ಮಕ್ಕಳಲ್ಲೊಂದು ಪುಟ್ಟ ಸಾಹಿತ್ಯಾಸಕ್ತಿ ಬೆಳೆಸೋಣ......

Upayuktha
0


ನಾವು ಎಳೆಯರು ನಾವು ಗೆಳೆಯರು

ಹೃದಯ ಹೂವಿನ ಹಂದರ

ನಾಳೆ ನಾವೇ ನಾಡ ಹಿರಿಯರು

ನಮ್ಮ ಕನಸದು ಸುಂದರ


ಮಕ್ಕಳೆಂದರೆ ಹೊಳೆಯುವ ನಕ್ಷತ್ರಗಳು,ಅರಳುವ ಹೂವುಗಳು, ಹಾರಾಡುವ ದುಂಬಿಗಳು. ಇಂತಹ ಚಿಟ್ಟೆಗಳಿಗೆ ಈ ದಿನ ಹುಟ್ಟು ಹಬ್ಬ. ಮಕ್ಕಳು ಬೆಳೆಯುತ್ತಿರುವ ಸಸಿಗಳಂತೆ ಅವುಗಳಿಗೆ ಒಂದೊಳ್ಳೆ ಪೋಷಕಾಂಶವನ್ನು ನೀಡುವುದು ತಂದೆ-ತಾಯಿ ಹಾಗೂ ಸಮಾಜದ ಕರ್ತವ್ಯವಾಗಿರುತ್ತದೆ. ಮಕ್ಕಳು ತಂದೆ-ತಾಯಿಯ ಆಸ್ತಿಯಲ್ಲ ಅಥವಾ ಅವರು ಅಸಹಾಯಕ ದಾನ ವಸ್ತುಗಳೂ ಅಲ್ಲ. ಅವರು ಮನುಷ್ಯರು ಅವರಿಗೂ ಕೂಡ ಅವರದ್ದೇ ಆದ ಹಕ್ಕುಗಳಿವೆ. ದೇಶದ ಒಳಿತಿಗಾಗಿ ಮತ್ತು ಅಭಿವೃದ್ಧಿಗಾಗಿ ಮಕ್ಕಳನ್ನು ರಕ್ಷಿಸುವುದು ಹಾಗೂ ಅವರ ಅವಶ್ಯಕತೆಗಳನ್ನು ಪೂರೈಸಿ ಅಭಿವೃದ್ಧಿಗೊಳಿಸುವುದು ಪ್ರತಿಯೊಬ್ಬ ಪೋಷಕ ಮತ್ತು ಸರ್ಕಾರದ ಜವಾಬ್ದಾರಿಯಾಗಿರುತ್ತದೆ.



ಮಕ್ಕಳನ್ನು  ಪಠ್ಯಪುಸ್ತಕಗಳೆಂಬ ಪಂಜರಗಳಿಗೆ ನೂಕದೆ ಅವರನ್ನು ಸಾಹಿತ್ಯವೆಂಬ ಆಕಾಶಕ್ಕೆ ಹಾರಾಡಲು ಬಿಡಿ. ಮಕ್ಕಳಿಗಾಗಿ ಸಾಹಿತ್ಯವೆಂದರೆ ಅವರ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರಳಿಸಿ ಕಲ್ಪನೆಯನ್ನು ರೂಪಿಸಿ, ಭಾವನೆಗಳು ಪ್ರಚೋದಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯ. ಮಕ್ಕಳ ಸಾಹಿತ್ಯದಲ್ಲಿ ಪರಿಸರ,ಪ್ರಾಣಿ,ಪಕ್ಷಿ, ಚಂದಮಾಮ, ಗುಡ್ಡ,ನದಿ,ಮರಗಳು ಮತ್ತಿತ್ತರ ಅವರ ಸುತ್ತಲಿನ ನಿಸರ್ಗ ಕುರಿತದ್ದೇ ಇರುತ್ತದೆ.



