ಕೊನೇಗಾಲದಲ್ಲಿ ಅಶ್ವಥ್ ಹೇಗಿದ್ದರು?
■ ಈ ಲೇಖನ 'ವಿಜಯಕರ್ನಾಟಕ ' ಪತ್ರಿಕೆಯ 30-10-2003ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಕನ್ನಡ ಚಿತ್ರರಂಗ ಹೆಮ್ಮೆ ಪಡಬಹುದಾದ ಈ ಮಹಾ ಸ್ವಾಭಿಮಾನಿ ಕಲಾವಿದ ಅಷ್ಟರಲ್ಲಾಗಲೇ ಬದುಕಿನ ಕೊನೇ ಹಂತಕ್ಕೆ ಬಂದು ತಲುಪಿದ್ದರು. ನನ್ನನ್ನು ತಮ್ಮ 'ದೊಡ್ಡ ಮಗ' ನೆಂದೇ ಭಾವಿಸಿಕೊಂಡಿದ್ದ ಆ ಹಿರಿಯ ಕಲಾವಿದ ನನ್ನಲ್ಲಿ ಹೇಳದ ವಿಚಾರಗಳಿರಲಿಲ್ಲ. ಕೊನೇ ದಿನಗಳ ಬಡತನದ ಬಗ್ಗೆ ಹೇಳಿಕೊಂಡು ಅತ್ತ ದೃಶ್ಯ ಈಗಲೂ ನನ್ನ ಕಣ್ಣ ಮುಂದಿದೆ...ಇನ್ನು ಓದಿ: ■
ಈ ಸಾರಿ ಅಶ್ವಥ್ ಅವರನ್ನು ಭೇಟಿಯಾಗಲು ವಿಶೇಷ ಕಾರಣವೇನೂ ಇರಲಿಲ್ಲ. ಸುಮ್ಮನೇ ನೋಡಿಕೊಂಡು ಬರೋಣ ಅಂತ ಹೊರಟದ್ದು. 'ಕಲಾಶ್ರೀ' ಮನೆ ಒಳ ಹೊಕ್ಕಾಗ ಗವ್ವೆನ್ನುವ ನಿಶ್ಶಬ್ಧ. ಅದೊಂದು ಹತ್ತಡಿ ಉದ್ದಗಲದ ಗಲೀಜು ಕೋಣೆ. ಬಣ್ಣ ಕಾಣದೆ ಅದೆಷ್ಟು ವರ್ಷಗಳಾದುವೋ? ಪಕ್ಕದಲ್ಲೊಂದು ಮಂಚ. ಟಿಪ್ಪುಸುಲ್ತಾನನ ಕಾಲದ ಈ ಮಂಚದ ಮೇಲೊಂದು ಓಬೀರಾಯನ ಕಾಲದ ಚಾಪೆ. ಪಕ್ಕದ ಸ್ಟೂಲಿನ ಮೇಲೆ ಮಡಚಿಟ್ಟ ಬೂಸುರು ಹಿಡಿದ ಹಾಸಿಗೆ!
ಒಳ ಕೋಣೆಯಲ್ಲಿದ್ದ ಅಶ್ವಥ್ ನಿಧಾನವಾಗಿ ನಡೆದುಕೊಂಡು ಬಂದರು. ನನ್ನೆದೆ ಒಡೆದು ಹೋಯಿತು. ನಡೆಯಲು ಸಂಕಟ ಪಡುತ್ತಿರುವಂತೆ ಕಂಡ ಅಶ್ವಥ್ ಕೀ ಕೊಟ್ಟ ಬೊಂಬೆಯಂತೆ ಬಂದು ನನ್ನ ಮುಂದೆ ಕೂತರು. ನಾನು ಕೇಳಿದೆ : 'ಹೇಗಿದೆ ಸಾರ್ ಆರೋಗ್ಯ? ನಿಮ್ಮ ಆರ್ಥಿಕ ಪರಿಸ್ಥಿತಿ ಓಕೆನಾ?' - ನನ್ನ ಈ ಅಧಿಕಪ್ರಸಂಗದ ಪ್ರಶ್ನೆಯಿಂದ ಒಂದು ಕ್ಷಣ ವಿಚಲಿತರಾದಂತೆ ಕಂಡುಬಂದ ಅಶ್ವಥ್ ನಿಧಾನವಾಗಿ ಸಬ್ಜೆಕ್ಟ್'ಗೆ ಬಂದರು: 'ಬ್ಯಾಂಕಿನಲ್ಲಿ ಹದಿನೈದು ಪರ್ಸೆಂಟ್ ಬಡ್ಡಿ ಕೊಡುತ್ತಿದ್ದಾಗ ನನ್ನ ಸಂಪಾದನೆಯ ಒಂದಷ್ಟು ಹಣವನ್ನು ಡೆಪೊಸಿಟ್ ಮಾಡಿದ್ದೆ. ಮೂರು ಹೊತ್ತು ಊಟಕ್ಕೆ ಸಾಕಾಗುತ್ತಿತ್ತು. ಆದರೆ ಬಡ್ಡಿದರ ಇಳಿಯುತ್ತಾ ಹೋಯಿತು. ಚಿಂತೆ ಏರುತ್ತಾ ಹೋಯಿತು. ಒಂದು ದಿನ ಸೊಸೆಯನ್ನು ಕರೆದು ಹೇಳಿಬಿಟ್ಟೆ : 