ಉಜಿರೆ : ನಾವು ಬೇರೆಯವರೊಂದಿಗೆ ಸ್ಪರ್ಧಿಸಬೇಕಾಗಿಲ್ಲ. ಸ್ಪರ್ಧೆಯು ಸದಾ ನಮ್ಮೊಂದಿಗೆ ಇರಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಉತ್ತಮ ಗುಣಗಳು ಮತ್ತು ಪ್ರತಿಭೆಗಳನ್ನು ಕಂಡುಹಿಡಿಯಲು ಪ್ರಯತ್ನಿಸುವುದರ ಜೊತೆಗೆ ತಮ್ಮ ದೌರ್ಬಲ್ಯ ಏನೆಂದು ಗುರುತಿಸಬೇಕು ಎಂದು ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಹೇಳಿದರು.
ಅವರು ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದಿಂದ ನ. 27 ರಂದು ಆಯೋಜಿಸಲಾದ ‘ಗುರುತ್ವ’ ಅಂತರ್ ತರಗತಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಒಂದಲ್ಲ ಒಂದು ಪ್ರತಿಭೆಯನ್ನು ಹೊಂದಿರುತ್ತಾರೆ. ನಿಮ್ಮಲ್ಲಿರುವ ಪ್ರತಿಭೆ ಯಾವುದು ಎಂಬುದನ್ನು ಕಂಡುಕೊಳ್ಳಬೇಕು. ಆತ್ಮಾವಲೋಕನ ಮಾಡಿಕೊಂಡಷ್ಟೂ ನಮ್ಮ ಶಕ್ತಿ-ದೌರ್ಬಲ್ಯಗಳ ಅರಿವಾಗುತ್ತದೆ ಎಂದು ಅವರು ತಿಳಿಸಿದರು.
“ಭೌತಶಾಸ್ತ್ರ ವಿಭಾಗವು ನಮ್ಮ ಕಾಲೇಜಿನ ಕ್ರಿಯಾಶೀಲ ವಿಭಾಗವಾಗಿದ್ದು, ಸಂಸ್ಥೆಯ ಬೆಳವಣಿಗೆಗೆ ವಿನೂತನ ಸೇವೆಯನ್ನು ನೀಡುತ್ತಿದೆ. ಇತ್ತೀಚಿನ ಚಂದ್ರಯಾನ-3 ಯಶಸ್ವಿ ಸಾಹಸಕ್ಕೆ ಕೊಡುಗೆ ನೀಡಿದ ಮೂವರು ಇಸ್ರೋ ವಿಜ್ಞಾನಿಗಳು ನಮ್ಮ ಕಾಲೇಜಿನವರು ಎಂಬುದು ನಮ್ಮ ಹೆಮ್ಮೆ. ಇದು ಭೌತಶಾಸ್ತ್ರ ವಿಭಾಗದ ಸಾಮರ್ಥ್ಯವಾಗಿದೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಉಪಪ್ರಾಂಶುಪಾಲ ಮತ್ತು ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಎಸ್. ಎನ್. ಕಾಕತ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಗುರುತ್ವ ಎಂದರೆ ಆಕರ್ಷಣೆ. ಪ್ರತಿಯೊಂದು ಕಣಗಳು ಇತರ ಕಣಗಳನ್ನು ಆಕರ್ಷಿಸುತ್ತವೆ. ಅದೇ ರೀತಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದ ವಿವಿಧ ಸ್ಟ್ರೀಮ್‌ಗಳಲ್ಲಿ ಆಕರ್ಷಿಸಲು ಈ ಕಾರ್ಯಕ್ರಮವನ್ನು ನಾವು ನಾವು ಕಳೆದ ಐದು ವರ್ಷಗಳಿಂದ ಆಯೋಜಿಸುತ್ತ ಬಂದಿದ್ದೇವೆ” ಎಂದರು.
ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಭಾಗದ ಉಪನ್ಯಾಸಕಿಯರಾದ ನಮ್ರತಾ ಜೈನ್, ರೇವತಿ ಎಸ್., ವಿಭಾಗದ ವಿದ್ಯಾರ್ಥಿ ಸಂಯೋಜಕ ಚಿತ್ತೇಸಾಬ ಉಪಸ್ಥಿತರಿದ್ದರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿಯರಾದ ರುಚಿರಾ ಹಾಗೂ ಅನನ್ಯ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕಿ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಅಪೇಕ್ಷ ಜೈನ್ ಸ್ವಾಗತಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿ ವಿಘ್ನೇಶ್ ವಂದಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಪ್ರಿಯ ಜೈನ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