ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಜೆಡಿಎಸ್ ಆಗ್ರಹ

Upayuktha
0


ಕೆ.ಆರ್. ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿಯ ಬೇಲದಕೆರೆ ಗ್ರಾಮದಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮೂವರು ಮಹಿಳೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್. ಜಾನಕೀರಾಂ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸಿದರು.



ಬೇಲದಕೆರೆ ಗ್ರಾಮದ ನಾಗಮ್ಮ ಜವರೇಗೌಡ, ಮಾಲಮ್ಮ ಕುಮಾರ್, ಮಂಜಮ್ಮ ಚಂದ್ರಹಾಸ ಗಾಯಗೊಂಡ ಮಹಿಳೆಯರಾಗಿದ್ದು, ಇದೇ ಬೇಲದಕೆರೆ ಗ್ರಾಮದ ನಿವಾಸಿಗಳಾದ ಹರೀಶ, ಮಂಜೇಗೌಡ, ಮಮತಾ, ಮಮತಾ ಮಂಜೇಗೌಡ, ಸಂದರ್ಶ, ಪ್ರಮೋದಿತ, ಚಂದ್ರ ಗವೀಗೌಡ, ಯಶವಂತ್, ಶೈಲಜಾ, ರವೀಗೌಡ, ಅಣ್ಣೇಗೌಡ ಹಲ್ಲೆ ನಡೆಸಿರುವ ಆರೋಪಿಗಳಾಗಿದ್ದಾರೆ. ಬೇಲದಕೆರೆ ಗ್ರಾಮದಲ್ಲಿ ಇರುವ ತಮ್ಮ ಜಮೀನ ಕಡೆಗೆ ಹೋಗುತ್ತಿದ್ದ ನಾಗಮ್ಮ, ಮಾಲಮ್ಮ, ಮಂಜಮ್ಮ ಅವರ ಮೇಲೆ ಆರೋಪಿಗಳು ಹಳೆ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಜಗಳ ತೆಗೆದು ಕಾರದ ಪುಡಿಯನ್ನು ಕಣ್ಣಿಗೆ ಎರಚಿ ನಂತರ  ಮಚ್ಚು, ದೊಣ್ಣೆ, ಕಬ್ಬಿಣದ ರಾಡುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಅಲ್ಲದೆ ಚಿನ್ನದ ಆಭರಣಗಳನ್ನು ಕಿತ್ತುಕೊಂಡು ಕೊಲೆ ಬೆದರಿಕೆ ಹಾಕಿ ಪರಾರಿಯಾಗಿರುತ್ತಾರೆ.


ಗಾಯಗೊಂಡಿರುವ ಮಹಿಳೆಯರಿಗೆ ಕೆ.ಆರ್. ಪೇಟೆ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮೂರೂ ಜನ ಮಹಿಳೆಯರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆದರೂ ಸಹ ಆರೋಪಿಗಳನ್ನು ಬಂಧಿಸದೇ ಇರುವ ಕಾರಣ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಕೂಡಲೇ ಆರೋಪಿಗಳನ್ನು ಯಾವುದೇ ಒತ್ತಡಗಳಿಗೆ ಮಣಿಯದೇ ಬಂಧಿಸುವ ಮೂಲಕ ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ಜೆಡಿಎಸ್ ಪಕ್ಷದ ವತಿಯಿಂದ ಪೊಲೀಸ್ ಠಾಣೆಯ ಮುಂದೆ ಸಾವಿರಾರು ಮಂದಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಇದಕ್ಕೆ ಆಸ್ಪದ ಕೊಡದೇ ಒಂದೆರಡು ದಿನದಲ್ಲಿ ಆರೋಪಿಗಳನ್ನು ಬಂಧಿಸಬೇಕು ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಸಬ್ ಇನ್ಸ್ಪೆಕ್ಟರ್ ನವೀನ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಬಿ.ವಿ.ನಾಗೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಎಂ.ಬಿ. ಹರೀಶ್, ತಾಲ್ಲೂಕು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ವಿ.ಎಸ್. ಧನಂಜಯಕುಮಾರ್,  ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್.ಟಿ. ಲೋಕೇಶ್, ತಾ.ಪಂ.ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ತಾಲ್ಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸಂತೇಬಾಚಹಳ್ಳಿ ರವಿಕುಮಾರ್, ಮುಖಂಡರಾದ ಬೇಲದಕೆರೆ ನಂಜಪ್ಪ, ಮರೀಗೌಡ, ಶೆಟ್ಟಿನಾಯಕನಕೊಪ್ಪಲು ಸೋಮಶೇಖರ್ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.


ಮನವಿ  ಸ್ವೀಕಾರ ಮಾಡಿದ ಸಬ್ ಇನ್ಸ್ಪೆಕ್ಟರ್ ನವೀನ್ ಅವರು ಘಟನೆ ಸಂಬಂಧ 11 ಮಂದಿ ಆರೋಪಿಗಳ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಪ್ರಾಮಾಣಿಕವಾಗಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಮಹಿಳೆಯರ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅತಿ ಶೀಘ್ರವೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದರು.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top