ಬೆಂಗಳೂರಿನ ರಾಜಭವನದಲ್ಲಿ ಪ್ರಶಸ್ತಿ ಪ್ರದಾನ
ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಕ್ಕೆ 2021-22 ಸಾಲಿನ ಅತ್ಯುತ್ತಮ ಎನ್.ಎಸ್.ಎಸ್ ಘಟಕ ರಾಜ್ಯ ಪ್ರಶಸ್ತಿ ಲಭಿಸಿದ್ದು, ಘಟಕದ ಕಾರ್ಯಕ್ರಮಾಧಿಕಾರಿ ಡಾ.ಲಕ್ಷ್ಮೀನಾರಾಯಣ ಕೆ.ಎಸ್. ಅವರು ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಮನ್ನಣೆಗೆ ಪಾತ್ರರಾಗಿದ್ದಾರೆ.
ಬೆಂಗಳೂರಿನ ರಾಜಭವನದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಅ. 11 ಬುಧವಾರದಂದು ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ತಾವರ್‍ಚಂದ್ ಗೆಹ್ಲೊಟ್ ಅವರು ಕಾರ್ಯಕ್ರಮಾಧಿಕಾರಿ ಡಾ.ಲಕ್ಷ್ಮಿನಾರಾಯಣ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಕುಮಾರ ಹೆಗ್ಡೆ ಬಿ.ಎ ಅವರು ಅತ್ಯುತ್ತಮ ಎನ್.ಎಸ್.ಎಸ್ ಘಟಕ ಪ್ರಶಸ್ತಿಯನ್ನು ಸ್ವೀಕರಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಹರೀಶ್ ಶೆಟ್ಟಿ ಕಾಲೇಜಿನ ಪರವಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಜಿರೆ ಶ್ರೀ ಧ.ಮಂ ಕಾಲೇಜಿನ ರಾಷ್ಟ್ರೀಯ ಯೋಜನಾ ಘಟಕವು ಒಂದು ಸಲ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. ಹತ್ತು ಸಲ ರಾಜ್ಯಮಟ್ಟದ ಅತ್ಯುತ್ತಮ ರಾಷ್ಟ್ರೀಯ ಯೋಜನಾ ಘಟಕ ಪ್ರಶಸ್ತಿಗೆ ಪಾತ್ರವಾಗಿದೆ. ಅಲ್ಲದೇ ಆರು ಬಾರಿ ವಿಶ್ವವಿದ್ಯಾಲಯ ಮಟ್ಟದ ಪ್ರಶಸ್ತಿ ಪಡೆದು ಹೆಗ್ಗುರುತು ಮೂಡಿಸಿದೆ.
ಡಾ.ಲಕ್ಷ್ಮೀನಾರಾಯಣ ಕೆ.ಎಸ್ ಉಜಿರೆ ಶ್ರೀ ಧ.ಮಂ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದು, 2019ರಲ್ಲಿ ಯೋಜನಾಧಿಕಾರಿಯಾಗಿ ನೇಮಕಗೊಂಡು 2023ರವರೆಗೆ ಯೋಜನಾಧಿಕಾರಿಯಾಗಿ ಸತತ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ಘಟಕದ ಸಮಾಜಮುಖೀ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.
ಇವರ ಅವಧಿಯಲ್ಲಿ ಮೂರು ಯಶಸ್ವಿ ವಾರ್ಷಿಕ ವಿಶೇಷ ಶಿಬಿರಗಳನ್ನು ಸಂಘಟಿಸಿದ್ದಾರೆ. ಕೊರೋನಾ ಬಿಕ್ಕಟ್ಟು ಎದುರಾದಾಗ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಕೋವಿಡ್ ಲಸಿಕಾ ಜಾಗೃತಿ, ಲಸಿಕಾ ಶಿಬಿರ, ಲಾಕ್ ಡೌನ್ ವಿಶೇಷ ಕಾರ್ಯಕ್ರಮಗಳು ವಿಶೇಷವಾಗಿ ಗಮನ ಸೆಳೆದಿದ್ದವು. 'ಅಜಾದಿ ಕಾ ಅಮೃತ್ ಮಹೋತ್ಸವ' ಪ್ರಯುಕ್ತ ಆನ್ಲೈನ್ ಮೂಲಕ ಸ್ವಯಂಸೇವಕರನ್ನೇ ದಿನಂಪ್ರತಿ ಸಂಪನ್ಮೂಲ ವ್ಯಕ್ತಿಗಳಾಗಿ ಬಿಂಬಿಸಿದರು.
