ನವರಾತ್ರ ನಮಸ್ಯಾ: ಲಲಿತೋಪಾಖ್ಯಾನ ಪ್ರವಚನ- 9- ಅಕ್ಷರರೂಪ

Upayuktha
0

ನವರಾತ್ರಿಯ ಪರ್ವಕಾಲದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸುತ್ತಿರುವ "ಲಲಿತೋಪಾಖ್ಯಾನ" ಪ್ರವಚನದ ಅಕ್ಷರರೂಪ.




ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ

ಭಗವತಿಯ ಮಂತ್ರಾಕ್ಷರಗಳು ಕಿವಿಯನ್ನು ಪ್ರವೇಶಿಸಿದರೆ ಸಾಕು ಚಮತ್ಕಾರಗಳು ಆಗುತ್ತವೆ. ಹಾಗಾದರೆ ಜಪಿಸಿ ತಪಿಸಿದರೆ ಇನ್ನು ಏನೇನು ಆಗಬಹುದು!? ಹಾಗಾಗಿ ದೇವ್ಯಾಪರಾಧ ಕ್ಷಮಾಪನಾ ಸ್ತೋತ್ರದಲ್ಲಿ ಹೇಳಿದ ಹಾಗೆ ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಾಗಿರಾ

ಅವನು ಶ್ವಪಾಕೋ, ಅಂದರೆ ನಾಯಿ ಅವನಿಗೆ ಆಹಾರ. ಅಂತಹವನು ಮಹಾವಾಗ್ಮಿ ಆಗುತ್ತಾನೆ. ಅವನ ಮಾತುಗಳು ಜೇನುತುಪ್ಪದ ಪಾಕದಂತೆ ಪರಿಣಮಿಸುತ್ತದೆ. ಯಾವಾಗ ಅಂದರೆ ಕಿವಿಯಲ್ಲಿ ದೇವಿಯ ವಚನಗಳು ಪ್ರವೇಶ ಆಗಬೇಕು ಆವಾಗ. ಹಾಗೆ ದಟ್ಟ ದರಿದ್ರ, ಅಕಿಂಚನ ಅಂತಹವನು ಕೋಟಿ ಸುವರ್ಣಕ್ಕೆ ಅಧಿಕಾರಿಯಾಗಿ ಅಧಿಕನಾಗಿ ವಿವರಿಸುತ್ತಾನೆ. ನಿರಾಂತಂಕೋರಂಕೋ ವಿಹರತಿ ಚಿರಂ ಕೋಟಿ ಕನಕೈಃ ಶಾಶ್ವತವಾಗಿ ಕೋಟಿ ಸುವರ್ಣದ ಸಂಪತ್ತು ಅವನನ್ನು ವರಿಸುತ್ತಿದೆ. ಹಾಗಾಗಿ ಇದೆಲ್ಲ ನಿನ್ನ ಮಂತ್ರಾಕ್ಷರಗಳ ಫಲ. ಕೇವಲ ಉಪದೇಶ ಪಡೆದುಕೊಂಡವರ ಫಲ. ಗುರುಗಳು ಹೇಳಿಕೊಟ್ಟ ಮಾತನ್ನು ಇನ್ನೂ ಜಪ, ಸಾಧನೆ ಮಾಡಿಲ್ಲ ಆಗಲೇ ಇಷ್ಟು, ಇನ್ನು ಜಪಿಸಿದರೆ ತಪಿಸಿದರೆ ಏನಾಗಬಹುದು ಎಂಬುದನ್ನು ದೇವೇಂದ್ರನನ್ನು ಕೇಳಬೇಕು.



ಕೊಂಚ ಮೊದಲು ಭಂಡಾಸುರನ ಜೀತದ ಆಳಿನ ಪರಿಸ್ಥಿತಿ ಇತ್ತು ದೇವೇಂದ್ರನದು. ಸ್ವರ್ಗಾಧಿಪತ್ಯವನ್ನು ಕಳೆದುಕೊಂಡು ಅಸುರನೊಬ್ಬನ ಜೀತದಾಳಾಗಿ ಕೆಲಸ ಮಾಡುತ್ತಿದ್ದನು. ಆಮೇಲೆ ಯಜ್ಞ ಮಾಡುತ್ತಿದ್ದಾಗ ದೇವಿಯ ಕುರಿತು ಧ್ಯಾನ ಮಾಡುತ್ತಿದ್ದಾಗ ಅವನ ಮೇಲೆ ಭಂಡಾಸುರನ ಸೈನ್ಯ ಬಂದು ಎರಗಿತು. ಆಗಿನ ಸಂದರ್ಭ ಏನು ಬೇಕಾದರೂ ಆಗಬಹುದು. ದೇವತೆಗಳು ಭಂಡಾಸುರನ ಕೈಗೆ ಸಿಕ್ಕಿದರೆ ಇವರನ್ನು ಹುಡಿ ಹುಡಿ ಮಾಡಬಹುದು, ಅದು ಕೊಂಚ ಮೊದಲಿನ ಸ್ಥಿತಿ. ಈಗ ಸದ್ಯ ಇದ್ದ ಸ್ಥಿತಿ ಸ್ವಲ್ಪವೇ ಮಧುರ, ಇದ್ದ ಸ್ಥಿತಿ ಏನೆಂದರೆ ದೇಹದ ಅಂಗಾಂಗಗಳನ್ನು ಕತ್ತರಿಸಿ ಹೋಮ ಮಾಡಿದ್ದಾರೆ ದೇವತೆಗಳು, ದೇಹದಲ್ಲಿ ಇನ್ನು ಕತ್ತರಿಸಲು ಏನೂ ಉಳಿದಿಲ್ಲ, ಆತ್ಮ ಹೋಮ, ಜೀವವೊಂದೇ ಇದೆ ಅಷ್ಟೇ, ಬೇರೇನು ಇಲ್ಲ. ಈ ಮೂರು ಸ್ಥಿತಿಗಳು ಕೊಂಚ ಮೊದಲು ದೇವತೆಗಳು ಇದ್ದದ್ದು. ಆ ದೇವಿಯ ಮಂತ್ರವನ್ನು ಜಪಿಸಿ ಧ್ಯಾನವನ್ನು ಮಾಡಿ, ಹೋಮವನ್ನು ಮಾಡಿದ್ದಾರೆ. ಅದರ ಫಲ ಏನೆಂದರೆ ಇವತ್ತು ಅವರಿಗೆ ಅವರ ದೇಹ ಮರಳಿ ಬಂದದ್ದು ಅಲ್ಲದೆ ಮೊದಲಿಗಿಂತ ಬಲಶಾಲಿಗಳಾದರು. ಅದು ಮಾತ್ರವಲ್ಲದೆ ಕಣ್ಮುಂದೆ ದೇವಿ ಪ್ರಕಟವಾಗಿ ಬೇಕಾದ ವರವನ್ನು ಕೇಳು ಎಂದು ದೇವತೆಗಳಿಗೆ ಹಾಗೂ ದೇವೇಂದ್ರನಿಗೆ ಹೇಳುತ್ತಾಳೆ. ವರೇಣಚ್ಛಂದಯಾಮಾಸ ಅದಕ್ಕೆ ದೇವೇಂದ್ರನು ಕೇಳಿದ ವರ ಏನು? ಸ್ವಾರಸ್ಯ ಏನೆಂದರೆ ಇಂದ್ರನು ಯಾವುದೇ ವರವನ್ನು ಕೇಳಲಿಲ್ಲ.




ಈ ಎರಡು ಪ್ರಕರಣಗಳಲ್ಲಿ ಇಂದ್ರನ ನಾಯಕತ್ವ ತುಂಬಾ ಎದ್ದು ಬರುತ್ತದೆ. ಒಂದು, ತಪಸ್ಸನ್ನು ಬಿಟ್ಟು ಓಡಿದ ದೇವತೆಗಳನ್ನು ಪ್ರೇರಿಸಿದ್ದು. ಬ್ರಹ್ಮ ಭೂತಃ ಭವಿಷ್ಯಾಮಃ "ಯಾಗ ಪೂರ್ಣವಾಗಿ ಸ್ವರ್ಗವಾದರೂ ಸೇರೋಣ, ಇಲ್ಲದಿದ್ದರೆ ದೇವಿಯ ಚರಣ ಸೇರೋಣ". ಇನ್ನೊಂದು ವರವನ್ನು ಕೇಳಿದ ರೀತಿ. ಯದಿ ತುಷ್ಟಾ ಅಸಿ ಕಲ್ಯಾಣಿ "ಅಮ್ಮ ಕಲ್ಯಾಣಿ ಸಂತೋಷವಾಯಿತಾ ನಮ್ಮ ತಪಸ್ಸಿನಿಂದ? ವರ ಕೊಡುತ್ತೀಯಾ?" ವಯಂ ದೈತ್ಯೇಂದ್ರ ನಿರ್ಜಿತಾಃ "ನಾವು ಭಂಡಾಸುರನಿಗೆ ಸೋತವರು". ದುರ್ಧರಂ ಜೀವಿತಂ "ಬದುಕು ದುರ್ಧರ ನಮ್ಮದು. ಹೆಸರಿಗೆ ದೇವತೆಗಳು, ಆದರೆ ಕ್ಷಣ ಕ್ಷಣದ ಬದುಕು ಕೂಡ ನಮಗೆ ನರಕ. ನಾವು ನಿನಗೆ ಶರಣಾಗಿದ್ದೇವೆ". ಅಲ್ಲಿಗೆ ಇಂದ್ರನ ಮಾತು ಮುಗಿಯಿತು. ಏನು ಬೇಕು ಎಂದು ಹೇಳಲಿಲ್ಲ. ಯಾಕೆಂದರೆ ಜಾಣನಾದವನು ದೇವರಿಗೆ ಏನನ್ನು ಹೇಳುತ್ತಾನೆ ಎಂದರೆ

ಯಥಾಯೋಗ್ಯಂ ತಥಾಕುರು| ದೇವರಿಗೆ ಹೀಗೆ ಮಾಡು ಎಂದು ಹೇಳಲು ನಾವು ಯಾರು?

ಸಾಮಾನ್ಯವಾಗಿ ಮನುಷ್ಯನ ಸ್ವಭಾವ ಹೇಗಿರುತ್ತದೆ ಅಂದರೆ ತಪಸ್ಸಿಗಿಂತ ಹೆಚ್ಚು ವರದ ಕಡೆ ಗಮನ ಇರುತ್ತದೆ. ವಾಸ್ತವವಾಗಿ ವರದ ಕಡೆ ಗಮನ ಇರಬಾರದು, ಕಠಿಣ ತಪಸ್ಸಿನ ಕಡೆ ಗಮನ ಇರಬೇಕು. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕರ್ತವ್ಯದ ಕಡೆ ಗಮನ ಹರಿಸಿದರೆ ಕಾರ್ಯ ಚೆನ್ನಾಗಿ ಆಗುತ್ತದೆ. ಫಲದ ಕಡೆ ಗಮನಹರಿಸಿದರೆ ಕಾರ್ಯ ಯಾವತ್ತೂ ಚೆನ್ನಾಗಿ ಆಗುವುದಿಲ್ಲ, ಅದರಿಂದ tension ಹೆಚ್ಚಾಗುತ್ತದೆ. ಆದ್ದರಿಂದ ನಾವು expect ಮಾಡುವ ಬದಲು accept ಮಾಡಿದರೆ ಅದರಿಂದ ತುಂಬ ಶಾಂತಿ ನೆಮ್ಮದಿ ದೊರೆಯುವಂತದ್ದು.


