ಗುರು ಉಪದೇಶ: ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ

Upayuktha
0


ಒಂದೂರಿನಲ್ಲಿ ಒಬ್ಹ ರೈತನಿದ್ದ. ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿದ್ದ. ಅವನ ಓರಗೆಯವರೊಂದಿಗೂ ಅಷ್ಟೇ. ಎಷ್ಟು ಬೇಕೋ ಅಷ್ಟೇ ಒಡನಾಟ. ಕಾಯಕವೇ ಕೈಲಾಸ ಎಂಬ ನೀತಿಗೆ ಬದ್ಧ.


ಅವನಿರುವ ಗ್ರಾಮಕ್ಕೆ ಒಬ್ಬ ಸನ್ಯಾಸಿ ಬರುತ್ತಾನೆ. ವಾಕ್ಸಿದ್ದಿ ಉಳ್ಳವನೆಂದು ಪ್ರಸಿದ್ಧಿ. ಆದರೆ ಬಹಳ ಕೋಪಿಷ್ಠ. ಹೋದವರಿಗೆಲ್ಲ ಏನಾದರೂ ಒಂದು ಮಂತ್ರ ಉಪದೇಶ ಕೊಡುತ್ತಿರುತ್ತಾನೆ. ರೈತನ ಓರಗೆಯವರೆಲ್ಲ ಅವನ ಸಿದ್ದಿಗಳ ಬಗ್ಗೆ, ಅವನ ಮಂತ್ರಗಳ ಉಪದೇಶಗಳ ಬಗ್ಗೆ ಮಾತನಾಡುವಾಗ ಈತನಿಗೂ ಆ ಸನ್ಯಾಸಿಯನ್ನು ಕಾಣುವ ಆಸೆಯಾಗುತ್ತದೆ. ಮತ್ತು ಯಾವುದಾದರೂ ಮಂತ್ರದ ಉಪದೇಶ ಪಡೆಯಬೇಕೆಂದು ಮನಸಾಗುತ್ತದೆ.


ತನ್ನ ತೋಟದಲ್ಲಿನ ಮಾವಿನಹಣ್ಣುಗಳನ್ನು ಒಂದು ಬುಟ್ಟಿಯಲ್ಲಿ ತುಂಬಿಕೊಂಡು, ಸನ್ಯಾಸಿಯನ್ನು ನೋಡಲು ಹೊರಡುತ್ತಾನೆ. ಬಡರೈತನ ವೇಷಭೂಷಣ ನೋಡಿದ ಆ ಸ್ವಾಮಿಯ ಕಡೆಯವರು, ಸನ್ಯಾಸಿಯ ಬಳಿಗೇ ಹೋಗಲು ಬಿಡುವುದಿಲ್ಲ. ಬಹಳ ಹೊತ್ತು ಕಾದ ರೈತ, ಅಲ್ಲೇ ಇದ್ದ ಒಂದು ಮರದ ಕೆಳಗೆ ಕೂತುಕೊಳ್ಳುತ್ತಾನೆ.


ನದಿಯ ಸ್ನಾನಕ್ಕೆ ಹೋಗಿದ್ದ ಸನ್ಯಾಸಿಯು, ಅದೇ ಮಾರ್ಗವಾಗಿ ಬರುತ್ತಾನೆ. ಅದನ್ನು ತಿಳಿದ ರೈತನು, ದಡಬಡಾಯಿಸಿಕೊಣಡು ಏಳುವಾಗ, ಹಣ್ಣಿನ ಬುಟ್ಟಿ ಸಮೇತ ಸನ್ಯಾಸಿಯ ಕಾಲಿನ ಬಳಿ ಬೀಳುತ್ತಾನೆ ನಮಸ್ಕಾರ ಮಾಡುವ ರೀತಿ. ಮೊದಲೇ ಸನ್ಯಾಸಿ ಕೋಪಿಷ್ಠ. ಈಗ ಇನ್ನೂ ಕೋಪ ನೆತ್ತಿಗೇರಿ, 'ದೂರ ಹೋಗು' ಎಂದು ಜೋರು ದನಿಯಲ್ಲಿ ಹೇಳುತ್ತಾನೆ. ಹೆಚ್ಚುಕಡಿಮೆ, ಕಿರುಚಿದನೆಂದೇ ಹೇಳಬಹುದೇನೋ.


ನಮ್ಮ ರೈತನೋ ಮುಗ್ಧ. ಹಸುಳೆಯ ಮನಸಿನವ. ಆ ಸನ್ಯಾಸಿ ಹೇಳಿದ ಮಾತು 'ದೂರ ಹೋಗು' ಎಂಬುದೇ ನನಗೆ ಮಾಡಿದ ಉಪದೇಶ ಎಂದು ತಿಳಿದ. ಅದನ್ನೆ ಧ್ಯಾನ ಮಾಡಿದ. ತಪಗೈದ. ಆ ವಾಕ್ಯ ಮಂತ್ರದಂತೆ ಅವನಿಗೆ ಸಿದ್ಧಿಸಿ ಬಿಟ್ಟಿತು. ಕಾಡಿನಲ್ಲಿ ನಡೆಯುವಾಗ, ದಾರಿಗಡ್ಡಲಾಗಿ ಬಿದ್ದ ಮರವನ್ನು 'ದೂರ ಹೋಗು' ಎಂದಾಕ್ಷಣ, ಮರ ದೂರ ಸರಿದು, ದಾರಿ ಮಾಡಿಕೊಟ್ಟಿತು.


