ಕನ್ನಡ ರಾಜ್ಯೋತ್ಸವದ ಅಂಗವಾಗಿ ಗ್ರಂಥಾವಲೋಕನ ಕಾರ್ಯಕ್ರಮ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆಯಿತು.
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ವಿಭಾಗ, ಗ್ರಂಥಾಲಯ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದೊಂದಿಗೆ ಪುಸ್ತಕ ಪರಿಚಯ ಮತ್ತು ಪುಸ್ತಕ ವಿಮರ್ಶೆ ಗ್ರಂಥಾವಲೋಕನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲೆ ಪ್ರೊ. ಲತಾ ಎ. ಪಂಡಿತ್, ಗ್ರಂಥಾಲಯ ಕೇವಲ ಪುಸ್ತಕ ಶೇಖರಣೆ ಮಾಡುವ ಸ್ಥಳವಲ್ಲ. ಇದು ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ವೇದಿಕೆಯಾಗಿದೆ. ಕನ್ನಡ ಭಾಷೆ ಅತ್ಯಂತ ಹಿರಿದಾದ ಸಾಹಿತ್ಯ ಲೋಕವನ್ನು ಹೊಂದಿದೆ. ಪುಸ್ತಕ ಪ್ರದರ್ಶನ ಮತ್ತು ವಿಮರ್ಶೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಪುಸ್ತಕ ಓದುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಹುಟ್ಟುತ್ತದೆ. ಆ ಕೆಲಸವನ್ನು ಈ ಗ್ರಂಥಾವಲೋಕನ ಕಾರ್ಯಕ್ರಮ ಸಾಕಾರಗೊಳಿಸಿದೆ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ ಎಂ. ಕೆ., ವಿದ್ಯಾರ್ಥಿಗಳು ಈ ಅವಕಾಶ ಬಳಸಿಕೊಳ್ಳಬೇಕು. ಗ್ರಂಥಾಲಯ ಬಳಸುವ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸಲು ಮೊಬೈಲ್ ಬಳಕೆಯೇ ಮುಖ್ಯ ಕಾರಣ. ಪುಸ್ತಕದಿಂದ ತಿಳಿಯುವ ಮಾಹಿತಿಗಳು ಶಾಶ್ವತವಾಗಿ ನೆನಪಿನಲ್ಲಿರುತ್ತದೆ. ಪುಸ್ತಕ ಓದಲು ಸೂಕ್ತ ಸಮಯ ವಿದ್ಯಾರ್ಥಿ ಜೀವನವೇ ಹೊರತು, ಬೇರೆಯಲ್ಲ ಎಂದರು.
ಐ.ಕ್ಯೂ.ಎ.ಸಿ. ಸಂಯೋಜಕ ಡಾ. ಸಿದ್ಧರಾಜು ಎಂ.ಎನ್. ರಾಮಾಯಣ ದರ್ಶನಂ ಅದರ ಕಥಾವಸ್ತುವೇ ಒಂದು ವಿಶೇಷವಾದರೆ, ಅದರಲ್ಲಿ ಕುವೆಂಪು ಅವರು ಬಳಸಿರುವಂತಹ ಪದಗಳು ಇನ್ನೊಂದು ವಿಶೇಷ. ಇಂತಹ ಕಾರ್ಯಕ್ರಮಗಳಿಂದ ಪುಸ್ತಕ ಓದುವುದಕ್ಕೆ ಪ್ರೋತ್ಸಾಹ ದೊರೆತಂತಾಗುತ್ತದೆ ಎಂದರು.
ವಿದ್ಯಾರ್ಥಿನಿ ಮೇಘನಾ ಮಡಪ್ಪಾಡಿ, ಕನ್ನಡ ಡಿಂಡಿಮ ಎಂಬ ಪುಸ್ತಕದ ಕುರಿತು ವಿಮರ್ಶೆ ಮಾಡಿದರು. ಕಾಲೇಜಿನ ಗ್ರಂಥಪಾಲಕಿ ಡಾ. ವನಜಾ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