ಮೀನುಗಾರರಿಗೆ ಸುಳ್ಳು ಹೇಳಿ ವಂಚಿಸಿದ ಕಾಂಗ್ರೆಸ್: ಶಾಸಕ ಕಾಮತ್ ಗಂಭೀರ ಆರೋಪ

Upayuktha
0


ಮಂಗಳೂರು: ಮೀನುಗಾರಿಕೆ ಎಂಬುದು ಕರಾವಳಿ ಭಾಗದ ಪ್ರಮುಖ ಜೀವನೋಪಾಯ ಕಾಯಕ. ಮೀನುಗಾರರು ಈ ಭಾಗದ ಅತ್ಯಂತ ಶ್ರಮ ಜೀವಿ ಸಮುದಾಯ. ಸಮುದ್ರದ ಮೀನುಗಾರಿಕೆಯು ಅಪಾಯಕಾರಿ ವೃತ್ತಿಯಾಗಿದ್ದು ಅದನ್ನೇ ಸವಾಲಾಗಿ ಸ್ವೀಕರಿಸಿ ಬದುಕು ನಡೆಸಿಕೊಂಡು ಹೋಗುವವರು ಮೀನುಗಾರರು. ಈ ಸಮುದಾಯಗಳ ಸ್ವಾವಲಂಬಿ ಬದುಕಿಗೆ ಭದ್ರತೆ, ಆರ್ಥಿಕ ಸಹಾಯ, ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರುವುದು ಸರ್ಕಾರಗಳ ಕರ್ತವ್ಯ. ಆ ಮೂಲಕ ಕಡಲ ಮಕ್ಕಳ ಅಭಿವೃದ್ಧಿಗೆ ಎಲ್ಲ ಸರ್ಕಾರಗಳು ಬದ್ಧವಾಗಿರಬೇಕು. ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ಸುಳ್ಳುಗಳನ್ನೇ ಹೇಳುತ್ತ ಮೀನುಗಾರರ ಬದುಕಿಗೆ ಕೊಳ್ಳಿಯಿಡುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಆರೋಪಿಸಿದರು.


ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ಇಂದು (ಅ.7)  ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು., 


ಮೀನುಗಾರರ ಸುಭದ್ರ ಬದುಕಿಗೆ ನಮ್ಮ ಬಿಜೆಪಿ ಸರ್ಕಾರದ ಅವಧಿಯ 2023ರ ಫೆಬ್ರುವರಿ ಬಜೆಟ್ ನಲ್ಲಿ ಕೆಲವು ವಿಶೇಷ ಯೋಜನೆಗಳನ್ನು ಘೋಷಿಸಲಾಗಿತ್ತು. ಅವು ಜಾರಿಯಾಗುವ ಹಂತದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ  2023ರ ಜುಲೈನಲ್ಲಿ ಹೊಸ ಬಜೆಟ್ ಘೋಷಿಸಿತ್ತು. ಆದರೆ ನಮ್ಮ ಸರ್ಕಾರ ಘೋಷಿಸಿದ್ದ ಬಹುತೇಕ ಎಲ್ಲಾ ವಿಶೇಷ ಯೋಜನೆಗಳನ್ನು ಕಡೆಗಣಿಸುವ ಮೂಲಕ ಮೀನುಗಾರರ ಬದುಕಿಗೆ ಹೊಡೆತ ನೀಡಿದ್ದಲ್ಲದೇ, ಇತ್ತೀಚೆಗೆ ಕಾಂಗ್ರೆಸ್ಸಿಗರು ತಮ್ಮ ಸರ್ಕಾರವು 100 ದಿನ ಪೂರೈಸುವಷ್ಟರಲ್ಲಿ ಮೀನುಗಾರರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ಈಡೇರಿಸಿದೆ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಕಾಂಗ್ರೆಸ್ ಸರ್ಕಾರ ಮೀನುಗಾರರ ಭರವಸೆ ಈಡೇರಿಸಿದ್ದು ಅಲ್ಲ, ಬದಲಿಗೆ ಕಡೆಗಣಿಸಿದೆ ಎಂದು ಟೀಕಿಸಿದರು.