ಹಾಗಾಗಿ ದೇವೇಂದ್ರ ತನ್ನ ಸ್ಥಿತಿಯನ್ನು ದೇವಿಯಲ್ಲಿ ಹೇಳಿಕೊಂಡ 'ನಾವು ಹೀಗಿದ್ದೇವೆ, ಇನ್ನು ನಿನಗೆ ಬಿಟ್ಟಿದ್ದು ಹೇಗೆ ಬೇಕೋ ಹಾಗೆ ಮಾಡು'. ದೇವಿ ತಾನಾಗಿ ಹೇಳಿದಳಂತೆ "ಇಂದ್ರ, ದೈತ್ಯೇಶ್ವರನಾದ  ಭಂಡನನ್ನು ನಾನೇ ಸಂಹರಿಸುತ್ತೇನೆ. ಅಹಮೇವ ವಿನಿರ್ಜಿತ್ಯ ಭಂಡಂ ದೈತ್ಯಕುಲೇಶ್ವರಂ ಮೂರು ಲೋಕದ ಒಡೆತನವನ್ನು ಮರಳಿ ನಿನಗೆ ಕೊಡುತ್ತೇನೆ". ನಾವಾಗಿ ಫಲವನ್ನು ಕೇಳದಿದ್ದರೆ ಅದರ ಫಲ ತುಂಬಾ ಚೆನ್ನಾಗಿ ಇರುತ್ತದೆ. ಯಾಕೆಂದರೆ ನಾವು ಸಣ್ಣ ಮನುಷ್ಯರು, ಸಣ್ಣ ಮನಸ್ಸಿನವರು, ನಮಗೆ ಏನು ಬೇಕು ಎಂಬುದು ಗೊತ್ತಿಲ್ಲ, ನಾವು ಯಾರು, ಏನು ಹೇಗೆ ಎಂತದು ಗೊತ್ತಿರುವುದಿಲ್ಲ. ನಮ್ಮ ಮುಂದೇನು ಎಂಬುದು ನಮಗೆ ಸರಿಯಾಗಿ ತಿಳಿದಿರುವುದಿಲ್ಲ, ನಮ್ಮ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ನಮಗೆ ಚಪಲ ಮಾತ್ರ ಇರುತ್ತದೆ. ಹಾಗಾಗಿ ವರವನ್ನು ಕೇಳುವಲ್ಲಿ ಜವಾಬ್ದಾರಿ ಬೇಕು. ಬುದ್ಧಿವಂತಿಕೆ ಬೇಡ. ನಿನಗೆ ಗೊತ್ತಿದೆಯಲ್ಲ ಏನು ಬೇಕು ಅಂತ ಅದನ್ನು ಕೊಡು ಸಾಕು. ಅಂದರೆ ಸಾಮ್ರಾಜ್ಯವನ್ನು ಕೇಳುವಲ್ಲಿ ಸಾಬೂನು ಕೇಳಿಕೊಂಡು ಬರುತ್ತೇವೆ ಹಾಗಾಗಬಾರದು. ಅಂದರೆ ಇಂದ್ರ ವರವನ್ನು ಕೇಳದಿದ್ದರೂ ಕೂಡ "ಭಂಡಾಸುರನ ಸಂಹಾರವನ್ನು ನಾನು ಮಾಡ್ತೇನೆ. ಮೂಜಗದ ಆಧಿಪತ್ಯವನ್ನು ಕೂಡ ನಿನಗೆ ನಾನೇ ಕೊಡ್ತೇನೆ. ಈ ಸೃಷ್ಟಿಯ ಸಕಲರೂ ನಿರ್ಭಯರಾಗಲಿ, ಮೂದಿತರಾಗಲಿ." ಎಂದು ದೇವಿಯು ಅಭಯವನ್ನು ಕೊಟ್ಟಳು ಅನುಗ್ರಹವನ್ನು ಮಾಡಿದಳು. 


ಇಷ್ಟಕ್ಕೆ ಮುಗಿಯಲಿಲ್ಲ. ದೇವತೆಗಳು ಲಲಿತಾ ಸ್ತೋತ್ರವನ್ನು ಮಾಡಿದ್ದರು. ಆ ಸ್ತೋತ್ರಕ್ಕೂ ವರವನ್ನು ಕೊಡುತ್ತಾಳೆ. ವರ ಏನೆಂದರೆ ಯೇ ಸ್ತುವಂತಿ ಚ ಮಾಂ ಭಕ್ತ್ಯಾ ಸ್ತವೇನಾನೇನ ಮಾನವಾಃ ಈ ಸ್ತೋತ್ರವನ್ನು ಯಾರು ಭಕ್ತಿಯಿಂದ ಜಪಿಸುತ್ತಾರೋ ಅವರು ಭಾಜನಂ ತೇ ಭವಿಷ್ಯಂತಿ ಧರ್ಮ ಶ್ರೀ ಯಶಸಾಂ, ಧರ್ಮಕ್ಕೆ ಸಂಪತ್ತಿಗೆ ಮತ್ತು ಯಶಸ್ಸಿಗೆ ಭಾಜನರಾಗುತ್ತಾರೆ. ಹಾಗೂ ವಿದ್ಯಾ, ವಿನಯ ಸಂಪನ್ನಕ್ಕೂ ಭಾಜನರಾಗುತ್ತಾರೆ, ರೋಗಗಳಿಂದ ನಿರ್ಮುಕ್ತರಾಗುತ್ತಾರೆ. ದೀರ್ಘಾಯಸ್ಸನ್ನು ಹೊಂದುತ್ತಾರೆ ಮತ್ತು ಅವರ ಬಳಗ ಬೆಳೆಯುತ್ತದೆ. ಈ ಫಲ ದೊರೆಯುತ್ತದೆ ಹಾಗಾಗಿ ಈ "ಲಲಿತಾಸ್ತವರಾಜ" ವನ್ನು ಎಲ್ಲರೂ ಪಠಣ ಮಾಡಿ. 


