ಗೆಲುವಿನ ಮಂತ್ರ: ದೃಢ ನಂಬಿಕೆಯೇ ಶಕ್ತಿ, ಆತ್ಮ ವಿಶ್ವಾಸವೇ ಔಷಧ

Upayuktha
0


ತನೋರ್ವ ಕ್ಯಾನ್ಸರ್ ರೋಗಿ. ಆತನ ಕಾಯಿಲೆ ಅದಾಗಲೇ ಮೂರನೇ ಹಂತವನ್ನು ದಾಟಿತ್ತು. ಅದೊಂದು ದಿನ ಮನೆಯಲ್ಲಿಯೇ ಕುಳಿತು ಪೇಪರ್ನಲ್ಲಿ ಆ ವ್ಯಕ್ತಿ ಈಗಾಗಲೇ ವಿದೇಶದಲ್ಲಿ ಕ್ಯಾನ್ಸರ್ ರೋಗಕ್ಕೆ ಚುಚ್ಚುಮದ್ದು ಕಂಡುಹಿಡಿದಿದ್ದು, ಅದನ್ನು ಬಳಸಿದರೆ ರೋಗಿಯು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಗುಣಮುಖನಾಗುತ್ತಾನೆ ಎಂಬ ಸುದ್ದಿಯನ್ನು ಓದಿದನು. ಬಹಳವೇ ಶ್ರೀಮಂತನಾದ ವ್ಯಕ್ತಿಗೆ ಔಷಧಿಯ ಬಳಕೆಯಿಂದ ತನ್ನ ಕ್ಯಾನ್ಸರ್ ರೋಗ ಸಂಪೂರ್ಣ ಗುಣಮುಖವಾಗುತ್ತದೆ ಎಂಬ ಖಾತರಿಯಿತ್ತು ಅಂತೆಯೇ ತನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಬಳಿ ಹೋಗಿ ಈ ವಿಷಯವನ್ನು ಅರುಹಿದ. ಆತನ ಮನಸ್ಸಿಗೆ ನೋವು ಕೊಡಲಿಚ್ಚಿಸದ ವೈದ್ಯರು, ತನ್ನ ರೋಗಿ ಜೀವಿತದ ಕೊನೆಯ ಗಳಿಗೆಯಲ್ಲಾದರೂ ನೆಮ್ಮದಿಯನ್ನು ಕಾಣಲಿ ಎಂಬ ಆಶಯದಿಂದ ಕೆಲವೇ ದಿನಗಳಲ್ಲಿ ಅತ್ಯಂತ ದುಬಾರಿಯಾಗಿರುವ ಆ ಚುಚ್ಚುಮದ್ದನ್ನು ತರಿಸಿ ಆತನ ಮೇಲೆ ಪ್ರಯೋಗಿಸುವುದಾಗಿ ಹೇಳಿದನು. ಅಂತೆಯೇ ರೋಗಿ ಪ್ರತಿ ದಿನ ವೈದ್ಯರಿಗೆ ಚುಚ್ಚುಮದ್ದನ್ನು ತರಿಸುವ ಕುರಿತು ಕರೆ ಮಾಡುತ್ತಿದ್ದನು. ಒಂದು ದಿನ ವೈದ್ಯರು ಆ ಕ್ಯಾನ್ಸರ್ ರೋಗಿಗೆ ಕರೆ ಮಾಡಿ ಆತನ ಚುಚ್ಚುಮದ್ದು ಬಂದಿರುವುದಾಗಿಯೂ ನಾಳೆಯ ದಿನ ರೋಗಿ ಆಸ್ಪತ್ರೆಗೆ ದಾಖಲಾಗಿ ಚುಚ್ಚುಮದ್ದನ್ನು ಪಡೆಯಬೇಕೆಂದು ಸೂಚಿಸಿದರು. 


