ನುಗ್ಗೇಹಳ್ಳಿ ಪಂಕಜ- ಒಂದು ಕಾಲದ ಶ್ರೇಷ್ಠ ಲೇಖಕಿ ಈಗ ಅಜ್ಞಾತ ವಾಸಿ

Upayuktha
0

ತ್ತೀಚೆಗೆ ನಾನು ನಾವೆಲ್ಲರು ಮರೆತಿರುವ ಅಥವಾ ಅಜ್ಞಾತ ವಾಸದಲ್ಲಿರುವ  ಹಿರಿಯ ಸಾಹಿತಿಗಳ ಜಾಡು ಹಿಡಿದು ಹೊರಟಿದ್ದೇನೆ. ನನ್ನ ಪಾಲಿಗೆ ಅದು ಸಾಹಸದ ಕೆಲಸ ಎನಿಸಿದೆ. ಸಾಹಸ ಎಂಬುದಕ್ಕಿಂತ ಪುಣ್ಯದ ಕೆಲಸ ಎಂದು ಭಾವಿಸಿದ್ದೇನೆ.


ಸ್ವಲ್ಪ ದಿನಗಳ ಹಿಂದೆ ತೊಂಬತ್ನಾಲ್ಕು ವಯಸ್ಸಿನ ನುಗ್ಗೇಹಳ್ಳಿ ಪಂಕಜ ಎಂಬ ಕನ್ನಡದ ಸರ್ವ ಶ್ರೇಷ್ಠ ಲೇಖಕಿ ಒಬ್ಬರು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಇದ್ದಾರೆ ಎಂಬ ಸುದ್ದಿಯೊಂದು ನನ್ನ ಗಮನಕ್ಕೆ ಬಂತು. ಅತೀವವಾಗಿ ಸಂತಸಪಟ್ಟ ನಾನು ಅತೀ ಕಡಿಮೆ ಅವಧಿಯಲ್ಲಿ ಪಂಕಜ ಅವರ ಒಂದಿಷ್ಟು ಮಹತ್ವದ ಕೃತಿಗಳನ್ನು ತರಿಸಿಕೊಂಡು ಗಂಭೀರವಾಗಿ ಓದಿದೆ. ಅವರನ್ನು ಭೇಟಿಯಾದಾಗ ಸಂದರ್ಶನ ಮಾಡಿದರೆ ದಾಖಲೆಯಾಗಿ ಉಳಿಯುತ್ತದೆ ಎಂದು ಯೋಚಿಸಿ ಸಾಕಷ್ಟು ಹೋಂ ವರ್ಕ್ ಮಾಡಿಕೊಂಡೆ. ಹಾಗೆ ಅವರು ಹತ್ತು ಇಪ್ಪತ್ತು ನಿಮಿಷ ಮಾತಿಗೆ ಸಿಕ್ಕರೆ ಸಾಕು  ಅದೇ ನನ್ನ ಜೀವಮಾನದ ಸಾರ್ಥಕ ಕ್ಷಣವಾಗುತ್ತದೆ  ಎಂದುಕೊಂಡೆ.


ಪಂಕಜ ಅವರನ್ನು ನೋಡುವ ಬಯಕೆಯಿಂದ ಇಂದು ಬೆಳಗ್ಗೆ ಏಳು ಗಂಟೆಗೆ ಮಂಡ್ಯದಿಂದ ಹೊರಟ ನಾನು ನೇರಾ ಬೆಂಗಳೂರಿನ ಮಲ್ಲೇಶ್ವರಂ ಗೆ ಹೋದೆ. ಎಂದಿನಂತೆ ನನ್ನ ಜತೆಗೆ ಪ್ರಸಾದ್ ಸರ್ ಮತ್ತು ಮಂಜಣ್ಣ ಇದ್ದರು. ಮಲ್ಲೇಶ್ವರಂ ನ ನಾಲ್ಕನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಲಲಿತಾ ಅಪಾರ್ಟ್ಮೆಂಟ್ ಗೆ ಹೋಗಿ "ಸಾಹಿತಿ ಪಂಕಜ ಅವರು ಸಿಗುತ್ತಾರ?" ಎಂದು ಕೇಳಿದೆ. ಅಲ್ಲಿಯ ಸೆಕ್ಯೂರಿಟಿ "ಪಂಕಜ ಅವರು ಈಗ ಇಲ್ಲಿ ಇಲ್ಲ. ಅವರ ಮಗಳು ಜರ್ಮನಿಯಲ್ಲಿದ್ದಾರೆ. ಅವರು ಇಲ್ಲಿಯೇ ಎಲ್ಲೋ ಹತ್ತಿರದ ವೃದ್ಧಾಶ್ರಮದಲ್ಲಿ ಇರಬಹುದು. ಸರಿಯಾದ ಅಡ್ರೆಸ್ ಗೊತ್ತಿಲ್ಲ" ಎಂದರು.