ಹೀಗೆ ದೇವತೆಗಳಿಗೆ ವರ ಪ್ರಾಪ್ತಿಯಾಯಿತು. ಎಲ್ಲಾ ದೇವತೆಗಳಿಗೂ ಖುಷಿಯಾಯಿತು. ಆದರೆ ಅದಕ್ಕಿಂತ ದೊಡ್ಡ ಖುಷಿ ಇನ್ನೊಂದರಲ್ಲಿ ಆಯಿತಂತೆ. ಆಮೋದಂ ಪರಮಂ ಜಗ್ಮುಃ ತಾಂ ವಿಲೋಕ್ಯ ಮುಹುರ್ಮುಹುಃ ಮತ್ತೆ ಮತ್ತೆ ದೇವಿಯನ್ನು ನೋಡುತ್ತಾ ಆನಂದಿಸುತ್ತಾ, ಮತ್ತೆ ಮತ್ತೆ ನಮಸ್ಕಾರ ಮಾಡುತ್ತಾರಂತೆ. ಎಂತಹ ರೂಪ ಇರಬಹುದು, ಎಂತಹ ಆನಂದವನ್ನು ತನ್ನೊಳಗೆ ಹುದುಗಿಸಿರಬೇಕು ಆ ದೇವಿ ಎಂದು ಆಲೋಚಿಸಬೇಕು. ಸಾಕ್ಷಾತ್ಕಾರವು ಲಭಿಸಿದಾಗ ಅತ್ಯಂತ ದೊಡ್ಡ ಆನಂದ ಉಂಟಾಗುತ್ತದೆ ಎಂದು ನಾವಿಲ್ಲಿ ಕಾಣಬಹುದು. ದೇವತೆಗಳು ತಾಯಿ ಲಲಿತಾ ಪರಮೇಶ್ವರಿಯನ್ನು ನೋಡಿ ಸಂತೋಷಪಡುತ್ತಿದ್ದರು. ಏತನ್ಮಧ್ಯೆ, ತ್ರಿಮೂರ್ತಿಗಳು ತಾಯಿಯನ್ನು ನೋಡಲು ಬಂದರು. ಲಲಿತಾಪರಮೇಶ್ವರಿಯ ದರ್ಶನಾರ್ಥಿಗಳಾಗಿ ತ್ರಿಮೂರ್ತಿಗಳು ಬಂದರು. ಮೊದಲು ಬ್ರಹ್ಮ, ಎಲ್ಲ ಮಹರ್ಷಿಗಳೊಡಗೂಡಿ ಹಂಸಯುಕ್ತ ವಿಮಾನವನ್ನೇರಿ ಬಂದನು. ಬಳಿಕ ವಿಷ್ಣು, ವಿನತಾ ಸುತನಾದ ಗರುಡನನ್ನೇರಿ ಬಂದನು. ನಂದಿಯನ್ನೇರಿ ಶಿವನ ಆಗಮನವಾಗುತ್ತದೆ. ಈ ತ್ರಿಮೂರ್ತಿಗಳು ಅಖಿಲೇಶ್ವರಿಯ ದರ್ಶನಾಕಾಂಕ್ಷಿಗಳು. ಆ ಬಳಿಕ ನಾರದರೇ ಮೊದಲಾದ ದೇವರ್ಷಿಗಳು ಬಂದರು. ಅಪ್ಸರೆಯರು, ವಿಶ್ವವಸುವೇ ಮೊದಲಾದ ಗಂಧರ್ವರು, ಯಕ್ಷರು, ಹೀಗೆ ದೇವವೃಂದ ಎಲ್ಲರೂ ಬಂದು ಸೇರಿದರು. ಪ್ರಪಂಚದಲ್ಲಿರುವ ಸಾತ್ವಿಕ ವರ್ಗವಾದ ದೇವತೆಗಳು, ಋಷಿಗಳು, ಗಂಧರ್ವರು, ಯಕ್ಷರು, ಕಿನ್ನರರು, ಅಪ್ಸರೆಯರು ಹೀಗೆ ಎಲ್ಲ ದೈವವರ್ಗ, ಸಾತ್ವಿಕ ವರ್ಗ ದೇವಿಯ ದರ್ಶನ ಪಡೆಯಲು ಆಗಮಿಸಿತು. ನಂತರ ದೇವಿಯದೇ ಪ್ರತಿಬಿಂಬಗಳು ಅಲ್ಲಿಗೆ ಬಂದವು. ಕನ್ನಡಿಯಲ್ಲಿ ಪ್ರತಿಬಿಂಬವನ್ನು ನೋಡಿಕೊಂಡಂತೆ, ಲಲಿತೆಯನ್ನು ನೋಡಲಿಕ್ಕೆ ಸರ್ವ ಮಂತ್ರಾಧಿದೇವತೆಯಾದ ಭಗವತಿ ದುರ್ಗೆ ಅಲ್ಲಿ ಪ್ರಕಟವಾದಳು. ನಂತರ ಕೈಯಲ್ಲಿ ವೀಣೆಯನ್ನು ನುಡಿಸುತ್ತಿರುವ ವಿದ್ಯಾಧಿದೇವತೆಯಾದ ಶ್ಯಾಮಲಾಂಬಿಕೆ ಆಗಮಿಸಿದಳು. ಆಮೇಲೆ ಮಾತೃಗಣ, ಅಂದರೆ ಬ್ರಾಹ್ಮೀ, ಮಾಹೇಶ್ವರಿ, ವೈಷ್ಣವಿ,  ಕೌಮಾರಿ, ನಾರಸಿಂಹೆ, ವಾರಾಹಿ, ಮೊದಲಾದ ಸಪ್ತಮಾತೃಕೆಯರು ಆಗಮಿಸಿದರು. ಇವರೆಲ್ಲರೂ ದೇವತೆಗಳದ್ದೇ ಸ್ತ್ರೀ ರೂಪ. ಬ್ರಹ್ಮನ ಸ್ತ್ರೀ ರೂಪ ಬ್ರಹ್ಮಾಣಿ ಅಥವಾ ಬ್ರಾಹ್ಮೀ, ವಿಷ್ಣುವಿನ ಸ್ತ್ರೀ ರೂಪ ವೈಷ್ಣವಿ, ಶಿವನ ಸ್ತ್ರೀ ರೂಪ ಮಾಹೇಶ್ವರಿ ಹೀಗೆ. ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವಗಳಾದ ಅಷ್ಟ ಸಿದ್ಧಿಗಳು ಬಂದರು. ಅಣಿಮಾ ಎಂದರೆ ಚಿಕ್ಕದಾಗುವುದು. ಹನುಮಂತನು ಒಂದು ಬೆಕ್ಕಿನ ಗಾತ್ರ ಹೊಂದಿ ಲಂಕೆಯನ್ನು ಸಂಚಾರ ಮಾಡಿದನೆಂದು ಕೇಳುತ್ತೇವೆ. ಅಣಿಮಾ ಎಂದರೆ ಅದೊಂದು ದೇವತೆ. ಮಹಿಮಾ ಎಂದರೆ ದೊಡ್ಡದಾಗಿ ಬೆಳೆಯುವಂಥದ್ದು. ದೊಡ್ಡ ರೂಪವನ್ನು ತಾಳಿ ಹನುಮಂತನು ಸಮುದ್ರವನ್ನು ಹಾರಿದ್ದ ಉದಾಹರಣೆಯನ್ನು ನೋಡಬಹುದು. ಗರಿಮಾ ಎಂದರೆ ಭಾರವಾಗುವಂಥದ್ದು. ರಾವಣನೊಡನೆ ಯುದ್ಧ ನಡೆದಾಗ ಲಕ್ಷ್ಮಣ ಮೂರ್ಛಿತನಾಗುತ್ತಾನೆ. ಆ ಸಮಯದಲ್ಲಿ ರಾವಣನು ಲಕ್ಷ್ಮಣನನ್ನು ಎತ್ತಿಕೊಂಡು ಹೋಗಲು ಪ್ರಯತ್ನ ಮಾಡಿದಾಗ, ಲಕ್ಷ್ಮಣನೊಳಗೆ ಎಚ್ಚರವಾಗಿದ್ದ ಭಾಗ, ವೈಷ್ಣವ ಭಾಗ ತನ್ನ ಕೆಲಸವನ್ನು ಮಾಡಿತು. ಹೇಗೆಂದರೆ ಲಕ್ಷ್ಮಣನು ಭಾರವಾದ. ಎಷ್ಟು ಭಾರವಾದನೆಂದರೆ, ರಾವಣ ಹಾಕಿದ ಶಕ್ತಿಗೆ ಭೂಮಂಡಲವನ್ನೇ ಎತ್ತಬಹುದಾಗಿತ್ತು, ಆದರೆ ಲಕ್ಷ್ಮಣನನ್ನು ಎತ್ತಲಿಕ್ಕೆ ಸಾಧ್ಯವಾಗಲಿಲ್ಲ. ಆಗ ಹನುಮಂತನು ಬಂದು ರಾವಣನಿಗೆ ಸರಿಯಾದ ಪೆಟ್ಟುಕೊಟ್ಟು ಲಕ್ಷ್ಮಣನನ್ನು ಹೂವಿನ ಹಾಗೆ ಎತ್ತಿಕೊಂಡು ಹೋದ. ಭಕ್ತನ ಭಕ್ತಿಯಿಂದ ಸುಪ್ರೀತನಾದ ಲಕ್ಷ್ಮಣ ಹತ್ತಿಯಂತೆ ಹಗುರವಾದನು. ಇದು ಹೇಗೆಂದರೆ ಗರಿಮಾ ಮತ್ತು ಲಘಿಮಾ ಎಂಬ ಎರಡು ಸಿದ್ಧಿಗಳು. ಪ್ರಾಪ್ತಿ ಎಂದರೆ ಬೇಕಾದ್ದು ಕೈಗೆ ಸಿಗುವಂತಹದ್ದು. ಬೇಕಾದುದು ಕೂಡಲೇ ಬಳಿ ಬರುವಂತಹ ಒಂದು ಸಿದ್ಧಿ. ಪ್ರಾಕಾಮ್ಯ ಎಂದರೆ ಸ್ವಲ್ಪ ಇರುವುದನ್ನು ವಿಫುಲವಾಗಿ ಮಾಡುವಂಥದ್ದು. ನಿಮ್ಮ ಬಳಿ ಒಂದು 10 ತೊಲೆ ಬಂಗಾರವಿದ್ದರೆ, ಅದನ್ನು ಒಂದು ಕೆಜಿ ಮಾಡಬಹುದು. ಹಾಗೆ ಸ್ವಲ್ಪ ಇರುವುದನ್ನು ಬಹಳವಾಗಿ ಮಾಡುವಂಥದ್ದು ಪ್ರಾಕಾಮ್ಯ. ಈಶಿತ್ವವೆಂದರೆ ಎಲ್ಲೆಡೆ ತನ್ನ ಅಧಿಪತ್ಯವನ್ನು ಸ್ಥಾಪಿಸುವಂತಹ ಶಕ್ತಿ. ಇನ್ನೊಬ್ಬನನ್ನು ಅಥವಾ ಇನ್ನೊಂದನ್ನು ತನ್ನ ನಿಯಂತ್ರಣಕ್ಕೆ, ವಶಕ್ಕೆ ತೆಗೆದುಕೊಳ್ಳುವಂತಹ ಶಕ್ತಿ. ಕೊನೆಯದಾಗಿ ವಶಿತ್ವವೆಂದರೆ ಇಂದ್ರಿಯ ನಿಗ್ರಹ. ಅದು ದೊಡ್ಡ ಸಿದ್ಧಿ. ನಿಮ್ಮ ಕಣ್ಣು ಕಿವಿಗಳು, ನಿಮ್ಮ ಮನಸ್ಸು ನೀವು ಹೇಳಿದ್ದನ್ನು ಕೇಳುವುದು, ಇದು ಬಹುದೊಡ್ಡ ಸಿದ್ಧಿ. ನಮ್ಮ ಸಲಹೆ ನಿಮಗೆ ಏನೆಂದರೆ ನೀವು ಎಂಟನೆಯ ಸಿದ್ಧಿಗೆ ಪ್ರಯತ್ನ ಮಾಡುವುದು ಒಳ್ಳೆಯದು. ಏಕೆಂದರೆ ಎಂಟನೆಯ ಸಿದ್ಧಿ ಸಿದ್ಧಿಸಿತೆಂದರೆ, ದೇವರೇ ನಿಮಗೆ ವಶವಾಗುತ್ತಾನೆ. ಹೀಗೆ ಅಷ್ಟ ಸಿದ್ಧಿಗಳು ತಾಯಿಯನ್ನು ನೋಡಲು ಬಂದರು.

     

ನಂತರ ಯೋಗಿನಿಯರು ಕೋಟಿ ಕೋಟಿ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸಿದರು. ಬಳಿಕ ಭೈರವರು, ಕ್ಷೇತ್ರಪಾಲರು ಬಂದರು. ಮಹಾಶಾಸ್ತ, ಗಣಾಗ್ರಣಿಯಾದ ಅಯ್ಯಪ್ಪ ಬಂದನು. ಮಹಾಗಣೇಶ, ಸ್ಕಂದ ಬಂದರು. ನಂತರ ಬಟುಕ, ಬಟು ರೂಪದ ವೀರಭದ್ರ ಬಂದನು. ಹೀಗೆ ಇವರೆಲ್ಲರೂ ಬಂದು ದೇವಿಯನ್ನು ಸ್ತುತಿಸಿದರು.

