ಮಾತೃಭಕ್ತಿ: ಅಂದು ಶ್ರವಣಕುಮಾರ, ಇಂದು ಮೈಸೂರಿನ ಕೃಷ್ಣಕುಮಾರ

Upayuktha
0


ಪಣಜಿ: ಶ್ರವಣಕುಮಾರ ತನ್ನ ತಂದೆ ತಾಯಿಯನ್ನು ತೀರ್ಥಯಾತ್ರೆಗೆ ತಕ್ಕಡಿಯಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿ ಜಗತ್ತಿಗೇ ಮಾದರಿಯಾಗುತ್ತಾನೆ. ಇಂತಹದ್ದೇ ರೀತಿಯಲ್ಲಿ ಮೈಸೂರಿನ ಕೃಷ್ಣಕುಮಾರ್ ರವರು ಬಜಾಜ್ ಚೇತಕ್ ಬೈಕ್‍ನಲ್ಲಿ ತನ್ನ ವಯೋವೃದ್ಧ ತಾಯಿ ಚೂಡಾಲಮ್ಮ (73) ರವರನ್ನು ಕರೆದುಕೊಂಡು ಭಾರತದ ದೇಶದ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸಿರುವುದು ಮಾತ್ರವಲ್ಲದೆಯೇ 4 ದೇಶಗಳನ್ನು ಕೂಡ ತೋರಿಸಿಕೊಂಡು ಬಂದಿದ್ದಾರೆ. ಇದೀಗ ಬೆಳಗಾವಿ ಮೂಲಕ ಗೋವಾಕ್ಕೆ ಅವರು ಆಗಮಿಸಿದ್ದಾರೆ.



ಭೂತಾನ್, ಮೈನ್ಮಾರ್, ನೇಪಾಳ, ಮಾತ್ರವಲ್ಲದೆಯೇ ಭಾರತದ ಕನ್ನಾಕುಮಾರಿಯಿಂದ ಹಿಡಿದು ಕಾಶ್ಮೀರದ ವರೆಗೂ ಇದೇ ಬಜಾಜ್ ಚೇತಕ್ ಹಳೆಯ ಬೈಕ್‍ನಲ್ಲಿ ಕೃಷ್ಣಕುಮಾರ್ ರವರು ತಮ್ಮ ವಯೋವೃದ್ಧ ತಾಯಿಯನ್ನು ಕೂರಿಸಿಕೊಂಡು ಎಲ್ಲ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ. ಬ್ರಹ್ಮಚಾರಿಯಾಗಿಯೇ ಉಳಿದುಕೊಂಡು ಕೃಷ್ಣಕುಮಾರ್ ರವರು ತಮ್ಮ ತಾಯಿಗೆ ದೇಶವನ್ನು ಸುತ್ತಿಸುವ ಸಂಕಲ್ಪ ಮಾಡಿದ್ದರು. ಬಜಾಜ್ ಚೇತಕ್ ಬೈಕ್‍ನ್ನು ಕೃಷ್ಣಕುಮಾರ್ ರವರಿಗೆ ಅವರ ತಂದೆಯವರು ಕೊಡಿಸಿದ್ದರು. ಈ ಬೈಕನ್ನು ಅವರು ತಮ್ಮ ತಂದೆ ಎಂದು ಭಾವಿಸಿಕೊಂಡು ಇದೇ ಬೈಕ್‍ನಲ್ಲಿ ತಾಯಿಯನ್ನು ತೀರ್ಥ ಯಾತ್ರೆಗೆ ತಾಯಿಯನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಕೆಎ-09, ಎಕ್ಸ್‌-6143 ಈ ನಂಬರಿನ ಬಜಾಜ್ ಚೇತಕ್ ಬೈಕ್‍ನಲ್ಲಿಯೇ ಅವರು ತಾಯಿಯನ್ನು ಕರೆದುಕೊಂಡು ದೇಶದ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ.



ಈ ಕುರಿತು ಕೃಷ್ಣಕುಮಾರ್ ರವರು ಸುದ್ಧಿಗಾರರೊಂದಿಗೆ ಮಾತನಾಡಿ- ಇದು ಮಾತೃ ಸೇವಾ ಸಂಕಲ್ಪ ಯಾತ್ರೆ. ನಾವು ಮೊದಲು ನಮ್ಮ ಮನೆಯಲ್ಲಿ 10 ಜನ ಇದ್ದರು. ನಮ್ಮ ತಾಯಿ ಇಷ್ಟು ವರ್ಷಗಳ ವರೆಗೆ ಮನೆ ವಾರ್ತೆ ಅಂದರೆ 10 ಜನರನ್ನು ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದರು. ಹಾಗಾಗಿ ಅವರು ಮನೆಯಿಂದ ಎಲ್ಲಿಯೂ ಹೊರಗೆ ಹೋಗುತ್ತಿರಲಿಲ್ಲ. ಮನೆಯಲ್ಲಿಯೇ ಎಲ್ಲರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. 2015 ರಲ್ಲಿ ನಮ್ಮ ತಂದೆಯವರು ವಿಧಿವಶರಾದರು. ನಂತರ ಕಾರ್ಪೊರೇಟ್ ಟೀಂ ಲೀಡರ್ ನೌಕರಿಗೆ ರಾಜೀನಾಮೆ ನೀಡಿ 16 ಜನವರಿ 2018 ರಿಂದ ಮೈಸೂರಿನಿಂದ ನಾನು ಯಾತ್ರೆ ಆರಂಭಿಸಿದೆ. ಇದುವರೆಗೂ 78,162 ಕಿಲೋಮೀಟರ್ ಸುತ್ತಿ ನನ್ನ ಬಜಾಜ್ ಚೇತಕ್ ಬೈಕ್‍ನಲ್ಲಿಯೇ ತಾಯಿಯನ್ನು ಕರೆದುಕೊಂಡು ಇಡೀ ಭಾರತ ದರ್ಶನ ಮಾಡಿಸಿದ್ದೇನೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸೌರಾಷ್ಟ್ರದಿಂದ ಪರಶುರಾಮ ಕುಂಡದವರೆಗೆ ಹಾಗೂ ಮೂರು ದೇಶಗಳನ್ನು ಕೂಡ ಇದೇ ಬೈಕ್‍ನಲ್ಲಿ ಸುತ್ತಿ ಬಂದಿದ್ದೇವೆ. ಇದೀಗ ಗೋವಾಕ್ಕೆ ಬಂದು ತಲುಪಿದ್ದೇವೆ. ಗೋವಾದಲ್ಲಿ ಎಲ್ಲ ದೇವಸ್ಥಾನ ಹಾಗೂ ಪ್ರವಾಸಿ ತಾಣಗಳನ್ನು ತಾಯಿಗೆ ದರ್ಶನ ಮಾಡಿಸಿಕೊಂಡು ನಂತರ ಕರ್ನಾಟಕದ ಅಂಕೋಲಾ, ಗೋಕರ್ಣ, ಉಡುಪಿ, ಮಂಗಳೂರು ಮಾರ್ಗವಾಗಿ ಎಲ್ಲ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಾ ಮೈಸೂರಿಗೆ ತೆರಳುವ ಸಂಕಲ್ಪ ಮಾಡಿಕೊಂಡಿದ್ದೇವೆ ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top