ಬೆಳಕಿನ ಹಬ್ಬಕ್ಕೊಂದು ಭಾವಪ್ರಣತೆ

Upayuktha
0


ಭಾರತ ಹಳ್ಳಿಗಳ ದೇಶವಷ್ಟೇ ಅಲ್ಲ. ಹಬ್ಬಗಳ ದೇಶವೂ ಹೌದು. ವರ್ಷದಾರಂಭದ ಯುಗಾದಿಯಿಂದ ಹಿಡಿದು, ಸಂಕ್ರಾಂತಿಯವರೆಗೂ ಹಬ್ಬಗಳೆ. ಹಬ್ಬಗಳು ನಮ್ಮ ವೈವಿಧ್ಯಮಯ ಸಂಸ್ಕೃತಿಯ ಬೇರು ಹೌದು. ನಮ್ಮ ವರ್ಣಮಯ ಆಚಾರ, ಸಂಸ್ಕಾರ, ಪರಂಪರೆಯ ಮೇರು ಹೌದು. ನಮ್ಮೀ ಸಿರಿ ಸಂಸ್ಕೃತಿಯ ಪ್ರತೀಕವಾದ ಹಬ್ಬಗಳ ಸಾಲಿನಲ್ಲಿ ಬೆಳಕಿನ ಹಬ್ಬ ಅತ್ಯಂತ ವಿಶೇಷವಾದದ್ದು ಮತ್ತು ವಿಶಿಷ್ಟವಾದದ್ದು.



ನಾಡಿನಂದ ಈ ದೀಪಾವಳಿ 

ಬಂತು ಸಂತೋಷ ತಾಳಿ

ನಮ್ಮೀ ಬಾಳ ಕಾರಿರುಳ

ಬಾನಿಗೆ ಬಂದ ಶುಭವೇಳ

ಈ ದಿವ್ಯಕಾಂತಿ ನವ ದಿವ್ಯ ಶಾಂತಿ

ಬಂತೆ ಸಂಪ್ರೀತಿ.....


ಈ ಹಾಡು ಯಾರಿಗೆ ನೆನಪಿಲ್ಲ ಹೇಳಿ..  ಸಾಹಿತ್ಯವೆಷ್ಟೇ ಹಳೆಯದಿದ್ದರು ನಮಗೆಲ್ಲಾ ಇಂದಿಗೂ ನವ್ಯ ಅನುಭೂತಿಯನ್ನು ಉಂಟು ಮಾಡುವಂತಿದೆ. ಇಡೀ ದೇಶದಲ್ಲಿ ಈ ದೀಪಾವಳಿಯನ್ನು ಅತೀ ಸಂತೋಷ, ಅತ್ಯುತ್ಸಾಹದಿಂದ ಆಚರಿಸಲಾಗುತ್ತದೆ ಎಂದರೆ ತಪ್ಪಾಗಲಾರದು. ಚಿಕ್ಕ ವಯಸ್ಸಿನಿಂದ ಹಿಡಿದು ವಯೋವೃದ್ಧರವರೆಗೆ ಈ ಹಬ್ಬವನ್ನು ತುಂಬಾ ಇಷ್ಟ ಪಟ್ಟು ಆನಂದಿಸಲಾಗುತ್ತದೆ. ಹಬ್ಬಗಳೆಂದರೆ ನಮ್ಮ ಮೈಮನಸ್ಸು ಶುಚಿಗೊಳಿಸಿ ನವ್ಯ ಹೊಸತೊಂದು ಆಚರಣೆಗೆ ಸಾಕ್ಷಿಯಾಗುವ ಮುನ್ನುಡಿ. ನಮ್ಮ ದೈನಂದಿನ ಬದುಕಿಗೆ ಒಂದಿಷ್ಟು ವಿಶೇಷ ಆಚರಣೆಗಳ ಮೂಲಕ ಕಳೆ ತುಂಬುವುದು. ಹಾಗಾಗಿ ನಮ್ಮ ಅನೇಕ ಪ್ರಸಿದ್ಧ ಹಬ್ಬಗಳಲ್ಲಿ ಈ ದೀಪಾವಳಿ ವಿಶೇಷ ಮನ್ನಣೆಯನ್ನು ಪಡೆದಿದೆ.