     

ಮುಂದಿನ ಸಲುವಾಗಿ ಬ್ರಹ್ಮ ವಿಶ್ವಕರ್ಮನನ್ನು ಕರೆದು, "ಎಲೈ ದೇವಶಿಲ್ಪಿಯೇ, ಈ ಲಲಿತಾ ತ್ರಿಪುರಸುಂದರಿಯ ಸಲುವಾಗಿ ಒಂದು ನಗರವನ್ನು ನಿರ್ಮಿಸು, ದೇವಪುರಿಯನ್ನು ಮೀರಿಸುವಂತಹ ಒಂದು ಪಟ್ಟಣವನ್ನು ನಿನ್ನ ಚೈತನ್ಯದಿಂದ ನಿರ್ಮಾಣ ಮಾಡು" ಎಂದು ಸೂಚನೆ ಕೊಟ್ಟಾಗ ಅಲ್ಲಿ ಶ್ರೀಮನ್ನಗರದ ನಿರ್ಮಾಣವಾಯಿತು. ಆ ನಗರವು ಅದ್ಭುತವಾಗಿತ್ತು, ರಮಣೀಯವಾಗಿತ್ತು. ಭವ್ಯ ಭವನಗಳು, ಮುಗಿಲು ಮುಟ್ಟುವ ಕೋಟೆ, ಕೋಟೆಯ ಮೇಲೆ ಗೋಪುರಗಳು, ಅದರೊಳಗೆ ಗಜಶಾಲೆಗಳು, ಅಶ್ವಶಾಲೆಗಳು, ರಥಶಾಲೆಗಳು, ವಿಶಾಲವಾದ ಶೋಭಾಯಮಾನವಾದ ರಾಜಮಾರ್ಗ, ಅದರ ಇಕ್ಕೆಲಗಳಲ್ಲಿ ಸಾಮಂತ್ರಿಗಳಿಗೆ, ಅಮಾತ್ಯರಿಗೆ, ಸೈನಿಕರಿಗೆ, ಬ್ರಾಹ್ಮಣರಿಗೆ, ವಂದಿಮಾಗಧಿಗಳಿಗೆ, ದಾಸದಾಸಿಯರಿಗೆ ಮನೆಗಳು, ಹೀಗೆ ಇಕ್ಕೆಲಗಳಲ್ಲಿ ಭವನಗಳ ಸಾಲು. ನಡುವೆ ನವರತ್ನಗಳಿಂದ ನಿರ್ಮಿತವಾದ ಸಿಂಹಾಸನ ಸಭೆ, ಅದರ ಮಧ್ಯೆ ಚಿಂತಾಮಣಿಯಿಂದ ನಿರ್ಮಿತವಾದ ಸಿಂಹಾಸನ. ಚಿಂತಾಮಣಿ ಎಂದರೆ ಚಿಂತಿಸಿದುದನ್ನು ಕೊಡುವ ಮಣಿ. ಮಣಿ ಯಾರ ಬಳಿ ಇರುತ್ತದೆಯೋ ಅವರು ಚಿಂತಿಸಿದುದು ನೆರವೇರುವಂಥದ್ದು. ಅಂತಹ ಅದ್ಭುತವಾಗಿರುವ ದೇವಮಣಿಯಾದ ಚಿಂತಾಮಣಿಯಿಂದ ವಿರಚಿತವಾದ ಸ್ವಯಂಪ್ರಭೆಯುಳ್ಳ ಸಿಂಹಾಸನ. ತಾನೇ ತಾನಾಗಿ ಆ ಸಿಂಹಾಸನಕ್ಕೊಂದು ಪ್ರಭೆ ಇತ್ತು. ಈ ಸೃಷ್ಟಿಯಲ್ಲಿ ಆ ಸಿಂಹಾಸನಕ್ಕೆ ಸಮನಾದ ಮತ್ತೊಂದು ಸಿಂಹಾಸನವಿರಲಿಲ್ಲ. ಈ ವೈಭವವನ್ನು ನೋಡಿ ಬ್ರಹ್ಮದೇವನೇ ಚಕಿತನಾದ. ಅವನೇ ವಿಶ್ವಕರ್ಮನಿಗೆ ಅಪ್ಪಣೆ ಮಾಡಿದನಾದರೂ ಆ ನಗರವನ್ನು ನೋಡಿ ಅವನೇ ಬೆರಗಾದ. ಏಕೆಂದರೆ ಇದು ಕೇವಲ ಅವನ ಶಕ್ತಿಯ ವ್ಯಾಪ್ತಿಯಿಂದ ನಿರ್ಮಾಣವಾದದ್ದಲ್ಲ, ಇದರ ಹಿಂದೆ ಲಲಿತಾಪರಮೇಶ್ವರಿಯ ಕೃಪಾಕಟಾಕ್ಷವಿದೆ.

   

ನಾವು ಯಾವುದಕ್ಕಾಗಿ, ಯಾರಿಗಾಗಿ ಏನಾದರೂ ಮಾಡುತ್ತೇವೆ, ಅದರಿಂದಾಗಿ ಬದಲಾವಣೆಗಳು ಬರುತ್ತವೆ. ಈಗ ನೀವು ಅತ್ಯಂತ ಪ್ರೀತಿಪಾತ್ರರಿಗಾಗಿ ಅಡಿಗೆ ಮಾಡಿದಾಗ ಅದರ ರೀತಿಯೇ ಬೇರೆಯದು. ಅದೇ ಗೋಳುಕೊಡುವ ಗಂಡನಿಗೆ ಅಡಿಗೆ ಮಾಡಬೇಕೆಂದರೆ ಬೇಜಾರು, ಸಿಟ್ಟು ಮಾಡಿಕೊಂಡು ಮಾಡಿದ್ದರೆ, ಆ ಅಡಿಗೆಯ ರೀತಿಯೇ ಬೇರೆಯಿರುತ್ತದೆ. ಗುರುಗಳಿಗಾಗಿ ಮಾಲೆ ರಚನೆ ಮಾಡುವಾಗ ಭಾವ ಬೇರೆಯದಾಗಿರುತ್ತದೆ. ದೇಶಕ್ಕೋಸ್ಕರವಾಗಿ ಯುದ್ಧ ಮಾಡುತ್ತಿರುವಾಗ ಎಂತಹ ಭಾವವಿರುತ್ತದೆ ನೋಡಿ. ಯುದ್ಧವು ಕೂಡ ಅಷ್ಟು ವಿಶೇಷವಾಗುತ್ತದೆ. ಯಾರಿಗಾಗಿ, ಯಾವುದಕ್ಕಾಗಿ ಎಂಬುದು ತುಂಬಾ ಮುಖ್ಯವಾಗುವಂತಹದ್ದು. ಹಾಗೆಯೇ ವಿಶ್ವಕರ್ಮನು ಹಿಂದೆಯೂ ಬೇಕಾದಷ್ಟು ನಗರಗಳನ್ನು ನಿರ್ಮಿಸಿದ್ದರೂ, ಲಲಿತೆಗಾಗಿ ಮಾಡಿರುವ ಈ ಕೃತಿ, "ಶ್ರೀಮನ್ನಗರ" ಇದು ಸಾಟಿಯಿಲ್ಲದುದಾಯಿತು. ಜೊತೆಗೆ ದೇವಿಯ ಶಕ್ತಿಯು ಕೂಡ ಅಲ್ಲಿ ಸೇರಿತ್ತು. ಈ ನಗರದೊಳಗೆ ಪ್ರವೇಶ ಮಾಡಿ ಆ ಸಿಂಹಾಸನದ ಮೇಲೆ ಒಂದು ಹುಲ್ಲು ಕಡ್ಡಿ ಕುಳಿತುಕೊಂಡರೂ ಸಹ ಅದು ದೇವರಾಗಬಹುದು, ಸರ್ವ ಲೋಕಗಳನ್ನು ಆಳಬಹುದು, ಮತ್ತೇನು ಮಾಡಬೇಕೆಂದಿಲ್ಲ, ಸುಮ್ಮನೆ ಹೋಗಿ ಅಲ್ಲಿ ಕುಳಿತರು ಸಹ ಅವನು ಸರ್ವ ಲೋಕಾಧಿಪತಿಯಾಗಬಹುದು ಎಂದು ಬ್ರಹ್ಮನಿಗೆ ಅನ್ನಿಸಿತು.

     

