ, ಪ್ರಶಾಂತ ಮಲ್ಯಾಡಿಯವರ ಪೌರಾಣಿಕ ಯಕ್ಷ ರಾತ್ರಿ ಮಲ್ಯಾಡಿ ಯಕ್ಷೋತ್ಸವ ನಡೆಯಲಿದೆ.
"ಮಲ್ಯಾಡಿ ಯಕ್ಷೋತ್ಸವ" ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಹಲವು ಜನರ ವಾಟ್ಸಪ್ ಸ್ಟೇಟಸ್ ನಲ್ಲಿ ರಾರಾಜಿಸುತ್ತಿರುವ ಯಕ್ಷಗಾನದ ಪೋಸ್ಟರ್. ಪ್ರಶಾಂತ ಮಲ್ಯಾಡಿ - ಇಂದು ಯಕ್ಷವಲಯದಲ್ಲಿ ಚಿರಪರಿಚಿತ ಹೆಸರು. ಮಲ್ಯಾಡಿ ಅವರ ಕ್ಯಾಮರಾ ಕಣ್ಣುಗಳು ಅದೆಷ್ಟೊ ವೇಷಗಳನ್ನು ರಂಗಸ್ಥಳದ ಹೊರಗೆ ನಿಂತು ಸೆರೆಹಿಡಿದಿವೆ ಹಾಗೂ 2 ವರ್ಷಗಳಿಂದ ಮಲ್ಯಾಡಿ ಲೈವ್ ಎಂಬ ವಾಹಿನಿಯಿಂದ ಅನೇಕ ಯಕ್ಷಗಾನವನ್ನು ಲೈವ್ ಮೂಲಕ ನೀಡಿ ಯಕ್ಷಗಾನದ ಕಂಪನ್ನು ಪ್ರೇಕ್ಷಕರಿಗೆ ಇನ್ನೂ ಹತ್ತಿರದಿಂದ ನೋಡುವ ಹಾಗೆ ಮಾಡಿದ್ದಾರೆ.
2015ರಲ್ಲಿ ಪೆರ್ಡೂರು ಮೇಳದ ಯಕ್ಷಗಾನವನ್ನು ಪ್ರಥಮ ಬಾರಿಗೆ ಸಂಘಟನೆ ಮಾಡಿ, 2017ರಲ್ಲಿ ಸಾಲಿಗ್ರಾಮ ಮೇಳ ಹಾಗೂ ತೆಂಕು ಬಡಗಿನ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಸಂಘಟನೆ ಮಾಡಿ, ಇದೀಗ ಮೂರನೇ ಬಾರಿಗೆ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪೌರಾಣಿಕ ಯಕ್ಷಗಾನದ ಮಲ್ಯಾಡಿ ಯಕ್ಷೋತ್ಸವ ನಡೆಯುತ್ತಿದೆ.
ತಾಮ್ರಧ್ವಜ ಕಾಳಗ, ಶ್ರೀ ಕೃಷ್ಣ ತುಲಾಭಾರ, ಮೀನಾಕ್ಷಿ ಕಲ್ಯಾಣ- ಈ ಮೂರು ಪ್ರಸಂಗಗಳ ಪ್ರದರ್ಶನ ನಡೆಯಲಿದೆ.
ತಾಮ್ರಧ್ವಜ ಕಾಳಗ:
ಈ ಪ್ರಸಂಗದಲ್ಲಿ ಯಾಜಿಯವರು ಮೊತ್ತಮೊದಲ ಬಾರಿಗೆ ತಾಮ್ರ ಧ್ವಜನಾಗುತ್ತಿದ್ದಾರೆ. ಅದೊಂದು ವಿಶೇಷ ಕುತೂಹಲ ಎಲ್ಲರಿಗೂ ಇದೆ. ತೀರ್ಥಹಳ್ಳಿ, ಕೋಟ, ಹಂದೆಯವರು... ಹೀಗೆ ಪ್ರಸಂಗ ನಿಷ್ಠ ತಾರಾಗಣವಿದೆ.
ಶ್ರೀ ಕೃಷ್ಣ ತುಲಾಭಾರ:
ಈ ಪ್ರಸಂಗದಲ್ಲಿ ಕಾರ್ಕಳ ಅವರ ಸತ್ಯಭಾಮೆ, ಪ್ರಸನ್ನ ಅವರ ಕೃಷ್ಣ, ಪ್ರದೀಪ್ ಸಾಮಗ ಅವರ ನಾರದ, ಪ್ರವೀಣ್ ಗಾಣಿಗ ಕೆಮ್ಮಣ್ಣು ಅವರ ಬಲರಾಮ, ಕುಂಕಿಪಾಲ್ ಅವರ ರುಕ್ಮಿಣಿ. ಇನ್ನೂ ಕೊನೆಯ ಪ್ರಸಂಗದಲ್ಲಿ ಮೀನಾಕ್ಷಿ ಕಲ್ಯಾಣವೂ ಯುವ ಪಡೆಯ ಮಿಂಚುಗೊಂಚಲಾಗಿದೆ.
ಪೌರಾಣಿಕ ಪ್ರಸಂಗಗಳನ್ನು ರಸಾತ್ಮಕವಾಗಿ ಪ್ರದರ್ಶಿಸುವ ಸಂಘಟಕ ಪ್ರಶಾಂತ ಮಲ್ಯಾಡಿಯವರ ಸಂಘಟನೆಗೆ ಅವರ ಯಕ್ಷಗಾನ ಸಂಘಟನೆ ಗೆಲ್ಲಬೇಕು ಎಂಬುದು ಕಲಾಪ್ರೇಮಿಗಳ ಆಶಯ.
- ಶ್ರವಣ್ ಕಾರಂತ್ ಕೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