ಚುನಾವಣೆಗೆ ಮುನ್ನ ಸುಳ್ಳಿನ ಮಹಾಪೂರವನ್ನೇ ಹರಿಸಿದ ಕಾಂಗ್ರೆಸ್ ರಾಜ್ಯದ ಜನರನ್ನು ವಂಚಿಸಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷದ ರಾಷ್ಟೀಯ ನಾಯಕ ರಾಹುಲ್ ಗಾಂಧಿಯವರು ಚುನಾವಣಾ ಸಂದರ್ಭ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ ಜಿ ಶಂಕರ್‌ ಸಭಾಂಗಣದಲ್ಲಿ ಮೀನುಗಾರರೊಂದಿಗೆ ನಡೆಸಿದ ಸಂವಾದದಲ್ಲಿ ನೀಡಿದ್ದ ಸುಳ್ಳಿನ ಭರಪೂರ ಆಶ್ವಾಸನೆಗಳಲ್ಲಿ ಯಾವ ಭರವಸೆ ತಾನೇ ಈಡೇರಿದೆ ಎಂಬುದನ್ನು ಕಾಂಗ್ರೆಸ್‌ನವರು ತಿಳಿಸಬೇಕು ಎಂದು ಶಾಸಕ ಕಾಮತ್ ಆಗ್ರಹಿಸಿದರು.


ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಬಜೆಟ್‌ ಮತ್ತು ಚುನಾವಣೆ ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಬಜೆಟ್‌ಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದ ಶಾಸಕರು, ಎರಡೂ ದಾಖಲೆಗಳನ್ನು ಮಾಧ್ಯಮ ಪ್ರತಿನಿಧಿಗಳ ಮುಂದಿಟ್ಟು ಆರೋಪಗಳನ್ನು ಸಮರ್ಥಿಸಿಕೊಂಡರು.


ಉಡುಪಿಯಲ್ಲಿ ಮೀನುಗಾರರ ಸಮಾವೇಶ ನಡೆಸಿದ್ದ ರಾಹುಲ್ ಗಾಂಧಿ ಅವರು ನೀಡಿದ್ದ ಭರವಸೆಗಳನ್ನು ಶಾಸಕರು ನೆನಪಿಸಿಕೊಂಡು ಪಟ್ಟಿ ಮಾಡಿದರು. ಅವುಗಳು ಇಂತಿವೆ:

1. ಪ್ರತಿ ಮೀನುಗಾರರಿಗೆ 10 ಲಕ್ಷದ ಇನ್ಸೂರೆನ್ಸ್ ನೀಡುತ್ತೇವೆ.

2. ಪ್ರತಿ ಲೀಟರ್ ಡೀಸೆಲ್‌ಗೆ 25 ರೂ ಸಬ್ಸಿಡಿಯಂತೆ ಪ್ರತಿ ದಿನ 500 ಲೀಟರ್ ಡಿಸೇಲ್ ನೀಡುತ್ತೇವೆ.

3. ನಾವು ಅಧಿಕಾರಕ್ಕೆ ಬಂದ ಕೂಡಲೇ ಡ್ರೆಜ್ಜಿಂಗ್ ಸಮಸ್ಯೆ ಬಗ್ಗೆ ಮೀನುಗಾರರ ಜೊತೆಗೆ ಚರ್ಚಿಸಿ ಪರಿಹಾರ ಕಂಡು ಹಿಡಿಯುತ್ತೇವೆ, ಮತ್ತು ನಾನು ವೈಯಕ್ತಿಕವಾಗಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಇದಕ್ಕೆ ಪರಿಹಾರ ಹುಡುಕುತ್ತೇನೆ.

4. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ MNC ಕಂಪೆನಿಗಳು ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಗಟ್ಟುತ್ತೇವೆ.  

5. ರೈತರು ಭೂಮಿಯಲ್ಲಿ ಕೃಷಿ ಮಾಡುವಂತೆ ಮೀನುಗಾರರು ಸಮುದ್ರದಲ್ಲಿ ಕೃಷಿ ಮಾಡುತ್ತಾರೆ. ರೈತರಿಗೆ ಸಿಗುವ ಸೌಲಭ್ಯಗಳು ಮೀನುಗಾರರಿಗೂ ಸಿಗುವ ವ್ಯವಸ್ಥೆ ಕಲ್ಪಿಸುತ್ತೇವೆ.

