ಸಾಂಧರ್ಬಿಕ ಚಿತ್ರ
ಶ್ರಾದ್ಧವನ್ನು ಏಕೆ ಮಾಡಬೇಕು? ಮತ್ತು ಅದರ ಮಹತ್ವವೇನು?
‘ಶ್ರಾದ್ಧ’ಎಂದು ಹೇಳಿದೊಡನೆ ಇಂದಿನ ವಿಜ್ಞಾನಯುಗದ ಯುವಪೀಳಿಗೆಯ ಮನಸ್ಸಿನಲ್ಲಿ ‘ಅಶಾಸ್ತ್ರೀಯ ಮತ್ತು ಅವಾಸ್ತವ ಕರ್ಮಕಾಂಡದ ಆಡಂಬರ’ ಎಂಬ ತಪ್ಪುಕಲ್ಪನೆಯು ಮೂಡುತ್ತದೆ. ಧರ್ಮಶಿಕ್ಷಣದ ಅಭಾವ, ಅಧ್ಯಾತ್ಮವನ್ನು ಅರ್ಥಮಾಡಿಕೊಳ್ಳುವಲ್ಲಿನ ಅನಾಸಕ್ತಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಧರ್ಮದ್ರೋಹಿ ಸಂಘಟನೆಗಳಿಂದ ಹಿಂದೂ ಧರ್ಮದ ರೂಢಿ-ಪರಂಪರೆಗಳ ಮೇಲೆ ಸತತವಾಗಿ ಆಗುತ್ತಿರುವ ದ್ವೇಷಪೂರ್ವಕ ಟೀಕೆ ಇತ್ಯಾದಿಗಳಿಂದ ಈ ಪರಿಣಾಮವಾಗಿದೆ. ಶ್ರಾದ್ಧದ ವಿಷಯದಲ್ಲಿ ಮುಂದಿನ ವಿಚಾರಸರಣಿಯು ಸಮಾಜದಲ್ಲಿ ಕಂಡುಬರುತ್ತದೆ. ಪೂಜೆ ಅರ್ಚನೆ, ಶ್ರಾದ್ಧಪಕ್ಷ ಮುಂತಾದವುಗಳ ಮೇಲೆ ವಿಶ್ವಾಸವನ್ನಿಡದ ಅಥವಾ ಸಮಾಜಕಾರ್ಯವೇ ಸರ್ವ ಶ್ರೇಷ್ಠವಾಗಿದೆ ಎಂದು ಹೇಳುವವರು ಪಿತೃಗಳಿಗಾಗಿ ಶ್ರಾದ್ಧವಿಧಿಗಳನ್ನು ಮಾಡದೇ ಅದರ ಬದಲು, ‘ಬಡವರಿಗೆ ಅನ್ನದಾನ ಮಾಡುವೆವು ಅಥವಾ ಶಾಲೆಗಳಿಗೆ ಸಹಾಯ ಮಾಡುವೆವು’ ಎಂದು ಹೇಳುತ್ತಾರೆ! ಅನೇಕ ಜನರು ಇದೇ ರೀತಿ ಮಾಡುತ್ತಾರೆ! ಹೀಗೆ ಮಾಡುವುದೆಂದರೆ, ‘ಒಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡದೇ, ಅದರ ಬದಲು ನಾವು ಬಡವರಿಗೆ ಅನ್ನದಾನ ಮಾಡುವೆವು, ಶಾಲೆಗೆ ಸಹಾಯ ಮಾಡುವೆವು’ ಎಂದು ಹೇಳಿದಂತೆಯೇ ಆಗಿದೆ. ಶ್ರಾದ್ಧದಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವಂತಹ ಸೂಕ್ಷ್ಮಶಕ್ತಿಯು ಒಳಗೊಂಡಿರುತ್ತದೆ; ಅದರಿಂದಾಗಿ ಪಿತೃಗಳಿಗೆ ಗತಿ ಸಿಗಲು ಸಾಧ್ಯವಾಗುತ್ತದೆ. ಹಾಗಾಗಿ ಮೇಲಿನ ಹೇಳಿಕೆಗಳು ಹಾಸ್ಯಾಸ್ಪದ ವೆನಿಸಿಕೊಳ್ಳುತ್ತವೆ.
ಹಿಂದೂಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು’ ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ‘ಶ್ರಾದ್ಧಕರ್ಮ’ವು ಆವಶ್ಯಕವಾಗಿದೆ. ತಂದೆತಾಯಿ ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಬೇಕೆಂದು ಮಾಡಬೇಕಾದ ಸಂಸ್ಕಾರಕ್ಕೆ ‘ಶ್ರಾದ್ಧ’ ಎನ್ನುತ್ತಾರೆ. ಶ್ರಾದ್ಧಕರ್ಮಗಳಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವ ಸೂಕ್ಷ್ಮಶಕ್ತಿ ಇದೆ. ಶ್ರಾದ್ಧಕರ್ಮಗಳಲ್ಲಿ ಪಿತೃಗಳಿಗೆ ಹವಿರ್ಭಾಗವನ್ನು ಕೊಡುವುದರಿಂದ ಅವರು ಸಂತುಷ್ಟರಾಗುತ್ತಾರೆ. ಶ್ರಾದ್ಧವನ್ನು ಮಾಡದಿದ್ದರೆ ಪಿತೃಗಳ ಆಸೆಗಳು ಅತೃಪ್ತವಾಗಿ ಉಳಿಯುತ್ತವೆ ಮತ್ತು ಈ ವಾಸನಾಯುಕ್ತ ಪಿತೃಗಳು ದುಷ್ಟ ಶಕ್ತಿಗಳ ಅಧೀನಕ್ಕೊಳಪಟ್ಟು ಅವರ ಗುಲಾಮರಾಗುತ್ತಾರೆ. ದುಷ್ಟ ಶಕ್ತಿಗಳು ವಾಸನಾಯುಕ್ತ ಪಿತೃಗಳ ಮೂಲಕ ಕುಟುಂಬದವರಿಗೆ ತೊಂದರೆಗಳನ್ನು ಕೊಡುವ ಸಂಭವವೂ ಇರುತ್ತದೆ. ಶ್ರಾದ್ಧವನ್ನು ಮಾಡುವುದರಿಂದ ಪಿತೃಗಳು ಆ ತೊಂದರೆಗಳಿಂದ ಮುಕ್ತರಾಗುವುದಲ್ಲದೇ ನಮ್ಮ ಜೀವನವೂ ಸುಖಮಯವಾಗುತ್ತದೆ.
ಶ್ರಾದ್ಧಕ್ಕೆ ಇಷ್ಟೊಂದು ಮಹತ್ವವಿದ್ದರೂ ಇಂದು ಹಿಂದೂಗಳಲ್ಲಿರುವ ಧರ್ಮಶಿಕ್ಷಣದ ಅಭಾವ, ಅಧ್ಯಾತ್ಮಶಾಸ್ತ್ರದ ಮೇಲಿನ ಅವಿಶ್ವಾಸ, ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಇತ್ಯಾದಿಗಳಿಂದ ಶ್ರಾದ್ಧವಿಧಿಯು ಅಲಕ್ಷಿಸಲ್ಪಟ್ಟಿದೆ. ಶ್ರಾದ್ಧಕರ್ಮವನ್ನು ವಾಸ್ತವವಿಲ್ಲದ ಅಯೋಗ್ಯ ಕರ್ಮಕಾಂಡವೆಂದು ಪರಿಗಣಿಸಲ್ಪಡುತ್ತ್ತಿದೆ. ಆದುದರಿಂದ ಶ್ರಾದ್ಧ ಸಂಸ್ಕಾರವೂ ಇತರ ಸಂಸ್ಕಾರಗಳಷ್ಟೇ ಆವಶ್ಯಕವಾಗಿದೆ ಎಂಬುದನ್ನು ಹೇಳುವುದು ಆವಶ್ಯಕವಾಗಿದೆ.
ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ?
ದರ್ಬೆ, ಕುಶ, ಬರ್ಹಿ, ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು. ಒಮ್ಮೆ ಗರುಡನು ತನ್ನ ತಾಯಿಯಾದ ವಿನುತೆಗೆ, ಸರ್ಪಗಳ ತಾಯಿಯಾದ ಕದೃವಿನಿಂದ ಮುಕ್ತಿ ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ಸ್ನಾನ ಮಾಡಿ ಶುದ್ಧವಾಗಿ ಬರಲು ಹೇಳುತ್ತಾನೆ. ಮತ್ತು ಆ ಸರ್ಪಗಳು ಪುನಃ: ಬರುವವರೆಗೂ ಅಮೃತವನ್ನು ದರ್ಬೆಮೇಲೆ ಇಟ್ಟಿರುತ್ತಾನೆ. ಅಷ್ಟರಲ್ಲಿ ದೇವೇಂದ್ರನು ಬಂದು ಅಮೃತವನ್ನು ಹೊತ್ತುಕೊಂಡು ಹೋಗುವಾಗ ಅಮೃತದ ಒಂದು ಬಿಂದು ದರ್ಬೆಯ ಮೇಲೆ ಬೀಳುತ್ತದೆ. ಆದ್ದರಿಂದ ದರ್ಬೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ.
ಶ್ರಾದ್ಧದಲ್ಲಿ ಒಟ್ಟು 5 ಪವಿತ್ರಗಳ ಧಾರಣೆ ಇದೆ.
1. ಆರಂಭದಲ್ಲಿ 1 ಪವಿತ್ರ ಧಾರಣೆ, ಪಾದಪ್ರಕ್ಷಾಲನ ನಂತರ ವಿಸರ್ಜನೆ.
2. ಪಾದ ಪ್ರಕ್ಷಾಲನ ಬಳಿಕ ಮತ್ತೊಂದು ಪವಿತ್ರ ಧಾರಣೆ. ಪಿಂಡ ಆಘ್ರಾಣದ ತರುವಾಯ ವಿಸರ್ಜನೆ.
3. ಆಘ್ರಾಣವಾದ ಮೇಲೆ ಇನ್ನೊಂದು ಪವಿತ್ರ ಧಾರಣೆ ಉಚ್ಚಷ್ಟ ಪಿಂಡ ಪ್ರದಾನ ನಂತರ ವಿಸರ್ಜನೆ
4. ಉಚ್ಚಷ್ಟ ಪಿಂಡ ಪ್ರದಾನ ನಂತರ ಮತ್ತೊಂದು ಪವಿತ್ರ ಧಾರಣೆ ಇದು ಶ್ರಾದ್ಧಾಂತ್ಯದಲ್ಲಿ ವಿಸರ್ಜನೆ.
5. ಕೃಷ್ಣಾರ್ಪಣ ನಂತರ ಇನ್ನೊಂದು ಪವಿತ್ರ ಧಾರಣೆ ಅದು ಪರಿಹನಿ ತರ್ಪಣ ನಂತರ ವಿಸರ್ಜನೆ.
" ದೇವ ಯಾನ ಮತ್ತು ಪಿತೃಯಾನ ಮಾರ್ಗ"
ನೈನಂ ಛಿ೦ದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ।ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ।। - ಗೀತೆ - 2 / 23
ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು. ಅಗ್ನಿಯು ಸುಡಲಾರದು. ನೀರು ನೆನಿಸಲಾರದು. ಗಾಳಿ ವಣಿಗಿಸಲಾರದು. ಈ ಮಾರ್ಗದಲ್ಲಿ " ಅಗ್ನಿ " ಅಥವಾ " ಅರ್ಚಿ " ಯು ಮೊದಲನೇಯನಾದುದರಿಂದ ಆ ಮಾರ್ಗವನ್ನು " ಅರ್ಚಿರಾದಿ ಮಾರ್ಗ " ಎಂದು ಕರೆಯುತ್ತಾರೆ. ಇದರ ವಿವರಣೆಯನ್ನು....
