ಮೊನ್ನೆಯ ದಿನ ಗುಬ್ಬಿಯಲ್ಲಿ ತಂದೆಯ ಶ್ರಾದ್ಧ ಮುಗಿಸಿಕೊಂಡು, ನಿನ್ನೆ ಬೆಂಗಳೂರಿಗೆ ಬಂದೆ. ನಾನು ಇಲ್ಲಿಗೆ ಬಂದ ವಿಷಯ ತಿಳಿದ ಹಿರಿಯರಾದ ಶ್ರೀ ವಿಜಯ ಕುಮಾರ್ ಅವರು, ತಮ್ಮ ಸಾಹಿತಿ ಗೆಳೆಯ ಶ್ರೀ ಲಕ್ಷ್ಮಿ ಶ್ರೀನಿವಾಸರೊಂದಿಗೆ ಕೆಂಗೇರಿ ಉಪನಗರದಲ್ಲಿ ನಾನಿರುವಲ್ಲಿಗೇ ಬಂದು ಸತ್ಕರಿಸಿ ಆಶೀರ್ವದಿಸಿದರು.
ಇದುವೆ ಅಕ್ಚರಬಂಧ, ಬಂಧುತ್ವದ ನಿದರ್ಶನ. ನಾನ್ಯಾರೋ? ವಿಜಯ ಕುಮಾರ್ ಯಾರೋ? ನಂಟರಲ್ಲ, ಒಂದೇ ಊರಿನವರು ಅಲ್ಲ. ಅವರು ನನಗಿಂತ ವಯಸ್ಸು, ಜೀವನಾನುಭವ, ಅರಿವು ಎಲ್ಲದರಲ್ಲೂ ಹಿರಿಯರು. ನಮ್ಮನ್ನು ಬೆಸೆದದ್ದು ನನ್ನ ಕವಿತೆಗಳು. ನನ್ನ ಬರಹಗಳನ್ನು ನನಗಿಂತಲೂ ಅತಿಯಾಗಿ ಪ್ರೀತಿಸುವ, ನಿತ್ಯವೂ ಓದಿ, ಮೆಚ್ಚಿ, ಆಶೀರ್ವದಿಸುವ ವಿಜಯಕುಮಾರ್ ಅಪ್ಪಟ ಕನ್ನಡ ಪ್ರೇಮಿ. ಅವರು ಮತ್ತು ಲಕ್ಷ್ಮಿ ಶ್ರೀನಿವಾಸ್ ಇಬ್ಬರು ಕನ್ನಡದ ನಾಡು ನುಡಿಗಾಗಿ ಅಹರ್ನಿಶಿ ದುಡಿವವರು, ತಮ್ಮ ಕ್ಷೇತ್ರದಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಅಂತಹ ಹಿರಿಯ ಕನ್ನಡದ ಸಹೃದಯರು ನನಗಾಗಿ, ನನ್ನನ್ನು ಆಶೀರ್ವಾದಿಸಲೆಂದೆ ನಾನಿರುವಲ್ಲಿಗೆ ಬರುತ್ತಾರೆಂದರೆ ನಾನೆಂತಹ ಅದೃಷ್ಟವಂತ. ಇದೆಂತಹ ಸುಕೃತ, ಸೌಭಾಗ್ಯ. ನಾಲ್ಕಕ್ಷರ ಬಿಟ್ಟು ನನ್ನಲ್ಲಿರುವುದಾದರೂ ಏನು? ದಿನವು ಎದೆಯಲುದಿಸುವ ಕವಿತೆಗಳನು ಬಿಟ್ಟು ನಾನಿವರಿಗೆಲ್ಲ ಕೊಟ್ಟಿದ್ದಾದರೂ ಏನು? ನೆನೆದರೆ ಮನ ಆರ್ದ್ರವಾಗುತ್ತದೆ. ನಿತ್ಯ ಭಾವತಂತಿ ಮೀಟಿ, ಕಾವ್ಯಸ್ವರಗಳ ರಿಂಗಣಿಸುವ ನಾನು ಬರಿಗೈ ಫಕೀರ. ಈ ಅಕ್ಷರ ಬಂಧುತ್ವಕ್ಕೆ ಹೃನ್ಮನ ಶರಣಾಗಿ, ಉಸಿರಿರುವವರೆಗೂ ಋಣಿಯಾಗುತ್ತದೆ.
ನಿತ್ಯ ಬರೆದು ನಾನೇನು ಗಳಿಸಿದೆನೆಂದರೆ.. ಮಾಡಿದ ಪುಸ್ತಕಗಳು, ಪಡೆದ ಪ್ರಶಸ್ತಿ ಪುರಸ್ಕಾರಗಳಲ್ಲ. ಸಾಧಿಸಿರುವುದು, ಗಳಿಸಿರುವುದು ನಾಡಿನಾದ್ಯಂತ ಇಂತಹ ಹಿರಿಯರ ಆಶೀರ್ವಾದ. ಸಾಹಿತ್ಯಾಸಕ್ತರ ಪ್ರೀತಿ. ನಿಮ್ಮಂತಹ ಅಕ್ಷರಬಂಧುಗಳ ಅನುಗ್ರಹ, ಹಾರೈಕೆ. ಬರೆವ ಭಾವದೊಡಲಿಗೆ ಮತ್ತಿನ್ನೇನು ಬೇಕು? ಈ ಜನ್ಮಕೆ ಈ ಜೀವಕೆ ಇಷ್ಟು ಸಾಕಲ್ಲವೆ.!!
- ಎ.ಎನ್.ರಮೇಶ್. ಗುಬ್ಬಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