6. ಸಮುದ್ರದಲ್ಲಿ ಬೋಟ್ ಮುಳುಗಡೆ, ಡಿಕ್ಕಿ, ಅಥವಾ ಪ್ರಕೃತಿ ವಿಕೋಪದಲ್ಲಿ ಅಪಘಾತವಾಗುವ ಸಂದರ್ಭದಲ್ಲಿ ಉಚಿತ ಸೀ ಅಂಬ್ಯುಲೆನ್ಸ್ ಸೌಲಭ್ಯ ಒದಗಿಸುತ್ತೇವೆ.


ಇವೆಲ್ಲ ರಾಹುಲ್ ಗಾಂಧಿಯವರ ಸುಳ್ಳಿನ ಭರವಸೆಯಾದರೆ ರಾಜ್ಯ ಕಾಂಗ್ರೆಸ್‌ ಸರ್ಕಾರವಂತೂ ತನ್ನ ಮೊದಲ ಬಜೆಟ್‌ನಲ್ಲಿ ಮೀನುಗಾರ ಮಹಿಳೆಯರಿಗೆ ರೂ.3 ಲಕ್ಷ ತನಕ ಬಡ್ಡಿ ರಹಿತ ಸಾಲ ಘೋಷಿಸಿ ಇವತ್ತಿನವರೆಗೂ ಅದನ್ನು ಜಾರಿಗೊಳಿಸಿಲ್ಲ. ಇದು ಕೇವಲ ಬಜೆಟ್‌ ನ ಘೋಷಣೆಯಾಗಿ ಕಡತದಲ್ಲೇ ಉಳಿದಿದ್ದು ಇದುವರೆಗೂ ಕರಾವಳಿಯ ಒಬ್ಬೇ ಒಬ್ಬ ಮೀನುಗಾರ ಮಹಿಳೆಯೂ ಈ ಯೋಜನೆಯ ಫಲಾನುಭವಿಯಾಗಿಲ್ಲ ಎಂದು ಶಾಸಕ ಕಾಮತ್ ಹೇಳಿದರು.


ಇವೆಲ್ಲ ಭರವಸೆ ಈಡೇರಿದೆಯೇ? ಅಷ್ಟಕ್ಕೂ ಕಾಂಗ್ರೆಸ್ ಸರ್ಕಾರ ತನ್ನ ಬಜೆಟ್‌ನಲ್ಲಿ ಮೀನುಗಾರರ ಬದುಕಿಗೆ ಉಪಯೋಗವಾಗುವ ಯಾವ ಹೊಸ ಯೋಜನೆಗಳನ್ನು ಘೋಷಿಸಿದೆ? ನಮ್ಮ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳನ್ನೇ ಮುಂದುವರಿಸಿದ್ದು ಅಥವಾ ಮೀನುಗಾರರಿಗೆ ಅಗತ್ಯವಾಗಿದ್ದ ನಮ್ಮ ಸರ್ಕಾರದ ಯೋಜನೆಗಳಿಗೆ ಅನುದಾನ ನೀಡದೇ ಕಡೆಗಣಿಸಿದ್ದು ಇದಿಷ್ಟು ಮಾತ್ರ ಕಾಂಗ್ರೆಸ್ ಸರಕಾರ ಸಾಧನೆಯಾಗಿದೆ ಎಂದು ಟೀಕಿಸಿದರು.


ಮತ್ಸ್ಯ ಸಂಪದ ಅಡಿ ಕಳೆದ 3 ವರ್ಷಗಳಲ್ಲಿ 16 ಕೋಟಿ 77 ಲಕ್ಷ ಸಬ್ಸಿಡಿ:

