ಕಳೆದ 40 ವರ್ಷಗಳಿಂದ ಕೌಟುಂಬಿಕ ಪತ್ರಿಕೆಯಾಗಿ ಜನಪ್ರಿಯವಾಗಿದ್ದ ಕನ್ನಡದ ಸಾಪ್ತಾಹಿಕ ನಿಯತಕಾಲಿಕ ಮಂಗಳ ಇನ್ನು ಮುಂದೆ ಪ್ರಕಟವಾಗುವುದಿಲ್ಲ. ಹೌದು, ಈ ಬಗ್ಗೆ ಪತ್ರಿಕೆಯ ಕೊನೆಯ ಸಂಚಿಕೆಯಲ್ಲಿ ಪ್ರಕಟಣೆ ನೀಡಲಾಗಿದ್ದು, ಮುದ್ರಣ ವೆಚ್ಚ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಪತ್ರಿಕೆ ಸ್ಥಗಿತಗೊಳಿಸುವ ಅನಿವಾರ್ಯತೆಯ ಬಗ್ಗೆ ಬರೆಯಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಲೋಕದಲ್ಲಿ ಆಗಿರುವ ಅಪಾರ ಬದಲಾವಣೆಗಳು, ತಂತ್ರಜ್ಞಾನಗಳ ಬೆಳವಣಿಗೆಗಳಿಂದ ಸಾಂಪ್ರದಾಯಿಕ ಮುದ್ರಣ ಮಾಧ್ಯಮಕ್ಕೆ ಗಂಭೀರ ಸವಾಲು ಎದುರಾಗಿದೆ.
ಕನ್ನಡ ಪತ್ರಿಕಾಲೋಕಕ್ಕೆ ಅದೆಷ್ಟೋ ಹೊಸ ಲೇಖಕರನ್ನು ಪರಿಚಯಿಸಿ, ಬೆಳೆಸಿದ ಉತ್ತಮ, ಸದಭಿರುಚಿಯ ಕೌಟುಂಬಿಕ ಓದುಗ ವರ್ಗವೊಂದನ್ನು ಸೃಷ್ಟಿಸಿದ ಮಂಗಳ ವಾರ ಪತ್ರಿಕೆ ತನ್ನ ಅಸ್ತಿತ್ವಕ್ಕೆ ಮಂಗಳ ಹಾಡಿದೆ. ಮುಂದೆ ಡಿಜಿಟಲ್ ಸ್ವರೂಪದಲ್ಲಿ ಮರಳಿ ಬರುವುದೇ ಎಂಬ ಬಗ್ಗೆ ಸದ್ಯಕ್ಕಂತೂ ಸ್ಪಷ್ಟ ಮಾಹಿತಿ ಇಲ್ಲ.
ಪತ್ರಿಕೆಯ ಸಂಪಾದಕರಾಗಿ ಹಲವು ವರ್ಷಗಳಿಂದ ಪತ್ರಿಕೆಯನ್ನು ಕಟ್ಟಿ ಬೆಳೆಸಿದ ನರೇಂದ್ರ ಪಾರೆಕಟ್ಟ ಅವರನ್ನು ಸಂಪರ್ಕಿಸಿ ಉಪಯುಕ್ತ ನ್ಯೂಸ್ ಮಾತನಾಡಿಸಿದಾಗ, ಮಾಧ್ಯಮ ರಂಗ ಎದುರಿಸುತ್ತಿರುವ ಹಲವು ಸವಾಲುಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ಹಂಚಿಕೊಂಡರು.