ಹಾಗೆಲ್ಲ ಯಾರೂ ಅಲ್ಲಿ ಸುಮ್ಮನೆ ಕುಳಿತುಕೊಳ್ಳುವುದಕ್ಕಾಗುವುದಿಲ್ಲ, ವಿಘ್ನಗಳು, ಪರೀಕ್ಷೆಗಳು, ಮಧ್ಯೆ ತಡೆಗಳು ಬರುತ್ತವೆ. ಅದೇಕೆ ಬ್ರಹ್ಮನು ಆಲೋಚಿಸಿದನೆಂದರೆ, ಈ ಸಿಂಹಾಸನದಲ್ಲಿ ಶೋಭಿಸುವುದಾದರೆ ಅದು ಸಾಕ್ಷಾತ್ ತಾಯಿ ರಾಜರಾಜೇಶ್ವರಿ, ಲಲಿತಾತ್ರಿಪುರಸುಂದರಿಯೇ ಆಗಬೇಕು. ಮತ್ತ್ಯಾರಿಗೂ ಸಾಧ್ಯವಿಲ್ಲ. ಆಗ ಬ್ರಹ್ಮದೇವನಿಗೆ ಶಾಸ್ತ್ರದ ನೆನಪಾಯಿತು. ಶಾಸ್ತ್ರವೇನೆಂದರೆ, ನಾರಿಯೊಬ್ಬಳೇ ಅಥವಾ ಪುರುಷರೊಬ್ಬರೇ ಸಿಂಹಾಸನವೇರುವಂತಿಲ್ಲ. ಏಕೆಂದರೆ "ದಂಪತ್ಯೋಃ ಸಹಾಧಿಕಾರಃ, ನ ಕೇವಲಾ ಸ್ತ್ರೀ ರಾಜ್ಯಾರ್ಹ, ಪುರುಷೋsಪಿ ತಯಾಪಿ ನಾ". ಕೇವಲ ಸ್ತ್ರೀ ಸಿಂಹಾಸನಕ್ಕೆ ಅರ್ಹಳಲ್ಲ. ಪುರುಷನಾದರೂ ಸಹ ಸತಿ ಇಲ್ಲದೆ ಸಿಂಹಾಸನವನ್ನು ಏರುವಂತಿಲ್ಲ. ರಾಮನ ಪಟ್ಟಾಭಿಷೇಕವೆಂದರೆ ಸೀತಾರಾಮರ ಪಟ್ಟಾಭಿಷೇಕವೆಂದರ್ಥ. ರಾಮನನ್ನು ಸೀತೆಯೊಡನೆ ಸಿಂಹಾಸನದಲ್ಲಿ ಕುಳ್ಳಿರಿಸಿ, ವಸಿಷ್ಠರು ಇಬ್ಬರಿಗೂ ಅಭಿಷೇಕ ಮಾಡಿದ್ದು. ಹಾಗೆ ಶಾಸ್ತ್ರವೇನೆಂದರೆ, ಸಿಂಹಾಸನವನ್ನು ಏರುವವನು ಮಂಗಳಾಚಾರದಿಂದ ಕೂಡಿರಬೇಕು. ಅವನ ಆಚಾರ ಮಂಗಲಮಯವಾಗಿರಬೇಕು. ದುರಾಚಾರಿಯನ್ನು ಸಿಂಹಾಸನದಲ್ಲಿ ಕೂರಿಸಬಾರದು. ಅವನ ಶರೀರದಲ್ಲಿ ಮಹಾಪುರುಷರ ಚಿಹ್ನೆಗಳು, ಲಕ್ಷಣಗಳು ಇರಬೇಕು. ಹಾಗೆಯೇ ಅನುರೂಪಳಾದ, ಯೋಗ್ಯಳಾದ ಸತಿಯೊಡನೆ ಕೂಡಿರಬೇಕು. ಹಾಗಿದ್ದರೆ ಮಾತ್ರ ರಾಜ್ಯಾಭಿಷೇಕದ ಅರ್ಹತೆ ಬರುವಂತದ್ದು. ಈಗ ಲಲಿತಾ ತ್ರಿಪುರಸುಂದರಿಯನ್ನು ಸಿಂಹಾಸನದಲ್ಲಿ ಕೂರಿಸುವುದು ಹೇಗೆ ಎಂಬ ಪ್ರಶ್ನೆ. ಆಗ ದೇವಿಗೆ ಮದುವೆ ಮಾಡಬೇಕು ಎಂದು ಬ್ರಹ್ಮನಿಗೆ ಅನ್ನಿಸಿತು. ರಾಜರಾಜೇಶ್ವರಿಗೆ ಮದುವೆ ಮಾಡಿದರೆ ಸಿಂಹಾಸನವೇರುವುದಕ್ಕೆ ಮತ್ತು ಇಷ್ಟೆಲ್ಲ ಮಾಡಿದ್ದು ಸಾರ್ಥಕವಾಗುತ್ತದೆ. ಆದರೆ ದೇವಿಗೆ ಸಮನಾದ ವರ ಯಾರು ಎಂಬುದು ದೊಡ್ಡ ಪ್ರಶ್ನೆ. ಈ ಪ್ರಶ್ನೆ ಇಡೀ ಜಗತ್ತಿಗೆ ಕಾಡುತ್ತಿರುವುದು. ಹೆಣ್ಣು ಹೊತ್ತಿರುವ ತಾಯಿ ತಂದೆಯರಿಗೆಲ್ಲಾ ಇದೇ ಪ್ರಶ್ನೆ, ಇವಳಿಗೆ ಯಾರು ಯೋಗ್ಯ, ಇವಳು ಯಾರಿಗೆ ಯೋಗ್ಯಳು ಎಂದು. ಜನಕ ಮಹಾರಾಜನಿಗೂ ಅದೇ ಪ್ರಶ್ನೆ ಕಾಡಿತ್ತು. ಸೀತೆ ಬೆಳೆಯುವಾಗ ಅವನಿಗೆ ಬಹು ದೊಡ್ಡ ಚಿಂತೆಯಾಗಿತ್ತು, ಇವಳಿಗೆ ಸರಿ ಹೊಂದುವ ವರನು ಜಗತ್ತಿನಲ್ಲಿ ಎಲ್ಲಿದ್ದಾನೆ ಯಾರಿದ್ದಾನೆ ಎಂದು. ಇದೇ ಯೋಗ್ಯತೆಗೆ ತಕ್ಕ ಯೋಗ್ಯತೆಯುಳ್ಳ ವರಬೇಕಲ್ಲ. ಹಾಗೆ ದೊಡ್ಡ ಚಿಂತೆಯಾಯಿತು ಬ್ರಹ್ಮದೇವನಿಗೆ. ಶಿವನನ್ನು ಹೊರತು ಈ ಮೂರು ಲೋಕದಲ್ಲಿ ಯಾರೂ ಕೂಡ ಈಕೆಗೆ ಅರ್ಹರಲ್ಲ, ಎಂದು ಬ್ರಹ್ಮದೇವನಿಗೆ ಗೊತ್ತಿತ್ತು. ಶಿವನೇ ಈಕೆಗೆ ವರನಾಗಲು ಅರ್ಹ, ಆದರೆ ಮದುವೆ ಮಾಡುವುದು ಅಷ್ಟು ಸುಲಭವಲ್ಲ. ಈ ಉತ್ತಮ ನಾರಿಣಿ ಶೃಂಗಾರದೇವತೆಯಂತೆ ಶೋಭಿಸುತ್ತಿದ್ದಾಳೆ. ಆದರೆ ಶಿವ, ಸಂಸ್ಕಾರವಿಲ್ಲದ ಜಡೆಗಟ್ಟಿದ ಕೂದಲು, ಕಪಾಲಮಾಲೆಯನ್ನು ಕೊರಳಲ್ಲಿ ಧಾರಣೆ, ಕೈಯಲ್ಲೊಂದು ಕಪಾಲ, ಚಿತೆಯ ಭಸ್ಮವನ್ನು ದೇಹಕ್ಕೆಲ್ಲಾ ಬಳಿದುಕೊಂಡಿರುವ, ಸ್ಮಶಾನದಲ್ಲಿ ವಿಹರಿಸುವ, ನೋಡಿದರೆ ಭಯವಾಗುವಂತಹ ರುದ್ರರೂಪ, ಎಲ್ಲಾ ಅಮಂಗಲಕ್ಕೂ ಅವನೇ ಜಾಗವಾಗಿದ್ದಾನೆ. ಹಾವುಗಳು, ಚಿತಾಭಸ್ಮ, ಕಪಾಲ ಇಂತಹ ಅಮಂಗಲವನ್ನೇ ಹೊಂದಿರುವ ಶಿವನನ್ನು ದೇವಿಯು ಒಪ್ಪುವಳೇ? ರುದ್ರನನ್ನು ಖಂಡಿತವಾಗಿಯೂ ಈಕೆಯು ಒಪ್ಪಲಿಕ್ಕಿಲ್ಲ ಎಂದು ಬ್ರಹ್ಮನಿಗನ್ನಿಸಿತು.


ಹಾಸ್ಯದಲ್ಲಿ ಎರಡು ವಿಧ. ಒಂದು ಆತ್ಮಗತ ಹಾಸ್ಯ, ಇನ್ನೊಂದು ಪರಗತ ಹಾಸ್ಯ. ಆತ್ಮಗತ ಹಾಸ್ಯವೆಂದರೆ ನಮ್ಮನ್ನು ನಾವೇ ತಮಾಷೆ ಮಾಡಿಕೊಳ್ಳುವಂತದ್ದು. ಪರಗತ ಹಾಸ್ಯವೆಂದರೆ ಇನ್ನೊಬ್ಬರನ್ನು ತಮಾಷೆ ಮಾಡುವಂತದ್ದು. ಆತ್ಮಗತ ಹಾಸ್ಯ ಶ್ರೇಷ್ಠವಾದದು. ಶಂಕರಾಚಾರ್ಯರ ರೂಪದಲ್ಲಿ ಶಿವನೇ ತನ್ನನ್ನು ತಾನು ಹಾಸ್ಯ ಮಾಡಿಕೊಳ್ಳುತ್ತಾನೆ. ಚಿತಾ ಭಸ್ಮಧಾರಿಯಾಗಿ, ವಿಷವೇ ಅಶನವಾಗಿ, ದಿಕ್ಕುಗಳೇ ಬಟ್ಟೆ ಎಂದರೆ ದಿಗಂಬರ, ಜಟಾಧಾರಿಯಾಗಿ, ಕೊರಳಲ್ಲಿ ಸರ್ಪಗಳ ಮಾಲೆ, ಪಶುಗಳ ಒಡೆಯ, ಕಪಾಲಿ, ಭೂತಪ್ರೇತಗಳನ್ನೇ ತನ್ನ ಬಳಗವಾಗಿಟ್ಟುಕೊಂಡ ಇಂತಹ ಶಿವನು ಜಗದೀಶ್ವರನಾಗಿದ್ದು ಹೇಗೆ ಎಂದು ಶಂಕರಾಚಾರ್ಯರು ಪ್ರಶ್ನೆ ಮಾಡಿದಾಗ, ಅವರೇ ಹೀಗೆ ಉತ್ತರಿಸುತ್ತಾರೆ, ಆ ಜಗದಂಬ ಭವಾನಿಯ ಕೈ ಹಿಡಿದುದರಿಂದ ಶಿವನು ಜಗದೀಶ್ವರನಾದನು ಎಂದು ಶಂಕರಾಚಾರ್ಯರ ರೂಪದಲ್ಲಿ ಶಂಕರನು ತನಗೆ ತಾನೆ ಹೇಳಿಕೊಂಡಿದ್ದು. ಇನ್ನು ಶಿವ ತಾನೇ ಹೇಳಿಕೊಂಡಿದ್ದು ಕೂಡ ಇದೆ. ಪಾರ್ವತಿ ಶಿವನನ್ನು ಕುರಿತು ತಪಸ್ಸು ಮಾಡುತ್ತಿದ್ದಾಗ, ಶಿವನು ಬ್ರಹ್ಮಚಾರಿ ರೂಪವನ್ನು ತಾಳಿ ಅಲ್ಲಿಗೆ ಹೋಗಿ, ಅವಳನ್ನು ಹಾದಿ ತಪ್ಪಿಸುವ ಪ್ರಯತ್ನವನ್ನು ಮಾಡುತ್ತಾನೆ. ಪಾರ್ವತಿಗೆ ಶಿವನು ಹೀಗೆನ್ನುತ್ತಾನೆ, "ಈ ಪ್ರಪಂಚದಲ್ಲಿ ಎರಡು ವಸ್ತುಗಳು ಶಿವನ ಸಹವಾಸ ಮಾಡಿ ಶೋಚನೀಯ ಸ್ಥಿತಿಗೆ ಬಂದಿತು. ಒಂದು ಚಂದ್ರಕಲೆ, ಇನ್ನೊಂದು ಲೋಕದ ಕಣ್ಣಿಗೆ ಬೆಳದಿಂಗಳಾದ ನೀನು. ಇಂತಹ ಎರಡು ಒಳ್ಳೆಯ ವಸ್ತುಗಳು ಶಿವನೊಟ್ಟಿಗೆ ಸೇರಿ ಹಾಳಾಯಿತು" ಎಂದು ಹೇಳುತ್ತಾನೆ. ನಂತರ ಶಿವನ ಬಗ್ಗೆ ವಿವಾಹಕ್ಕೆ ಯೋಗ್ಯನಾ ಎಂದು ವಿವರಿಸುತ್ತಾನೆ. ಹೆಣ್ಣು ಹೆತ್ತವರಾದ ನಿಮಗೆಲ್ಲ ತುಂಬಾ ಹತ್ತಿರ ಉಂಟಿದು. ಕೆಲವಾರು ಸಂಗತಿಗಳನ್ನು ಹೆಣ್ಣು ಹೆತ್ತವರು ಮತ್ತು ಹೆಣ್ಣುಮಕ್ಕಳು ಬಯಸುತ್ತಾರೆ. ಹುಡುಗನು ಒಳ್ಳೆಯ ರೂಪವಂತನಾಗಿ ಇರಬೇಕೆಂದು ಹುಡುಗಿಯು ಬಯಸುತ್ತಾಳೆ. ಶಿವನ ರೂಪವೋ, ಅವನ ಹೆಸರೇ ವಿರೂಪಾಕ್ಷ. ಎಲ್ಲರಿಗೂ ಎರಡು ಕಣ್ಣಾದರೆ ಇವನಿಗೆ ಮೂರು ಕಣ್ಣು, ಐದು ಮುಖಗಳು. ಹುಡುಗನು ಉತ್ತಮ ಕುಲದವನಾಗಿರಬೇಕೆಂದು ಹುಡುಗಿಯ ತಂದೆ ಅಪೇಕ್ಷಿಸುತ್ತಾನೆ. ಈ ಶಿವನಿಗೆ ತಂದೆ ತಾಯಿಯೇ ಇಲ್ಲ. ಹುಡುಗನ ಸಂಪತ್ತನ್ನು ಹುಡುಗಿಯ ತಾಯಿ ನೋಡುತ್ತಾಳೆ. ಈ ಶಿವನನ್ನು ನೋಡಿದರೆ ದಿಗಂಬರ.