ಹಾಗೆ ನೋಡಿದರೆ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ಮೂರು ವರ್ಷಗಳ ಅವಧಿಯಲ್ಲಿ ಇದುವರೆಗೂ 16 ಕೋಟಿ 77 ಲಕ್ಷ ಸಬ್ಸಿಡಿ ದೊರೆತಿದೆ. ಅದರಲ್ಲಿ ಮೀನು ಮಾರಾಟಕ್ಕೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಖರೀದಿ, ಹೊಸ ಮಂಜುಗಡ್ಡೆ ಸ್ಥಾವರ ನಿರ್ಮಾಣಕ್ಕೆ ಹಾಗೂ ಹಳೆಯ ಮಂಜುಗಡ್ಡೆ ಸ್ಥಾವರಗಳ ಆಧುನೀಕರಣಕ್ಕೆ, ಆಳ ಸಮುದ್ರ ಮೀನುಗಾರಿಕೆ ದೋಣಿ ಖರೀದಿಗೆ, ಶಾಖ ನಿರೋಧಕ ವಾಹನ (ರೆಫ್ರಿಜರೇಟರ್ ವೆಹಿಕಲ್), F.R.P. ನಾಡದೋಣಿ ಖರೀದಿಗೆ, ಸಂವಹನ ಸಾಧನಗಳಿಗೆ, ಸುರಕ್ಷಾ ಸಾಧನೆಗಳಿಗೆ, ಹೀಗೆ ಹತ್ತು ಹಲವು ಯೋಜನೆಗಳಿಗೆ ಈ ಸಬ್ಸಿಡಿಯು ಉಪಯೋಗವಾಗಿದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮೀನುಗಾರರ ಬಗ್ಗೆ ಇರುವ ಬದ್ಧತೆಗೆ ಸಾಕ್ಷಿ ಎಂದು ಕಾಮತ್ ನುಡಿದರು.


ಇನ್ನು ರಾಜ್ಯದಲ್ಲಿ ನಮ್ಮ ಸರ್ಕಾರದ ಅವಧಿಯ ಬಜೆಟ್ ಹಾಗೂ ಕಾಂಗ್ರೆಸ್ ಸರ್ಕಾರದ ಬಜೆಟನ್ನು ಹೋಲಿಸಿ ನೋಡಿದರೆ ಮೀನುಗಾರ ಸಮುದಾಯಕ್ಕೆ ಬಿಜೆಪಿ ನೀಡಿದ ಕೊಡುಗೆ ಏನು? ಕಾಂಗ್ರೆಸ್ ಮಾಡಿದ ಅನ್ಯಾಯವೇನು? ಎಂಬುದು ಅರಿವಾಗುತ್ತದೆ.


ಬಿಜೆಪಿ ಸರಕಾರದ ಬದ್ಧತೆ ಹಾಗೂ ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷಕ್ಕೆ ಸಾಕ್ಷಿ ಈ ಬಜೆಟ್‌:

ನಮ್ಮ ಬಜೆಟ್ ನಲ್ಲಿ ನಾಡದೋಣಿ ಮೀನುಗಾರರಿಗೆ ಪೆಟ್ರೋಲ್/ ಡೀಸೆಲ್ ಚಾಲಿತ ಇಂಜಿನ್ ಗಳ ಖರೀದಿಗೆ 50 ಸಾವಿರ ಸಹಾಯಧನ ನೀಡುವ ಕಾರ್ಯಕ್ರಮಕ್ಕೆ 40 ಕೋಟಿ ಅನುದಾನ ನಿಗದಿಪಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರದ ಬಜೆಟ್ ನಲ್ಲಿ ಈ ಹಿಂದಿನ 40 ಕೋಟಿಯಲ್ಲಿ 20 ಕೋಟಿ ಕಡಿತಗೊಳಿಸಿ ಉಳಿದ 20 ಕೋಟಿಯನ್ನು ಮಾತ್ರ ನೀಡಲಾಗಿದೆ. 


ನಮ್ಮ ಬಜೆಟ್‌ನಲ್ಲಿ ಮೀನುಗಾರರ ಹಾಗೂ ಅವರ ದೋಣಿಗಳ ಸುರಕ್ಷತಾ ದೃಷ್ಟಿಯಿಂದ ಇಸ್ರೋ ನಿರ್ಮಿತ ಜಿಪಿಎಸ್ ಸಂವಹನ ವ್ಯವಸ್ಥೆಯನ್ನು ಎಲ್ಲಾ ಯಾಂತ್ರೀಕೃತ ದೋಣಿಗಳಲ್ಲಿ ಅಳವಡಿಸಿ ಆಳ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ದೋಣಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವ ಯೋಜನೆಗೆ 17 ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರದ ಬಜೆಟ್ ನಲ್ಲಿ ಈ ಯೋಜನೆಗೆ ಯಾವುದೇ ಅನುದಾನ ಒದಗಿಸದೇ ಮೀನುಗಾರರ ಸುರಕ್ಷತೆಯನ್ನೇ ಕಡೆಗಣಿಸಿದ್ದು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.


