ವಸತಿ ನಿಲಯಗಳಲ್ಲಿ ಅಡುಗೆ ಸಿಬ್ಬಂದಿ ವರ್ಗ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ

Upayuktha
0


ಕೆ.ಆರ್.ಪೇಟೆ: ವಸತಿ ನಿಲಯಗಳಲ್ಲಿ ಅಡುಗೆ ಸಿಬ್ಬಂದಿ ವರ್ಗದವರು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಿ ಸ್ವಚ್ಚತೆ ಇರುತ್ತದೋ ಅಲ್ಲಿ ಆರೋಗ್ಯ ಇರುತ್ತದೆ. ಹಾಗಾಗಿ ಸ್ವಚ್ಚತೆಯೊಂದಿಗೆ ಗುಣಮಟ್ಟದ ಅಡುಗೆ ತಯಾರಿಸಿಕೊಡುವ ಮೂಲಕ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಬೇಕು. ಜೊತೆಗೆ ತಮ್ಮ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬೇಕು. ಯಾವುದೇ ರೋಗ ಲಕ್ಷಣಗಳು ಕಂಡ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಾಲ್ಲೂಕು ಬಿ.ಸಿ.ಎಂ ಅಧಿಕಾರಿ ಎಂ.ಎನ್. ವೆಂಕಟೇಶ್‌ ಹೇಳಿದರು.


ಅವರು ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಹಾಸ್ಟೆಲ್‌ ವಾರ್ಡನ್‌ ಹಾಗೂ ಅಡುಗೆ ಸಿಬ್ಬಂದಿ ವರ್ಗದವರಿಗೆ ಆಯೋಜಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.


ಆರೋಗ್ಯ ಎನ್ನುವುದು ಮನುಷ್ಯನಿಗೆ ಬಹು ದೊಡ್ಡ ಆಸ್ತಿಯಾಗಿದೆ. ಆರೋಗ್ಯವಂತ ವ್ಯಕ್ತ ಏನು ಬೇಕಾದರೂ ಮಾಡಬಹದು. ಎಲ್ಲಾ ಸಂಪತ್ತು ಇದ್ದು ಆರೋಗ್ಯ ಇಲ್ಲದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಪ್ರಮುಖವಾಗಿ ನಮ್ಮ ಅಡುಗೆ ಸಿಬ್ಬಂದಿ ವರ್ಗದವರು ಹಾಗೂ ವಾರ್ಡ್‌ನ್‌ಗಳು ಹಾಸ್ಟೆಲ್‌ ಗಳಲ್ಲಿ ಉತ್ತಮ ಸ್ವಚ್ಚ ಪರಿಸರವನ್ನು ಕಾಪಾಡಬೇಕು. ವಿದ್ಯಾರ್ಥಿಗಳಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಬೇಕು. ಅಡುಗೆ ಸಿಬ್ಬಂದಿ ಅಡುಗೆ ಕೋಣೆಯನ್ನು ಸ್ವಚ್ಚವಾಗಿಟ್ಟುಕೊಂಡು ಮಕ್ಕಳಿಗೆ ಗುಣ ಮಟ್ಟದ ಅಡುಗೆ ತಯಾರಿಸಿಕೊಡಬೇಕು. ವಾರ್ಡನ್‌ಗಳು ತಾಜಾ ತರಕಾರಿ, ಪೌಷ್ಠಿಕಾಂಶದಿಂದ ಕೂಡಿದ ಆಹಾರ ಪದಾರ್ಥಗಳನ್ನು ಒದಗಿಸಿ ಅಡುಗೆ ಸಿಬ್ಬಂದಿಯಿಂದ ಗುಣಮಟ್ಟದ ಅಡುಗೆ ತಯಾರಿಸಿ ವಿದ್ಯಾರ್ಥಿಗಳ ನೀಡುವ ಮೂಲಕ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.