"ವರೇಶು ಯದ್ಬಾಲಮೃಗಾಕ್ಷ  ಮೃಗ್ಯತೇ ತದಸ್ತಿ ಕಿಮ್  ವ್ಯಸ್ತಮಪಿತ್ರಿಲೋಚನೇ" ಒಂದಾದರೂ ಉಂಟೇ ಮೂರರಲ್ಲಿ?! ಒಂದೂ ಇಲ್ಲ. ರೂಪಾಂತರದ ಶಿವ ಪಾರ್ವತಿಯನ್ನು ತಮಾಷೆ ಮಾಡುತ್ತಾನೆ, ಇಂತಹ ಚಂದದ ನೀನು ಮುದಿ ಎತ್ತಿನ ಮೇಲೆ ಶಿವನ ಹಿಂದೆ ಕುಳಿತುಕೊಂಡರೆ ಅದು ದೊಡ್ಡ ತಮಾಷೆಯಾಗುತ್ತದೆ. ಅದನ್ನು ನೋಡಿದವರೆಲ್ಲಾ ನಗುತ್ತಾರೆ. ಆಗ ಪಾರ್ವತಿಗೆ ಕೋಪ ಬಂದಿತಂತೆ. ಇಂತಹ ಒಂದು ಶೃಂಗಾರದೇವತೆ, ಸೌಂದರ್ಯಸಾರಸೀಮಾನ್ತಾಮ್ ಆಕೆ ಹೇಗೆ ಶಿವನನ್ನು ಒಪ್ಪಬಹುದು? ಎಂದು ಬ್ರಹ್ಮ ಚಿಂತಿಸತೊಡಗಿದನು. ಹಾಗೆ ಚಿಂತೆ ಮಾಡುತ್ತಿರುವಾಗ ಒಂದು ಉತ್ತರ ಪ್ರಕಟವಾಯಿತಂತೆ. ಒಂದು ರೂಪ ಪ್ರಕಟವಾಯಿತಂತೆ ಅಲ್ಲಿ. ಆ ರೂಪ ಹೇಗಿತ್ತು ಅಂದರೆ "ಕೋಟಿ ಕಂದರ್ಪ ಲಾವಣ್ಯಯುಕ್ತಃ", ಒಂದು ಕೋಟಿ ಕಂದರ್ಪರ ರೂಪವನ್ನು ಒಟ್ಟುಗೂಡಿಸಿದರೂ ಕೂಡ ಅದಕ್ಕೆ ಸರಿಸಮಾನವಲ್ಲ, ಅಂತಹ ರೂಪ ಲಾವಣ್ಯದಿಂದ ಕೂಡಿದ ಒಂದು ದಿವ್ಯ ಶರೀರ. ದಿವ್ಯಾಂಬರದರಃ,  ದಿವ್ಯವಾದ ವಸ್ತ್ರಗಳು, ದಿವ್ಯವಾದ ಮಾಲೆ, ದಿವ್ಯಗಂಧದಿಂದ ಅನುಲೇಪಗೊಂಡಿದ್ದಾನೆ, ದಿವ್ಯಗಂಧ ಸೂಸುತ್ತಿದೆ. ಶಿರದಲ್ಲಿ ಕಿರೀಟ, ಕೊರಳಿನಲ್ಲಿ ಹಾರ, ಭುಜಗಳಲ್ಲಿ ಕೇಯೂರ, ಕರ್ಣಗಳಲ್ಲಿ ಕುಂಡಲ ಇವು ಆತನ ಆಭರಣಗಳು. ಒಂದೇ ಮಾತಿನಲ್ಲಿ ಹೇಳುವುದಾದರೆ, "ಜಗನ್ಮೋಹನರೂಪಧತು" ಜಗತ್ತನ್ನೇ ವಿಮೋಹನಗೊಳಿಸುವಂತಹ, ಲಲಿತೆಯರೂಪಕ್ಕೆ ಸರಿಸಾಟಿಯಾಗಬಹುದಂತಹ, ಒಂದು ಆಕೃತಿ ಬ್ರಹ್ಮನ ಮುಂದೆ ಪ್ರಕಟವಾಯಿತು. ಬ್ರಹ್ಮನೇ ವಿಸ್ಮಿತನಾಗಿ ನೋಡುತ್ತಿದ್ದಾನೆ. ಬ್ರಹ್ಮನಿಗೆ ವಿಮೋಹನವಾಯಿತು. ಸ್ವಲ್ಪ ಸಾವರಿಸಿಕೊಂಡು ಯಾರು ಎಂದು ನೋಡಿದರೆ ಅದು "ಶಿವ"!



ನಾವು ಮನಸ್ಸಿನಲ್ಲಿ ಆಲೋಚನೆ ಮಾಡಿದರೂ ಸಹ ದೇವರಿಗೆ ಅದು ತಿಳಿಯುತ್ತದೆ. ನಾವು ಮನಸ್ಸಿನಲ್ಲಿ ಬೇಡವಾಗಿದ್ದನ್ನು ಸಹ ಯೋಚಿಸುತ್ತೇವೆ, ದೇವರ ಬಗ್ಗೆಯೂ ಸಹ ಯೋಚಿಸುತ್ತೇವೆ. ಎಲ್ಲವನ್ನೂ ದೇವರು ನೋಡುತ್ತಿರುತ್ತಾನೆ. ಬ್ರಹ್ಮದೇವರು ಮನಸ್ಸಿನಲ್ಲಿಯೇ ಯೋಚಿಸುತ್ತಿದ್ದದ್ದು ಶಿವನಿಗೆ ಕೇಳಿಸಿ ಹೋಯಿತು. ಮರುಕ್ಷಣದಲ್ಲಿ ಬ್ರಹ್ಮನ ಮುಂದೆ ಸುಂದರೇಶ್ವರನಾಗಿ ಪ್ರಕಟವಾಗುತ್ತಾನೆ. ಅದು ನವತರುಣನ ರೂಪವಂತೆ. ಬ್ರಹ್ಮ ಆ ರೂಪವನ್ನು ಆಲಂಗಿಸಿಕೊಂಡನಂತೆ. ಶಿವನ ಆಚೆಯ ರೂಪವಾದರೆ ಸ್ವಲ್ಪ ದೂರವೇ ಉಳಿಯುತ್ತಿದ್ದ. ಆದರೆ ಈ ನವತರುಣನ ರೂಪವನ್ನು ನೋಡಿ, ಹೋಗಿ ತಬ್ಬಿಕೊಂಡು, ಆ ಕಮನೀಯ, ಮನೋಹರ ರೂಪಕ್ಕೆ ಒಂದು ಹೆಸರಿಟ್ಟನಂತೆ. ಆ ಹೆಸರೇನೆಂದರೆ "ಕಾಮೇಶ್ವರ". ಬ್ರಹ್ಮನ ಮನಸ್ಸಿನಲ್ಲಿ ದೇವಿಗೆ ಇವನೇ ಸರಿ, ಇವನೇ ಯೋಗ್ಯ ಎಂಬುದಾಗಿ ಬಂತು. ಬ್ರಹ್ಮ ಸುಂದರೇಶ್ವರನನ್ನು ಕರೆದುಕೊಂಡು, ದೇವಿ ರಾಜರಾಜೇಶ್ವರಿ ಇರುವಲ್ಲಿಗೆ ಮುಂದುವರೆದು ಹೋಗುತ್ತಾನೆ.


ತ್ರಿಮೂರ್ತಿಗಳೆಲ್ಲಾ ದೇವಿಯ ಸ್ತೋತ್ರವನ್ನು ಮಾಡುತ್ತಿದ್ದಾರೆ. ಅಲ್ಲಿಗೆ ಹೋದಾಗ ಕಾಮೇಶ್ವರನಿಗೆ ರಾಜರಾಜೇಶ್ವರಿಯನ್ನು ಕಂಡ ಕೂಡಲೇ ಅನುರಾಗ ಉಂಟಾಯಿತು. ರಾಜರಾಜೇಶ್ವರಿಗೂ ಕೂಡ ಹಾಗೆ, ಯಾವಾಗ ಕಾಮೇಶ್ವರನನ್ನು ಕಂಡಳೋ, ಅವಳ ಮನಸ್ಸು ಮಾರುಹೋಯಿತು. ಇದು ದಿವ್ಯವಾಗಿರುವಂತದ್ದು. ಆಕರ್ಷಣೆಗಳು ಅಪರೂಪವೇನೂ ಅಲ್ಲ. ಈ ಪ್ರಪಂಚದಲ್ಲಿ ನಾವು ಆಕರ್ಷಣೆಗಳನ್ನು ನೋಡುತ್ತೇವೆ ಮತ್ತು ಅನುಭವಿಸುತ್ತೇವೆ. ಅವೆಲ್ಲಾ ಕ್ಷಣಭಂಗುರ. ಅವುಗಳಿಗೆ ಆಳವೂ ಇಲ್ಲ, ಅಗಲವೂ ಇಲ್ಲ, ಉದ್ದವೂ ಕೂಡ ಇಲ್ಲ. ಆ ಸಾಲಿಗೆ ಇದು ಸೇರುವುದಿಲ್ಲ. ಎಲ್ಲಾ ಒಂದೇ ಅಲ್ಲ. ಇದೊಂದು ಮೂಲಪ್ರಕೃತಿ,  ಮೂಲಪುರುಷತತ್ವಗಳ ನಡುವೆ  ಏರ್ಪಡುವ ಒಂದು ಸಮನ್ವಯ, ಸಮಾಗಮ. ಇಬ್ಬರೂ ಕೂಡ ಮೈ ಮರೆತು ಪರಸ್ಪರರಲ್ಲಿ ಆಸಕ್ತರಾದರು. ಬ್ರಹ್ಮ ದೇವಿಯನ್ನು ಸ್ವಲ್ಪ ಎಚ್ಚರಿಸುತ್ತಾನೆ. ಬ್ರಹ್ಮ ದೇವಿಯನ್ನು ಕುರಿತು ಹೇಳುತ್ತಾನೆ, ಅಮ್ಮಾ! ಈ ಎಲ್ಲಾ ದೇವತೆಗಳು, ಋಷಿಗಳು, ಗಂಧರ್ವರು, ಅಪ್ಸರೆಯರು ಏಕೆ ಬಂದಿದ್ದಾರೆ ಗೊತ್ತೇ? ಇವರೆಲ್ಲರ ಮನಸ್ಸಿನಲ್ಲಿ ಒಂದು ಅಪೇಕ್ಷೆ ಇದೆ. ಅದನ್ನು ನೀನು ಈಡೇರಿಸಬೇಕಾಗಿದೆ. ಅದೇನೆಂದರೆ ನೀನೊಂದು ಮದುವೆಯಾಗಬೇಕು, ನಿನಗೊಂದು ಜೊತೆ ಬೇಕು. ಯಾರು ನಿನಗೆ ಅನುರೂಪ, ಯಾರು ನಿನಗೆ ಪ್ರಿಯ, ಯಾರು ಅಂತಹ ಭಾಗ್ಯಶಾಲಿ, ಧನ್ಯತಮ ಅವರನ್ನು ಆರಿಸುತ್ತೀಯಾ? 