ನಮ್ಮ ಬಜೆಟ್ ನಲ್ಲಿ ಮೀನುಗಾರರ ದೋಣಿಗಳಿಗಾಗಿ ರಿಯಾಯಿತಿ ದರದಲ್ಲಿ ನೀಡುತ್ತಿದ್ದ ಡೀಸೆಲ್ ಮಿತಿಯನ್ನು ಒಂದೂವರೆ ಲಕ್ಷ ಕಿಲೋ ಲೀಟರ್ ಗಳಿಂದ 2 ಲಕ್ಷ ಕಿಲೋ ಲೀಟರ್ ಗಳವರೆಗೆ ಹೆಚ್ಚಿಸಲಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರಕಾರ ಅದೇ ಯೋಜನೆಯನ್ನು ಮುಂದುವರಿಸಿದೆ ಹೊರತು ಯಾವುದೇ ಹೆಚ್ಚುವರಿ ಅನುದಾನ ನೀಡಿಲ್ಲ.


ಮತ್ಸ್ಯಾಶ್ರಯ ಯೋಜನೆಯಡಿಯಲ್ಲಿ ವಸತಿ ರಹಿತ ಮೀನುಗಾರರಿಗೆ ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿತ್ತು. ಕಾಂಗ್ರೆಸ್ ಸರಕಾರದಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾವನೆಯೇ ಇಲ್ಲ.


ನಮ್ಮ ಬಜೆಟ್‌ನಲ್ಲಿ ಮೀನಿನ ಸಂತತಿ ಕ್ಷೀಣಿಸುತ್ತಿರುವುದರಿಂದಾಗಿ ಬಲಿತ ಬಿತ್ತನೆ ಮೀನು ಮರಿಗಳನ್ನು ಕೆರೆ ಹಾಗೂ ಹಿನ್ನೀರು ಪ್ರದೇಶದಲ್ಲಿ ಬಿತ್ತನೆ ಮಾಡುವ ಯೋಜನೆಗೆ 20 ಕೋಟಿ ಅನುದಾನವನ್ನು ಒದಗಿಸಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರದ ಬಜೆಟ್ ನಲ್ಲಿ ಈ ಯೋಜನೆಗೆ ಯಾವುದೇ ಅನುದಾನ ಒದಗಿಸದೇ ಸಂಪೂರ್ಣವಾಗಿ ಕಡೆಗಣಿಸಲಾಗಿದೆ.


ನಮ್ಮ ಬಜೆಟ್ ನಲ್ಲಿ ಸಿಗಡಿ ಉತ್ಪನ್ನಗಳ ರಫ್ತು ಪ್ರೋತ್ಸಾಹಿಸಲು ಕೇಂದ್ರ ಆಯವ್ಯಯದಲ್ಲಿ ರಫ್ತು ಸುಂಕವನ್ನು ಕಡಿಮೆ ಮಾಡಿ, ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ರಾಯಚೂರು, ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸಿಗಡಿ ಕೃಷಿ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುವ ಬಗ್ಗೆ ಯೋಜನೆ ಮಾಡಲಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಬಜೆಟ್‌ನಲ್ಲಿ ಈ ಅಂಶವನ್ನು ಕಡೆಗಣಿಸಲಾಗಿದೆ.


ಅಲ್ಲದೇ ಪ್ರಸ್ತುತ ಕೇಂದ್ರ ಬಿಜೆಪಿ ಸರ್ಕಾರದ ನೂತನ ಯೋಜನೆಯಾದ "ಪಿ.ಎಂ ವಿಶ್ವಕರ್ಮ" ಅಡಿಯಲ್ಲಿ ಮೀನುಗಾರರಿಗೆ ದೋಣಿ ನಿರ್ಮಾಣ ಮತ್ತು ಮೀನುಗಾರಿಕಾ ಬಲೆಗೆ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ಘೋಷಣೆಯಾಗಿದ್ದು ಸದ್ಯದಲ್ಲೇ ಜಾರಿಯಾಗಲಿದೆ.