ದೀಪಾವಳಿ ಸಾಲು ದೀಪಗಳ ಬೆಳಕಿನ ಹಬ್ಬ. ಬಾಳಲಿ ಕತ್ತಲೆಯನ್ನು ಸರಿಸಿ ಬೆಳಕಿನ ಹಾದಿಗೆ ಸಾಂಗೋಪವಾಗಿ ಸಾಗುವ ಹಬ್ಬ. ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಾಧಿಸುವ ಮತ್ತು ಕೆಟ್ಟದರ ಮೇಲೆ ಒಳ್ಳೆಯದನ್ನು ಸೂಚಿಸುವ ಹಬ್ಬ. ದೀಪಗಳ ಆವಳಿಯಂತೆ ಕಣ್ಣಿಗೆ ಕೊರೈಸಿ ಝಗಮಗಿಸುವ ಹಬ್ಬ. ನಮ್ಮ ಈ ನೆಲದಲ್ಲಿ ವಿವಿಧ ಪ್ರಾಂತ್ಯಗಳಿಗನುಗುಣವಾಗಿ ವೇಷ ಭಾಷೆಗಳು ಬದಲಾದಂತೆಲ್ಲ ಹಬ್ಬಗಳ ಆಚರಣೆಗಳು ಕೂಡ ಬದಲಾಗುತ್ತಾ ಬಂದಿದೆ. ಹಿಂದೂಗಳು ಮಾತ್ರವಲ್ಲದೆ ಜೈನರು, ಬೌದ್ಧರು, ಸಿಖ್ಖರೂ ಕೂಡ ಈ ಹಬ್ಬವನ್ನು ಆಚರಿಸುತ್ತಾರೆ.


ಮುಂಜಾನೆ ಹೊಸ್ತಿಲಿಗೆ ಅರಿಶಿನ ಕುಂಕುಮದ ಜೊತೆಗೆ ರಂಗೋಲಿಯನ್ನು ಹಾಕಿ,  ಮುಂಬಾಗಿಲಿಗೆ ರಂಗೆರುವ ತಳಿರು ತೋರಣಗಳನ್ನು ಕಟ್ಟುತ್ತಾ ಅಭ್ಯಂಜನದ ಜೊತೆ ನಾನಾ ರೀತಿಯ ಸಿಹಿಭಕ್ಷಗಳನ್ನೊಳಗೊಂಡು ಪಾಯಸ, ಕರ್ಜಿಕಾಯಿ, ಕಜ್ಜಾಯ ಹತ್ತಾರು ಬಗೆಯ ತಿನಿಸುಗಳ ಜೊತೆ ಸಂಜೆ ದೀಪಗಳನ್ನು ಬೆಳಗುತ್ತ ಸಾಗುವ ಈ ಹಬ್ಬ ಐದು ದಿನಗಳ ವರೆಗೂ ಆಚರಣೆಯಲ್ಲಿತ್ತದೆ. ಮಕ್ಕಳಿಗಂತೂ ಈ ಹಬ್ಬ ಕಣ್ಣಿಗೆ ಮನಸಿಗೆ ಮುದ ನೀಡುವುದಲ್ಲದೆ ಹೊಸ ಉಡುಪು ಹುರುಪಿನೊಂದಿಗೆ ಪಟಾಕಿ ಹಚ್ಚಿ ಆಕಾಶದಲ್ಲಿ ನಕ್ಷತ್ರಗಳಂತೆ ಕಂಗೊಳಿಸುವ ಆಕಾಶಬುಟ್ಟಿಯನ್ನು ತೇಲಿಬಿಡುತ್ತ ಸಂಭ್ರಮಿಸುವಂತಹುದು.