"ಲೋಕಸಂರಕ್ಷಣಾರ್ಥಾಯ", ಈ ಕಲ್ಯಾಣ ಲೋಕ ರಕ್ಷಣೆಯ ಸಲುವಾಗಿ, ಇದು ಸ್ವಾರ್ಥದ ವಿವಾಹವಲ್ಲ. ಅಮ್ಮಾ, ನಾನು ಯಾಕೆ ಇದನ್ನು ಪ್ರಸ್ತಾಪಿಸುತ್ತಿದ್ದೇನೆಂದರೆ, ಈ ಶ್ರೀಮನ್ನಗರಕ್ಕೆ ನೀನು ನಾಯಕಿ ಆಗಬೇಕು, ಸಿಂಹಾಸನವನ್ನು ಏರಬೇಕು, "ಶ್ರೀಮಾತಾ",  "ಶ್ರೀಮಹಾರಾಜ್ಞಿ" ಆಗಬೇಕು. ಅದಕ್ಕೆ ಇದೊಂದು ಅಗತ್ಯ. ನೀನು ಮದುವೆಯಾಗಬೇಕು. ದೇವರ್ಷಿಗಳು ನಿನ್ನನ್ನು ಪುಣ್ಯ ಜಲದಿಂದ ಅಭಿಷೇಕ ಮಾಡಲಿ. ನೀನು ಸಾಮ್ರಾಜ್ಯಲಕ್ಷ್ಮಿಯಾಗಿ,  ಸರ್ವಾಭರಣಸಂಯುಕ್ತಳಾಗಿ ಶೋಭಿಸು. ನಾವು ನಿನ್ನನ್ನು ನೋಡಿ ಕಣ್ತುಂಬಿಕೊಳ್ಳುತ್ತೇವೆ. 


ಆಗ ಮಂದಸ್ಮಿತದೊಡನೆ ದೇವಿ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೇಳಿದಳಂತೆ, ನಾನೀಗ ಸ್ವತಂತ್ರಳು.  ಸ್ವೇಚ್ಛೆ ಇಂದ ಮನಸ್ಸಿಗೆ ಬಂದಲ್ಲಿ ಹೋಗುತ್ತೇನೆ, ಬರುತ್ತೇನೆ. ಈ ಮದುವೆ ಆದರೆ ಸ್ವಾತಂತ್ರ್ಯ ಎಲ್ಲಿರುತ್ತದೆ. ಸ್ವಾತಂತ್ರ್ಯಾಹಂ ಸದಾ ದೇವಃ ಸ್ವೇಚ್ಛಾಚಾರ ವಿಹಾರಿಣೀ| ಮಮಾನುರೂಪಚರಿತೋ ಭವಿತಾತೋ ಮಾಮಪ್ರಿಯಃ|| ನನ್ನ ಸ್ವಾತಂತ್ರ್ಯಕ್ಕೆ ಭಂಗತರದಿದ್ದರೆ ಆಗಬಹುದು ಎಂದು ದೇವಿ ಈ ರೂಪದಲ್ಲಿ ತನ್ನ ಒಪ್ಪಿಗೆಯನ್ನು ಸೂಚಿಸುತ್ತಾಳೆ. ಅದಕ್ಕೆ ದೇವತೆಗಳು ಹೇಳಿದರಂತೆ, ಅಮ್ಮಾ! ನೀನೇ ಪರಬ್ರಹ್ಮ, ನೀನೇ ಪ್ರಕೃತಿ, ನೀನೇ ಸೃಷ್ಟಿ ಮಾಡುವವಳು, ನೀನೇ ಪ್ರಪಂಚವನ್ನು ನಡೆಸುವವಳು. ನಿನ್ನಿಂದಲೇ ಸೂರ್ಯೋದಯ, ನಿನ್ನಿಂದಲೇ ಸೂರ್ಯಾಸ್ತ. ನಿನ್ನಿಂದಲೇ ಸೃಷ್ಟಿ, ನಿನ್ನಿಂದಲೇ ಪ್ರಳಯ. ಮತ್ತೆ ಯಾವ ರೀತಿಯಿಂದ ನಿನ್ನ ಸ್ವಾತಂತ್ರ್ಯಕ್ಕೆ ತೊಂದರೆ ಬರಬಹುದು? ಅದೆಲ್ಲಾ ಏನೂ ಇಲ್ಲ. ನೀನು ಯಾರನ್ನಾದರೂ ಆರಿಸಿ ವರಿಸಬೇಕು. ನಿನಗಾಗಿ ಅಲ್ಲ ಲೋಕಾನುಗ್ರಹಕ್ಕಾಗಿ ಯಾರನ್ನಾದರೂ ಒಲಿಸು ಎಂದು ಮತ್ತೆ ದೇವತೆಗಳು ಕೇಳಿದಾಗ, ದೇವಿ ಒಂದು ಲೀಲೆಯನ್ನು ಮಾಡುತ್ತಾಳೆ. ವರಮಾಲೆಯನ್ನು ಕೈಯಲ್ಲಿ ತೆಗೆದುಕೊಂಡು ಆಕಾಶಕ್ಕೆ ಚಿಮ್ಮಿದಳಂತೆ. ಅದು ಗಗನದ ಎತ್ತರದಿಂದ  ಇಳಿದು, ಇಳಿದು ಬಂದು ಕಾಮೇಶ್ವರನ ಕೊರಳಿನಲ್ಲಿ ಬಿದ್ದು ಬಿಟ್ಟಿತು. ಆಕಾಶಕ್ಕೆ ಹಾರಿದ ಆ ಮಾಲೆ ಮೆಲ್ಲನೆ ಬಂದು ಕಾಮೇಶ್ವರನ ಕಂಠದಲ್ಲಿ ಇಳಿದಾಗ, ದೇವತೆಗಳು ಜೈ ಜೈಕಾರ ಮಾಡಿದರು. ಪುಷ್ಪವೃಷ್ಟಿಯೇ ಅಲ್ಲಿ ಏರ್ಪಟ್ಟಿತು. ತ್ರಿಮೂರ್ತಿಗಳು ಸಂತೋಷ ಪಡುತ್ತಾರೆ. ಬ್ರಹ್ಮನೇ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ವಿಷ್ಣುವನ್ನು ಕರೆದು ಬ್ರಹ್ಮ ಹೇಳುತ್ತಾನೆ, ಮದುವೆಯನ್ನು ನೀನು ಮಾಡಿಸಬೇಕು. ಏಕೆಂದರೆ ನೀನು ಬೇರೆಯಲ್ಲ ಆಕೆ ಬೇರೆಯಲ್ಲ. ಅನೇಕ ಬಾರಿ ಇದರ ಪ್ರಸ್ತಾಪ ಆಗಿದೆ.