ಅಯ್ಯೋ! ಹೀಗಾಗಿ ಹೋಯಿತಲ್ಲ ಎಂದು ಮರುಗಿದೆ. ಜತೆಗಿದ್ದ ಪ್ರಸಾದ್ ಸರ್ ಮತ್ತು ಮಂಜಣ್ಣ ಅಷ್ಟರೊಳಗಾಗಲೇ ಹೋಪ್ ಕಳೆದುಕೊಂಡಿದ್ದರು. 'ಬಂದ ದಾರಿಗೆ ಸುಂಕವಿಲ್ಲ ಹುಡುಕಿದರೆ ವ್ಯರ್ಥ' ಎಂದುಕೊಂಡು ವಾಪಸ್ ಹೋಗುವ ತೀರ್ಮಾನಕ್ಕೆ ಬಂದಿದ್ದರು. ನಾನು ಮನಸ್ಸು ಬದಲು ಮಾಡಲಿಲ್ಲ. ಹಠ ಮಾಡಿದೆ. ನನ್ನಲ್ಲಿ ಪಂಕಜ ಅವರು ಸಿಕ್ಕೇ ಸಿಗುತ್ತಾರೆ ಎಂಬ ಆತ್ಮವಿಶ್ವಾಸವಿತ್ತು. "ಮಂಜಣ್ಣ ಇಲ್ಲಿಯೇ ಹತ್ತಿರದಲ್ಲಿ ವೈಷ್ಣವಿ ಹೆಲ್ತ್ ಅಂಡ್ ಹೋಮ್ ಕೇರ್ ಇದೆ ಅಲ್ಲಿಗೆ ಹೋಗೋಣ" ಎಂದವನೇ  ಲೊಕೇಶನ್ ಆನ್ ಮಾಡಿಕೊಂಡು  ರಸ್ತೆಯಲ್ಲಿ ಬಿರುಸಾದ ಹೆಜ್ಜೆ ಹಾಕುತ್ತಾ ಹೊರಟು ನಿಂತೆ. ಕಿಲೋಮೀಟರ್ ಗಟ್ಟಲೆ ನಡೆದೆವು. ದಣಿದೆವು. ಆದರೆ ಹಿಂತಿರುಗುವ ಯೋಚನೆ ಮಾಡಲಿಲ್ಲ.


ಅಂತೂ ವೈಷ್ಣವಿ ಹೋಂ ಕೇರ್ ಸಿಕ್ಕಿತು. ಅಲ್ಲಿನ ವ್ಯಕ್ತಿ ಒಬ್ಬರ ಬಳಿ "ಸರ್ ರೈಟರ್ ಪಂಕಜ ಅವರು ಇಲ್ಲಿದ್ದಾರೆಯೇ?" ಎಂದು ಕೇಳಿದೆ."ಹಾಂ ಸರ್, ಇಲ್ಲೇ ಇದ್ದಾರೆ. ಒಳಗೆ ಹೋಗಿ" ಎಂದರು.ಅಬ್ಬಾ! ನನಗಾದ ಖುಷಿ ಅಷ್ಟಿಷ್ಟಲ್ಲ.