ಭಗವದ್ಗೀತೆಯಲ್ಲಿ....
1. ಮುಮುಕ್ಷುಗಳಾದರೋ ಈ ರೀತಿ ಅತಿವಾಹಿಕರಿಂದ ತರಲ್ಪಟ್ಟ ರಥಗಳಲ್ಲಿ ಪ್ರಯಾಣ ಮಾಡಿ ಯಮಪುರಿಗೆ ಹೋಗದಂತೆಯೇ ವಿಷ್ಣುವಿನ ಸ್ಥಾನವಾದ " ಪರಮಪದ " ಕ್ಕೆ ಹೋಗಿ ಸೇರುತ್ತಾನೆ.
2. ಧರ್ಮ - ಅರ್ಥ - ಕಾಮ - ಮೋಕ್ಷಗಳೆಂಬ 4 ಪುರುಷಾರ್ಥಗಳನ್ನು ಸೇವಿಸುವವರಲ್ಲಿ, ಯಜ್ಞ ಯಾಗಗಳನ್ನು ಮಾಡಿ ಧರ್ಮ ಮಾರ್ಗದಲ್ಲಿ ತೊಡಗಿರುವವರೋ, ಹಣದಿಂದ ವಿಶೇಷವಾದ ದಾನ ಧರ್ಮಗಳು ಮಾಡಿದವರೂ ದೇಹಾವಸಾನದಲ್ಲಿ ಹಂಸಯುಕ್ತ ವಿಮಾನದಲ್ಲಿಯೂ;
3. ಇತರರಿಗೆ ಇಷ್ಟಾರ್ಥಗಳನ್ನು ಪೂರೈಸಿ ಕೊಡುವುದರೊಡನೆ ಧರ್ಮಕ್ಕೆ ವಿರುದ್ಧವಲ್ಲದ ರೀತಿಯಲ್ಲಿ ಕಾಮವನ್ನು ಸೇವಿಸಿದವರು ಕುದುರೆಯ ಮೇಲೆ ಕುಳಿತವರಾಗಿ ಶ್ರೀ ಯಮದೇವರಲ್ಲಿಗೆ ಒಯ್ಯಲ್ಪಡುತ್ತಾರೆ.
ಅಲ್ಲಿ ಶ್ರೀ ಯಮದೇವರು ಅವರನ್ನು ಬಹಳವಾಗಿ ಗೌರವಿಸಿ ಅವರ ಪುಣ್ಯ ಫಲಗಳ ಅನುಗುಣವಾಗಿ ಅವರನ್ನು ಸ್ವರ್ಗಾದಿ ಊರ್ಧ್ವ ಲೋಕಗಳಿಗೆ ಕಳುಹಿಸಿ ಕೊಡುತ್ತಾರೆ.
" ಪಿತೃಯಾನ ಮಾರ್ಗ"
ಯಾರು ಸ್ವರ್ಗಾದಿ ಫಲಾಪೇಕ್ಷೆಯಿಂದ ಅಗ್ನಿಹೋತ್ರಾದಿ ಯಜ್ಞ ಯಾಗಾದಿಗಳನ್ನಾಗಲೀ, ಭಾವಿ, ಕೆರೆ, ಕಟ್ಟೆ ಮುಂತಾದವುಗಳನ್ನು ಕಟ್ಟಿಸುವುದಾಗಲೀ, ಸತ್ಪಾತ್ರರಲ್ಲಿ ದಾನಾದಿಗಳನ್ನು ಮಾಡಿರುವರೋ ಅವರು ದೇವಾವಸಾನವಾದ ಕೂಡಲೇ ಧೂಮ - ರಾತ್ರಿ - ಕೃಷ್ಣ ಪಕ್ಷ - ದಕ್ಷಿಣಾಯನಗಳ ಮತ್ತು ಸಂವತ್ಸರಾಭಿಮಾನ ದೇವತೆಗಳಿಂದ ಒಯ್ಯಲ್ಪಟ್ಟು, ಪಿತೃ ಲೋಕಕ್ಕೆ ಹೋಗಿ ಅಲ್ಲಿ ಪಿತೃ ದೇವತೆಗಳಿಂದಲೂ, ಶ್ರೀ ಯಮಧರ್ಮರಾಜರಿಂದಲೂ ಗೌರವಿಸಲ್ಪಟ್ಟು ಅಲ್ಲಿಂದ ಮುಂದೆ...