ದೀಪಗಳ ಹಬ್ಬ ಎಂದರೆ ನಮ್ಮ ಕಣ್ಣು ಮುಂದೆ ಬರುವುದು ಸಾಲು ಸಾಲು ದೀಪಗಳ ಬೆಳಕಿನ ಕಿರಣಗಳ ಪ್ರಜ್ವಲತೆ. ನಾವು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗುತ್ತೇವೆ. ಈ ಹಬ್ಬದಲ್ಲಿ ದೀಪ ಹಣತೆ ಬೆಳಕಿಗೆ ಯಾಕಿಷ್ಟು ಪ್ರಾಮುಖ್ಯತೆ ಕೊಡುತ್ತೇವೆಂದರೆ ನಮ್ಮ ಸಂಸ್ಕೃತಿಯಲ್ಲಿ ನಾವು ಮಾಡುವ ಎಲ್ಲಾ ಕೆಲಸಗಳನ್ನೂ ಶುರುಮಾಡುವ ಮೊದಲು ಬೆಳಕಿನ ಶುಭ ಸಾಂಕೇತಿಕವಾಗಿ ದೀಪ ಬೆಳಗುವುದರ ಮೂಲಕವೇ ಪ್ರಾರಂಭಿಸುತ್ತೇವೆ. ದೀಪಗಳನ್ನು ಇಟ್ಟು ದೀಪದಿಂದಲೇ ಬೆಳಗುತ್ತೇವೆ. ದೀಪಗಳ ತುದಿ ಸರ್ವತೋಮುಖ ವಾಗಿ ಬೆಳಗುತ್ತದೆ. ಅಂದರೆ ದೀಪ ಹಚ್ಚಿದರೆ ಸುತ್ತಲೂ ಬೆಳಕನ್ನು ಚೆಲ್ಲಿ ಬೆಳಗುತ್ತದೆ. ಆದರೆ ದೀಪದ ಗಮನ ಊರ್ಧ್ವ ಮುಖವಾಗಿರುತ್ತದೆ. ಅಂದರೆ ದೀಪ ಬೆಳಗುವ ಮನುಷ್ಯನು ಮನಸ್ಸು ಕೂಡ ತನ್ನ ತ್ಯಾಗದಿಂದ ಸುತ್ತಲಿನವರ ಬಾಳಿಗೆ ಬೆಳಕಾಗ ಬೇಕೆನ್ನುವ ಉದ್ಧಿಶ್ಯದಿಂದ ಬೆಳಗುತ್ತದೆ. ಇದನ್ನು ಕಾರ್ತಿಕ ದೀಪೋತ್ಸವ ಎಂದು ಕೂಡ ಕರೆಯುತ್ತಾರೆ. ಕಾರ್ತಿಕ ಮಾಸದಲ್ಲಿ ಸೂರ್ಯಾಸ್ತ ಬೇಗನೇ ಆಗುವುದರಿಂದ ಈ ಸಾಲು ದೀಪಗಳನ್ನು ಬೆಳಗಿಸಿ ಕತ್ತಲೆಯನ್ನು ಹೋಗಲಾಡಿಸಿ ಈ ದೀಪಗಳನ್ನು ಬೆಳಗುತ್ತೇವೆ.


ದೀಪಂ ಜ್ಯೋತಿ ಪರಬ್ರಹ್ಮ

ದೀಪಂ ಜ್ಯೋತಿ ಪರಾಯಣೆ

ದೀಪೇನ ಹರತೇ ಪಾಪಂ

ಸಂಧ್ಯಾ ದೀಪಂ ನಮೋಸ್ತುತೆ


ಅರ್ಥ ದೀಪವು ಕತ್ತಲೆಯನ್ನು ಹೋಗಲಾಡಿಸುವ ಜ್ಯೋತಿ ಸ್ವರೂಪಿಯಾಗಿದೆ. ಅಂದರೆ ಪರಬ್ರಹ್ಮವೇ ಆಗಿದೆ. ಅಲ್ಲದೇ ದೀಪವು ನಮ್ಮನ್ನು ಕಷ್ಟ ಕಾರ್ಪಣ್ಯಗಳಿಂದ ದಾಟಿಸುವಂಥ ಮಹಾಮಹಿಮಳಾದ ಭಗವತಿಯೂ ಆಗಿದೆ. ದೀಪದಿಂದ ನಮ್ಮೆಲ್ಲ ಪಾಪಗಳೂ ನಶಿಸುತ್ತವೆ. ಆದ್ದರಿಂದ ಕತ್ತಲೆಯನ್ನು ಕಳೆದು ಬೆಳಕನ್ನು ಕರುಣಿಸುವ ಸಂಧ್ಯಾ ದೀಪಕ್ಕೆ ನಾನು ನಮಸ್ಕರಿಸುತ್ತೇನೆ.