ಪಂಕಜ ಅವರಿದ್ದ ಕೋಣೆಗೆ  ಹೋಗಿ "ನಮಸ್ಕಾರ  ಗರುಡಮ್ಮನವರೇ ಏನ್ ಸಮಾಚಾರ?" (ಪಂಕಜ ಅವರ ಒಂದು ಕೃತಿಯ ಹೆಸರು) ಎಂದೆ. ಪಂಕಜ ಅವರು ಅಚ್ಚರಿ ಮತ್ತು ಖುಷಿಯಿಂದ  'ನೀವು ಯಾರು?' ಎಂಬಂತೆ ನೋಡಿದರು."ನಾನು ದೀಕ್ಷಿತ್ ನಾಯರ್. ನಿಮ್ಮ ಅಭಿಮಾನಿ ಮಂಡ್ಯದಿಂದ ಬಂದಿದ್ದೇನೆ. ಜರ್ನಲಿಸಂ ವಿದ್ಯಾರ್ಥಿ" ಎಂದೆ.ಅವರು ಮರುಕ್ಷಣವೇ "ಓಹ್! ಹೌದಾ? ದೀಕ್ಷಿತ್ ನೀವು ಮುಂದೆ ಪತ್ರಿಕೆ ತರುವುದಾದರೆ ನಿಮ್ಮ ಪತ್ರಿಕೆಗೆ ನಾನು ಫ್ರೀಯಾಗಿ ಬರೆಯುತ್ತೇನೆ" ಎಂದು ಉತ್ಸಾಹದಿಂದ ಹೇಳಿದರು. ವಾರೆ ವ್ಹಾ! ತೊಂಬತ್ನಾಲ್ಕರ ವಯಸ್ಸಿನಲ್ಲಿ ಅದೆಂತಹ ಹುಮ್ಮಸ್ಸು ಎಂದುಕೊಂಡೆ.ಕೈಯಲ್ಲಿದ್ದ ಹಣ್ಣಿನ ಕವರ್ ನೋಡಿ "ಆಹಾ! ಸಪೋಟ ನನ್ನ ಫೇವರೆಟ್ ಫ್ರೂಟ್ ಎಲ್ಲಿ ಇಲ್ಲಿ ಕೊಡಿ" ಎಂದವರೇ ಸಣ್ಣ ಮಗುವಿನಂತೆ ಮುದ್ದು ಮುದ್ದಾಗಿ ತಿಂದರು. "ನೋಡಿ ನಿಮ್ಮ ಮುಂದೆಯೇ ತಿಂದೆ" ಎನ್ನುತ್ತಾ ಸಣ್ಣಗೆ ನಕ್ಕರು. "ನೋಡಿ ಅಲ್ಲಿದ್ದಾಳಲ್ಲ (ಕೆಲಸದಾಕೆ) ಅವಳು ನನ್ನನ್ನು  ಮಗುವಿನಂತೆ ನೋಡಿಕೊಳ್ಳುತ್ತಾಳೆ. ಅವಳು ನನ್ನ ಪಾಲಿನ ಅಮ್ಮ. ನಾನು ಇಲ್ಲಿ ತುಂಬಾ ಆರಾಮವಾಗಿದ್ದೇನೆ" ಎಂದರು. ಅವರ ಹೃದಯಶೀಲತೆ ನೋಡಿ ನಾನು ಮರು ಮಾತನಾಡಲಿಲ್ಲ. "ಹಾಂ ನೀವು ಮಾತನಾಡಿ. ನಿಮ್ಮ ಪ್ರಶ್ನೆಗಳಿಗೆ ನಾನು ಜವಾಬು ಕೊಡುತ್ತೇನೆ" ಎಂದರು.