'ಇನ್ನು ಮುಂದೆ ಮೂರು ಹೊತ್ತಿನ ಬದಲು ಎರಡು ಹೊತ್ತು ಮಾತ್ರ ಊಟದ ವ್ಯವಸ್ಥೆ ಮಾಡು...' - ನನ್ನ ಮಾತನ್ನು ಕೇಳಿ ಆಕೆ ಸಿಡಿಲು ಹೊಡೆದಂತೆ ಮುಗುಮ್ಮಾಗಿ ಕುಳಿತು ಬಿಟ್ಟಳು. ಮಾತು ಕಟುವಾದರೂ ನಾನು ಇದನ್ನು ಹೇಳಲೇ ಬೇಕಿತ್ತು. ಬೇರೆ ಸಂಪಾದನೆ ಇರ್ಲಿಲ್ಲ. ಮಗ ಯಾವುದೋ ಸಾಹಸಕ್ಕೆ ಹೊರಟು ಲಾಸ್ ಮಾಡಿಕೊಂಡಿದ್ದ. ನಾನು, ನನ್ನ ಹೆಂಡ್ತಿ, ಮಗ, ಸೊಸೆ ಮತ್ತು ಮೊಮ್ಮಗನ ಜೀವನ ನಡೀಬೇಕು. ಇಷ್ಟು ಜನರ ಹೊಟ್ಟೆ ತುಂಬಿಸಬೇಕು. ಹೇಗೆ ತುಂಬಿಸಲಿ?' - ಎಂದು ನನ್ನನ್ನೇ ಪ್ರಶ್ನಿಸುತ್ತಾ ಮೌನವಾದರು ಅಶ್ವಥ್.
ಐವತ್ತು ವರ್ಷಗಳ ದೀರ್ಘ ಕಾಲದ ದುಡಿಮೆಯ ನಂತರ ಒಬ್ಬ ಯಜಮಾನ ಆಡುವ ಮಾತಾ ಇದು? ನಾನು ಗಾಬರಿ ಬಿದ್ದಿದ್ದೆ! ಅನಾವಶ್ಯಕ ಪ್ರಶ್ನೆ ಕೇಳಿ ಆ ಹಿರಿಯ ಜೀವಕ್ಕೆ ನೋವುಂಟುಮಾಡಿದೆನೇನೋ? ತಡೆದುಕೊಳ್ಳಲಾಗದೇ ಮತ್ತೊಂದು ಪ್ರಶ್ನೆ ಕೇಳಿದೆ : 'ಏನ್ಸಾರ್ ನೀವು, ಇಷ್ಟು ವರ್ಷಗಳ ದುಡಿಮೆಯ ನಂತರ ಹೊಟ್ಟೆಪಾಡಿಗೂ ತೊಂದ್ರೆಯಾಗಿದೆ ಅಂತಿದ್ದೀರಲ್ಲಾ?' - ನನ್ನ ಈ ತೀಕ್ಷ್ಣ ಪ್ರಶ್ನೆಗೆ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿದರು ಅಶ್ವಥ್ : 'ದುಡಿಯುತ್ತಿದ್ದಾಗ ಹಣದ ಪ್ರಶ್ನೆ ಕಾಡಲಿಲ್ಲ. ಸಂಭಾವನೆ ಕೊಡುವುದರಲ್ಲಿ ನಿರ್ಮಾಪಕರು ಚೌಕಾಶಿ ಮಾಡುವುದನ್ನು ನೋಡಿದ್ದೀರಿ, ಆದರೆ ನಾನು ಸಂಭಾವನೆ ಪಡೆಯುವುದರಲ್ಲಿ ಚೌಕಾಶಿ ಮಾಡುತ್ತಿದ್ದೆ! ನಿರ್ಮಾಪಕರು ಎಷ್ಟೇ ಒತ್ತಾಯ ಮಾಡಿ ಜೇಬಿಗೆ ದುಡ್ಡು ತುರುಕಿಸಿದರೂ ನಾನು ಅದರಲ್ಲಿ ಒಂದಷ್ಟನ್ನು ಅವರಿಗೇ ಕೊಟ್ಟುಬಿಡುತ್ತಿದ್ದೆ! ನಾನು ಬದುಕು ಪೂರ್ತಿ ಚಿರಯುವಕನಾಗಿಯೇ ಇರುತ್ತೇನೆನ್ನುವ ಭ್ರಮೆಯಲ್ಲಿದ್ದೆ! ಈಗ ಮುದುಕನಾದಾಗ ಆರ್ಥಿಕ ತೊಂದರೆ ಕಾಡುತ್ತಿದೆ. ಬೇರೇನು ಮಾಡಲಿ? ಹೀಗಾಗಿಯೇ ತಿನ್ನೋದನ್ನು ಕಮ್ಮಿ ಮಾಡಿದ್ದೀನಿ. ಆ ಕಾಲದಲ್ಲಿ ಹನಿಹನಿಯಾಗಿ ಸಂಭಾವನೆ ಪಡೆದೆ. ಈಗ ಹನಿಹನಿ ಊಟಕ್ಕಾಗಿ ಪರದಾಡುವಂತಾಗಿದೆ...!' -ಅಶ್ವಥ್ ಮಾತು ನಿಲ್ಲಿಸಿದರು.