ಇನ್ನು ರಾಜ್ಯದ 8 ಮೀನುಗಾರಿಕೆ ಬಂದರುಗಳ ನ್ಯಾವಿಗೇಶನ್ ಚಾನೆಲ್‌ಗಳಲ್ಲಿ ಮೀನುಗಾರಿಕೆ ದೋಣಿಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಹೂಳೆತ್ತುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 20 ಕೋಟಿ ಅದರಲ್ಲೂ ಮಂಗಳೂರಿಗೆ 3.9 ಕೋಟಿಯನ್ನು ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಂಜೂರು ಮಾಡಿ ಆಡಳಿತಾತ್ಮಕ ಅನುಮೋದನೆಯನ್ನೂ ಪಡೆಯಲಾಗಿತ್ತು.   ನ್ಯಾಯಾಲಯದ ದಾವೆಗೆ ಸಂಬಂಧಿಸಿ ಕಾಮಗಾರಿ ವಿಳಂಬವಾಗಿ, ನಂತರ ಜೂನ್‌ನಲ್ಲಿ ಕಾರ್ಯಾದೇಶವಾಗಿತ್ತು. ಆಗ ಮಳೆಗಾಲವಾದ್ದರಿಂದ ಸೆಪ್ಟೆಂಬರ್‌ ನಂತರ ಕಾಮಗಾರಿ ಆರಂಭವಾಗಲಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಬಜೆಟ್ ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವನ್ನೇ ಮಾಡದೇ ಕಡೆಗಣಿಸಿದ್ದಲ್ಲದೇ 'ಹೂಳೆತ್ತುವ ಕಾಮಗಾರಿಗೆ 3.9 ಕೋಟಿಯನ್ನು ಮಂಜೂರು ಮಾಡಿದ್ದೇವೆ. ಶೀಘ್ರದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲಿದ್ದೇವೆ' ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.


ಒಟ್ಟಾರೆಯಾಗಿ ಮೀನುಗಾರ ಸಮುದಾಯಕ್ಕೆ ಯಾವುದೇ ಹೊಸ ಯೋಜನೆಗಳನ್ನು ನೀಡದೇ ಕೇವಲ ನಮ್ಮ ಸರ್ಕಾರದ ಯೋಜನೆಗಳನ್ನೇ ಮುಂದುವರಿಸಿದ್ದು ಹಾಗೂ ಮೀನುಗಾರರ ಸುರಕ್ಷತೆ ಹಾಗೂ ಆರ್ಥಿಕ ಭದ್ರತೆಯಂತಹ ಅತ್ಯುತ್ತಮ ಯೋಜನೆಗಳಿಗೆ ಅನುದಾನ ಒದಗಿಸದೇ ಅವರ ಬದುಕನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಸರಕಾರ ಸಾಧನೆ. ಇವೆಲ್ಲದರ ಸಮಗ್ರ ಚಿತ್ರಣ ದಾಖಲೆಗಳ ಸಮೇತ ಎಲ್ಲರ ಮುಂದೆ ಇದೆ. ಯಾರು ಬೇಕಾದರೂ ಇದನ್ನು ಪರಾಮರ್ಶೆ ನಡೆಸಿ ನೋಡಬಹುದು.


ಎಲ್ಲಾ ಸವಲತ್ತುಗಳಿಂದಲೂ ಮೀನುಗಾರರನ್ನು ಕಡೆಗಣಿಸಿ ಈಗ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದರೆ ಇದಕ್ಕಿಂತ ಹಾಸ್ಯಾಸ್ಪದ ಇನ್ನೇನು ಇರಲು ಸಾಧ್ಯ? ಅಷ್ಟಕ್ಕೂ ಇವರ ಸುಳ್ಳನ್ನು ಯಾರೂ ಸಹ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಇದು ಬುದ್ಧಿವಂತರ ಜಿಲ್ಲೆ ಎಂದು ಶಾಸಕರು ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top