ಆಕಾಶಾಭಿಮಾನಿ ದೇವತೆಯಿಂದ ಮತ್ತು ಚಂದ್ರನಿಂದಲೂ ಗೌರವಿಸಲ್ಪಟ್ಟು ಸ್ವರ್ಗಾದಿ ಲೋಕಗಳಲ್ಲಿ ಸುಖಾನುಭವ ಮಾಡಲು ಯೋಗ್ಯವಾದ ದೇಹವನ್ನು ಪಡೆದು ಆಯಾ ಪುಣ್ಯ ಫಲಗಳಿರುವ ವರೆಗೂ ಆಯಾ ಲೋಕಗಳಲ್ಲಿದ್ದು, ಆ ಸುಖಗಳನ್ನು ಅನುಭವಿಸಿ ಪುಣ್ಯ ಫಲಗಳು ಮುಗಿದೊಡನೆ ಇತರ ಕರ್ಮ ಫಲ ಶೇಷವಿರುವುದರಿಂದ ಅದನ್ನು ಅನುಭವಿಸಲು "ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ" ಎಂದು ಹೇಳಿರುವಂತೆಯೇ ಹೋದ ಮಾರ್ಗದಲ್ಲೇ ಮನುಷ್ಯ ಲೋಕಕ್ಕೆ ಹಿಂದಿರುಗಿ ಬರುತ್ತಾನೆ.
ಅಂದರೆ, ಸ್ವರ್ಗಾದಿ ಲೋಕಗಳಲ್ಲಿ ಪಡೆದುಕೊಂಡ ಸ್ಥೂಲ ದೇಹವನ್ನು ಅಲ್ಲಿಯೇ ತ್ಯಾಗ ಮಾಡಿ ಕೇವಲ ಸೂಕ್ಷ್ಮ ದೇಹದಿಂದ ಕೂಡಿಕೊಂಡವನಾಗಿ...
ಚಂದ್ರನಿಂದ ಆಕಾಶ - ಆಕಾಶದಿಂದ ವಾಯು - ವಾಯುವಿನಿಂದ ಧೂಮ - ಧೂಮದಿಂದ ಮೇಘವನ್ನು ಪ್ರವೇಶಿಸಿ - ಮೇಘದಿಂದ ಮಳೆಯ ನೀರಿನ ಮುಖಾಂತರ ಭೂಮಿಯಲ್ಲಿ ಬಿದ್ದು - ಭತ್ತ - ಗೋಧಿ - ಓಷಧಲತೆ - ಎಳ್ಳು - ಉದ್ದು ಮೊದಲಾದ ಆಹಾರ ಸಾಮಾಗ್ರಿಯಲ್ಲಿ ಸೇರಿಕೊಂಡು; ಇವರ ಕರ್ಮಕ್ಕನುಗುಣವಾಗಿ ಆ ಆಹಾರ ಪದಾರ್ಥವನ್ನು ಸೇವಿಸಿದ ಪುರುಷನ ದೇಹವನ್ನು ಪ್ರವೇಶಿಸಿ ಅವನ ರೇತಸ್ಸಿನ ಮೂಲಕ ಸ್ತ್ರೀ ಯೋನಿಯನ್ನು ಪ್ರವೇಶಿಸಿ ಆ ಗರ್ಭದಲ್ಲಿ ಕೆಲ ಕಾಲವಿದ್ದು ನಂತರ ಜನ್ಮವನ್ನು ಪಡೆಯುತ್ತಾನೆ. ಒಳ್ಳೆಯ ಕರ್ಮಫಲ ಶೇಷವಿದ್ದರೆ ಬ್ರಾಹ್ಮಣಾದಿ ಒಳ್ಳೆಯ ಯೋನಿಗಳಲ್ಲಿ ಹುಟ್ಟುವನು.
