ಕೆ.ಆರ್.ಪೇಟೆ: ಕರ್ನಾಟಕ ರಾಜ್ಯದಲ್ಲಿ ತೀವ್ರ ಬರಗಾಲ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ತಾಲ್ಲೂಕು ಯುವರತ್ನ ಡಾ.ಪುನೀತ್ ರಾಜ್ ಕುಮಾರ್ ಯುವ ಬ್ರಿಗೇಡ್ ಹಾಗೂ ತಾಲ್ಲೂಕು ನಾಗರೀಕ ಹಿತರಕ್ಷಣಾ ಸಮಿತಿ, ಮಾತೃಭೂಮಿ ವೃದ್ದಾಶ್ರಮ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ರಸ್ತೆ ತಡೆ ಚಳುವಳಿ ಪ್ರತಿಭಟನೆ ನಡೆಸಿದರು.
ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀಗಳಾದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಮಾತೃಭೂಮಿ ವೃದ್ದಾಶ್ರಮದ ಮುಖ್ಯಸ್ಥ ಜೈಹಿಂದ್ ನಾಗಣ್ಣ, ತಾಲ್ಲೂಕು ಪುನೀತ್ ರಾಜ್ ಕುಮಾರ್ ಯುವ ಬ್ರಿಗೇಡ್ ಅಧ್ಯಕ್ಷ ಕೆ.ಎಲ್.ಮಹೇಶ್, ತಾಲ್ಲೂಕು ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎನ್.ಎಸ್.ಗಂಗಾಧರ್ ನೇತೃತ್ವದಲ್ಲಿ ಪ್ರವಾಸಿ ಮಂದಿರ ವೃತ್ತದಲ್ಲಿ ಮೈಸೂರು-ಶಿವಮೊಗ್ಗ ರಾಜ್ಯ ಹೆದ್ದಾರಿ ಹಾಗೂ ಕೆ.ಆರ್.ಪೇಟೆ - ಬೇರ್ಯ ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಕಾವೇರಿ ನಮ್ಮದು, ಹೇಮಾವತಿ ನಮ್ಮದು ಎಂದು ಘೋಷಣೆ ಕೂಗುತ್ತಾ ಕಣ್ಣಿಲ್ಲದೇ ಕುರುಡು ಆದೇಶ ನೀಡುತ್ತಿರುವ ಕೇಂದ್ರ ನೀರು ಹಂಚಿಕೆ ಪ್ರಾಧಿಕಾರದ ವಿರುದ್ದ ಹಾಗೂ ಬರಗಾಲದಲ್ಲಿಯೂ ನೀರಿಗೆ ಬೇಡಿಕೆ ಹಾಕುತ್ತಿರುವ ತಮಿಳುನಾಡಿನ ವಿರುದ್ದ ಕಿಡಿಕಾರಿದರು.
ರಾಜ್ಯದಲ್ಲಿ ಮಳೆ ಇಲ್ಲದೇ ಬೀಕರ ಬರಗಾಲ ಎದುರಾಗಿದೆ. ಜನಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಈ ಸಂದರ್ಭದಲ್ಲಿ ನೀರು ಬಿಡುಗಡೆ ಮಾಡುತ್ತಿರುವ ಕರ್ನಾಟಕ ಸರ್ಕಾರದ ವತಿಯಿಂದ ನಡೆ ಸರಿಯಲ್ಲ. ಕಾವೇರಿ ನೀರು ಹಂಚಿಕೆ ಕುರಿತು ಪ್ರಾಧಿಕಾರ ಹಾಗೂ ಸುಪ್ರಿಂ ಕೋರ್ಟಿನಲ್ಲಿ ವಾದ ಮಂಡಿಸಲು ತಮಿಳುನಾಡು ಮೂಲದ ಅಥವಾ ಪಾಂಡಿಚೇರಿ ಮೂಲದ ವಕೀಲರನ್ನು ನೇಮಿಸಿಕೊಂಡು ಅವರಿಗೆ ಈವರೆಗೆ ಸುಮಾರು 100 ಕೋಟಿಗೂ ಅಧಿಕ ಫೀಜು ನೀಡಿರುವ ಕರ್ನಾಟಕ ರಾಜ್ಯಕ್ಕೆ ಯಾವುದೇ ನ್ಯಾಯ ಸಿಕ್ಕಿಲ್ಲ. ದುಡ್ಡು ಕೊಟ್ಟು ತಮಿಳುನಾಡಿಗೆ ಅನುಕೂಲ ಮಾಡಿಕೊಟ್ಟಂತೆ ಆಗಿದೆ. ಅಲ್ಲದೇ ಕುರಿ ಕಾಯಲು ತೋಳ ಬಿಟ್ಟಂತೆ ಆಗಿದೆ. ಇದರಿಂದ ಕುರಿ ರಕ್ಷಣೆ ಸಾಧ್ಯವೇ ಎಂದು ಸರ್ಕಾರದ ನಡೆಯನ್ನು ಪ್ರಶ್ನಿಸಿದ ಪ್ರತಿಭಟನಾ ಕಾರರು ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸಿ ಅದೇ ನೀರನ್ನು ಕಾವೇರಿ ಅಚ್ಚುಕಟ್ಟು ಭಾಗದ ಕೆರೆ ಕಟ್ಟೆಗಳಿಗೆ ಕಾಲುವೆಗಳಿಗೆ ಹರಿಸಬೇಕು ಈ ಮೂಲಕ ನಮ್ಮ ರೈತರನ್ನು ಸಂಕಷ್ಟದಿಂದ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಂ.ಶಿವಪ್ಪ,ನಿವೃತ್ತ ಯೋಧ ಸುಕುಮಾರ್, ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀಗಳಾದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ತಾಲ್ಲೂಕು ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎನ್.ಎಸ್.ಗಂಗಾಧರ್, ಮಾತೃಭೂಮಿ ವೃದ್ದಾಶ್ರಮದ ಮುಖ್ಯಸ್ಥ ಜೈಹಿಂದ್ ನಾಗಣ್ಣ, ತಾಲ್ಲೂಕು ಪುನೀತ್ ರಾಜ್ ಕುಮಾರ್ (ಅಪ್ಪು) ಯುವ ಬ್ರಿಗೇಡ್ ಅಧ್ಯಕ್ಷ ಕೆ.ಎಲ್.ಮಹೇಶ್, ಪದಾಧಿಕಾರಿಗಳಾದ ದಿಲೀಪ್, ಗೋವಿಂದರಾಜು, ಹರೀಶ್, ಲೋಹಿತ್, ದಿಲೀಪ್, ಅಶೋಕ್, ಅರ್ಜುನ್, ಗೋವರ್ಧನ್ ಸೇರಿದಂತೆ ನೂರಾರು ಪ್ರತಿಭಟನಾಕಾರರು ಕಾವೇರಿ ಹೋರಾಟದಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