ಭಾರತೀಯ ಸಾಹಿತ್ಯದಲ್ಲಿ ಕಥೆಗಳ ರಚನೆಗೆ ಮೂಲ ನಮ್ಮ ಜಾನಪದ,ಇಲ್ಲಿಯೂ ನೀತಿ ಕಥೆಗಳಿಗೆ ಪ್ರಾಧನ್ಯ, ಅಜ್ಜಿಯ ಕಥೆಗಳಲ್ಲಿ ಪ್ರಮುಖ ಪಾತ್ರಗಳೆಂದರೆ ರಾಜ, ರಾಣಿ,ಮಂತ್ರಿ ವಿದೂಷಕ ಇವರೆಲ್ಲ ಮಕ್ಕಳ ಮನನಾಟುವಂತಹ ಪಾತ್ರಗಳಾಗಿವೆ. ಅನೇಕ ಆಟಗಳನ್ನು ಆಡುವಾಗ ಹಾಡುವ ಪ್ರಾಸಬದ್ಧ ಹಾಡುಗಳು,ಕೋಲಾಟ ಇವೆಲ್ಲಾ ಮಕ್ಕಳ ಮನೋವಿಕಾಸಕ್ಕೆ ಬುನಾದಿ. ಅವಲಕ್ಕಿ ಪವಲಕ್ಕಿ, ಕಣ್ಣಾ ಮುಚ್ಚೆ ಕಾಡೇ ಗೂಡೆ, ರತ್ತೋ ರತ್ತೋ ರಾಯನ ಮಗಳೇ ಇವು ಮಕ್ಕಳ ಸಾಹಿತ್ಯ ಭಂಡಾರದ ಕೆಲ ತುಣುಕುಗಳು ಮಾತ್ರ.


ಕನ್ನಡದಲ್ಲಿನ ಮಕ್ಕಳ ಸಾಹಿತ್ಯಕ್ಕೆ ಒಂದೊಳ್ಳೆ ರಚನೆಗಳೆಂದರೆ ಅದು ಪಂಜೆ ಮಂಗೇಶರಾಯರ ರಚನೆಗಳು. ಅವರ ಪದ್ಯಗಳಲ್ಲಿ ಬಳಸುವ ಪದಗಳು ಮಕ್ಕಳ ಮನಸ್ಸಿನಾಳಕ್ಕೂ ಇಳಿಯುತ್ತವೆ. ನಾಗರ ಹಾವೇ ಹಾವೊಳು ಹೂವೆ... ಅವರ ರಚನೆಯ ಪದ್ಯ. ಇದರ ಜೊತೆಗೆ ಜಿ.ಪಿ.ರಾಜರತ್ನಂ ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಒಂದು ರತ್ನವೇ ಸರಿ. ಮಕ್ಕಳ ಸಾಹಿತ್ಯ ಹೇಗಿರಬೇಕು ಎಂಬುದಕ್ಕೆ ಇವರ ಅಸಂಖ್ಯ ರಚನೆಗಳೇ ಎಲ್ಲಾ ಕಾಲಕ್ಕೂ ಸಲ್ಲುವ ಉದಾಹರಣೆ. ತುತ್ತೂರಿ,ಕಡ್ಲೆಪುರಿ,ಚುಟುಕು,ಕಲ್ಲು ಸಕ್ಕರೆ,ತುಂಟು ಗಣಪ, ಮುದ್ದು ಕೃಷ್ಣ,ಕೆಂಚಾಲು ಇತ್ಯಾದಿ.



ಮಕ್ಕಳ ಸಾಹಿತ್ಯದಲ್ಲಿ ಇಂದು ಹೊಸ ನೀರು ಕಾಣಿಸಿಕೊಳ್ಳಬೇಕಾಗಿದೆ. ಹೊಸ ಭಾವ, ವಸ್ತು ಹಾಗೂ ವೈವಿಧ್ಯಮಯವಾದ ಛಂದಸ್ಸು ಬಳಸಿ ಬರೆಯುವ ಸಾಹಿತಿಗಳ ಹೊಸ ದಂಡು ಕನ್ನಡದಲ್ಲಿ ಕಾಣಿಸಿಕೊಳ್ಳಬೇಕಾಗಿದೆ. ವಿಜ್ಞಾನ, ವೈದ್ಯಕೀಯ,ಪರಿಸರ,ಆಕಾಶ,ಗ್ರಹಗಳು, ಕಂಪ್ಯೂಟರ್ ಮೊದಲಾದ ವಿಷಯ ವಸ್ತುಗಳು ಮಕ್ಕಳ ಸಾಹಿತ್ಯ ಪ್ರವೇಶ ಮಾಡಿವೆ. ಮಕ್ಕಳ ಕುತೂಹಲವನ್ನು ತಣಿಸುತ್ತಿವೆ.


                                                                                                              

                                                           

- ಅನುಷ.ಎಮ್, ಸಹಾಯಕ ಪ್ರಾಧ್ಯಾಪಕರು, 

ರಸಾಯನ ಶಾಸ್ತ್ರ ವಿಭಾಗ, 

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ .



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top