ವೇದ ಪುರಾಣಗಳ ಮುಖೇನ ಈ ದೀಪಾವಳಿಯನ್ನು ಮೂರು ದಿನಗಳವರೆಗೆ ಸೀಮಿತವಾಗಿಸಿದರು ಮೂಲತಃ ಇದು ಐದು ದಿನಗಳವರೆಗೆ ಆಚರಣೆಯಲ್ಲಿದೆ. ಮೊದಲ ದಿನ ನೀರು ತುಂಬುವುದು. ಎರಡನೇ ದಿನ ನರಕ ಚುರ್ದಶಿ, ಮೂರನೇ ದಿನ ದೀಪಾವಳಿ ಅಮಾವಾಸ್ಯೆ. ನಾಲ್ಕನೇ ದಿನ ಬಲಿ ಪಾಡ್ಯಮಿ ಹಾಗೂ ಐದನೇ ದಿನ ಯಮದ್ವಿತೀಯ ಆಚರಣೆ. ಈ ಐದು ದಿನಗಳ ಹಬ್ಬವು ತನ್ನದೇ ಆದ ವೈಶಿಷ್ಟ್ಯತೆ ಮತ್ತು ಪ್ರಾಮುಖ್ಯತೆಯನ್ನು ಪಡೆದಿದೆ.


ನೀರು ತುಂಬುವ ಹಬ್ಬದಂದು ಹಂಡೆ ಮತ್ತು ಒಲೆಗಳನ್ನು ಪೂಜಿಸಿ, ನೀರು ತುಂಬಿ ಹಬ್ಬದ ಅಭ್ಯಂಜನಕ್ಕೆ ಸಿದ್ದವಾಗುವುದು.

ನರಕ ಚತುರ್ದಶಿಯು ಶ್ರೀಕೃಷ್ಣ ಮತ್ತು ಅವನ ಪತ್ನಿ ಸತ್ಯಭಾಮೆಯ ಕೈಯಲ್ಲೇ ನರಕನ ಸೋಲು ಸೂಚಿಸುತ್ತದೆ.


ಎರಡನೇ ದಿನ ಅಮಾವಾಸ್ಯೆ ಭಕ್ತರು ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸುತ್ತಾರೆ ಏಕೆಂದರೆ ಈ ಅವಧಿಯಲ್ಲಿ ಅವಳು ಅತ್ಯಂತ ಕರುಣಾಮಯಿ ಚಂದ್ರನಲ್ಲಿದ್ದಳೆ ಮತ್ತು ಆಗಾಗ್ಗೆ ತನ್ನ ಅನುಯಾಯಿಗಳಿಗೆ ಶುಭಾಶಯಗಳನ್ನು ನೀಡುತ್ತಾಳೆ ಎಂದು ಹಲವರು ನಂಬುತ್ತಾರೆ. ಅಮಾವಾಸ್ಯೆಯಂದು ಜನರು ಕುಬ್ಜ ಅವತಾರವನ್ನು ಧರಿಸಿ ಬಲಿಯನ್ನು ನರಕಕ್ಕೆ ತಳ್ಳಿದ ಭಗವನ್ ವಿಷ್ಣುವಿನ ಕಥೆಯನ್ನು ಸಹ ಹೇಳುತ್ತಾರೆ. ದೀಪಗಳ ಹಬ್ಬದ ಸಮಯದಲ್ಲಿ ಮಾತ್ರ ಬಲಿಯು ಮತ್ತೆ ಪ್ರಪಂಚವನ್ನು ಸುತ್ತಾಡಲು ಅನುಮತಿಸಲಾಗಿದೆ. ಭಗವಾನ್ ಸಂದೇಶವನ್ನು ಹರಡಲು ಮತ್ತು ದಾರಿಯುದ್ದಕ್ಕೂ ದೀಪಗಳನ್ನು ಬೆಳಗಿಸಲು.


ಮೂರನೇ ದಿನ ಕಾರ್ತಿಕ ಶುದ್ಧ ಪಾಡ್ಯಮಿ ಬಲಿ ನರಕದಿಂದ ಹೊರಬಂದು ಭಗವಾನ್ ವಿಷ್ಣುವು ನೀಡಿದ ವರಗಳ ಪ್ರಕಾರ ಭೂಮಿಯನ್ನು ಆಳುತ್ತಾನೆ.