ನನ್ನಲ್ಲಿ ಮತ್ತೊಂದು ಪ್ರಶ್ನೆ ರೆಡಿಯಾಗಿತ್ತು : 'ಸರ್ಕಾರದಿಂದ ಮಾಸಾಶನವೇನಾದರೂ ಬರುತ್ತಿಲ್ಲವಾ?' ಕ್ಷೀಣವಾಗಿ ನಗುತ್ತ ಅಶ್ವಥ್ ಉತ್ತರಿಸಿದರು : 'ಅದ್ಕೆ ಅಪ್ಲೈ ಮಾಡ್ಬೇಕಂತೆ. PHD ಮಾಡಿಕೊಂಡವನೊಬ್ಬ ನಾನು ಡಾಕ್ಟರೇಟ್ ಮಾಡಿದ್ದೀನಿ ಕೆಲ್ಸ ಕೊಡಿ ಅಂತ ಅಂಗಲಾಚಬೇಕಾ? ಸರ್ಕಾರ ಯೋಗ್ಯತೆಯನ್ನು ಗುರುತಿಸುವುದು ಬೇಡವಾ? ನಾನಂತೂ ನನ್ನ ಈ ವರೆಗಿನ ಲೈಫ್'ನಲ್ಲಿ ಸಹಾಯ ಮಾಡಿ ಅಂತ ಯಾರಲ್ಲೂ ಬೇಡಿದವನಲ್ಲ. ಇಷ್ಟಕ್ಕೂ ನನ್ಗೆ ಭಿಕ್ಷೆ ಬೇಡ. ಯೋಗ್ಯತೆ ಇದೆ ಅಂತ ಸರ್ಕಾರಕ್ಕೆ ಅನಿಸಿದರೆ ಕೊಡಲಿ. ನಾನು ನಿನ್ನ ಹಾಗೆ ಮಹಾಸ್ವಾಭಿಮಾನಿ ಕಣಪ್ಪಾ...' - ಎಂದು ಹೇಳುತ್ತಾ ಎದೆ ತಟ್ಟಿಕೊಂಡರು. ತಟ್ಟಿದ್ದು ಹೆಚ್ಚಾಯಿತೇನೋ ಮತ್ತೆ ಎದೆ ಹಿಡಿದು ಕೆಮ್ಮಿಕೊಂಡರು...
ಇವಿಷ್ಟು ನಾನು ಬರೆದ ಲೇಖನದ ಆಯ್ದ ಅಂಶ. ಇದು 'ವಿಜಯಕರ್ನಾಟಕ'ದಲ್ಲಿ ಪ್ರಕಟವಾಗುತ್ತಲೇ ಸರ್ಕಾರದ ಮಟ್ಟದಲ್ಲಿ ಕೋಲಾಹಲವೆದ್ದಿತು! ಕನ್ನಡದ ಹಿರಿಯ ಕಲಾವಿದನ ಗೋಳಿನ ಬದುಕಿಗೊಂದು ಫುಲ್'ಸ್ಟಾಪ್ ಇಡಬೇಕೆಂದು ನಿರ್ಧರಿಸಿದ ಆಗಿನ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ರಾಣಿ ಸತೀಶ್ ಅವರು ನನ್ನ ಈ ಲೇಖನವನ್ನೇ ಅಪ್ಲಿಕೇಶನ್ ಎಂದು ಪರಿಗಣಿಸಿ ಅಶ್ವಥ್ ಅವರಿಗೆ ಮಾಶಾಸನ, ಮಾಸಿಕ ಔಷಧೋಪಚಾರ ಮತ್ತು ಇನ್ನಿತರ ಸೌಲಭ್ಯಗಳ ಘೋಷಣೆ ಮಾಡಿದರು. ಘೋಷಣೆ ಮಾಡಿದ್ದು ಮಾತ್ರವಲ್ಲ ಒಂದೇ ಒಂದು ವಾರದಲ್ಲಿ ಇವಿಷ್ಟೂ ಅಂಶಗಳು ಕಾರ್ಯಗತವಾಗುವಂತೆ ನೋಡಿಕೊಂಡರು.
ಇದಾದ ಮಾರನೇ ವಾರ ಅಶ್ವಥ್ ಫೋನ್ ಮಾಡಿ 'ಮಗಾ...' ಅಂದರು. ಈ ಸಾರಿ ಅವರು ಅಳಲಿಲ್ಲ, ನನ್ನ ಕಣ್ಣಲ್ಲಿ ಧಾರಾಕಾರ ನೀರು...
- ಗಣೇಶ ಕಾಸರಗೋಡು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