"ತ್ವದ್ರೂಪಿಣಿ  ಮಹಾದೇವಿ ಸಹಜಶ್ಚ  ಭವಾನಸೀ" ವಿಷ್ಣುವಿಗೆ ಬ್ರಹ್ಮ ಹೇಳುವುದು, ನಿನ್ನದೇ ಮತ್ತೊಂದು ರೂಪವದು ಅಥವಾ ನೀನು ಆಕೆಯ ಸೋದರ. ಜಗನ್ಮಂಗಳಕಾರಕವಾದಂತಹ ಮುಹೂರ್ತ ಬಂದಿದೆ. ಹಾಗಾಗಿ ಶಿವಶಿವೆಯರ ಕಲ್ಯಾಣವನ್ನು ಮಾಡಿಸು ಎಂದು ಬ್ರಹ್ಮ ಹೇಳಿದಾಗ, ವಿಷ್ಣು ಅದನ್ನು ತುಂಬಾ ಪ್ರೀತಿಯಿಂದ ಒಪ್ಪಿಕೊಂಡು ವಿಧಿವತ್ತಾಗಿ ವಿವಾಹ ಮಹೋತ್ಸವವನ್ನು ಏರ್ಪಡಿಸುತ್ತಾನೆ. ದೇವತೆಗಳು, ಋಷಿಗಳು, ಗಂಧರ್ವರು, ಅಪ್ಸರೆಯರು ಮುಂತಾದ ಎಲ್ಲಾ ದೇವಗಣಗಳ ಸಾನ್ನಿಧ್ಯದಲ್ಲಿ ಜಲ ಪೂರ್ವಕವಾಗಿ ಕಲ್ಯಾಣವನ್ನು ಆದಿಕೇಶವನು ನೆರವೇರಿಸುತ್ತಾನೆ. ದೇವತೆಗಳೆಲ್ಲಾ ಉಡುಗೊರೆಗಳನ್ನು ಕೊಡುತ್ತಾರೆ. ಬ್ರಹ್ಮ ಕಬ್ಬಿನಬಿಲ್ಲನ್ನು(ಇಕ್ಷುಚಾಪ) ಉಡುಗೊರೆಯಾಗಿ ಕೊಡುತ್ತಾನೆ. ಕಬ್ಬಿನಬಿಲ್ಲಾದರೂ ಕೂಡ ಅದು ಪೂರ್ಣ ಕಬ್ಬಿನಬಿಲ್ಲು ಎಂದು ಭಾವಿಸಬಾರದು. "ವಜ್ರಸಾರಂ" ಸಮಯ ಬಂದರೆ ವಜ್ರಸಾರ ಅದು."ಅನಶ್ವರಂ", ನಾಶವಾಗದಂತದ್ದು. ವಿಷ್ಣು ಪುಷ್ಪಾಯುಧವನ್ನು ಕೊಟ್ಟನು, ಹೂವಿನ ಬಾಣ. ಒಂದು ಕೈಯಲ್ಲಿ ಕಬ್ಬಿನಬಿಲ್ಲು, ಇನ್ನೊಂದರಲ್ಲಿ ಹೂವಿನ ಐದು ಬಾಣಗಳನ್ನು ಧಾರಣೆ ಮಾಡುತ್ತಾಳೆ. ಮತ್ತೊಂದು ಕೈಯಲ್ಲಿ ನಾಗಪಾಶವನ್ನು ಧಾರಣೆ ಮಾಡುತ್ತಾಳೆ, ಅದು ವರುಣ ಕೊಟ್ಟಿದ್ದು. ಇನ್ನೊಂದು ಕೈಯಲ್ಲಿ ವಿಶ್ವಕರ್ಮ ಕೊಟ್ಟಿರುವಂತಹ ಅಂಕುಶವನ್ನು ಧಾರಣೆ ಮಾಡುತ್ತಾಳೆ. ಅಗ್ನಿ ಕಿರೀಟವನ್ನು ಕೊಟ್ಟ. ಸೂರ್ಯ-ಚಂದ್ರರು ತಾವೇ ದೇವಿಯ ಕರ್ಣಗಳಲ್ಲಿ ತಾಟಂಕಿ ಅಂದರೆ ಓಲೆಗಳಾಗಿ ಕುಳಿತುಕೊಂಡುಬಿಟ್ಟರು. "ತಾಟಂಕ ಯುಗಲೀ ಭೂತ ತಪನೋಡುಪಮಂಡಲಃ" ತಪನ ಎಂದರೆ ಸೂರ್ಯ, ಉಡುಪ ಅಂದರೆ ನಕ್ಷತ್ರಗಳ ರಾಜ ಚಂದ್ರ. ಸೂರ್ಯಮಂಡಲ, ಚಂದ್ರಮಂಡಲಗಳೇ ಅವಳ ತಾಟಂಕಗಳು ಎಂದರ್ಥ. ಸಮುದ್ರರಾಜ ನವರತ್ನಗಳ ಮಾಲೆಯನ್ನು ಸಮರ್ಪಣೆ ಮಾಡುತ್ತಾನೆ. ಸುರರಾಜ ಇಂದ್ರ ಅಕ್ಷಯವಾದ ಮಧುಪಾತ್ರೆಯನ್ನು ನೀಡುತ್ತಾನೆ. ಚಿಂತಾಮಣಿಯ ಮಾಲೆಯನ್ನು ಕುಬೇರ ಕೊಡುತ್ತಾನೆ. ಶ್ರೀಹರಿ ಇನ್ನೊಂದು ಉಡುಗೊರೆಯನ್ನು ಕೊಡುತ್ತಾನೆ, ಸಾಮ್ರಾಜ್ಯ ಸೂಚಕವಾದ ಶ್ವೇತಛತ್ರವನ್ನು ಕೊಡುತ್ತಾನೆ. ಗಂಗೆಯಮುನೆಯರು ಚಾಮರವಾಗುತ್ತಾರೆ, ಚಾಮರದ ಸೇವೆಯನ್ನು ಮಾಡುತ್ತಾರೆ. ಬ್ರಹ್ಮ, ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರು, ಅಶ್ವಿನೀ ದೇವತೆಗಳು, ದಿಕ್ಪಾಲಕರು, ಮರುತರು, ಗಂಧರ್ವರು ಇವರೆಲ್ಲರೂ ಸಂತೋಷದಿಂದ ಕೂಡಿದವರಾಗಿ ಚದುರಂಗ ಸೇನೆಯನ್ನು ಮತ್ತು ಆಯುಧಗಳನ್ನು ದೇವಿಗೆ ಸಮರ್ಪಣೆ ಮಾಡುತ್ತಾರೆ. ಹೀಗೆ ಎಲ್ಲಾ ದೇವತೆಗಳು ಸೇರಿ ಲಲಿತಾತ್ರಿಪುರಸುಂದರಿಗೆ, ರಾಜರಾಜೇಶ್ವರಿಗೆ ಪಟ್ಟಾಭಿಷೇಕವನ್ನು ಮಾಡುತ್ತಾರೆ. ಕಾಮೇಶ್ವರ, ಕಾಮೇಶ್ವರಿಯರನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ, ದೇವತೆಗಳೆಲ್ಲಾ ಸೇರಿ ಆ ಸಂಭ್ರಮವನ್ನು ನೆರವೇರಿಸುತ್ತಾರೆ. ಬ್ರಹ್ಮ ಒಂದು ವಿಮಾನವನ್ನು ಉಡುಗೊರೆಯಾಗಿ ನೀಡುತ್ತಾನೆ. ಅದಕ್ಕೆ 'ಕುಸುಮಾಕರ' ಎಂದು ಹೆಸರು. "ಅಮ್ಲಾನಮಾಲ್ಯಮ್", ಅದಕ್ಕೆ ತೊಡಿಸಿದ ಮಾಲೆಗಳೂ ಬಾಡುವುದಿಲ್ಲವಂತೆ, ಯಾವ ಆಯುಧಗಳು ಕೂಡ ಅದನ್ನು ಭೇದಿಸಲಾರವು. ಹೆಸರಿಗೆ ಕುಸುಮಾಕರವಾದರೂ ಕೂಡ ವಜ್ರಾಯುಧದಿಂದ ಸಹ ಅದನ್ನು ಭೇದನೆ ಮಾಡಲಿಕ್ಕೆ ಸಾಧ್ಯವಿಲ್ಲ. ಅದು ಎಲ್ಲಿ ಬೇಕಾದರೂ ಸಂಚಾರ ಮಾಡುವಂತಹದ್ದು. ದಿವಿಯಲ್ಲಿ, ಭೂಮಿಯಲ್ಲಿ, ಅಂತರಿಕ್ಷದಲ್ಲಿ. ಒಳಗೆ ಕುಳಿತವರು ಇಚ್ಛೆ ಬಂದಲ್ಲಿ ಸಂಚರಿಸುವಂತಹ ವಿಮಾನ. ಆ ವಿಮಾನದ ಪರಿಮಳದಿಂದಲೇ ಭ್ರಾಂತಿ ತೊಲಗುವುದು, ರೋಗ ತೊಲಗುವುದು, ಹಸಿವು ದೂರವಾಗುವುದು. ಅಂತಹ ಮನೋಹ್ಲಾದಕರವಾಗಿರುವ, ಶುಭವಾದ ವಿಮಾನವನ್ನು ಕಾಮೇಶ್ವರ ಮತ್ತು ಕಾಮೇಶ್ವರಿಯರು ಏರಿ ವೈಭವದ ಮೆರವಣಿಗೆ ಮಾಡುತ್ತಾರೆ. ಚಾಮರ, ವ್ಯಜನ, ಛತ್ರ, ಧ್ವಜ, ದಂಡಗಳು, ವೀಣೆ, ವೇಣು,  ಮೃದಂಗ ಇವೆಲ್ಲದರ ಜೊತೆಗೆ ದೇವತೆಗಳೆಲ್ಲಾ ಸೇರಿ  ರಾಜಭವನದಿಂದ ಹೊರಗೆ ಬಂದು ರಾಜಬೀದಿಯಲ್ಲೆಲ್ಲಾ ಅತ್ಯದ್ಭುತವಾದ ಮೆರವಣಿಗೆಯನ್ನು ಮಾಡುತ್ತಾರೆ. ಅಪ್ಸರೆಯರು ಪುಷ್ಪವೃಷ್ಟಿಯನ್ನು ಮಾಡುತ್ತಾರೆ. ಮಂಗಳಗಾಥೆಗಳನ್ನು ಗಂಧರ್ವರು ಅಪ್ಸರೆಯರೆಲ್ಲಾ ಸೇರಿ ಹಾಡುತ್ತಾರೆ.  ವಿಮಾನದಿಂದ ಕೆಳಗೆ ಇಳಿದು ಮೆಲ್ಲ, ಮೆಲ್ಲನೆ ಎಲ್ಲರನ್ನೂ ಮಾತನಾಡಿಸುತ್ತಾ, ಎಲ್ಲರಿಗೂ ತನ್ನ ಪ್ರೀತಿಯನ್ನು ಹಂಚಿ, ಅಪ್ಸರೆಯರ ಆರತಿಯನ್ನು ಸ್ವೀಕರಿಸಿ, ಸಭೆಯೊಳಗೆ ದೇವಿ ಪ್ರವೇಶವನ್ನು ಮಾಡುತ್ತಾಳೆ.


"ಸಹದೇವೇನ ಶಂಭುನಾ  ಸಿಂಹಾಸನಮಧಿಷ್ಠಾಯ", ಶಂಭುವಿನೊಡನೆ ಸಿಂಹಾಸನವನ್ನು ಏರಿ ಒಮ್ಮೆ ಪೂರ್ಣ ಸಭೆಯನ್ನು ನೋಡಿದಳು. ಆಗ ಏನಾಯಿತೆಂದರೆ, ಆ ಸಭೆಯಲ್ಲಿ ಯಾರೆಲ್ಲಾ ಸನ್ನಿಹಿತರಾಗಿದ್ದರೋ, ಅವರೆಲ್ಲರ ಮನದ ಕಾಮನೆಗಳು ಆ ಕ್ಷಣದಲ್ಲೇ ಈಡೇರಿದವು. ಕೇವಲ ಆಕೆಯ ದೃಷ್ಟಿಪಾತದಿಂದಲೇ ಎಲ್ಲರ ಅಪೇಕ್ಷೆಗಳು ಈಡೇರಿದವಂತೆ. ಆಗ ಬ್ರಹ್ಮ ಆಕೆಯನ್ನು "ಕಾಮಾಕ್ಷಿ" ಎಂಬುದಾಗಿ ಕರೆದ. ಕಾಮಾಕ್ಷಿ ಎಂದರೆ ಏನು? ಅವಳ ಅಕ್ಷಿಯೇ ಕಾಮನೆಗಳನ್ನು ಪೂರೈಸುವಂತಹದು ಎಂದು. ಇದು ಕಲ್ಯಾಣದ ಕಥೆಯಾಯಿತು. ಮುಂದಿರುವಂತಹದು ಕದನದ ಕಥೆ, ಭಂಡಾಸುರನ ಸಂಹಾರದ ಕಥೆ.



ಮತ್ತೊಮ್ಮೆ ದೇವಿ ಯೋಗವನ್ನು ನೀಡಿದಾಗ ಆಕೆಯ ರೋಚಕವಾದ ಯುದ್ಧಚರಿತ್ರೆಯನ್ನು ನೋಡೋಣ. ಈಗ ಕಾಮಾಕ್ಷಿಯ ಕಣ್ಣಿನಲ್ಲಿ ನಾವೆಲ್ಲರೂ ಕೂಡಾ ನಿಲ್ಲೋಣ. ಈ ಪ್ರವಚನದ ಪರ್ಯವಸಾನ ಎಲ್ಲಿ ಅಂದರೆ, ಕಾಮಾಕ್ಷಿಯ ದೃಷ್ಟಿಪಾತದಲ್ಲಿ. ನಿಮ್ಮೆಲ್ಲರ ಮೇಲೆ ಆಕೆಯ ಕೃಪಾಕಟಾಕ್ಷ ಇರಲಿ ಎಂದು ಅಮ್ಮನವರಲ್ಲಿ ಸಂಪ್ರಾರ್ಥಿಸಿ ವಿರಮಿಸುತ್ತೇವೆ. 


ಹರೇ ರಾಮ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top