ಮರುದಿನ ಬೆಳಗಿನ ಜಾವವೇ ನಿತ್ಯ ಕರ್ಮಗಳನ್ನು ಪೂರೈಸಿ ತನ್ನ ಮಕ್ಕಳ ಸಹಾಯದಿಂದ ಆಸ್ಪತ್ರೆಗೆ ಬಂದ ಆ ಶ್ರೀಮಂತ ರೋಗಿ ಆಸ್ಪತ್ರೆಯಲ್ಲಿ ದಾಖಲಾಗಿ ವೈದ್ಯರಿಂದ ಚುಚ್ಚುಮದ್ದನ್ನು ಪಡೆದರು.ವಿಶೇಷವೆಂದರೆ ಉಲ್ಬಣಾವಸ್ಥೆಯಲ್ಲಿದ್ದ ಆ ಕ್ಯಾನ್ಸರ್ ರೋಗಿಯ ದೇಹದಲ್ಲಿನ ಕ್ಯಾನ್ಸರ್ ಕಣಗಳು  ಇಳಿಮುಖವಾಗುತ್ತಾ ಹೋಗಿ ಮುಂದೆ ಕೆಲವೇ ದಿನಗಳಲ್ಲಿ ಆತನ ಕಾಯಿಲೆ ಸಂಪೂರ್ಣವಾಗಿ ಗುಣಮುಖವಾಯಿತು. ಆತನ ಮತ್ತು ಆತನ ಕುಟುಂಬ ವರ್ಗದವರಿಗೆ ಇದು  ಅತ್ಯಂತ ಸಂತಸದ ವಿಷಯವಾಗಿತ್ತು. ಅವರು ವೈದ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿ ಗುಣಮುಖವಾದ ತಮ್ಮ  ತಂದೆಯನ್ನು ಮನೆಗೆ ಕರೆದುಕೊಂಡು ಹೋದರು.


ರೋಗಿಯ ಕುಟುಂಬ ವರ್ಗಕ್ಕೆ ಸಂತಸವಾದರೆ ವೈದ್ಯರಿಗೆ ಇದೊಂದು ಅಚ್ಚರಿಯ ಸಂಗತಿ. ಏಕೆಂದರೆ ಕ್ಯಾನ್ಸರ್ ನ ಔಷಧಿ ಎಂದು ರೋಗಿಗೆ ಸುಳ್ಳು ಹೇಳಿ ಅವರು ಚುಚ್ಚುಮದ್ದು ನೀಡಿದ್ದು ಶುದ್ಧವಾದ ಮಿನರಲ್ ವಾಟರ್ ನೀರಿನಿಂದ. ಇಲ್ಲಿ ಅವರದೇನೂ ತಪ್ಪಿರಲಿಲ್ಲ... ರೋಗಿಯ ಮನಸ್ಸಿನ ಸಮಾಧಾನಕ್ಕಾಗಿ ಅವರು ಹೀಗೆ ಮಾಡಿದ್ದರು. ಆದರೆ ಆ ಔಷಧಿಯ ಬಳಕೆಯಿಂದ ತನಗೆ ಗುಣವಾಗುತ್ತದೆ ಎಂಬ ಸಕಾರಾತ್ಮಕ ಯೋಚನೆಯು ಆತನ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆತನ ಕ್ಯಾನ್ಸರ್ ಕಣಗಳನ್ನು ಇನ್ನಿಲ್ಲದಂತೆ ನಾಶ ಮಾಡಿತ್ತು. ಅದುವೇ ಪವಾಡ ಎಂಬಂತೆ ವೈದ್ಯರಿಗೂ ತೋರಿತು. ಇದೀಗ ವೈದ್ಯರಿಗೆ ನಂಬಿಕೆಯಿಂದ ಬೆಟ್ಟವನ್ನೇ ಅಲುಗಾಡಿಸಬಹುದು ಎಂಬ ಹಿರಿಯರ ಮಾತನ್ನು ಅನುಮೋದಿಸುವಂತಹ ಧನಾತ್ಮಕ ಶಕ್ತಿಯ ಕುರಿತು ಭರವಸೆ ಮೂಡಿತು. ಅಂತೆಯೇ ಅವರು ತಮ್ಮ ಎಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಧನಾತ್ಮಕವಾಗಿ ಯೋಚಿಸುವಂತೆ ಪ್ರೋತ್ಸಾಹಿಸುತ್ತಿದ್ದರು.


ಮುಂದಿನ ಆರು ತಿಂಗಳಲ್ಲಿ ಹಲವಾರು ಜನ ರೋಗಿಗಳು ಅಪಾರ ಭರವಸೆ ಮತ್ತು ಅದಮ್ಯ ಆತ್ಮವಿಶ್ವಾಸವನ್ನು ಹೊಂದಿದವರಾಗಿ ತಮ್ಮ ಖಾಯಿಲೆಯಿಂದ ಗುಣಮುಖರಾಗುತ್ತಾ ಸಾಗಿದರು.