ಅಂದಿನಿಂದ ಅವನ ಬಳಿ ಬಂದವರಿಗೆಲ್ಲ ಸಾಂತ್ವನ ಹೇಳಲು ದೂರ ಹೋಗು ಎಂಬುದೇ ಮಂತ್ರವಾಯಿತು. ಕಷ್ಟವೆಂದು ಬಂದವರಿಗೆ ಕಷ್ಟವೇ ದೂರಹೋಗು. ಅನಾರೋಗ್ಯವೆಂದು ಬಂದವರಿಗೆ ಅನಾರೇಗ್ಯವೇ ದೂರಹೋಗು ಮಕ್ಕಳಿಲ್ಲದ ಬಂಜೆಯರಿಗೆ, ಬಂಜೆತನವೇ ದೂರಹೋಗು ಬಡವರಿಗೆ ಬಡತನವೇ ದೂರ ಹೋಗು ಹೀಗೆ ಎಲ್ಲಕೂ ದೂರಹೋಗು ಎಂಬುದೇ ಮಹಾಮಂತ್ರ. ಅವನ ಹೆಸರೇ ದೂರ ಹೋಗು ಸ್ವಾಮಿ ಎಂದೇ ಪ್ರಸಿದ್ದವಾಯಿತು.


ಈ ದೂರಹೋಗು ಸ್ವಾಮಿಯ ಬಗ್ಗೆ, ಮೊದಲಿನ ಕೋಪಿಷ್ಠ ಸನ್ಯಾಸಿಯ ಕಿವಿಗೂ ಬಿತ್ತು. ಅವನಿಗೆ ಇನ್ನೂ ಕೋಪ ಕಡಿಮೆಯಾಗಿರಲೇ ಯಿಲ್ಲ. ಅದನ್ನು ಕಡಿಮೆಮಾಡಿಕೊಳ್ಶುವ ಯಾವುದೇ ವಿಧಾನವು ಸನ್ಯಾಸಿಗೆ ಫಲಿಸಿರಲಿಲ್ಲ. ಸರಿ. ಕೊನೆಯ ಪ್ರಯತ್ನ ಈ ದೂರಹೋಗು ಸ್ವಾಮಿ ಯವರಿಂದಲಾದರೂ ಯಾವುದಾದರೂ ಮಾರ್ಗ ದೊರೆಯುವುದೆಂಬ ದೂರದ ಆಸೆಯಿಂದ, ಅವನ ಬಳಿ ಬರುತ್ತಾರೆ.

ಅವರನ್ನು ಕಂಡ ತಕ್ಷಣ, ದೂರಹೋಗು ಸ್ವಾಮಿಯೇ ಕೆಳಗಿಳಿದು ಬಂದು, ಅವನಿಗೆ ನಮಸ್ಕರಿಸುತ್ತಾರೆ.

ಸನ್ಯಾಸಿಗೆ ಆಶ್ಚರ್ಯ. 

ನನ್ನ ಗುರುತು ಸಿಗಲಿಲ್ಲವೇ ಗುರುಗಳೇ. ನಾನು ಬಡರೈತ. ನೀವು ಸ್ನಾನ ಮಾಡಿ ಬರುವಾಗ ನಾನು ಕಲ್ಲೆಡವಿ, ನಿಮ್ಮ ಪಾದಗಳಡಿಯಲ್ಲಿ ಬಿದ್ದೆ. ಆಗ ನೀವು ನನಗೆ 'ದೂರ ಹೋಗು' ಎಂದು ಹೇಳಿದಿರಿ. ಅದನ್ನೇ ನಾನು ಉಪದೇಶವೆಂದು ತಿಳಿದು, ಅದನ್ನೇ ಜಪಮಾಡಿದೆ. ಆ ಮಂತ್ರ ನನಗೆ ಸಿದ್ಧಿಸಿತು. ಈಗ ಅದರ ಸಹಾಯದಿಂದ ಜನರಿಗೆ ನನ್ನ ಕೈಲಾದಷ್ಟು ಸಹಾಯಮಾಡುತ್ತಿದ್ದೇನೆ. ಪರಾಂಬರಿಸಬೇಕು ಎನ್ನತ್ತಾನೆ.


ಆಗ ಸನ್ಯಾಸಿಯ ಕಣ್ಣು ತೇವ. ಕೋಪದಿಂದ ತಾನು ಕೆಟ್ಟೆ. ಪ್ರೀತಿಯಿಂದ ನೀನು ಗೆದ್ದೆ ಎಂದು ಹೇಳುತ್ತಾನೆ. ಹಾಗೂ ತನ್ನ ಕೋಪಕ್ಕೆ ದೂರಹೋಗು ಎಂದು ಹೇಳು ಎಂದು ದೂರಹೋಗು ಸ್ವಾಮಿಯನ್ನು ಕೇಳಿಕೊಳ್ಳುತ್ತಾನೆ.


ಗುರುವೆಂದು ನಂಬಿದವರ ಬಾಯಿಂದ ಮಾತೆಲ್ಲಾ ಗುರೂಪದೇಶವೇ ಎಂಬುದು ಚಿರಂತನ ಸತ್ಯ

ಗುರುಭ್ಯೋ ನಮಃ


- ಮೀನಾಕ್ಷಿ ಮನೋಹರ


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top