ತಾಲ್ಲೂಕು ಆರೋಗ್ಯ ನಿರೀಕ್ಷಕರಾದ ಸತೀಶ್‌ ಮಾತನಾಡಿ ವಸತಿ ನಿಲಯಗಳಲ್ಲಿ ಪ್ರಮುಖವಾಗಿ ಶುದ್ದ ಕುಡಿಯುವ ನೀರು ಬಳಕೆ ಮಾಡಬೇಕು. ನೀರಿನಿಂದಲೇ ಅನೇಕ ಖಾಯಿಲೆಗಳು ತಗಲುತ್ತಿವೆ. ಇತ್ತೀಚೆಗೆ ಕಲುಷಿತ ನೀರಿನಿಂದ ಸಾವಿನ ಪ್ರಕರಣಗಳು ವರದಿಯಾಗಿರುವ ಕಾರಣ ಆಹಾರ ತಯಾರಿಸಲು ಹಾಗೂ ಕುಡಿಯಲು ಶುದ್ದ ನೀರು ಬಳಕೆ ಮಾಡಬೇಕು. ತರಕಾರಿ, ಸೊಪ್ಪು ಅಡುಗೆಗೆ ಬಳಕೆ ಮಾಡುವ ಮುನ್ನ ಉಪ್ಪು ನೀರಿನಲ್ಲಿ ತೊಳೆದು ನಂತರ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ನೀರು ಒಂದೆಡೆ ವಾರಗಟ್ಟಲೆ ನಿಲ್ಲದಿರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳು ಶುದ್ದ ನೀರಿನಲ್ಲಿ ತೆರೆದ ಸ್ಥಿತಿಯಲ್ಲಿದ್ದ ಪಾತ್ರೆಗಳಲ್ಲಿ, ಪ್ಲಾಸ್ಟಿಕ್‌ ಲೋಟಗಳಲ್ಲಿ, ಕಾಯಿ ಕಂಠಗಳಲ್ಲಿ ಸುಲಭವಾಗಿ ಉತ್ಪತ್ತಿಯಾಗುತ್ತದೆ. ಡೆಂಗ್ಯೂ ಅತ್ಯಂತ ಭಯಾನಕ ಕಾಯಿಲೆಯಾಗಿದೆ. ಇದಕ್ಕೆ ಚಿಕಿತ್ಸೆ ಇರುವುದಿಲ್ಲ. ಆದರೆ ಇದನ್ನು ತಡೆಯುವ ಅವಕಾಶ ನಮ್ಮಲ್ಲಿ ಇರುವುದರಿಂದ ಈ ಬಗ್ಗೆ ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಹಾಗೂ ಹಾಸ್ಟೆಲ್‌ಗಳಲ್ಲಿ ಅಡುಗೆ ಸಿಬ್ಬಂದಿಗೆ, ನಿಲಯ ಪಾಲಕರಿಗೆ ಜಾಗೃತಿ ಮೂಡಿಸುತ್ತಿದೆ. ಇದರ ಸಮರ್ಕಕವಾಗಿ ಬಳಕೆ ಮಾಡಿಕೊಂಡು ಹಾಸ್ಟೆಲ್‌ ನಲ್ಲಿ ಸ್ವಚ್ಚತೆ ಕಾಪಾಡಿಕೊಂಡು ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ಅಡುಗೆ ಸಿಬ್ಬಂದಿಗೆ, ನಿಲಯ ಪಾಲಕರು ಮುಂದಾಗಬೇಕು ಎಂದು ಸತೀಶ್‌ ಸಲಹೆ ನೀಡಿದರು.


ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಕಾರ್ಯಕ್ರಮದಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿವಾಕರ್‌, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ ಆರೋಗ್ಯ ನಿರೀಕ್ಷಕರಾದ ಧರ್ಮೇಂದ್ರ, ಮೂರ್ತಿ, ಮಂಚೇಗೌಡ, ಗ್ರಾ.ಪಂ.ಸದಸ್ಯ ಆರ್.ಶ್ರೀನಿವಾಸ್‌  ಸೇರಿದಂತೆ ಬಿಸಿಎಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಡುಗೆ ಸಿಬ್ಬಂದಿ ವರ್ಗದವರು ಹಾಗೂ ಹಾಸ್ಟೆಲ್ ಗಳ ನಿಲಯ ಪಾಲಕರು ಆರೋಗ್ಯ ಕುರಿತಾದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.


ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಹಾಸ್ಟೆಲ್‌ ವಾರ್ಡನ್‌ ಗಳಿಗೆ ಹಾಗೂ ಅಡುಗೆ ಸಿಬ್ಬಂದಿ ವರ್ಗದವರಿಗೆ ಆಯೋಜಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮವನ್ನು ತಾಲ್ಲೂಕು ಬಿ.ಸಿ.ಎಂ ಅಧಿಕಾರಿ ಎಂ.ಎನ್. ವೆಂಕಟೇಶ್‌ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top