ನಾನು ಓದಿಕೊಂಡ ಅವರ ಕೃತಿಗಳ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದೆ. ಎಷ್ಟೇ ಆದರೂ ಅವರದ್ದು ಲೇಖಕಿ ಹೃದಯ ಸಂತಸಪಟ್ಟರು."ಎಷ್ಟೆಲ್ಲಾ ಓದಿಕೊಂಡಿದ್ದೀರಿ" ಎಂದರು. ಅಂದಹಾಗೆ ಇಳಿ ವಯಸ್ಸಿನಲ್ಲೂ  ಅವರು ತಮ್ಮ ಜೀವನೋತ್ಸಾಹವನ್ನು ಕಳೆದುಕೊಂಡಿರಲಿಲ್ಲ. ನೆನಪು ಮಾಸಿರಲಿಲ್ಲ.ಅವರ ಪ್ರತಿ ಮಾತೂ ಸ್ಪಷ್ಟ ಮತ್ತು ಸಲೀಸು. ಅವರ ಮುಖದಲ್ಲಿ ಒಂದು ದಿವ್ಯ ತೇಜಸ್ಸು ಕಂಗೊಳಿಸುತ್ತಿತ್ತು. ಒಂದೂವರೆ ತಾಸು ಸುದೀರ್ಘವಾಗಿ ಇಬ್ಬರೂ ಮಾತನಾಡಿದೆವು. ಯಾರೂ ಮಾತಿಗೆ ಸಿಗದೆ ಕೊರಗುತ್ತಿದ್ದ ಆ ಹಿರಿಯ ಜೀವಕ್ಕೆ  ಎಷ್ಟು ಆನಂದವಾಗಿರಬೇಡ?


"ದೀಕ್ಷಿತ್ ಯು ಲುಕ್ ವೆರಿ ಬ್ರೈಟ್.ನಿಮ್ಮ ಮುಖ ನೋಡಿದರೆ ನೀವು ಎಂತಹ ಪ್ರತಿಭಾವಂತರು ಎಂದು ತಿಳಿಯುತ್ತದೆ. ತುಂಬಾ ದೊಡ್ಡ ಮಟ್ಟಕ್ಕೆ ಬೆಳೆಯುತ್ತೀರಿ. ಗಾಡ್ ಬ್ಲೆಸ್ ಯು "ಎಂದರು. ನನಗೆ ಕಣ್ಣು ತುಂಬಿ ಬಂತು.


"ನಾನೊಬ್ಬಳಿದ್ದೀನಿ ಎಂಬುದು ಯಾರಿಗೂ  ಗೊತ್ತಿಲ್ಲ. ನೀವು ಎಷ್ಟೆಲ್ಲ ಶ್ರಮಪಟ್ಟು ಬಂದಿದ್ದೀರಿ. ಬಹಳ ಖುಷಿಯಾಯಿತು" ಎಂದರು. "ಅಮ್ಮ ಮತ್ತೆ ಮತ್ತೆ ಬರುತ್ತೇವೆ"ಎಂದೆ. "ದೀಕ್ಷಿತ್ ನೀವು ಮತ್ತೊಮ್ಮೆ ಬರುವಾಗ ಪೆನ್ನು ಮತ್ತು ಕಾಗದಗಳನ್ನು ತೆಗೆದುಕೊಂಡು ಬನ್ನಿ" ಎಂದರು. "ಖಂಡಿತ ಅಮ್ಮ" ಎಂದೆ. "ನೀವು ಮತ್ತೆ ಬರುವಾಗ ನಾನು ಇರ್ತೀನೋ ಇಲ್ವೋ?"ಎನ್ನುತ್ತಾ ಸ್ವಲ್ಪ ಗದ್ಗದಿತರಾದರು. 


"ನಾನು ಸತ್ತರೆ ಯಾವ ಪತ್ರಿಕೆಯವರೂ ಬರೆಯುವುದಿಲ್ಲ. ನೀವು ಬರೆಯುತ್ತೀರಿ ಎಂದುಕೊಳ್ಳುವೆ" ಎಂದರು."ದಯವಿಟ್ಟು ಹಾಗೆಲ್ಲ ಹೇಳಬೇಡಿ ನೀವು  ಇನ್ನು ತುಂಬಾ ದಿನ ಇರುತ್ತೀರಿ" ಎಂದೆ. ತುಂಬಾ ಹೊತ್ತು ಪ್ರೀತಿಯಿಂದ ನನ್ನ ತಲೆ ಸವರಿ ಆಶೀರ್ವದಿಸಿದರು."ಮತ್ತೆ ಬರುತ್ತೇನೆ ಅಮ್ಮ" ಎಂದು ಹೊರಟವನನ್ನು ಕರೆದು "ದೀಕ್ಷಿತ್ ನಿಮಗೆ ಲೇಖಕಿಯರ ಸಂಘದ ಬಗ್ಗೆ ಏನಾದರೂ ಗೊತ್ತಾ? ನಾವುಗಳು ಕಟ್ಟಿದ್ದು ಅದು. ಈಗ ಅಲ್ಲಿ ಯಾರಿದ್ದಾರೋ ಗೊತ್ತಿಲ್ಲ. ಪ್ಲೀಸ್ ಅವರ ಬಳಿ ಪಂಕಜ ಅವರು ಇನ್ನು ಬದುಕಿದ್ದಾರೆ. ಸಾಯುವ ಒಳಗೆ ನಿಮ್ಮೆಲ್ಲರನ್ನು ನೋಡಿ ಮಾತನಾಡಿಸಲು ಇಷ್ಟಪಟ್ಟಿದ್ದಾರೆ ಎಂದು ಹೇಳಿ" ಎಂದರು.