ನಾಲ್ಕನೇ ದಿನ ಭಾಯಿ ದೂಜ್ ಎಂದು ಕರೆಯಲ್ಪಡುವ ಯಮ ದ್ವಿತೀಯ ವನ್ನು ಆಚರಿಸಲಾಗುತ್ತದೆ ಮತ್ತು ಸಹೋದರಿಯರು ತಮ್ಮ ಸಹೋದರರನ್ನು ತಮ್ಮ ಮನೆಗೆ ಆಹ್ವಾನಿಸುವುದರ ಮೂಲಕ ಸಂಬಂಧಗಳ ಸಂಭ್ರಮವನ್ನು ಹೊಂದಿದ್ದಾರೆ.


ಐದನೇ ದಿನ ಧಾಂತೀರ ಸಂಪತ್ತು ಮತ್ತು ಸಮೃದ್ಧಿಯ ಆಚರಣೆಯಾಗಿದೆ. ಇದನ್ನು ದೀಪಾವಳಿಯ ಎರಡು ದಿನಗಳ ಮೊದಲು ಆಚರಿಸಲಾಗುತ್ತದೆ ಮತ್ತು ಪ್ರಪಂಚದಾದ್ಯಂತ ಜನರು ಜೂಜಿನಲ್ಲಿ ತಮ್ಮ ಕೈಯನ್ನು ಪ್ರಯತ್ನಿಸುತ್ತಾರೆ. ಏಕೆಂದರೆ ಈ ದಿನ ಪಾರ್ವತಿ ದೇವಿಯು ತನ್ನ ಪತಿ ಶಿವನೊಂದಿಗೆ ಸಾಲಗಳನ್ನು ಆಡುತ್ತಾಳೆ ಎನ್ನುವ ದಂತಕಥೆಯ ಪ್ರಕಾರೆನ ದೀಪಾವಳಿ ಹಬ್ಬ ಈ ರೀತಿಯಲ್ಲಿ ಆಚರಣೆಯಲ್ಲಿದೆ ಎಂದು ಉಲ್ಲೇಖಿಸಲಾಗಿದೆ.


ಈ ಕಿರು ಲೇಖನದಲ್ಲಿ ನಾಡಿನ ಬೆಳಕಿನ ಹಬ್ಬದ ಪಕ್ಷಿನೋಟವನ್ನಷ್ಟೇ ನೀಡಿದ್ದೇನೆ. ರಾಷ್ಟ್ರಾದ್ಯಂತ ದೀಪಾವಳಿಯೆಂದರೆ ಬರೀ ಹಬ್ಬವಲ್ಲ. ಹಬ್ಬಗಳ ಉತ್ಸವ. ದಾಂತೀರಾ, ಧನ ತ್ರಯೋದಶಿ, ಧನ್ವವಂತರಿ ಪೂಜಾ,ಯಮ ದೀಪ ದಾನ, ನರಕ ಚತುರ್ದಶಿ, ಕಾಳೀ ಚೌದಾಸ್, ಛೋಟಿ ದೀಪಾವಳಿ, ಹನುಮಾನ್ ಪೂಜಾ ರೂಪ್ ಚೌದಾಸ್, ಲಕ್ಷ್ಮೀ ಪೂಜಾ, ಕುಬೇರ ಪೂಜಾ, ಅನ್ನಕೂಟ್, ಬಲಿ ಪಾಡ್ಯಮಿ, ಗೋವರ್ಧನ್ ಪೂಜಾ, ಭಾಯಿ ದೂಜ್, ವಿಶ್ವಕರ್ಮ ಪೂಜಾ... ನವದಂಪತಿಗಳ ಪ್ರೇಮ ದೀಪಾವಳಿ....  ಹೀಗೆ ಅದೆಷ್ಟು ಹಬ್ಬಗಳ ಉತ್ಸವ ನಡೆಯುತ್ತಿದೆ...


ಈ ಬೆಳಕಿನ ಹಬ್ಬ ತಮಗೂ ಮತ್ತು ತಮ್ಮ ಕುಟುಂಬಕ್ಕೂ ಸಕಲ ಸೌಭಾಗ್ಯಗಳನ್ನು ನೀಡಲಿ. ದೇಶದೆಲ್ಲೆಡೆ ಸಮೃದ್ಧಿ, ಶಾಂತಿ, ಸಂತಸವನ್ನು ಚಿರವಾಗಿಡಲಿ ಎಂದು ಹೃನ್ಮನದಿ ಹಾರೈಸುತ್ತೇನೆ.

 


- ರಶ್ಮಿಪ್ರಸಾದ್ (ರಾಶಿ)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top