ಸ್ವತಂತ್ರ ಭಾರತದ ಸಾಧಕರು ಹಾಗೂ ಹೋರಾಟಗಾರರ ಕುರಿತಾಗಿ ಎಪ್ಪತೈದು ವಿಶೇಷ ಸರಣಿ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಇಂಗು ಗುಂಡಿಗಳ ನಿರ್ಮಾಣ ,ಸ್ವಚ್ಛ ಭಾರತ ಕಾರ್ಯಕ್ರಮಗಳ ಆಯೋಜನೆ , ಚಾರ್ಮಾಡಿ ಪ್ರವಾಹ ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ಭಾಗಿಯಾಗಿದ್ದು ಇವರ ಸಂಘಟನಾಬದ್ಧತೆಗೆ ಸಾಕ್ಷಿ. ಪರಿಸರ ಸಂಬಂಧಿ ಹಾಗೂ ಜಲ ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳೂ ಇವರ ಸಂಘಟನಾ ಚಾತುರ್ಯವನ್ನು ನಿರೂಪಿಸಿವೆ.
ಎನ್.ಎಸ್.ಎಸ್ ಘಟಕ ರಾಜ್ಯ ಪ್ರಶಸ್ತಿಯ ಮನ್ನಣೆಗೆ ಪಾತ್ರವಾಗುವಂಥ ವಿನೂತನ ಕಾರ್ಯಚಟುವಟಿಕೆಗಳನ್ನು ಸಂಘಟಿಸಿದ ಡಾ.ಲಕ್ಷ್ಮೀನಾರಾಯಣ ಕೆ.ಎಸ್, ಸ್ವಯಂಸೇವಕರ ಕುರಿತು ಪ್ರಾಂಶುಪಾಲರಾದ ಡಾ.ಕುಮಾರ ಹೆಗ್ಡೆ ಬಿ.ಎ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವರ ಅವಧಿಯಲ್ಲಿ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ, ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ರಾಷ್ಟ್ರೀಯ ಭಾವಕೈತೆ ಶಿಬಿರಗಳಲ್ಲಿ, ನಾಯಕತ್ವ ತರಬೇತಿ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರು ಪಾಲ್ಗೊಂಡಿದ್ದಾರೆ. ಕಾರ್ಯಕ್ರಮಗಳನ್ನು ಆಯೋಜಿಸುವಾಗ ಉಜಿರೆಯ ಗ್ರಾಮ ಪಂಚಾಯತ್, ಜೆ ಸಿ ಐ, ಬೆಳ್ತಂಗಡಿಯ ರೋಟರಿ ಕ್ಲಬ್, ಉಜಿರೆಯ 'ಬದುಕು ಕಟ್ಟೋಣ ಬನ್ನಿ' ತಂಡ, ಎಸ್ ಡಿ ಎಂ ಆಸ್ಪತ್ರೆ, ಸೇವಾ ಭಾರತಿ , ಮುಂಡತ್ತೋಡಿ ಸರಕಾರಿ ಶಾಲೆ, ಬೆಳ್ತಂಗಡಿ ತಾಲೂಕು ಆಡಳಿತ, ಸರಕಾರಿ ಇಲಾಖೆ ಹಾಗೂ ಹಲವು ಸಂಘ ಸಂಸ್ಥೆಗಳ ಸಹಕಾರವು ಪ್ರಮುಖ ಪಾತ್ರವಹಿಸಿತ್ತು. ಅವರ ಸಹಕಾರದೊಂದಿಗೆ ವಿನೂತನ ಕಾರ್ಯಚಟುವಟಿಕೆಗಳನ್ನು ನಡೆಸಲು ಸಾಧ್ಯವಾಯಿತು. ರಾಜ್ಯಪ್ರಶಸ್ತಿಯ ಮನ್ನಣೆ ಪಡೆಯುವುದಕ್ಕೆ ಇವೆಲ್ಲವುಗಳ ಸಹಯೋಗದ ಪಾತ್ರ ದೊಡ್ಡದು ಎಂದು ಡಾ.ಲಕ್ಷ್ಮೀನಾರಾಯಣ ಕೆ.ಎಸ್ ಅವರು ನೆನಪಿಸಿಕೊಂಡಿದ್ದಾರೆ.
ಮೈಸೂರಿನ ಎಂಪೆನಲ್ಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನಲ್ಲಿ ಕಾರ್ಯಕ್ರಮಾಧಿಕಾರಿಯಾಗಿ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ಆಯೋಜಿಸಿದ ಕೌಶಲ್ಯಗಳ ಕುರಿತ ಕಾರ್ಯಕ್ರಮದಲ್ಲಿ ತರಬೇತಿ ಪಡೆದಿದ್ದಾರೆ. ಧಾರವಾಡದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತೆ ಶಿಬಿರದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ತಂಡವನ್ನು ಮುನ್ನಡೆಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