"ಖಂಡಿತ ಅಮ್ಮ ಅವರೆಲ್ಲರೂ ಬರ್ತಾರೆ" ಎಂದೆ.


(ದಯವಿಟ್ಟು ಲೇಖಕಿಯರ ಸಂಘದವರು ಪಂಕಜ ಅವರನ್ನು ಭೇಟಿ ಮಾಡಿ. ಆ ಹಿರಿಯ ಜೀವದ ಆಸೆ ನೆರವೇರಿಸಿ)


ಮಾತುಕತೆ ಎಲ್ಲಾ ಮುಗಿದ ನಂತರ ಆಚೆ ಬಂದು ಸಂಭ್ರಮ ಮತ್ತು ಭಾವುಕತೆಯಿಂದ  ನಾನು ಮಂಜಣ್ಣ ಒಂದು ಮರದ ಕೆಳಗೆ ಕೂತು ಸಣ್ಣಗೆ ಅತ್ತೆವು.

"ಇದು ನನ್ನ ಜೀವಮಾನದ ಅಮೂಲ್ಯ ಕ್ಷಣ ಮಂಜಣ್ಣ" ಎಂದೆ.

ಯಾರಿಗೂ ಇಂತಹ ಸೌಭಾಗ್ಯ ಸಿಗುವುದಿಲ್ಲ ಅಲ್ಲವೇ?


ಮತ್ತೆ ರಸ್ತೆಗಿಳಿದಾಗ ಪಂಕಜ ಅವರ ಕಾದಂಬರಿ ಆಧಾರಿತ ಸಿಪಾಯಿ ರಾಮು ಸಿನಿಮಾದಲ್ಲಿನ "ಎಲ್ಲಿಗೆ ಪಯಣ? ಯಾವುದೋ ದಾರಿ? ಏಕಾಂಗಿ ಸಂಚಾರಿ" ಹಾಡು ನೆನಪಾಯಿತು. ಯಾಕೋ ಸಂಕಟವಾಯಿತು.


ಅಂದಹಾಗೆ ಪಂಕಜ ಅವರ ಬಗ್ಗೆ 50 ಪುಟಗಳು ಬರೆಯುವಷ್ಟು ಸರಕು ನನಗೆ ಸಿಕ್ಕಿದೆ. ಆದಷ್ಟು ಬೇಗ ಸಂದರ್ಶನದೊಂದಿಗೆ ಬರುವೆ.


ಪಂಕಜ ಅವರ ಬಗ್ಗೆ ತಿಳಿಯದವರ ಮಾಹಿತಿಗೆ:


