ಮಂಗಳೂರು ವಿವಿ: "ಯಕ್ಷಾಯಣ" ಸರಣಿ ಕಾರ್ಯಕ್ರಮ ಉದ್ಘಾಟನೆ
ಮುಡಿಪು: ಕಲಾವಿದನ ಬದುಕು, ಯಕ್ಷಗಾನ ಕಟ್ಟಿಕೊಡುವ ಹಾಗೂ ಅದನ್ನು ಮುಂದಿನ ಪರಂಪರೆಗೆ ದಾಟಿಸುವ ಪ್ರಯತ್ನವನ್ನು ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರವು ದಾಖಲೀಕರಣದ ಮೂಲಕ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಕಲಾವಿದರ ಸ್ವಗತದಿಂದ ಸಾಂಸ್ಕೃತಿಕ ಚರಿತ್ರೆ ಅನಾವರಣಗೊಳ್ಳಲಿದೆ ಎಂದು ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ. ಚಿನ್ನಪ್ಪ ಗೌಡ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಯಕ್ಷ ಕಲಾವಿದರ ಸ್ವಗತ "ಯಕ್ಷಾಯಣ" ಸರಣಿ ಕಾರ್ಯಕ್ರಮದ ಉದ್ಘಾಟನೆ ಮಂಗಳೂರು ವಿವಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಶುಕ್ರವಾರ ನೆರವೇರಿಸಿ ಮಾತನಾಡಿದರು.
ಯಕ್ಷಗಾನ ಸ್ಥಳೀಯವಾಗಿ ನಮ್ಮ ಕರಾವಳಿಯಲ್ಲಿ ಹುಟ್ಟಿ ಬೆಳೆದ ಕಲೆಯಾದರೂ ಯಕ್ಷಗಾನ ಅದೊಂದು ರಾಷ್ಟ್ರೀಯ ಕಲೆ. ದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿರುವ ಯಕ್ಷಗಾನ ಬೆಳೆಯುವುದಕ್ಕೆ ಅನೇಕ ಕಲಾವಿದರ ಕೊಡುಗೆಯೂ ಇದೆ. ಯಕ್ಷಗಾನ ರಂಗಕ್ಕೆ ಡಾ.ಪ್ರಭಾಕರ ಜೋಶಿಯರ ಕೊಡುಗೆ ಅಪಾರವಾಗಿದ್ದು, ಹಲವು ದಶಕಗಳ ಯಕ್ಷಪಯಣದ ಅನುಭವವು ದಾಖಲೀಕರಣಗೊಳಿಸುವ ಮೂಲಕ ಯಕ್ಷಗಾನ ಪರಂಪರೆಯನ್ನು ಮರುಕಟ್ಟಿಕೊಡುವ ಕೆಲಸವನ್ನು ಯಕ್ಷಗಾನ ಕೇಂದ್ರವು ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ಸಾಂಸ್ಕೃತಿಕ ಸಂಗತಿಗಳನ್ಬು ರಕ್ಷಿಸುವ ಕಾರ್ಯವನ್ನು ಮಂಗಳೂರು ವಿವಿಯು ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಭಾಕರ ಜೋಶಿಯವರಿಗೆ ಕೇಂದ್ರದ ವತಿಯಿಂದ ಯಕ್ಷಪಯಣದ ಗೌರವ ಸನ್ಮಾನವನ್ನು ಸಲ್ಲಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಯರಾಜ್ ಅಮೀನ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಯಕ್ಷಗಾನ ದ ಕಲಾವಿದರ ಬದುಕಿನ ವಿವರಗಳು ಕಲೆಯೊಂದರ ಬೆಳವಣಿಗೆಯ ಚರಿತ್ರೆಯನ್ನು ಕಟ್ಟಲು ಸಹಕಾರಿ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಬೋಜ ಪೂಜಾರಿ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಯಕ್ಷಗಾನ ವಿದ್ವಾಂಸರು, ಹಿರಿಯ ಅರ್ಥಧಾರಿಗಳಾಗಿರುವ ಡಾ.ಎಂ.ಪ್ರಭಾಕರ ಜೋಶಿಯವರು ಕಾರ್ಯಕ್ರಮದಲ್ಲಿ ತಮ್ಮ ಯಕ್ಷಪಯಣದ ಅನುಭವ ಕಥನವನ್ನು ಹಂಚಿಕೊಂಡರು. ಯಕ್ಷಗಾನದಲ್ಲಿ ತಾತ್ವಿಕ ಮತ್ತು ತಾಂತ್ರಿಕ ಶಿಕ್ಷಣದ ಕೊರತೆಯಿದೆ. ಕಲೆ ಬೆಳೆದಷ್ಟು ಯಕ್ಷಗಾನದ ವಿಮರ್ಶೆ ಬೆಳೆದಿಲ್ಲ ಎಂದರು. ಯಕ್ಷಗಾನ ಕಲಾವಿದರ ಆತ್ಮಕಥನವೂ ಪ್ರಾಮುಖ್ಯ ಎಂದು ವಿವಿಯ ಯಕ್ಷಗಾನ ಕೇಂದ್ರ ಭಾವಿಸಿರುವುದು ಉತ್ತಮ ಯೋಚನೆ ಎಂದರು.
ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಚಂದ್ರಶೇಖರ್ ಎಂ.ಬಿ. ಹಾಗೂ ಹರಿಪ್ರಸಾದ್ ದಾಖಲೀಕರಣದಲ್ಲಿ ಸಹಕರಿಸಿದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸತೀಶ್ ಕೊಣಾಜೆ ವಂದಿಸಿದರು. ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