ಸುಮಾರು ಆರು ತಿಂಗಳ ನಂತರ ಆ ಮೊದಲಿನ ಕ್ಯಾನ್ಸರ್ ರೋಗಿ ಮರಳಿ ಬಂದರು. ಇದೀಗ ಅವರ ಕ್ಯಾನ್ಸರ್ ಮರುಕಳಿಸಿತ್ತು. ಕೇವಲ ಒಂದೇ ವಾರದಲ್ಲಿ ಅವರ ಕ್ಯಾನ್ಸರ್ ಮರುಕಳಿಸಲು ಕಾರಣ ಇತ್ತೀಚಿಗಷ್ಟೇ ಅವರು ಪೇಪರಲ್ಲಿ ಓದಿದ ಒಂದು ಸುದ್ದಿ. ವೃತ್ತ ಪತ್ರಿಕೆಯೊಂದರಲ್ಲಿ ವಿದೇಶದಲ್ಲಿ ಕಂಡುಹಿಡಿದ ಅತ್ಯಂತ ದುಬಾರಿ ಬೆಲೆಯ ಕ್ಯಾನ್ಸರ್ ನಿರೋಧಕ ಔಷಧಿಯ ಪ್ರಯೋಗ ನಿಷ್ಫಲವಾಗಿದೆ ಎಂದು ಆ ವರದಿಯಲ್ಲಿ ಉಲ್ಲೇಖವಾಗಿತ್ತು. ಹಾಗಾದರೆ ಆ ಔಷಧಿಯಿಂದ ತನ್ನ ಕ್ಯಾನ್ಸರ್ ಗುಣವಾಗಲು ಸಾಧ್ಯವೇ ಇಲ್ಲ ಎಂದು ಈ ಮೊದಲು ಚಿಕಿತ್ಸೆ ಪಡೆದ ರೋಗಿಯು ಭಾವಿಸಿದ್ದುದರಿಂದಲೇ ಅವರ ರೋಗ ನಿರೋಧಕ ಶಕ್ತಿಯು ಕುಂಠಿತಗೊಂಡು ಮಾನಸಿಕವಾಗಿ, ಭಾವನಾತ್ಮಕವಾಗಿ ದುರ್ಬಲರಾದ ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಿತ್ತು. ಆದ್ದರಿಂದಲೇ ಅವರ ಕ್ಯಾನ್ಸರ್ ಕಾಯಿಲೆ ಮರುಕಳಿಸಿತ್ತು.


ಪ್ರಚಂಡ ಆತ್ಮವಿಶ್ವಾಸವಿದ್ದ ವ್ಯಕ್ತಿ, ತನ್ನ ಮೇಲೆ ತಾನು ನಂಬಿಕೆಯನ್ನು ಇಟ್ಟ ವ್ಯಕ್ತಿ ಇಡೀ ಜಗತ್ತನ್ನೇ ಗೆಲ್ಲಬಲ್ಲನು ಅಂಥವನಿಗೆ ಕಾಯಿಲೆಗಳು ಕಾಡುವುದಿಲ್ಲ ಮಾನಸಿಕ ಅಸ್ವಸ್ಥತೆಯೂ ಕಡಿಮೆಯಾಗಿರುತ್ತದೆ. ಅಕಸ್ಮಾತ್ ಕಾಡಿದರೂ ಆತನ ಅದಮ್ಯ ಆತ್ಮವಿಶ್ವಾಸ ಆತನನ್ನು ಇನ್ನಿಲ್ಲದಂತೆ ಕಾಪಾಡುತ್ತದೆ. ಆದ್ದರಿಂದಲೇ ಅದೆಂತದೇ ಪ್ರತಿಕೂಲ ಪರಿಸ್ಥಿತಿಯೇ ಬಂದರು ಕೂಡ ಎಂದಿಗೂ ನಿಮ್ಮ ಮೇಲಿನ ನಂಬಿಕೆ, ಭರವಸೆಯನ್ನು ಕಳೆದುಕೊಳ್ಳಬೇಡಿ. ಭರವಸೆಯೇ ಬಾಳಿನ ದಾರಿ ದೀಪ, ಭರವಸೆಯೇ ಭವ್ಯ ಭವಿಷ್ಯದ ಹೆಗ್ಗುರುತು ಎಂಬುದನ್ನು ಅರಿತು ಬದುಕಿನಲ್ಲಿ ಭರವಸೆ ಇಟ್ಟು ಸಾಗೋಣ.


-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್ 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top