ಸುರತ್ಕಲ್: ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ (ರಿ) ಸುರತ್ಕಲ್ ಮತ್ತು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಹಭಾಗಿತ್ವದಲ್ಲಿ ಶೇಣಿ ಸಂಸ್ಮರಣೆ ಹಾಗೂ ಶೇಣಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಗೋವಿಂದ ದಾಸ ಕಾಲೇಜಿನಲ್ಲಿ ನಡೆಯಿತು.
ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಯಕ್ಷಲೋಕದಲ್ಲಿ ಶೇಣಿಯವರ ಸಾಧನೆ ಸದಾ ಸ್ಮರಣೀಯ ಎಂದರು.
ಟ್ರಸ್ಟ್‌ನ ಕೋಶಾಧಿಕಾರಿ ಜಿ.ಕೆ. ಭಟ್ ಸೇರಾಜೆ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸರ್ಪಂಗಳ ಈಶ್ವರ ಭಟ್ ವಂದಿಸಿದರು. ಉಪ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಎಸ್.ಜಿ ಉಪಸ್ಥಿತರಿದ್ದರು.
ಹರಿದಾಸ ಶ್ರೀ ಶೇಣಿ ಮುರಳಿಯವರು ಶಿವಭಕ್ತ ಬಾಣಾಸುರ ಹರಿಕಥೆ ನಡೆಸಿಕೊಟ್ಟರು. ಸತ್ಯನಾರಾಯಣ ಐಲ, ಮಂಗಲದಾಸ ಗುಲ್ವಾಡಿ ಹಿಮ್ಮೇಳದಲ್ಲಿ ಸಹಕರಿಸಿದರು.
ಕರ್ಣಾನಾಸಚ್ಛೇದ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಮುರಾರಿ ಕಡಂಬಳಿತ್ತಾಯ, ಕೃಷ್ಣಪ್ರಕಾಶ ಉಳಿತ್ತಾಯ, ಚಂದ್ರಶೇಖರ ಕಾರಂತ ಮತ್ತು ಮುಮ್ಮೇಳದಲ್ಲಿ ಕೆ. ಗೋವಿಂದ ಭಟ್ ಸುರಿಕುಮೇರು, ಡಾ.ಪ್ರಭಾಕರ ಜೋಷಿ, ಕೆ. ಮಹಾಬಲ ಶೆಟ್ಟಿ, ಜಿ.ಕೆ. ಭಟ್ ಸೇರಾಜೆ, ಸರ್ಪಂಗಳ ಈಶ್ವರ ಭಟ್, ಪಿ.ವಿ. ರಾವ್, ಶೇಣಿ ವೇಣುಗೋಪಾಲ ಭಟ್ ಭಾಗವಹಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಪೌರಾಣಿಕ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಪಿ.ವಿ ರಾವ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ವಿದ್ಯಾರ್ಥಿಗಳಿಗಾಗಿ ಮುಖವರ್ಣಿಕೆ ಸ್ಪರ್ಧೆ ನಡೆಯಿತು. ಸರ್ಪಂಗಳ ಈಶ್ವರ ಭಟ್ ಮತ್ತು ಲಕ್ಷ್ಮಣ್ ಕುಮಾರ್ ಮರಕಡ ತೀರ್ಪುಗಾರರಾಗಿ ಸಹಕರಿಸಿದರು.
ಯಕ್ಷಗಾನದ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಇವರಿಗೆ ಶೇಣಿ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಯಕ್ಷಗಾನ ಕಲಾ ಬದುಕು ನನಗೆ ಸಂತೃಪ್ತಿಯನ್ನು ತಂದು ಕೊಟ್ಟಿದೆ. ಕಲಾವಿದರು ಹಾಗೂ ಸಹೃದಯಿ ಸಾಮಾಜಿಕರು ಗುರುತಿಸಿ ತನ್ನನ್ನು ಬೆಳೆಸಿದರು. ಗುರು ಶೇಣಿ ಗೋಪಾಲ ಭಟ್ಟರ ಹೆಸರಿನ ಶೇಣಿ ಪ್ರಶಸ್ತಿಯ ಗೌರವ ಒಲಿದಿರುವುದು ಸಂತೋಷ ತಂದಿದೆ ಎಂದರು.
ಟ್ರಸ್ಟ್‌ನ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಅಭಿನಂದಿಸಿ, ಗೋವಿಂದ ಭಟ್ ಅವರ ಕಲಾ ಸಾಧನೆ ವಿಶಿಷ್ಟವಾದುದು ಎಂದರು. ವೇ. ಮೂ. ವಾದಿರಾಜ ಉಪಾಧ್ಯಾಯ ಕೊಲೆಕಾಡಿ ಆಶೀರ್ವಚನ ನೀಡಿದರು. ವಿದುಷಿ ಸುಮಂಗಲಾ ರತ್ನಾಕರ ರಾವ್ ಅಭಿನಂದನಾ ನುಡಿಗಳನ್ನಾಡಿದರು.
ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಬ್ಯಾಂಕ್ ಆಫ್ ಬರೋಡಾದ ಪ್ರಧಾನ ವ್ಯವಸ್ಥಾಪಕಿ ಗಾಯತ್ರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಉದಯಕುಮಾರ್ ಬಿ.ವಿ., ಎಂಆರ್‌ಪಿಎಲ್‌ನ ಆಧಿಕಾರಿ ಮಾಲತೇಶ್, ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಉದ್ಯಮಿ ದಿವಾಣ ಗೋವಿಂದ ಭಟ್ ಮುಖ್ಯ ಅತಿಥಿಗಳಾಗಿದ್ದರು. ಟ್ರಸ್ಟ್‌ನ ಉಪಾಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ.ವಿ ರಾವ್ ಸ್ವಾಗತಿಸಿದರು. ಕೋಶಾಧಿಕಾರಿ ಜಿ.ಕೆ ಭಟ್ ಸೇರಾಜೆ ನಿರೂಪಿಸಿದರು.
ಪೂರ್ಣಿಮ ಯತೀಶ್ ರೈಯವರ ನಿರ್ದೇಶನದಲ್ಲಿ ಸುದರ್ಶನ ಗರ್ವಭಂಗ-ಭಾರ್ಗವ ವಿಜಯ ಯಕ್ಷಗಾನ ಬಯಲಾಟ ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