ಕೆಟ್ಟ ಕರ್ಮಫಲ ಶೇಷವಿದ್ದರೆ ನೀಚ ಜನರ ನೀಚ ಯೋನಿಗಳಲ್ಲಾಗಲೀ, ನಾಯಿ - ಹಂದಿ - ಚಂಡಾಲಾದಿ ಯೋನಿಗಳಲ್ಲಾಗಲೀ ಜನಿಸಬಹುದು. ಇದನ್ನು ಛಾ೦ದೋಗ್ಯೋಪನಿಷತ್ 5ನೇ ಅಧ್ಯಾಯವು ಖಚಿತ ಪಡಿಸಿದೆ.
ಈ ವಿಷಯವನ್ನು ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ...
ಧೂಮೋ ರಾತ್ರೋಸ್ತಥಾ ಕೃಷ್ಣ: ಷಣ್ಮಾಸಾ ದಕ್ಷಿಣಾಯಣಮ್ ।ತತ್ರ ಚಾಂದ್ರಮಸಂ ಜ್ಯೋತಿಃ ಯೋಗೀ ಪ್ರಾಪ್ಯ ನಿವರ್ತತೇ ।। ಗೀತೆ - 9 / 25
ವೈದಿಕ ಅಭಿಪ್ರಾಯದಂತೆ ಈ ಜಗತ್ತು ಬಿಡಲು 2 ವಿಧ :-
1. ಬೆಳಕಿನಲ್ಲಿ (ಉತ್ತರಾಯಣ) ನಿರ್ಗಮಿಸಿದವನು ಹಿಂದಕ್ಕೆ ಬರುವುದಿಲ್ಲ.
2. ಕತ್ತಲಲ್ಲಿ (ದಕ್ಷಿಣಾಯಣ) ನಿರ್ಗಮಿಸಿದವನು ಹಿಂದಕ್ಕೆ ಬರುತ್ತಾನೆ. ಅಂದರೆ ಮತ್ತೆ ಹುಟ್ಟುತ್ತಾನೆ.
" ಕಾಕ ಬಲಿ ಏಕೆ? "
" ಕಾಕ ಬಲಿ" ಎಂದರೆ = ಕಾಗೆಗಳಿಗೆ ಅನ್ನ ನೀಡುವುದು ಎಂದು ಅರ್ಥ!ಮೃತನಾದ ವ್ಯಕ್ತಿಯ ಸಲುವಾಗಿ 10ನೇ ದಿನ ಈ ಕಾಕ ಬಲಿ ಇಡುವುದುಂಟು. ಕಾಗೆ ಆ ಬಲಿಯನ್ನು ಮುಟ್ಟದಿದ್ದರೆ ಅಥವಾ ತಿನ್ನದಿದ್ದರೆ ಮೃತನಾದ ವ್ಯಕ್ತಿಗೆ ತೃಪ್ತಿಯಾಗಲಿಲ್ಲ ಎಂದು ಭಾವಿಸುವುದುಂಟು. ಹಾಗಾದರೆ.. ಕಾಗೆಗೆ- ಪಿತೃಗಳಿಗೆ ಸಂಬಂಧ ಉಂಟೆ? ಎಂಬುದಕ್ಕೆ ಉತ್ತರ ಇಲ್ಲಿದೆ.