ಏನೇ ಇರಲಿ, ಡಿಜಿಟಲ್ ಮಾಧ್ಯಮಗಳು ಬಹಳಷ್ಟು ದೊಡ್ಡ ಸಂಖ್ಯೆಯಲ್ಲಿ ಹುಟ್ಟಿಕೊಂಡು ನಾನಾ ಅಭಿರುಚಿಯ ಓದುಗರನ್ನು ವೈವಿಧ್ಯಮಯ ಕಂಟೆಂಟ್‌ಗಳಿಂದ ತೃಪ್ತಿಪಡಿಸುತ್ತಿದ್ದರೂ ಆದಾಯದ ದೃಷ್ಟಿಯಿಂದ ನಿರೀಕ್ಷಿತ ಬೆಳವಣಿಗೆ ಇನ್ನೂ ಸಾಧಿಸಿಲ್ಲ. ಕ್ಷಿಪ್ರ ಮತ್ತು ವ್ಯಾಪಕವಾದ ತಲುಪುವಿಕೆ (ರೀಚ್) ಹಾಗೂ ಪರಿಣಾಮದ (ಇಂಪ್ಯಾಕ್ಟ್) ದೃಷ್ಟಿಯಿಂದ ಡಿಜಿಟಲ್ ಮಾಧ್ಯಮಗಳು ಸಾಂಪ್ರದಾಯಿಕ ಮುದ್ರಣ ಮಾಧ್ಯಮಗಳಿಗೆ ಬಹುದೊಡ್ಡ ಸವಾಲನ್ನು ಒಡ್ಡಿವೆ. ಅದರ ಜತೆಗೆ ಮುದ್ರಣ ವೆಚ್ಚವೂ ವಿಪರೀತವಾಗಿ ಏರಿದೆ.
ಮುಂಚೂಣಿಯಲ್ಲಿರುವ ಮುದ್ರಣ ಮಾಧ್ಯಮಗಳು ಭೌತಿಕವಾಗಿ ಪ್ರಸರಣ ಮತ್ತು ಓದುಗರ ಸಂಖ್ಯೆಯಲ್ಲಿ ಕುಸಿದಿದ್ದರೂ ಮಾರುಕಟ್ಟೆಯಲ್ಲಿರುವ ಕೆಲವು ಮಧ್ಯವರ್ತಿ ಶಕ್ತಿಗಳ ಕೈಚಳಕದಿಂದ ಜಾಹೀರಾತು ಆದಾಯ ಮಾತ್ರ ಈಗಲೂ ಅಲ್ಲಿಗೇ ಹರಿಯುತ್ತಿರುವುದು ಡಿಜಿಟಲ್ ಮಾಧ್ಯಮಗಳಿರುವ ಸವಾಲಾಗಿದೆ.
ಏನೇ ಇರಲಿ, ದಶಕಗಳಿಂದ ಓದುಗರ ಹಸಿವನ್ನು ತಣಿಸುತ್ತಿದ್ದ ಜನಪ್ರಿಯ ಮಾಧ್ಯಮವೊಂದು ಪ್ರಕಟಣೆ ನಿಲ್ಲಿಸುತ್ತದೆ ಎಂದಾದರೆ ಅದು ಎಲ್ಲ ಮುದ್ರಣ ಮಾಧ್ಯಮಗಳಿಗೂ ಎಚ್ಚರಿಕೆಯ ಗಂಟೆಯೇ ಆಗಿದೆ.
ಈಗ ಕನ್ನಡ ಪತ್ರಿಕೋದ್ಯಮ ರಂಗದಲ್ಲಿ ಉದಯೋನ್ಮುಖರಾಗಿರುವವರು ಮತ್ತು ಎರಡು ತಲೆಮಾರಿನ ಪತ್ರಕರ್ತರೆಲ್ಲ ಮಂಗಳ, ಬಾಲಮಂಗಳ ಪತ್ರಿಕೆಗಳನ್ನು ಓದಿಯೇ ಬೆಳೆದವರಾಗಿರುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಮಂಗಳ ತನ್ನ ಪ್ರಕಟಣೆಯನ್ನು ನಿಲ್ಲಿಸುವುದರೊಂದಿಗೆ ಒಂದು ಆಪ್ತವಾದ ಅಧ್ಯಾಯ ಕೊನೆಗೊಂಡಿದೆ. ಪತ್ರಿಕೆ ಹೊಸ ಸ್ವರೂಪದಲ್ಲಿ ಮತ್ತೆ ಬರಲಿ ಎಂಬ ಆಶಯದೊಂದಿಗೆ ವಿದಾಯ ಕೋರುವುದು ಅನಿವಾರ್ಯವಾಗಿದೆ.
- ಚಂದ್ರಶೇಖರ ಕುಳಮರ್ವ,
ಸಂಪಾದಕ, ಉಪಯುಕ್ತ ನ್ಯೂಸ್ ಡಿಜಿಟಲ್ ಮಾಧ್ಯಮ ಬಳಗ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