ನುಗ್ಗೇಹಳ್ಳಿ ಪಂಕಜ ಕನ್ನಡದ ಶ್ರೇಷ್ಠ ಲೇಖಕಿಯರಲ್ಲೊಬ್ಬರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆದು ಹೆಸರು ಗಳಿಸಿದವರು. 60-70ರ ದಶಕದಲ್ಲಿ  ಪಂಕಜ ಅವರ ಜನಪ್ರಿಯ ಕಾದಂಬರಿಗಳು ಮತ್ತು ಕಥೆಗಳು ಸಾಲು ಸಾಲಾಗಿ ಪ್ರಕಟವಾಗಿದ್ದವು. ಪಂಕಜ ಅವರು ಹಾಸ್ಯ ಸಾಹಿತಿಯಾಗಿಯೂ  ಹೆಚ್ಚು ಪ್ರಸಿದ್ಧಿಯಾಗಿದ್ದವರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪಂಕಜ ಅವರ ಹೆಸರಿನಲ್ಲಿ ಹಾಸ್ಯ ಸಾಹಿತಿಗಳಿಗೆ ದತ್ತಿ ಪ್ರಶಸ್ತಿ ನೀಡಲಾಗುತ್ತಿದೆ. ರಾಜಕುಮಾರ್ ಮತ್ತು ಆರತಿ ಅಭಿನಯದ ಸಿಪಾಯಿರಾಮು ಸಿನಿಮಾ ಪಂಕಜ ಅವರ  'ಬರಲೇ ಇನ್ನು ಯಮುನೆ?' ಕಾದಂಬರಿ ಆಧಾರಿತ.

ಅನಂತ್ ನಾಗ್ ಮತ್ತು ಖುಷ್ಬು ಅಭಿನಯದ 'ಗಗನ' ಎಂಬ ಸಿನಿಮಾ  ಕೂಡ ಇವರ ಕಾದಂಬರಿ ಆಧಾರಿತ.


ಸಾಹಿತ್ಯ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧಿಸಿ ಮಿನುಗಿದ ಪಂಕಜ ಅವರು ಈಗ ಅಜ್ಞಾತವಾಗಿ ಉಳಿದಿದ್ದಾರೆ ಎಂಬುದಂತೂ ಸತ್ಯ.


ಅನುಬಂಧ 1 -

ವೃದ್ಧಾಶ್ರಮದಲ್ಲಿ ವಯಸ್ಸಾದವರನ್ನು ನೋಡಿದಾಗ ಸಾಮಾನ್ಯವಾಗಿ ಎಲ್ಲರೂ ಅವರ ಮಕ್ಕಳನ್ನು ಬೈಯುತ್ತೇವೆ. ಇಲ್ಲಿ ಪಂಕಜ ಅವರ ಮಗಳನ್ನು (ಒಬ್ಬಳೇ ಮಗಳು) ನಿಂದಿಸುವುದರಲ್ಲಿ ಅರ್ಥವಿಲ್ಲ. ಅವರು ದೂರದ ಜರ್ಮನಿಯಲ್ಲಿದ್ದಾರೆ. ಕೆಲವೊಮ್ಮೆ ಅನಿವಾರ್ಯತೆಗಳು ನಮ್ಮನ್ನು ಕಟ್ಟಿ ಹಾಕುತ್ತವೆ. ಮಗಳು ಕರೆದುಕೊಂಡು ಹೋಗಲು ತಯಾರಿದ್ದರೂ ದೇಹ ಮತ್ತು ವಯಸ್ಸು ಕೇಳಬೇಕಲ್ಲ? ನಿಮಗೆ ಗೊತ್ತಿರಲಿ ಅವರ ಮಗಳಿಗೂ 70 ವಯಸ್ಸು (ವೃದ್ಧಾಪ್ಯ) ಅಮ್ಮ ಮಗಳ ಬಾಂಧವ್ಯ ತುಂಬಾ ಚೆನ್ನಾಗಿದೆ.


"ಬೀದಿಗೆ ಬಿಟ್ಟಿಲ್ಲವಲ್ಲ? ಒಳ್ಳೆಯ ಕಡೆ ನನ್ನನ್ನು ಇಟ್ಟಿದ್ದಾಳೆ. ಇಲ್ಲಿ ನಾನು ತುಂಬಾ ಚೆನ್ನಾಗಿದ್ದೇನೆ" ಪಂಕಜ ಅವರು ಹೇಳಿದ ಮಾತು.

ಲೇಖಕಿಯಾಗಿ ಅಜ್ಞಾತವಾಗಿ ಉಳಿದುಬಿಟ್ಟೆನಲ್ಲ ಎಂಬುದು  ಪಂಕಜ ಅವರಿಗೆ ನೋವು.


- ದೀಕ್ಷಿತ್ ನಾಯರ್, ಮಂಡ್ಯ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top