ಶ್ರೀ ರಾಮಾಯಣ ಉತ್ತರಕಾಂಡದಲ್ಲಿ ಒಂದು ಪ್ರಸಂಗ...
ಸೂರ್ಯವಂಶದ ಕ್ಷತ್ರಿಯ ವೀರ "ಮರುತ್. ಅವನು ಶ್ರೀ ಬೃಹಸ್ಪತಿಯ ಸಹೋದರನಾದ ಶ್ರೀ ಸಂವರ್ತನೆಂಬ ಬ್ರಹ್ಮರ್ಷಿಯ ಪೌರೋಹಿತ್ಯದಲ್ಲಿ ದೊಡ್ಡ ಯಜ್ಞವೊಂದನ್ನು ನಡೆಸಿದ.
ಅದು ರಾವಣನ ಕಾಲ! ಅವನಿಗೆ ಹೆದರಿದ ದೇವತೆಗಳು ಒಬ್ಬೊಬ್ಬರು ಒಂದೊಂದು ಪಕ್ಷಿಯ ರೂಪ ತಾಳಿ ಮರುತ್ತನ ಯಜ್ಞಕ್ಕೆ ಬಂದರು! ಶ್ರೀ ಬ್ರಹ್ಮದೇವರು "ಹಂಸ" ರೂಪದಲ್ಲಿ; ಶ್ರೀ ದೇವೇಂದ್ರ "ನವಿಲು" ರೂಪದಲ್ಲಿ; ಶ್ರೀ ಯಮಧರ್ಮರಾಜರು "ಕಾಗೆ" ಯ ರೂಪದಲ್ಲಿ ಬಂದರು! ಹೀಗೆ ಯಜ್ಞದಲ್ಲಿ ಭಾಗವಹಿಸಿದ ಅವರು ತಮ್ಮ ಗೌಪ್ಯತೆಗೆ ಕಾರಣವಾದ ಆ ಪಕ್ಷಿ ಪ್ರಾಣಿಗಳಿಗೆ ಒಂದೊಂದು ವರ ನೀಡಿದರು. ಶ್ರೀ ಯಮಧರ್ಮರಾಜರು ಕಾಗೆಗಳಿಗೆ ದೀರ್ಘಾಯುಷ್ಯವನ್ನು ನೀಡಿದರು. ಯಾವ ರೋಗ ಭಯವೂ ಕಾಗೆಗಳಿಗೆ ಇಲ್ಲ. ಮನುಷ್ಯನು ಕೊಂದರಷ್ಟೇ ಅವುಗಳಿಗೆ ಮರಣ ಬರುತ್ತದೆ. ಶ್ರೀ ಯಮಧರ್ಮರಾಜರು ಕಾಗೆಗಳಿಗೆ ಇನ್ನೊಂದು ವರವನ್ನು ನೀಡಿದರು... ಯೇ ಚ ಮದ್ವಿಷಯಸ್ಥಾವೈ ಮಾನವಾ ಕ್ಷುಧಯಾರ್ದಿತಾಃ ।ತ್ವಯಿ ಭಕ್ತೇ ಸುತೃಪ್ತಾಸ್ತೇ ಭವಿಷ್ಯಂತಿ ಸ ಬಾಂಧವಾ: ।।ನನ್ನ ಲೋಕದಲ್ಲಿರುವ ಪಿತೃಗಳು, ನೀವು (ಕಾಗೆಗಳು) ಅನ್ನವನ್ನು ಸ್ವೀಕರಿಸಿದರೆ ಆ ಮೂಲಕ ಸಂತೃಪ್ತರಾಗುತ್ತಾರೆ. ಈ ಕಾರಣದಿಂದ "ಕಾಕ ಬಲಿ" ಯ ಮೂಲಕ ಪಿತೃಗಳು ತೃಪ್ತರಾಗುವರೆಂಬ ನಂಬಿಕೆ ರೂಢಿಯಲ್ಲಿ ಬಂದಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